ಮೋದಿ ಮಂಗಳಸೂತ್ರ ಹೇಳಿಕೆ: ಪ್ರಧಾನಿಯಾಗಿ ಇಷ್ಟೊಂದು ಕೀಳುಹೇಳಿಕೆ ನೀಡಬಾರದಿತ್ತು: ಸಿದ್ದರಾಮಯ್ಯ
ಕಾಂಗ್ರೆಸ್ ಗೆದ್ದರೆ ಮಹಿಳೆಯರ ಮಂಗಳಸೂತ್ರವನ್ನು ಮುಸ್ಲಿಮರಿಗೆ ಹಂಚಲಾಗುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ರಾಜ್ಯ ಕಾಂಗ್ರೆಸ್ ಮುಖಂಡರಿಂದ ಸೋಮವಾರ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರು (ಏ.23): ಕಾಂಗ್ರೆಸ್ ಗೆದ್ದರೆ ಮಹಿಳೆಯರ ಮಂಗಳಸೂತ್ರವನ್ನು ಮುಸ್ಲಿಮರಿಗೆ ಹಂಚಲಾಗುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ರಾಜ್ಯ ಕಾಂಗ್ರೆಸ್ ಮುಖಂಡರಿಂದ ಸೋಮವಾರ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಹಲವು ಕಾಂಗ್ರೆಸ್ ಮುಖಂಡರು ಇದೊಂದು ಕೀಳು ಹೇಳಿಕೆ, ಪ್ರಧಾನಿ ಮೋದಿ ಅವರು ಸೋಲಿನ ಭೀತಿಯಿಂದ ಈ ರೀತಿ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಶ್ರಮದಿಂದ ಗಳಿಸಿದ ಸಂಪತ್ತನ್ನು ಕಿತ್ತುಕೊಳ್ಳುವ ಅಧಿಕಾರ ಯಾರಿಗಾದರೂ ಇದೆಯೇ? ಆದರೂ ಇದನ್ನು ಕಾಂಗ್ರೆಸ್ ಮಾಡಲಿದೆ.
ತಾಯಂದಿರು ಶ್ರಮದಿಂದ ಮಾಡಿಸಿಕೊಂಡಿರುವ ಚಿನ್ನದ ತಾಳಿಯನ್ನು ಕಿತ್ತುಕೊಳ್ಳಲಾಗುತ್ತದೆ. ಅದನ್ನು ದೇಶದ ಸಂಪತ್ತಿನ ಮೊದಲ ಹಕ್ಕುದಾರರು ಮುಸ್ಲಿಮರು ಎಂದಿದ್ದ ಹಿಂದಿನ ಪ್ರಧಾನಿ ಮನಮೋಹನ ಸಿಂಗ್ ಅವರ ನೀತಿಯಂತೆ ಮುಸಲ್ಮಾನರು, ಒಳನುಸುಳುಕೋರರು ಮತ್ತು ಹೆಣ್ಣುಮಕ್ಕಳಿದ್ದವರಿಗೆ ಹಂಚಲಾಗುತ್ತದೆ ಎಂದು ಜೈಪುರದಲ್ಲಿ ನಡೆಸಿದ ಸಮಾವೇಶದಲ್ಲಿ ಪ್ರಧಾನಿ ಮೋದಿ ಆರೋಪಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಪ್ರಧಾನಿಯಾಗಿ ಅವರು ಇಷ್ಟೊಂದು ಕೀಳುಹೇಳಿಕೆ ನೀಡಬಾರದಿತ್ತು. ಅವರ ಸ್ಥಾನಕ್ಕೆ ಅಗೌರವ ತೋರುವ ರೀತಿ ಮೋದಿ ಮಾತನಾಡಿದ್ದಾರೆ ಎಂದು ಕಿಡಿಕಾರಿದರು.
ಸೋಲಿನ ಭೀತಿ: ಕಾಂಗ್ರೆಸ್ ಗೆದ್ದರೆ ಮಹಿಳೆಯರ ಮಂಗಳಸೂತ್ರವನ್ನು ಕಿತ್ತು ಮುಸ್ಲಿಮರಿಗೆ ನೀಡುತ್ತದೆ ಎಂದು ದೇಶದ ಪ್ರಧಾನಿ ಹೇಳುತ್ತಿದ್ದಾರೆ. ಮೋದಿಯವರಿಗೆ ಸೋಲುವ ಭೀತಿ ಉಂಟಾಗಿದೆ. ಹೀಗಾಗಿ ಅವರು ಹೀಗೆ ಮಾತನಾಡುತ್ತಿದ್ದಾರೆ. ಭಾರತೀಯರೆಲ್ಲರೂ ಸಮಾನರು ಎಂದು ಸಂವಿಧಾನದಲ್ಲಿ ಹೇಳಿದ್ದಾರೆ. ಮಂಗಳಸೂತ್ರ ಕಿತ್ತುಕೊಳ್ಳುತ್ತಾರೆಂದರೆ ಏನರ್ಥ? ಈ ಮಾತುಗಳನ್ನು ನೋಡಿದರೆ ಬಿಜೆಪಿಯ ಹತಾಶೆ ಕಾಣಿಸುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ರಾಜ್ಯದ 25 ದಂಡಪಿಂಡಗಳನ್ನು ಜನರು ಮನೆಗೆ ಕಳಿಸಬೇಕು: ಬಿ.ವಿ.ಶ್ರೀನಿವಾಸ್ ವಿಶೇಷ ಸಂದರ್ಶನ!
ಪ್ರಧಾನಿ ಹೇಳಿಕೆ ಅವರ ಮನಸ್ಥಿತಿ ತೋರಿಸುತ್ತದೆ. ದೇಶದ ಇತಿಹಾಸದಲ್ಲಿ ಯಾವ ಪ್ರಧಾನಿಯೂ ಇಷ್ಟೊಂದು ಕೆಳಮಟ್ಟಕ್ಕೆ ಇಳಿದು ಮಾತನಾಡಿರುವುದು ನಾನು ನೋಡಿರಲಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರೆ, ಮೋದಿ ಅವರು ಮತೀಯ ಭಾವನೆ ಕೆರಳಿಸುವ ರೀತಿ ಮಾತನಾಡಿದ್ದಾರೆ. ಚುನಾವಣಾ ಆಯೋಗ ಯಾಕೆ ಈ ವಿಚಾರದಲ್ಲಿ ಕಣ್ಣುಮುಚ್ಚಿ ಕೂತಿದೆಯೋ ಗೊತ್ತಿಲ್ಲ. 70 ವರ್ಷಗಳಿಂದ ವಿವಿಧ ಪಕ್ಷಗಳು ಆಡಳಿತ ನಡೆಸಿವೆ. ಯಾವ ಹಿಂದೂಗೂ ಅನ್ಯಾಯವಾಗಿಲ್ಲ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.