ಪೌರ ಕಾರ್ಮಿಕರ ಬೇಡಿಕೆಗಳನ್ನು ಹಣದ ಅಳತೆಗೋಲಿನಲ್ಲಿ ಅಳೆಯುವುದಕ್ಕಿಂತ ಸಹಾನುಭೂತಿಯಿಂದ ಪರಿಶೀಲಿಸಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಬೆಂಗಳೂರು (ಜೂ.01): ಪೌರ ಕಾರ್ಮಿಕರ ಬೇಡಿಕೆಗಳನ್ನು ಹಣದ ಅಳತೆಗೋಲಿನಲ್ಲಿ ಅಳೆಯುವುದಕ್ಕಿಂತ ಸಹಾನುಭೂತಿಯಿಂದ ಪರಿಶೀಲಿಸಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೌರ ಕಾರ್ಮಿಕರ ಬೇಡಿಕೆಗಳನ್ನು ಸಹಾನುಭೂತಿಯಿಂದ ಗಮನಿಸಿ ಕ್ರಮ ಕೈಗೊಳ್ಳಬೇಕು. ರಾಜ್ಯಾದ್ಯಂತ ನಡೆಯುತ್ತಿರುವ ಪೌರ ಕಾರ್ಮಿಕರ ಮುಷ್ಕರವನ್ನು ರಾಜ್ಯ ಕಾಂಗ್ರೆಸ್ ಸರ್ಕಾರವು ಸ್ವಚ್ಛತೆ, ನೈರ್ಮಲ್ಯ ಅಂಶಗಳ ಜತೆಗೆ ಮಾನವೀಯ ಆಯಾಮದಿಂದಲೂ ನೋಡಬೇಕು ಎಂದು ಒತ್ತಾಯಿಸಿದ್ದಾರೆ.
ಸಮಾಜದ ಸ್ವಾಸ್ಥ್ಯ ಕಾಪಾಡುವ ಯೋಧರಾಗಿ ಮಳೆ, ಗಾಳಿ, ಬಿಸಿಲು ಲೆಕ್ಕಿಸದೇ ಕರ್ತವ್ಯ ನಿರ್ವಹಿಸುವ ಇವರ ಸೇವೆಯನ್ನು ಸರ್ಕಾರ ಹಣದ ಅಳತೆಗೋಲಿನಲ್ಲಿ ಅಳೆಯುವುದು ಬೇಡ. ಅವರ ಬೇಡಿಕೆಗಳನ್ನು ಮುಖ್ಯಮಂತ್ರಿ ಅವರು ಸಹಾನುಭೂತಿಯಿಂದ ಪರಿಶೀಲಿಸಿ ತುರ್ತು ಕ್ರಮ ಕೈಗೊಳ್ಳಬೇಕು. ಈಗಾಗಲೇ ಎಲ್ಲೆಡೆ ರಾಶಿರಾಶಿ ಕಸ ಬೀಳುತ್ತಿದೆ ಎಂಬುದನ್ನು ಅವರು ಗಮನಿಸಬೇಕು ಎಂದು ತಿಳಿಸಿದ್ದಾರೆ.
ಕಾಂಗ್ರೆಸ್‌ನಿಂದ ದ್ವೇಷದ ರಾಜಕಾರಣ: ಕಾಂಗ್ರೆಸ್ ಸರ್ಕಾರ ನನ್ನ ವಿರುದ್ಧ ದ್ವೇಷದ ರಾಜಕಾರಣಿ ಮಾಡುತ್ತಿದೆ. ಸರ್ಕಾರದ ಅಧಿಕಾರ ದುರುಪಯೋಗದ ಬಗ್ಗೆ ದಾಖಲೆಗಳಿರುವುದರಿಂದ ನನ್ನ ವಿರುದ್ಧ ಯುದ್ಧ ಶುರು ಮಾಡಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು. ಇಡೀ ಸರ್ಕಾರ ಒಬ್ಬ ಕುಮಾರಸ್ವಾಮಿಯನ್ನು ಸೈಲೆಂಟ್ ಮಾಡಲು ಪ್ರಯತ್ನಿಸುತ್ತಿದೆ. ಸರ್ಕಾರದ ಅಕ್ರಮಗಳ ಬಗ್ಗೆ ನನ್ನ ಬಳಿ ಟನ್‌ಗಟ್ಟಲೆ ದಾಖಲೆಗಳಿವೆ. ಯಾವುದೇ ದಾಖಲೆಗಳನ್ನು ಕೊಟ್ಟರು ಇವತ್ತಿನ ತನಿಖಾ ಸಂಸ್ಥೆಗಳ ಮೇಲೆ ನನಗೆ ನಂಬಿಕೆ ಇಲ್ಲ. ನಮ್ಮದು ಬಂದು ಸಂಸ್ಕೃತಿಯಲ್ಲ. ಸರ್ವ ಜನಾಂಗದ ಶಾಂತಿಯ ತೋಟದ ಸಂಸ್ಕೃತಿ ಎಂದು ಕಾಂಗ್ರೆಸ್ ವಿರುದ್ಧ ಚಾಟಿ ಬೀಸಿದರು.
ಕರ್ನಾಟಕ ಸಿಡಿ ಮತ್ತು ಪೆನ್ ಡ್ರೈವ್ ತಯಾರು ಮಾಡುವ ರಾಜ್ಯವಾಗಿದೆ ಎಂದು ನೇರವಾಗಿ ಆರೋಪಿಸಿದ ಕುಮಾರಸ್ವಾಮಿ, ಹನಿ ಟ್ರ್ಯಾಪ್ ಮತ್ತು ಸುಪಾರಿ ಕುರಿತಂತೆ ಗೃಹ ಮಂತ್ರಿಗಳು ಯಾವ ರೀತಿಯ ತನಿಖೆ ಮಾಡಿಸಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಹಿತಿ ಇಲ್ಲವೇ?, ಯಾರ ಮನೆ ಮೇಲೆ ದಾಳಿ ಮಾಡಿಸಿದರು?. ಆ ಮನೆಯಲ್ಲಿ ಏನೇನು ಸಿಕ್ಕಿತು?. ಯಾಕೆ ಸುಪಾರಿ ಕೊಟ್ಟರು ಎಂದೆಲ್ಲಾ ಅಂಶಗಳ ಬಗ್ಗೆ ತನಿಖೆ ನಡೆಸಿ ಸತ್ಯವನ್ನು ಹೊರಗೆ ತರುತ್ತಾರಾ ?. ಆ ಧೈರ್ಯ ಈ ಸರ್ಕಾರಕ್ಕೆ ಇದೆಯೇ ಎಂದು ಪ್ರಶ್ನಿಸಿದರು. ನಾನು ಕೇವಲ ಪ್ರಚಾರಕ್ಕೆ ದಾಖಲೆ ಕೊಟ್ಟರೂ ನ್ಯಾಯ ದೊರಕುವುದಿಲ್ಲ ಎಂದು ನನಗೆ ಗೊತ್ತಿದೆ. ದಾಖಲೆಗಳು ನನ್ನ ಬಳಿ ಭದ್ರವಾಗಿವೆ.
ಒಂದು ಬಾರಿ 5 ವರ್ಷದ ಸ್ವತಂತ್ರ ಸರ್ಕಾರ ಕೊಡಿ. ಎಲ್ಲರ ಆಡಳಿತವನ್ನು ನೋಡಿದ್ದೀರಿ. ನನಗೂ ಒಂದು ಅವಕಾಶ ಕೊಡಿ. ಎಲ್ಲಾ ಅಕ್ರಮಗಳಿಗೂ ತಾರ್ಕಿಕ ಅಂತ್ಯ ಕಾಣಿಸುತ್ತೇನೆ ಎಂದು ವಿಶ್ವಾಸದಿಂದ ನುಡಿದರು. ನಾನು ಪ್ರಧಾನ ಮಂತ್ರಿಯ ಮಗ. ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ. ಈಗ ಕೇಂದ್ರ ಮಂತ್ರಿ. ನಾನು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಲು ಸಾಧ್ಯವೇ. ಕಂದಾಯ ಪ್ರಕರಣದಲ್ಲಿ ಡಿವೈಎಸ್ಪಿ ಅವರನ್ನು ತನಿಖಾಧಿಕಾರಿಯನ್ನಾಗಿ ಮಾಡಿದ್ದು ರಾಜ್ಯದ ಇತಿಹಾಸದಲ್ಲೇ ಇದೇ ಮೊದಲು. ನನಗೆ ಈ ಪರಿಸ್ಥಿತಿಯನ್ನು ತಂದವರು ಇನ್ನೆಷ್ಟು ಮನೆ ಹಾಳು ಮಾಡಿದ್ದಾರೆ ಎಂದು ಕಿಡಿಕಾರಿದರು.
