Asianet Suvarna News Asianet Suvarna News

ಜನರ ದಾರಿ ತಪ್ಪಿಸಲು ಸುಳ್ಳು ಉತ್ಪಾದಿಸುತ್ತಿದೆ ಬಿಜೆಪಿ: ಸಿಎಂ ಸಿದ್ದರಾಮಯ್ಯ

ನಮ್ಮ ಸರ್ಕಾರದಲ್ಲಿ ಹಣ ಇಲ್ಲ ಎಂದು ಬಿಜೆಪಿಯವರು ಸುಳ್ಳುಗಳನ್ನು ಉತ್ಪಾದಿಸುತ್ತಾ ಅಲೆಯುತ್ತಿದ್ದಾರೆ. ಹಣ ಇಲ್ಲದೆ ಗ್ಯಾರಂಟಿ ಯೋಜನೆಗಳು, ಇಷ್ಟೆಲ್ಲಾ ಅಭಿವೃದ್ಧಿ ಕಾರ್ಯಗಳು ಹೇಗೆ ನಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ 

CM Siddaramaiah Slams BJP grg
Author
First Published Feb 3, 2024, 9:00 PM IST

ಮುದ್ದೇಬಿಹಾಳ(ಫೆ.03):  ನಾಡಿನ ಜನರನ್ನು ತಪ್ಪು ದಾರಿಗೆ ಎಳೆದು ಅವರನ್ನು ವಂಚಿಸಲು ಬಿಜೆಪಿ ಅಪ್ಪಟ ಸುಳ್ಳುಗಳನ್ನು ಉತ್ಪಾದಿಸುತ್ತಿದೆ. ಬಿಜೆಪಿಯವರ ಸುಳ್ಳುಗಳನ್ನು ನಂಬಿ ಮೋಸ ಹೋಗಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಸರ್ಕಾರದ ಐದು ಐತಿಹಾಸಿಕ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು. ನಮ್ಮ ಸರ್ಕಾರದಲ್ಲಿ ಹಣ ಇಲ್ಲ ಎಂದು ಬಿಜೆಪಿಯವರು ಸುಳ್ಳುಗಳನ್ನು ಉತ್ಪಾದಿಸುತ್ತಾ ಅಲೆಯುತ್ತಿದ್ದಾರೆ. ಹಣ ಇಲ್ಲದೆ ಗ್ಯಾರಂಟಿ ಯೋಜನೆಗಳು, ಇಷ್ಟೆಲ್ಲಾ ಅಭಿವೃದ್ಧಿ ಕಾರ್ಯಗಳು ಹೇಗೆ ನಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಕೇಂದ್ರದ ಅನುದಾನದ ಬಗ್ಗೆ ಶ್ವೇತಪತ್ರ ಹೊರಡಿಸಿ: ಸರ್ಕಾರಕ್ಕೆ ಸವಾಲು ಹಾಕಿದ ಆರ್.ಅಶೋಕ್

ನಾನು ಬಸವಾದಿ ಶರಣರ ಅನುಯಾಯಿ. ಮೌಢ್ಯ, ಕಂದಾಚಾರ, ಕಂದಾಚಾರ, ಜಾತಿ ತಾರತಮ್ಯದ ವಿರುದ್ಧ ವಚನ ಕ್ರಾಂತಿ ಆರಂಭಿಸಿದ್ದರಿಂದ ನಾನು ಅವರ ಅನುಯಾಯಿ ಎಂದ ಅವರು, ದುಡಿಯುವವರು ಯಾರೋ, ದುಡಿದು ತಿನ್ನುವವರು ಇನ್ಯಾರೋ ಎನ್ನುವ ಪರಿಸ್ಥಿತಿ ಸಮಾಜದಲ್ಲಿತ್ತು. ಈ ತಾರತಮ್ಯ ಮತ್ತು ಮೇಲು-ಕೀಳು ಹೋಗಲಾಡಿಸಲು ಬಸವಣ್ಣರ ನೇತೃತ್ವದಲ್ಲಿ ವಚನ ಕ್ರಾಂತಿ ಶುರು ಆಯಿತು. ಈ ಕಾರಣಕ್ಕೆ ನಾನು ಬಸವಾದಿ ಶರಣರ ಅನುಯಾಯಿ. ಇವರು ಕರ್ಮ ಸಿದ್ಧಾಂತವನ್ನು ಸಂಪೂರ್ಣ ತಿರಸ್ಕರಿಸಿತು ಎಂದು ಹೇಳಿದರು.

ಕ್ರಾಂತಿಯ ಪ್ರಭಾವದಲ್ಲಿ ಸಮಾಜ ಪೂರ್ಣ ಬದಲಾಗುವ ಮೊದಲೇ ವಚನ ಕ್ರಾಂತಿಗೆ ಅಡ್ಡಗಾಲು ಹಾಕಿದರು. ಆದ್ದರಿಂದ ಇನ್ನೂ ಬಸವಣ್ಣನವರ ಆಶಯದ ಇವ ನಮ್ಮವ ಇವ ನಮ್ಮವ ಎನ್ನುವ ಆಶಯ ಈಡೇರದೆ ಜಾತಿ ವ್ಯವಸ್ಥೆ ಗಟ್ಟಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಒಂದೇ ದಿನ ₹227 ಕೋಟಿ ಮೌಲ್ಯದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮಾಡಿದ್ದೇವೆ. ಅಪ್ಪಾಜಿ ನಾಡಗೌಡರು ಅತ್ಯಂತ ಹಿರಿಯ ಸಭ್ಯ ರಾಜಕಾರಣಿ. ಅವರಿಗೆ ಸಚಿವರಾಗುವ ಅರ್ಹತೆ, ಅನುಭವ ಎರಡೂ ಇದೆ. ನಾಡಗೌಡರ ಕಾರಣದಿಂದ ಮುದ್ದೇಬಿಹಾಳ ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಿಎಂಗೆ ಸ್ವಾಮೀಜಿಗಳ ಸನ್ಮಾನ:

ಶರಣ ಶ್ರೇಷ್ಠ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 12 ಮಂದಿ ಶರಣ ಸ್ವಾಮೀಜಿಗಳು ವೇದಿಕೆಯಲ್ಲೇ ಅಭಿನಂದಿಸಿ, ಸನ್ಮಾನಿಸಿ ಆಶೀರ್ವದಿಸಿದರು
ಕ್ಷೇತ್ರದ ಶಾಸಕ ಅಪ್ಪಾಜಿ ಸಿ.ಎಸ್.ನಾಡಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್, ಸಕ್ಕರೆ ಸಚಿವ ಶಿವಾನಂದ ಪಾಟೀಲ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್, ಶಾಸಕರಾದ ಯಶವಂತರಾಯಗೌಡ ಪಾಟೀಲ್, ಹಣಮಂತ ನಿರಾಣಿ, ಬಸವನಗೌಡ ಆರ್ ಪಾಟೀಲ್, ಸುನೀಲಗೌಡ ಪಾಟೀಲ, ಪ್ರೊ.ಎಚ್‌.ಪೂಜಾರ, ವಿಠ್ಠಲ ಕಟಕದೊಂಡ, ಅಶೋಕ ಮನಗೂಳಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುದ್ದೇಬಿಹಾಳ ಕ್ಷೇತ್ರದ ಶಾಸಕ ಸಿ.ಎಸ್‌.ನಾಡಗೌಡ (ಅಪ್ಪಾಜಿ) ಅವರನ್ನು ಮುದ್ದೇಬಿಹಾಳ ಪುರಸಭೆ ವತಿಯಿಂದ ಬೆಳ್ಳಿ ಕಿರೀಟ ತೊಡಿಸಿ, ಬೃಹತ್‌ ಹಾರಿ ಹಾಕಿ ಸನ್ಮಾನಿಸಲಾಯಿತು.

ಬಿಜೆಪಿಯವರ ಸುಳ್ಳುಗಳನ್ನು ನಂಬಿ ಮೋಸ ಹೋಗಬೇಡಿ: ಸಿಎಂ ಸಿದ್ದರಾಮಯ್ಯ

ಸರೂರಿನ ಶ್ರೀ ರೇವಣಸಿದ್ದೇಶ್ವರ ಮಠಕ್ಕೆ ಭೇಟಿ

ಮುದ್ದೇಬಿಹಾಳದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುದ್ದೇಬಿಹಾಳ ತಾಲೂಕಿನ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ವೇಳೆ ಮಹಿಳೆಯರು ಮುಖ್ಯಮಂತ್ರಿಯವರಿಗೆ ಆರತಿ ಮಾಡಿ ಬರಮಾಡಿಕೊಂಡರು. ನಂತರ ಸಿದ್ದರಾಮಯ್ಯ ಅವರು ದೇವರ ದರ್ಶನ ಪಡೆದು, ನಂತರ ತಮ್ಮ ಜೇಬಿನಿಂದ ಕಾಣಿಕೆಯಾಗಿ ಹಣ ಹಾಕಿದರು.

ಕವಡಿಮಟ್ಟಿ ರಾಯಣ್ಣ ಮೂರ್ತಿಗೆ ಪುಷ್ಪಾರ್ಪಣೆ

ಸರೂರಿನಲ್ಲಿ ಶ್ರೀ ರೇವಣೇಶ್ವರ ದೇವಸ್ಥಾನದಲ್ಲಿ ದರ್ಶನ ಪಡೆದುಕೊಂಡ ನಂತರ ಅವರು ಕವಡಿಮಟ್ಟಿ ಗ್ರಾಮಕ್ಕೆ ಭೇಟಿ ನೀಡಿದರು. ಈ ವೇಳೆ ಗ್ರಾಮದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಕಿತ್ತೂರು ಚನ್ನಮ್ಮನ ಆಸ್ಥಾನದಲ್ಲಿದ್ದ ರಾಯಣ್ಣ ಅವರು, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದವರು. ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಅಪ್ರತಿಮ ದೇಶಭಕ್ತರಾಗಿದ್ದರು. ರಾಯಣ್ಣನ ಆದರ್ಶಗಳು, ದೇಶಭಕ್ತಿ, ಸ್ವಾತಂತ್ರ್ಯ ಪ್ರೇಮ ಇಂದಿನ ಯುವಕರಿಗೆ ಆದರ್ಶವಾಗಲಿ ಎಂದು ಆಶಿಸುವೆ. ಇದುವೆ ನಾವು ಅವರಿಗೆ ಅರ್ಪಿಸುವ ನೈಜ ನಮನಗಳು. ಅವರ ತತ್ವ, ಆದರ್ಶಗಳು ಎಂದಿಗೂ ಚಿರಾಯುವಾಗಿವೆ. ಹೀಗಾಗಿ ಅವರ ಹೆಸರಿನಲ್ಲಿ ರಾಜ್ಯ ಸರ್ಕಾರವು ಬೈಲಹೊಂಗಲ ತಾಲೂಕಿನಲ್ಲಿ 100 ಎಕರೆ ಪ್ರದೇಶದಲ್ಲಿ ಸೈನಿಕ ಶಾಲೆಯನ್ನು ನಿರ್ಮಿಸಿದೆ ಎಂದು ಹೇಳಿದರು.

Follow Us:
Download App:
  • android
  • ios