ಸಂವಿಧಾನ ಬದಲಾವಣೆಗಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನಗಳನ್ನು ಗೆಲ್ಲಿಸಿಕೊಡಬೇಕು ಎಂದಿರುವ ಸಂಸದ ಅನಂತ್‌ಕುಮಾರ್ ಹೆಗಡೆ ಕರೆ ಭಾರತೀಯ ಜನತಾ ಪಕ್ಷದ ಗುಪ್ತ ಅಜೆಂಡಾದ ಭಾಗ. 

ಬೆಂಗಳೂರು (ಮಾ.11): ಸಂವಿಧಾನ ಬದಲಾವಣೆಗಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನಗಳನ್ನು ಗೆಲ್ಲಿಸಿಕೊಡಬೇಕು ಎಂದಿರುವ ಸಂಸದ ಅನಂತ್‌ಕುಮಾರ್ ಹೆಗಡೆ ಕರೆ ಭಾರತೀಯ ಜನತಾ ಪಕ್ಷದ ಗುಪ್ತ ಅಜೆಂಡಾದ ಭಾಗ. ಹೆಗಡೆ ಅವರ ಅಭಿಪ್ರಾಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಒಪ್ಪಿಗೆ ಇಲ್ಲದಿದ್ದರೆ ಕೂಡಲೇ ಪಕ್ಷದಿಂದ ವಜಾ ಮಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಅಲ್ಲದೆ, ಸಂವಿಧಾನ ಬದಲಾವಣೆಯ ಮಾತನಾಡಿರುವ ಅನಂತಕುಮಾರ್‌ ಹೆಗಡೆ ಅವರನ್ನು ಚುನಾವಣಾ ಸ್ಪರ್ಧೆಯಿಂದ ಶಾಶ್ವತವಾಗಿ ಅನರ್ಹಗೊಳಿಸಬೇಕು ಎಂದು ಲೋಕಸಭೆ ಸ್ಪೀಕರ್‌ ಅವರಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಮ್ಮ ಸಂವಿಧಾನ ಸರ್ವಧರ್ಮಗಳನ್ನೂ ಸಮಭಾವದಿಂದ ನೋಡುತ್ತದೆ. ಪ್ರತಿಯೊಬ್ಬ ಪ್ರಜೆಗೂ ತನ್ನ ನಂಬಿಕೆಯ ಧರ್ಮವನ್ನು ಪಾಲಿಸಿಕೊಂಡು ಬರುವ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದೆ. ಹೀಗಿರುವಾಗ ಸಂವಿಧಾನವನ್ನೇ ಬದಲಾಯಿಸಿ ಅನಂತ್ ಕುಮಾರ್ ಹೆಗಡೆ ಅವರು ಯಾವ ಹಿಂದೂಧರ್ಮವನ್ನು ರಕ್ಷಿಸಲು ಹೊರಟಿದ್ದಾರೆ? ಹೆಗಡೆಯವರ ಹೇಳಿಕೆಯನ್ನು ಗಮನಿಸಿದರೆ ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿ ಕೊಟ್ಟ ಸಂವಿಧಾನಕ್ಕಿಂತ ಮೊದಲು ಇದ್ದ ಮನು ಪ್ರಣೀತ ಸಂವಿಧಾನವನ್ನು ಜಾರಿಗೊಳಿಸುವ ದುಷ್ಠ ಆಲೋಚನೆ ಹೆಗಡೆ ಮತ್ತು ಅವರ ಪಕ್ಷಕ್ಕೆ ಇದೆ ಎನ್ನುವುದು ಸ್ಪಷ್ಟ ಎಂದು ಹೇಳಿದ್ದಾರೆ.

ಸರ್ಕಾರ ಬೀಳಿಸೋಕೆ ಶಾಸಕರಿಗೆ ಬಿಜೆಪಿಯವರಿಂದ ತಲಾ 50 ಕೋಟಿ ಆಮಿಷ: ಡಿಕೆಶಿ ಆರೋಪ

ಅನರ್ಹಗೊಳಿಸಲಿ: ಪಕ್ಷದ ವರಿಷ್ಠರ ಬೆಂಬಲ ಇಲ್ಲದೆ ಅನಂತಕುಮಾರ ಹೆಗಡೆಯಂತಹ ಸಂಸದನೊಬ್ಬ ಈ ರೀತಿ ನಿರ್ಭೀತಿಯಿಂದ ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡಲು ಸಾಧ್ಯ ಇಲ್ಲ. ಸಂವಿಧಾನಕ್ಕೆ ಬದ್ಧನಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಪ್ರಮಾಣ ವಚನ ಸ್ವೀಕರಿಸಿರುವ ಅನಂತ್ ಕುಮಾರ್ ಹೆಗಡೆ, ಅದೇ ಸಂವಿಧಾನದ ವಿರುದ್ಧ ಹೇಳಿಕೆ ನೀಡಿರುವುದು ಖಂಡಿತ ಶಿಕ್ಷಾರ್ಹ ಅಪರಾಧ. ಇದನ್ನು ಲೋಕಸಭಾಧ್ಯಕ್ಷರು ಗಮನಕ್ಕೆ ತೆಗೆದುಕೊಂಡು ಹೆಗಡೆ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಅವರನ್ನು ಚುನಾವಣಾ ಸ್ಪರ್ಧೆಯಿಂದ ಶಾಶ್ವತವಾಗಿ ಅನರ್ಹಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.