ಕೆಲಸ ಆಗಿದ್ರೆ ಬಿಲ್, ತಪ್ಪು ಮಾಡಿದ್ರೆ ಶಿಕ್ಷೆ: ಸಿಎಂ ಖಡಕ್ ನುಡಿ
ಕೆಲವೇ ಕೆಲವು ಗುತ್ತಿಗೆದಾರರು ತಮ್ಮ ಸ್ವಾರ್ಥ ಹಾಗೂ ದುರುದ್ದೇಶ ಈಡೇರಿಕೆಗಾಗಿ ರಾಜ್ಯ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡುತ್ತಿದ್ದಾರೆ. ಆದರೆ, ಸ್ವತಃ ಕರ್ನಾಟಕ ರಾಜ್ಯ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರು ಹಾಗೂ ಬಿಬಿಎಂಪಿ ಗುತ್ತಿಗೆದಾರರ ಸಂಘದವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಮೇಲಿನ ಆರೋಪಗಳನ್ನು ಸವಾಲಾಗಿ ಸ್ವೀಕರಿಸಿ ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಬಂದು ಜನತೆಯೆದುರು ಸಾಬೀತುಪಡಿಸುತ್ತೇವೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು/ ಬೆಳಗಾವಿ(ಆ.12): ‘ನಾವು ಕಮಿಷನ್ ಹಿಂದೆ ಬಿದ್ದಿಲ್ಲ, ಕಮಿಷನ್ ಹಗರಣದ ಹಿಂದಿರುವ ಭ್ರಷ್ಟರ ಬೆನ್ನು ಬಿದ್ದಿದ್ದೇವೆ. 40 ಪರ್ಸೆಂಟ್ ಕಮಿಷನ್ ಹಗರಣ ಬಗ್ಗೆ ನ್ಯಾಯಾಂಗ ತನಿಖೆಗೆ ವಹಿಸಿದ್ದೇವೆ. ತನಿಖಾ ವರದಿ ಬರುವ ಮೊದಲೇ ಗುತ್ತಿಗೆದಾರರಿಗೆ ಹಣ ಬಿಡುಗಡೆ ಸಮಂಜಸವಲ್ಲ. ನ್ಯಾಯಯುತವಾಗಿ ಕೆಲಸ ಮಾಡಿದ ಯಾವೊಬ್ಬ ಗುತ್ತಿಗೆದಾರನಿಗೆ ಅನ್ಯಾಯವಾಗಲು ಬಿಡಲ್ಲ. ಬಿಲ್ ಪಾವತಿಸುತ್ತೇವೆ. ಆದರೆ, ಉಪ್ಪು ತಿಂದವರು ನೀರು ಕುಡಿಯಲೇಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀಕ್ಷ್ಣವಾಗಿ ಹೇಳಿದ್ದಾರೆ.
ಪ್ರತಿಪಕ್ಷಗಳ ಆರೋಪಗಳ ಬಗ್ಗೆ ಶುಕ್ರವಾರ ಸರಣಿ ಟ್ವೀಟ್ ಮೂಲಕ ಉತ್ತರಿಸಿರುವ ಅವರು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿಯೂ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ‘ಕೆಲವೇ ಕೆಲವು ಗುತ್ತಿಗೆದಾರರು ತಮ್ಮ ಸ್ವಾರ್ಥ ಹಾಗೂ ದುರುದ್ದೇಶ ಈಡೇರಿಕೆಗಾಗಿ ರಾಜ್ಯ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡುತ್ತಿದ್ದಾರೆ. ಆದರೆ, ಸ್ವತಃ ಕರ್ನಾಟಕ ರಾಜ್ಯ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರು ಹಾಗೂ ಬಿಬಿಎಂಪಿ ಗುತ್ತಿಗೆದಾರರ ಸಂಘದವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಮೇಲಿನ ಆರೋಪಗಳನ್ನು ಸವಾಲಾಗಿ ಸ್ವೀಕರಿಸಿ ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಬಂದು ಜನತೆಯೆದುರು ಸಾಬೀತುಪಡಿಸುತ್ತೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಲೋಕಸಭೆ ಚುನಾವಣೆ 2024: ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ಆರಂಭ, ಮತ್ತೆ ಕಮಲ ಅರಳಿಸಲು ಪ್ಲಾನ್..!
‘ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಭ್ರಷ್ಟಾಚಾರ, ಕಮಿಷನ್ ಹಾವಳಿ, ತೆರಿಗೆ ಲೂಟಿಯ ವಿರುದ್ಧ ಜನರು ಮತ ಚಲಾಯಿಸಿದ್ದಾರೆ. ಈಗ ಜನರಿಗೆ ನೀಡಿದ್ದ ವಚನ ಪಾಲನೆ ನಮ್ಮ ಕರ್ತವ್ಯ. ಹೀಗಾಗಿ ಬಿಜೆಪಿ ಸರ್ಕಾರದ 40 ಪರ್ಸೆಂಟ್ ಕಮಿಷನ್ ಹಗರಣದ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ವಹಿಸಿದ್ದೇವೆ. ಬಿಜೆಪಿ ಅವಧಿಯಲ್ಲಿ ಕಾಮಗಾರಿಯನ್ನೇ ನಡೆಸದೆ, ಹಳೆಯ ಕಾಮಗಾರಿಗಳಿಗೆ, ಇನ್ನು ಕೆಲವು ಕಡೆ ಅರ್ಧ ಕೆಲಸ ಮಾಡಿ ಬಿಲ್… ಹಣ ಪಡೆಯಲಾಗಿದೆ. ಈ ಬಗ್ಗೆ ತನಿಖೆ ಪೂರ್ಣವಾಗಿ ವರದಿ ಬರುವ ಮೊದಲೇ ಬಾಕಿಯಿರುವ ಬಿಲ್ ಹಣ ಬಿಡುಗಡೆ ಮಾಡುವುದು ಸಮಂಜಸವಲ್ಲ’ ಎಂದು ಹೇಳಿದ್ದಾರೆ.
ಉಪ್ಪು ತಿಂದವರು ನೀರು ಕುಡಿಯಬೇಕು:
‘ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡಿದ್ದಾರೋ, ಇಲ್ವೋ ಎಂಬ ಕುರಿತು ರಾಜ್ಯ ಸರ್ಕಾರ ನಾಲ್ಕು ತಂಡÜ ರಚಿಸಿ ತನಿಖೆ ನಡೆಸುತ್ತಿದೆ. ಅವರು ನೀಡುವ ವರದಿ ಆಧಾರದ ಮೇರೆಗೆ ಸರಿಯಾಗಿ ಕೆಲಸ ಆಗಿದ್ದರೆ ಬಿಲ… ಕೊಡುತ್ತೇವೆ. ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳುತ್ತೇವೆ. ಬಿಜೆಪಿ ಎರಡ್ಮೂರು ವರ್ಷದಿಂದ ಬಿಲ್ ಪಾವತಿ ಮಾಡಿಲ್ಲ’ ಎಂದಿದ್ದಾರೆ. ಆದರೆ, ನ್ಯಾಯಯುತವಾಗಿ ಕಾಮಗಾರಿ ಮಾಡಿದ ಯಾವೊಬ್ಬ ಗುತ್ತಿಗೆದಾರನಿಗೂ ಅನ್ಯಾಯವಾಗಲು ನಮ್ಮ ಸರ್ಕಾರ ಬಿಡುವುದಿಲ್ಲ. ಈ ಬಗ್ಗೆ ಗುತ್ತಿಗೆದಾರರಿಗೆ ಭಯ ಬೇಡ. ಆದರೆ ಉಪ್ಪು ತಿಂದವರು ನೀರು ಕುಡಿಯಬೇಕು. ಇದರಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಗೆ ಹೋರಾಟ ಮಾಡಲು ನೈತಿಕತೆಯಿಲ್ಲ:
ಬಿಜೆಪಿ ಹೋರಾಟದ ಬಗ್ಗೆ ಟೀಕಿಸಿದ ಅವರು, ‘ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ನಮ್ಮ ಸರ್ಕಾರ, ಸಚಿವರ ಬಗ್ಗೆ ಯಾವುದೇ ಭ್ರಷ್ಟಾಚಾರದ ಆರೋಪ ಮಾಡಿಲ್ಲ. ಭ್ರಷ್ಟಾಚಾರದ ಆರೋಪ ಬಿಜೆಪಿಯವರ ಕುತಂತ್ರ. ಮೂರು ವರ್ಷ ಬಿಜೆಪಿಯವರು ಅಧಿಕಾರದಲ್ಲಿದ್ದರು. ಆಗ ಗುತ್ತಿಗೆದಾರರಿಗೆ ಬಿಲ… ಕೊಡದವರು, ಈಗ ಅವರೊಂದಿಗೆ ಸೇರಿ ಏಕೆ ಹೋರಾಟ ಮಾಡುತ್ತಾರೆ. ಅವರಿಗೆ ಹೋರಾಟ ಮಾಡಲು ಏನು ನೈತಿಕತೆ ಇದೆ’ ಎಂದು ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು.
ಮೋದಿ ಬಗ್ಗೆ ಬೊಮ್ಮಾಯಿಗೆ ನಂಬಿಕೆಯಿಲ್ಲ:
‘ಇನ್ನು ರಾಜ್ಯ ಸರ್ಕಾರ ಗುತ್ತಿಗೆದಾರರಿಗೆ ಬಾಕಿ ಬಿಲ… ಹಣ ಪಾವತಿ ಮಾಡುತ್ತಿಲ್ಲ, ಹೀಗಾಗಿ ರಾಹುಲ… ಗಾಂಧಿಯವರು ಮಧ್ಯ ಪ್ರವೇಶಿಸಿ ಬಿಲ… ಹಣ ಬಿಡುಗಡೆ ಮಾಡಿಸಬೇಕು’ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒತ್ತಾಯಿಸಿದ್ದಾರೆ. ‘ಆದರೆ ರಾಜ್ಯ ಸರ್ಕಾರಗಳಿಗೆ ಸೂಚನೆ, ನಿರ್ದೇಶನ ನೀಡುವ ಅಧಿಕಾರವಿರುವುದು ದೇಶದ ಪ್ರಧಾನಮಂತ್ರಿಗಳಿಗೆ. ನರೇಂದ್ರ ಮೋದಿ ಅವರು ಮಾಡಬೇಕಿರುವ ಕೆಲಸವನ್ನು ರಾಹುಲ… ಗಾಂಧಿಯವರಿಗೆ ಮಾಡಿ ಎಂದು ಒತ್ತಾಯಿಸುತ್ತಿರುವುದು ನೋಡಿದರೆ ಸ್ವತಃ ಬೊಮ್ಮಾಯಿಯವರಿಗೆ ಮೋದಿ ಅವರ ಕಾರ್ಯದಕ್ಷತೆ ಬಗ್ಗೆ ನಂಬಿಕೆ ಇದ್ದಂತೆ ಕಾಣುತ್ತಿಲ್ಲ’ ಎಂದು ತಿರುಗೇಟು ನೀಡಿದ್ದಾರೆ.
ಶೇ.40ರಿಂದ 15ಕ್ಕೆ ಇಳಿಸಿರುವುದು ಸಂತೋಷ: ಸಿಎಂ
ಮಾಜಿ ಸಚಿವ ಆರ್. ಅಶೋಕ್ ಅವರು ಶೇ.15ರಷ್ಟು ಕಮಿಷನ್ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದದ್ದೇ ಆದರೂ ಶೇ.40 ರಿಂದ ಶೇ.15ಕ್ಕೆ ಇಳಿಸಿರುವುದು ಸಂತೋಷದ ವಿಷಯ. ಅಶೋಕ್ ಹೇಳಿಕೆಯಿಂದ ಬಿಜೆಪಿಗಿಂತ ಕಾಂಗ್ರೆಸ್ ಉತ್ತಮ ಎಂಬುದು ಜನರ ಮನಸ್ಸಿನಲ್ಲಿದೆ ಎಂಬುದನ್ನು ತೋರಿಸುತ್ತದೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.
ದಾರೀಲಿ ಹೋಗೋರಿಗೆಲ್ಲ ಉತ್ತರ ಕೊಡಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್
ಕಮಿಷನ್ ಸಾಬೀತು ಮಾಡಿದರೆ ನಿವೃತ್ತಿ: ಡಿಕೆಶಿ ಸವಾಲ್
ಬೆಂಗಳೂರು: ‘ನನ್ನ ಮೇಲೆ ಕಮಿಷನ್ ಆರೋಪ ಮಾಡಿದ್ದಾರೆ. ನಾನು ಯಾರ ಬಳಿಯಾದರೂ ಕಮಿಷನ್ ಕೇಳಿದ್ದರೆ ಇಂದೇ ರಾಜಕಾರಣದಿಂದ ನಿವೃತ್ತಿಯಾಗುತ್ತೇನೆ. ನಾನು ಕೇಳಿಲ್ಲವಾದರೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಆರ್.ಅಶೋಕ್ ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತಾರಾ?’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.
ಯಾವ ಸಚಿವರೂ ಕಮಿಷನ್ ಕೇಳಿಲ್ಲ: ಕೆಂಪಣ್ಣ ಯೂಟರ್ನ್
ಬೆಂಗಳೂರು: ಗುತ್ತಿಗೆದಾರರ ಸ್ಥಿತಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ. ಬಿಬಿಎಂಪಿ ಗುತ್ತಿಗೆದಾರರ ಜೊತೆ ಎಂಜಿನಿಯರ್‌ಗಳು ಸಭೆ ಮಾಡಿ 7% ಕಮಿಷನ್ ಕೇಳುತ್ತಿದ್ದಾರೆ. ಬಾಕಿ ಬಿಲ್ ಪಾವತಿಗೆ ಸಚಿವರು ಕಮಿಷನ್ ಕೇಳುತ್ತಿದ್ದಾರೆ ಎಂದು ಆರೋಪ ಮಾಡಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಈಗ ಯೂಟರ್ನ್ ಹೊಡೆದಿದ್ದು, ಯಾವುದೇ ಸಚಿವರು ಗುತ್ತಿಗೆದಾರರ ಬಳಿ ಕಮಿಷನ್ ಕೇಳಿಲ್ಲ ಎಂದು ಹೇಳಿದ್ದಾರೆ.