ಮಹಿಳೆಯರಿಗೆ ಶಿಕ್ಷಣ ನೀಡುವುದು ಮತ್ತು ಆರ್ಥಿಕವಾಗಿ ಸ್ವಾತಂತ್ರ್ಯ ನೀಡುವುದೇ ಅಹಿಲ್ಯಾದೇವಿ ಹೋಳ್ಕರ್‌ ಅವರಿಗೆ ನೀಡಬಹುದಾದ ಅತಿದೊಡ್ಡ ಗೌರವ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹೇಳಿದ್ದಾರೆ. 

ಬಾರಾಮತಿ (ಮಹಾರಾಷ್ಟ್ರ) (ಜೂ.26): ಮಹಿಳೆಯರಿಗೆ ಶಿಕ್ಷಣ ನೀಡುವುದು ಮತ್ತು ಆರ್ಥಿಕವಾಗಿ ಸ್ವಾತಂತ್ರ್ಯ ನೀಡುವುದೇ ಅಹಿಲ್ಯಾದೇವಿ ಹೋಳ್ಕರ್‌ ಅವರಿಗೆ ನೀಡಬಹುದಾದ ಅತಿದೊಡ್ಡ ಗೌರವ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹೇಳಿದ್ದಾರೆ. ಇಲ್ಲಿ ಆಯೋಜಿಸಲಾಗಿದ್ದ ಅಹಿಲ್ಯಾದೇವಿ ಅವರ 298ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕನ್ನಡದಲ್ಲೇ ಮಾತನಾಡಿದ ಸಿದ್ದರಾಮಯ್ಯ, ಅಹಿಲ್ಯಾದೇವಿ ಅವರಿಗೆ ಗೌರವ ನೀಡುವ ಪ್ರಮುಖ ಮಾರ್ಗವೆಂದರೆ ಮಹಿಳೆಯರಿಗೆ ಶಿಕ್ಷಣ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ನೀಡುವುದು. ಈ ನಿಟ್ಟಿನಲ್ಲಿ ನಾವು ಹೆಜ್ಜೆ ಇಟ್ಟಿದ್ದು, ಕರ್ನಾಟಕದಲ್ಲಿ ಮಹಿಳೆಯರಿಗೆ ರಾಜ್ಯದ್ಯಾಂತ ಉಚಿತ ಬಸ್‌ ಸೇವೆ ನೀಡುತ್ತಿದ್ದೇವೆ. 

ಅಲ್ಲದೇ ಕುಟುಂಬದ ಯಜಮಾನಿಯಾದ ಮಹಿಳೆಯ ಖಾತೆಗೆ 2 ಸಾವಿರ ರು. ಹಣ ಹಾಕುತ್ತೇವೆ ಎಂದು ಹೇಳಿದರು. ಅಲ್ಲದೇ ನಾನು ಪ್ರಮಾಣ ವಚನ ಸ್ವೀಕರಿಸಿದ 24 ಗಂಟೆಗಳೊಳಗೆ ಮಹಿಳೆಯರಿಗೆ ಉಚಿತ ಬಸ್‌ ಯೋಜನೆಯನ್ನು ಜಾರಿ ಮಾಡಿದೆವು. ಆ.15ರಿಂದ ಮಹಿಳೆಯರಿಗೆ ಮಾಸಿಕ 2 ಸಾವಿರ ರು. ನೀಡುವ ಯೋಜನೆ ಜಾರಿ ಮಾಡಲಿದ್ದೇವೆ. ರಾಜ್ಯದಲ್ಲೂ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜಯಗಳಿಸಲಿವೆ. ಈ ಮೂಲಕ ಮಹಾರಾಷ್ಟ್ರದಲ್ಲೂ ಈ ಯೋಜನೆಯನ್ನು ಜಾರಿ ಮಾಡಬೇಕು ಎಂದರು. ಈ ಕಾರ್ಯಕ್ರಮದಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಅವರ ಪುತ್ರಿ ಸುಪ್ರಿಯಾ ಸುಳೆ, ಮಹಾರಾಷ್ಟ್ರ ವಿಪಕ್ಷ ನಾಯಕ ಅಜಿತ್‌ ಪವಾರ್‌ ಮತ್ತು ಹಿರಿಯ ಕಾಂಗ್ರೆಸ್‌ ನಾಯಕ ಬಾಳಾಸಾಹೇಬ್‌ ತೋರಟ್‌ ಭಾಗಿಯಾಗಿದ್ದರು.

ಮದ್ಯ ಮಾರಾಟ ಲಾಭ 20% ಹೆಚ್ಚಳಕ್ಕೆ ಸಿಎಂ ಸಿದ್ದರಾಮಯ್ಯಗೆ ಮನವಿ

ಖಾತೆಗೆ 15 ಲಕ್ಷ ಬಂತೇ, ಅಚ್ಛೇದಿನ್‌ ಬಂತೇ: ‘ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಸುಳ್ಳು ಹೇಳುವ ಪ್ರಧಾನಿಯನ್ನೇ ನೋಡಿರಲಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರದ ಕರ್ನಾಟಕ ಗಡಿಭಾವಾದ ಕನ್ನಡಿಗರೇ ಹೆಚ್ಚಿರುವ ಸಾಂಗ್ಲಿಯಲ್ಲಿ ಭಾನುವಾರ ಮಹಾರಾಷ್ಟ್ರ ಕಾಂಗ್ರೆಸ್‌ ಘಟಕವು ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಜಯಭೇರಿ ಬಾರಿಸಿದ್ದಕ್ಕೆ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿತು. 

ಈ ವೇಳೆ ರಾರ‍ಯಲಿಯಲ್ಲಿ ಕನ್ನಡದಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಸುಳ್ಳು ಹೇಳುವ ಪ್ರಧಾನಿಯನ್ನು ನೋಡಿರಲೇ ಇಲ್ಲ. 2014ರಲ್ಲಿ ಜನರ ಬ್ಯಾಂಕ್‌ ಖಾತೆಗಳಿಗೆ 15 ಲಕ್ಷ ರು. ಹಾಕುವುದಾಗಿ ಮೋದಿ ಹೇಳಿದ್ದರು. 2 ಕೋಟಿ ಉದ್ಯೋಗ ಸೃಷ್ಟಿಮಾಡುವುದಾಗಿ ಹೇಳಿದ್ದರು ಮತ್ತು ಅಚ್ಛೇ ದಿನ್‌ (ಒಳ್ಳೆಯ ದಿನಗಳು) ತರಲಿದ್ದೇನೆ ಎಂದು ಹೇಳಿದ್ದರು. ಇದರಲ್ಲಿ ಯಾವುದಾದರೂ ಸಾಕಾರಗೊಂಡಿದೆಯೆ?’ ಎಂದು ಪ್ರಶ್ನಿಸಿದರು. ಮೋದಿ ನಮ್ಮ ವಿರುದ್ಧ ಕರ್ನಾಟಕದಾದ್ಯಂತ ಪ್ರಚಾರ ಮಾಡಿದರು. ಆದರೆ ಅವರು ಪ್ರಚಾರ ಮಾಡಿದ ಕಡೆ ಬಿಜೆಪಿ ಸೋತಿತು. ಇದು ಮೋದಿ ಜನಪ್ರಿಯತೆ ಕುಸಿಯುತ್ತಿರುವ ಸಂಕೇತ’ ಎಂದು ಹೇಳಿದರು.

ಅಭಿಪ್ರಾಯ ವ್ಯಕ್ತಪಡಿಸಲು ಯಾರೂ ಹೆದರಬೇಕಿಲ್ಲ: ಸಾಹಿತಿಗಳ ಆತಂಕಕ್ಕೆ ಸಿಎಂ ಸಿದ್ದರಾಮಯ್ಯ ಭರವಸೆ

‘ಬಿಜೆಪಿ ಎಂದರೇ ಭ್ರಷ್ಟಾಚಾರ. ಹಾಗಾಗಿ ನಾನು ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ರಾಜ್ಯದ ಎಲ್ಲಾ ಮೂಲೆಗಳಿಗೂ ಸಂಚರಿಸಿ ಹಿಂದಿನ ಸರ್ಕಾರ ನಡೆಸಿದ ಭ್ರಷ್ಟಾಚಾರದ ಬಗ್ಗೆ ಜನರಿಗೆ ತಿಳಿಹೇಳಿದೆವು. 40% ಕಮಿಶನ್‌ ಬಗ್ಗೆ ಜನರಿಗೆ ತಿಳಿಹೇಳಿದೆವು. ಬಿಜೆಪಿ ಅಂದರೆ ಭ್ರಷ್ಟಾಚಾರ ಹಾಗೂ ಭ್ರಷ್ಟಾಚಾರ ಎಂದರೆ ಬಿಜೆಪಿ’ ಎಂದು ವಾಗ್ದಾಳಿ ನಡೆಸಿದರು. ‘ಈ ಮೊದಲು ಆಪರೇಶನ್‌ ಕಮಲ ನಡೆಸುವ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಹಿಡಿದಿತ್ತು. ಮಹಾರಾಷ್ಟ್ರದಲ್ಲಿರುವ ಏಕನಾಥ ಶಿಂಧೆ ಮತ್ತು ಬಿಜೆಪಿ ನೇತೃತ್ವದ ಸರ್ಕಾರವೂ ಭ್ರಷ್ಟಾಚಾರಿಯಾಗಿದ್ದು, ಇವರನ್ನು ಸೋಲಿಸುವ ಕೆಲಸವನ್ನು ಕಾಂಗ್ರೆಸ್‌ ಕಾರ್ಯಕರ್ತರು ಮಾಡಲಿದ್ದಾರೆ’ ಎಂದರು. ಮುಂದಿನ ವರ್ಷವೇ ಮಹಾರಾಷ್ಟ್ರ ಚುನಾವಣೆ ಇದೆ.