ಬಜೆಟ್ ಮೇಲಿನ ಚರ್ಚೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಲು ಆರಂಭಿಸಿದ ವೇಳೆ ಪ್ರತಿಪಕ್ಷ ಬಿಜೆಪಿ ಸದಸ್ಯರು ಅಡ್ಡಿಪಡಿಸಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ‘ಜೈ ಸೀತಾರಾಮ್’ ಎಂದು ಹೇಳಿದರು. ಈ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರನ್ನು ಪರೋಕ್ಷವಾಗಿ ಉಲ್ಲೇಖಿಸಿ ಅವರು ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರೂ ರಾಜ್ಯಕ್ಕೆ ಅನುದಾನ ನೀಡುತ್ತಿಲ್ಲ ಎಂದು ತಿರುಗೇಟು ನೀಡಿದರು.
ವಿಧಾನಸಭೆ(ಮಾ.01): ಪಾಕಿಸ್ತಾನ ಪರ ಘೋಷಣೆ ಆರೋಪ ಖಂಡಿಸಿ ಬಾವಿಗಿಳಿದು ಧರಣಿ ನಡೆಸಿ ಜೈ ಶ್ರೀರಾಂ, ಮೋದಿ.. ಮೋದಿ.. ಎಂದು ಜೈಕಾರ ಕೂಗಿದ ಪ್ರತಿಪಕ್ಷ ಬಿಜೆಪಿ ಸದಸ್ಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಜೈ ಸೀತಾರಾಮ್’ ಎಂದು ಘೋಷಣೆ ಕೂಗಿ ಟಾಂಗ್ ಕೊಟ್ಟ ಪ್ರಸಂಗ ನಡೆಯಿತು.
ಗುರುವಾರ ಬಜೆಟ್ ಮೇಲಿನ ಚರ್ಚೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಲು ಆರಂಭಿಸಿದ ವೇಳೆ ಪ್ರತಿಪಕ್ಷ ಬಿಜೆಪಿ ಸದಸ್ಯರು ಅಡ್ಡಿಪಡಿಸಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ‘ಜೈ ಸೀತಾರಾಮ್’ ಎಂದು ಹೇಳಿದರು. ಈ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರನ್ನು ಪರೋಕ್ಷವಾಗಿ ಉಲ್ಲೇಖಿಸಿ ಅವರು ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರೂ ರಾಜ್ಯಕ್ಕೆ ಅನುದಾನ ನೀಡುತ್ತಿಲ್ಲ ಎಂದು ತಿರುಗೇಟು ನೀಡಿದರು.
ಕೇಂದ್ರ ಸರ್ಕಾರ ನಮ್ಮ ಗ್ಯಾರಂಟಿ ಕದ್ದಿದೆ: ಸಿಎಂ ಟೀಕೆ
ಮಾತೆತ್ತಿದರೆ ಜೈಶ್ರೀರಾಮ್ ಎನ್ನುತ್ತಾರೆ. ನಾವೇನು ರಾಮನ ಭಕ್ತರಲ್ಲವೆ? ನಮ್ಮ ಊರಿನಲ್ಲಿ ಎರಡು ರಾಮಮಂದಿರ ಕಟ್ಟಿಸಿದ್ದೇನೆ. ನಾನು ರಾಮನ ಭಕ್ತನಲ್ಲವೇ? ಇವರು ರಾಮ- ಸೀತೆಯರನ್ನು ಬೇರೆ ಮಾಡಿದ್ದಾರೆ. ಮಹಾತ್ಮಾ ಗಾಂಧೀಜಿ ಹೇಳಿದ ಸೀತಾರಾಮನಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ ಎಂದು ಹೇಳಿದರು.
ದೇಶದಲ್ಲಿ ಸ್ವಂತ ತೆರಿಗೆ ಹೆಚ್ಚಿರುವ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಶಿಕ್ಷಣ, ಆರೋಗ್ಯ, ಸೇತುವೆ, ಸಾಮಾಜಿಕ ಭದ್ರತೆ, ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ಕೇಂದ್ರದಿಂದ ಪಾಲು ಬರುತ್ತದೆ. ರೈಲ್ವೆಗೆ ಜಮೀನು ಕೊಟ್ಟು ಯೋಜನಾ ವೆಚ್ಚದಲ್ಲಿ ಶೇ.50ರಷ್ಟು ರಾಜ್ಯ ಸರ್ಕಾರ ಭರಿಸುತ್ತದೆ. ದೇಶದಲ್ಲಿಯೇ ಅತಿಹೆಚ್ಚು ತೆರಿಗೆ ಸಂಗ್ರಹಿಸುವ ಎರಡನೇ ರಾಜ್ಯವಾಗಿದ್ದರೂ, ಕರ್ನಾಟಕಕ್ಕೆ ಅತಿಹೆಚ್ಚು ಅನ್ಯಾಯವಾಗಿದೆ. ಕೇಂದ್ರದ ಅನ್ಯಾಯವನ್ನು ಬೆಂಬಲಿಸುವ ಬಿಜೆಪಿಗೆ ಕನ್ನಡಿಗರ ಬಗ್ಗೆ ಕಾಳಜಿ ಇದೆಯೇ ಎಂದು ಟೀಕಿಸಿದರು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟ ಸಿದ್ದರಾಮಯ್ಯ, 15ನೇ ಹಣಕಾಸು ಆಯೋಗ ಬಂದಾಗ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ನಾನು 14 ನೇ ಹಣಕಾಸು ಆಯೋಗದ ವೇಳೆ ಮುಖ್ಯಮಂತ್ರಿಯಾಗಿದ್ದೆ. ನಮಗೆ ಇಷ್ಟೊಂದು ಅನ್ಯಾಯ ಆಗಲಿಲ್ಲ. ಹಿಂದೆ ಹೆಚ್ಚುವರಿ ಅನುದಾನ ಕೊಟ್ಟಿದ್ದೇವೆಂದು ಈಬಾರಿ ಕಡಿತಗೊಳಿಸಿದ್ದಾರೆ. ಇಷ್ಟೆಲ್ಲ ಅನ್ಯಾಯವಾಗುತ್ತಿದ್ದರೂ ಕೇಂದ್ರ ಸರ್ಕಾರವನ್ನು ಬೆಂಬಲಿಸುತ್ತಿದ್ದಾರಲ್ಲಾ? ನೀವು ಕನ್ನಡಿಗರಾ? ನಾಡ ದ್ರೋಹಿಗಳು ಎಂಬುದಾಗಿ ಹೇಳಬೇಕಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
