ಮಂಡ್ಯದಲ್ಲಿ ಗಲಾಟೆ ಎಬ್ಬಿಸಿದ್ದೇ ಜೆಡಿಎಸ್: ಸಿಎಂ ಸಿದ್ದರಾಮಯ್ಯ
ಆರೋಪ ಮಾಡುತ್ತಿರುವ ಕುಮಾರಸ್ವಾಮಿ ಭಗವಾಧ್ವಜ ಹಾರಿಸಿದವರ ಪರವಾ?. ಇಂತಹ ಕಾನೂನು ಬಾಹಿರ ಕೆಲಸ ಮಾಡಿದವರ ಪರವಾಗಿ, ಅವರನ್ನು ಸಮರ್ಥಿಸಿಕೊಂಡು ರಾಜಕಾರಣ ಮಾಡಲು ಹೋಗಿರುವವರು ಯಾರು?. ಅವರಿಂದಲೇ ಅಶಾಂತಿ, ಗಲಾಟೆ ಸೃಷ್ಟಿಯಾಗಿರುವುದು ಎಂದು ತಿರುಗೇಟು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು(ಜ.31): ಮಂಡ್ಯದ ಕೆರಗೋಡಿನಲ್ಲಿ ಗಲಾಟೆ ಎಬ್ಬಿಸಿದ್ದು, ಶಾಂತಿಗದಡಿದ್ದೇ ಜೆಡಿಎಸ್‌ನವರು. ಸರ್ಕಾರಿ ಜಾಗದಲ್ಲಿ ರಾಷ್ಟ್ರಧ್ವಜ, ನಾಡಧ್ವಜ ಹಾರಿಸುವುದಾಗಿ ಮುಚ್ಚಳಿಕೆ ಬರೆದು ಕೊಟ್ಟು ಭಗವಾಧ್ವಜ ಹಾರಿಸಿದ್ದು ತಪ್ಪಲ್ಲವಾ?. ಇದನ್ನು ಸಮರ್ಥಿಸಿಕೊಳ್ಳುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಗವಾಧ್ವಜ ಹಾರಿಸಿದವರ ಪರಾನಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ಸರ್ಕಾರ ಜನರನ್ನು ಪ್ರಚೋದಿಸುತ್ತಿದೆ, ಅಶಾಂತಿ ಸೃಷ್ಟಿಸುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರಲ್ಲಾ ಎಂಬ ಪ್ರಶ್ನೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ಮಂಡ್ಯದಲ್ಲಿ ಬೆಂಕಿ ಹಚ್ಚಿದ್ದೇ ಸರ್ಕಾರ: ಕುಮಾರಸ್ವಾಮಿ ವಾಗ್ದಾಳಿ
ಅಲ್ಲಿ ಗಲಾಟೆ, ಅಶಾಂತಿ ಸೃಷ್ಟಿಸಿದ್ದೇ ಜೆಡಿಎಸ್. ಇಲ್ಲಿ ಯಾರದ್ದು ತಪ್ಪು ಅನ್ನೋದಕ್ಕಿಂತ ಮುಚ್ಚಳಿಕೆಯಲ್ಲಿ ಏನಿದೆ ಅನ್ನೋದು ಮುಖ್ಯ. ಸ್ಥಳೀಯ ಪಂಚಾಯಿತಿಯವರಿಗೆ ರಾಷ್ಟ್ರಧ್ವಜ, ನಾಡಧ್ವಜ ಹಾರಿಸುತ್ತೇವೆ ಎಂದು ಮುಚ್ಚಳಿಕೆ ಬರೆದುಕೊಟ್ಟು ಭಗವಾಧ್ವಜ ಹಾರಿಸಿದರೆ ಅದು ಅಶಾಂತಿ, ಗಲಾಟೆ ನಿರ್ಮಾಣ ಮಾಡಿದಂಗೆ ಅಲ್ವಾ?. ಸರ್ಕಾರಿ ಜಾಗದಲ್ಲಿ ಯಾವ ಧ್ವಜವನ್ನಾದರೂ ಹಾರಿಸಲು ಅವಕಾಶ ಇದೆಯಾ?. ಸರ್ಕಾರಿ ಜಾಗ ರಕ್ಷಿಸುವುದು, ಅದಕ್ಕೆ ಚ್ಯುತಿ ಬಂದಾಗ ಕ್ರಮ ಜರುಗಿಸುವುದು ಸರ್ಕಾರದ ಕರ್ತವ್ಯ ಅಲ್ಲವಾ?. ಅದನ್ನು ನಾವು ಮಾಡಿದ್ದೇವೆ. ಆರೋಪ ಮಾಡುತ್ತಿರುವ ಕುಮಾರಸ್ವಾಮಿ ಭಗವಾಧ್ವಜ ಹಾರಿಸಿದವರ ಪರವಾ?. ಇಂತಹ ಕಾನೂನು ಬಾಹಿರ ಕೆಲಸ ಮಾಡಿದವರ ಪರವಾಗಿ, ಅವರನ್ನು ಸಮರ್ಥಿಸಿಕೊಂಡು ರಾಜಕಾರಣ ಮಾಡಲು ಹೋಗಿರುವವರು ಯಾರು?. ಅವರಿಂದಲೇ ಅಶಾಂತಿ, ಗಲಾಟೆ ಸೃಷ್ಟಿಯಾಗಿರುವುದು ಎಂದು ತಿರುಗೇಟು ನೀಡಿದರು.