ಬಿಜೆಪಿ ನಾಯಕ ಅರವಿಂದ ಲಿಂಬಾವಳಿ ಕಾಲೆಳೆದ ಸಿಎಂ ಸಿದ್ದರಾಮಯ್ಯ: ಕಾರಣವೇನು?
ನಾನು ಸಾಮಾಜಿಕ ನ್ಯಾಯಕ್ಕೆ ಬದ್ಧನಾಗಿದ್ದೇನೆ. ಅದರಲ್ಲಿ ಯಾವುದೇ ರಾಜೀ ಮಾಡಿಕೊಳ್ಳುವ ಮಾತೇ ಇಲ್ಲ. ಭೋವಿ ಸಮಾಜ ಎಲ್ಲ ರೀತಿಯಿಂದ ಹಿಂದುಳಿದ ಸಮಾಜವಾಗಿದೆ. ಸಮಾಜವನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮುಂದೆ ತರುವಲ್ಲಿ ಬೇಕಿರುವ ಎಲ್ಲ ಶಕ್ತಿ ತುಂಬುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಾಗಲಕೋಟೆ (ನ.25): ನಾನು ಸಾಮಾಜಿಕ ನ್ಯಾಯಕ್ಕೆ ಬದ್ಧನಾಗಿದ್ದೇನೆ. ಅದರಲ್ಲಿ ಯಾವುದೇ ರಾಜೀ ಮಾಡಿಕೊಳ್ಳುವ ಮಾತೇ ಇಲ್ಲ. ಭೋವಿ ಸಮಾಜ ಎಲ್ಲ ರೀತಿಯಿಂದ ಹಿಂದುಳಿದ ಸಮಾಜವಾಗಿದೆ. ಸಮಾಜವನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮುಂದೆ ತರುವಲ್ಲಿ ಬೇಕಿರುವ ಎಲ್ಲ ಶಕ್ತಿ ತುಂಬುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದ ಭೋವಿ ಗುರುಪೀಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಲಿಂ.ಶರಣಬಸವ ಸ್ವಾಮೀಜಿಗಳ ಸಂಸ್ಮರಣೋತ್ಸವ, ಗದ್ದುಗೆ ಶಿಲಾಮಂಟಪದ ಶಿಲಾನ್ಯಾಸ ಹಾಗೂ ಗುರು ಕುಟೀರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರಿಗೂ ಅಧಿಕಾರ ಹಾಗೂ ಸಂಪತ್ತು ಹಂಚಿಕೆಯಾಗಬೇಕು. ಅಂದರೆ ಮಾತ್ರ ಸಮಸಮಾಜ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.
ಲಿಂ.ಸಿದ್ಧರಾಮೇಶ್ವರರು ನೇರ, ನಿಷ್ಠುರ ವಚನಕಾರರು. ಬಸವಾದಿ ಶರಣರು ವಚನಗಳ ಮೂಲಕ ಸಮಾಜದ ಅಂಕು ಡೊಂಕು ತಿದ್ದಿದ್ದಾರೆ. ಬಸವಣ್ಣನ ಕಾಲದಲ್ಲಿ ಕನ್ನಡದಲ್ಲಿ ಧರ್ಮ ಭೋದನೆಯಾಗುತ್ತಿರಲಿಲ್ಲ. ಜನರ ಭಾಷೆಯಲ್ಲಿ ಶರಣರು ಧರ್ಮವನ್ನು ಬೋಧನೆ ಮಾಡುತ್ತಿದ್ದರು. ಮನುಷ್ಯರಿಗಾಗಿ ಧರ್ಮವಿದೇ ಹೊರತು ಧರ್ಮಕ್ಕಾಗಿ ಮನಷ್ಯರಿಲ್ಲ ಎಂದರು. ಭೋವಿ ಅಧ್ಯಯನ ಪೀಠ ಮಾಡುವುದಕ್ಕೆ ಮತ್ತು ಸಮುದಾಯದ ಒಬ್ಬರನ್ನು ಕೆಪಿಎಸ್‌ಸಿ ಸದಸ್ಯರನ್ನಾಗಿಸುವುದಕ್ಕೆ ನಾನು ಸಿದ್ಧ. ಭೋವಿ ಅಭಿವೃದ್ಧಿ ನಿಗಮ ಮಾಡುವ ಭರವಸೆ ನಾನು ನೀಡಿದ್ದೆ. ಮೊದಲ ಬಾರಿ ಮುಖ್ಯಮಂತ್ರಿ ಆದಾಗಲೇ ಅಭಿವೃದ್ಧಿ ನಿಗಮ ಮಾಡಿದೆ. ಈಗಲೂ ನಿಮ್ಮ ಬೇಡಿಕೆ ಈಡೇರಿಸಲು ನಾನು ಸಿದ್ಧ ಎಂದು ಭರವಸೆ ನೀಡಿದರು.
ಜಾತಿ ಜನಗಣತಿ ವರದಿಯಲ್ಲೇನಿದೆ ಎಂದು ವಿರೋಧ ಮಾಡೋರಿಗೂ ಗೊತ್ತಿಲ್ಲ: ಸಿದ್ದರಾಮಯ್ಯ
ಭೋವಿ ಸಮಾಜದ ಹಿತ ಕಾಯುವ ಪಕ್ಷ ನಮ್ಮದು. ನಾನು ಸಮುದಾಯಕ್ಜೆ ಆರ್ಥಿಕ ಶಕ್ತಿ ನೀಡುತ್ತೇನೆ. ನಿಮ್ಮ ಆಶೀರ್ವಾದ ನಮಗಿರಲಿ. ನಾನು ಸಿದ್ದರಾಮೇಶ್ವರರ ವಚನಗಳಲ್ಲಿ, ಆಶಯಗಳಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ ಎಂದರು. ಬಸವಣ್ಣನವರಿಗಿಂತ ಮೊದಲು ಧರ್ಮ ಬೋಧನೆ ಜನರ ಭಾಷೆಯಲ್ಲಿ ಆಗುತ್ತಿರಲಿಲ್ಲ. ಶರಣರು ಬಂದ ಬಳಿಕ ಜನರ ಭಾಷೆಯಲ್ಲಿ ಧಾರ್ಮಿಕ ಬೋಧನೆ ಶುರುವಾಯಿತು. ಜನರಿಗಾಗಿ ಧರ್ಮ ಇರುವುದು. ಧರ್ಮಕ್ಕಾಗಿ ನಾವು ಇರುವುದಲ್ಲ ಎಂದು ಸ್ಪಷ್ಟಪಡಿಸಿ ಮೌಢ್ಯ ಕಂದಾಚಾರಗಳ, ಜಾತಿಯನ್ನು ಬಿಡಬೇಕು ಎನ್ನುವುದು ಶರಣರ, ವಚನಕಾರರ ಆಶಯವಾಗಿತ್ತು. ಇದನ್ನು ಆಚರಿಸುವವರೇ ನಿಜ ಶರಣರು ಎಂದರು.
ಅರವಿಂದ ಲಿಂಬಾವಳಿ ಕಾಲೆಳೆದ ಸಿಎಂ: ವಿಧಾನಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಹೇಳಿದ 5 ಗ್ಯಾರಂಟಿಗಳಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ 6 ತಿಂಗಳಲ್ಲಿ 4 ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದೇವೆ. ನಾವು ನುಡಿದಂತೆ ನಡೆದಿದ್ದೇವಾ ಅರವಿಂದ ಲಿಂಬಾವಳಿ ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಲಿಂಬಾವಳಿ ಅವರನ್ನು ನೋಡುತ್ತ ನೀವು ಹೇಳುವುದು ಬೇಡ ಮಾತಿನಂತೆ ನಡೆದಿದ್ದೇವೆ ಎಂದು ಇಲ್ಲಿ ಸೇರಿರುವ ಜನರೇ ಹೇಳುತ್ತಿದ್ದಾರೆ ಎನ್ನುವ ಮೂಲಕ ಅರವಿಂದ ಲಿಂಬಾವಳಿ ಅವರ ಕಾಲೆಳೆದರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಚಿತ್ರದುರ್ಗದ ಕಾಂಗ್ರೆಸ್ ಟಿಕೆಟ್‌ನ್ನು ರಾಮಪ್ಪನಿಗೆ ನೀಡಬೇಕು ಎಂದು ಸಮಾಜದ ಮುಖಂಡರು ಆಗ್ರಹಿಸಿದರು.
ಜಾತಿಗಣತಿ ವರದಿ ಸ್ವೀಕರಿಸಿದ ನಿತೀಶ್ ಕುಮಾರ್ ಸಮಾಜ ಒಡೆದಿದ್ದಾರಾ?: ಸಿದ್ದರಾಮಯ್ಯ
ಅದಕ್ಕೆ ಉತ್ತರಿಸಿದ ಸಿಎಂ ಈ ಬಗ್ಗೆ ಇಲ್ಲಿ ಮಾತನಾಡುವುದು ಸರಿಯಲ್ಲ. ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ನಿರ್ಧಾರ ಮಾಡಲಾಗುತ್ತದೆ ಎಂದು ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಭೋವಿ ಸಮಾಜ ಎಸ್ಸಿಗೆ ಸೇರಲು ಅಂದಿನ ಸಿಎಂ ದೇವರಾಜ ಅರಸು ಹಾಗೂ ಪ್ರಧಾನಿ ಇಂದಿರಾ ಗಾಂಧಿ ಕಾರಣರಾಗಿದ್ದರು. ಇಂದು ಸಮಾಜ ಎಲ್ಲ ರೀತಿಯಿಂದ ಅಭಿವೃದ್ಧಿ ಹೊಂದಲು ಇಂದಿನ ಸಿಎಂ ಸಿದ್ದರಾಮಯ್ಯ ಕಾರಣ. ಇಂತಹ ಸಿಎಂ ಅವರ ಬೆಂಬಲಕ್ಕೆ ಸದಾ ನಮ್ಮ ಸಮಾಜವಿದೆ ಎಂದು ತಿಳಿಸಿದರು. ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ಎಚ್.ವೈ.ಮೇಟಿ, ಭೀಮಸೇನ ಚಿಮ್ಮನಕಟ್ಟಿ ಹಾಗೂ ಮಾನಪ್ಪ ವಜ್ಜಲ, ಸಿದ್ದು ಬಂಡಿ ಇತರರಿದ್ದರು.