ಅಧಿಕಾರ ಉಳಿಸಿಕೊಳ್ಳಲು ಜಾತಿಗಣತಿ ವರದಿ ಪ್ರಸ್ತಾಪಿಸುತ್ತಿರುವ ಸಿಎಂ: ಸಂಸದ ಬೊಮ್ಮಾಯಿ

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಿಎಂ ಸಿದ್ದರಾಮಯ್ಯ ಅವರು ಅಧಿಕಾರ ಕಳೆದುಕೊಳ್ಳುವ ಭಯದಿಂದ ಜಾತಿ ಗಣತಿ ಬಿಡುಗಡೆ ಮಾಡುವುದಾಗಿ ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಜಾತಿ ಗಣತಿ ವರದಿಯನ್ನು ಬಹಿರಂಗಪಡಿಸಿ ಸಾರ್ವಜನಿಕ ಚರ್ಚೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ. ವರದಿಯಲ್ಲಿನ ಲೋಪಗಳನ್ನು ಮತ್ತು ವಿವಿಧ ಸಮುದಾಯಗಳಿಂದ ವ್ಯಕ್ತವಾಗಿರುವ ಆಕ್ಷೇಪಣೆಗಳನ್ನು ಬೊಮ್ಮಾಯಿ ಎತ್ತಿ ತೋರಿಸಿದ್ದಾರೆ.

CM Siddaramaiah proposing caste census report to retain power says Basavaraj Bommai sat

ಬೆಂಗಳೂರು (ಅ.20): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಕಳೆದುಕೊಳ್ಳುವ ಭಯದಿಂದ ಜಾತಿ ಗಣತಿ ಬಿಡುಗಡೆ ಮಾಡುವುದಾಗಿ ಹೇಳುತ್ತಿದ್ದಾರೆ. ಮೊದಲು ಅದನ್ನು ಬಹಿರಂಗ ಪಡೆಸಲಿ, ಸಾರ್ವಜನಿಕ ಚರ್ಚೆಯಾಗಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿ ಕುರಿತು ಅಖಿಲ ಭಾರತ ವೀರಶೈವ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ತಮ್ಮನ್ನು ಭೇಟಿ ಮಾಡಿರುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಾತಿ ಗಣತಿ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ಇದು ಜಾತಿ ಗಣತಿಯಲ್ಲ. ಸಾಮಾಜಿಕ ಆರ್ಥಿಕ ಸಮೀಕ್ಷೆ, ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ಮಾಡುವ ಅಧಿಕಾರ ಇಲ್ಲ. ಕೇಂದ್ರ ಸರ್ಕಾರಕ್ಕೆ ಮಾತ್ರ ಜಾತಿ ಗಣತಿ ಮಾಡುವ ಅಧಿಕಾರವಿದೆ. ಬಿಹಾರ ಸರ್ಕಾರದ ಜಾತಿ ಗಣತಿಗೂ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಇವರು ಯಾವುದೋ ಸಮೀಕ್ಷೆ ಮಾಡಿ ಅದಕ್ಕೆ ಜಾತಿ ಗಣತಿಯ ಲೇಪನ ಮಾಡುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಯಡಿಯೂರಪ್ಪ ಹೆಂಡ್ತಿ ಸಾವಿನಲ್ಲಿ ಶೋಭಾ ಕರಂದ್ಲಾಜೆ ಪಾತ್ರವಿದೆ: ಸಚಿವ ಬೈರತಿ ಸುರೇಶ್

 ಇನ್ನು ಈ ವರದಿ ವೈಜ್ಞಾನಿಕವಾಗಿಯೂ ಇಲ್ಲ, ಅಂಕಿ‌ ಅಂಶ ಸಮರ್ಪಕವಾಗಿಲ್ಲ. ಹಲವು ಸಮುದಾಯಗಳಿಂದ ಆಕ್ಷೇಪಣೆ ಬಂದಿದೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ್ ಅವರು ಸಿದ್ದಪಡಿಸಿದ್ದ ವರದಿ ಸಮರ್ಪಕವಾಗಿಲ್ಲ ಎಂದು ಅಂದಿನ ಆಯೋಗದ ಕಾರ್ಯದರ್ಶಿ ಹಾಗೂ ಸದಸ್ಯರು ಸಹಿ ಹಾಕಿರಲಿಲ್ಲ. ನಂತರ ಬಂದ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗಡೆ ಅವರು, ಯಾವುದೇ ಸಮೀಕ್ಷೆ ನಡೆಸದೇ ಹಿಂದಿನ ಆಯೋಗದ ಅಧ್ಯಕ್ಷರು ಸಿದ್ದಪಡಿಸಿದ್ದ ವರದಿಯನ್ನೇ ಪರಿಷ್ಕರಿಸಿ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿಸಿದರು.

ಜಾತಿ ಗಣತಿ ವರದಿಯನ್ನು ಒಕ್ಕಲಿಗ ಸಮುದಾಯದವರು ವಿರೋಧಿಸಿದ್ದಾರೆ. ಸ್ವತ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಇದನ್ನು ವಿರೋಧಿಸಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭೆ ಕೂಡ ವಿರೋಧಿಸಿದೆ. ಎಲ್ಲ ಸಮುದಾಯಗಳ ಅನುಮಾನ ದೂರ‌ ಮಾಡುವ ಕೆಲಸ ಸಿಎಂ ಸಿದ್ದರಾಮಯ್ಯ ಮಾಡುತ್ತಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚಿಸಲಿ. ಇಷ್ಟೆಲ್ಲ ವಿರೋಧ ಇದ್ದರೂ ಜಾರಿ ಮಾಡುತ್ತೇವೆ ಅಂತಿದ್ದಾರೆ.  ಮೊದಲು ವರದಿ ಬಹಿರಂಗಪಡಿಸಲಿ, ಸಾರ್ವಜನಿಕವಾಗಿ ಚರ್ಚೆ ಆಗಲಿ. ಸಿದ್ದರಾಮಯ್ಯನವರು ವರದಿಯಲ್ಲಿ ಏನಿದೆ ಅಂತ ನೋಡಿಲ್ಲ ಅಂತಿದ್ದಾರೆ, ಆದರೆ ವರದಿ ರೆಡಿ ಮಾಡಿಸಿದವರೇ ಸಿದ್ದರಾಮಯ್ಯ. ದಿವಂಗತ ವಿ.ಪಿ. ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಅಧಿಕಾರ ಹೋಗುವ ಸಂದರ್ಭದಲ್ಲಿ ಮಂಡಲ್ ವರದಿ ಜಾರಿ ಮಾಡಿದ್ದರು. ಅದೇ ರೀತಿ ಇವರು ಈಗ ಜಾತಿ ಗಣತಿ ಜಾರಿ ಮಾಡುವುದಾಗಿ ಹೇಳುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಮುಡಾ ರೇಡ್‌: ವೈಟ್ನರ್‌ ಹಾಕಿ ತಿದ್ದಿದ ಸಿಎಂ ಪತ್ನಿ ಪತ್ರದ ಮೂಲ ಪ್ರತಿ ಇ.ಡಿ. ವಶಕ್ಕೆ!

ಸಂವಿಧಾನಬದ್ಧ ತೀರ್ಮಾನ: ಪರಿಶಿಷ್ಟ ಜಾತಿ, ಪಂಗಡಗಳ ಮೀಸಲು ಪ್ರಮಾಣ ಹೆಚ್ಚಳ, ಎಸ್ ಸಿ ಮೀಸಲು ವರ್ಗೀಕರಣ, ಪಂಚಮಸಾಲಿ ಸಮುದಾಯದವರಿಗೆ ಪ್ರವರ್ಗ 2ಡಿಗೆ ಸೇರ್ಪಡೆ, ಮುಸ್ಲಿಮರಿಗೆ ಪ್ರತ್ಯೇಕ ಮೀಸಲು ರದ್ದು ಸೇರಿ ಎಲ್ಲವನ್ನು ನನ್ನ ಅವಧಿಯಲ್ಲಿ ಸಂವಿಧಾನಬದ್ಧವಾಗಿ ತೀರ್ಮಾನ ಮಾಡಲಾಗಿತ್ತು. ಬಿಜೆಪಿ ಸರ್ಕಾರ ಕೈಗೊಂಡ ಈ ನಿರ್ಧಾರಗಳನ್ನು ಪ್ರಶ್ನಿಸಿ ಕಾಂಗ್ರೆಸ್ ನ ಕೆಲವರು ಸುಪ್ರೀಂ ಕೋರ್ಟ್ ಗೆ ಮೊರೆ ಹೋದರು. ವಿಧಾನಸಭೆ ಚುನಾವಣೆ ಹತ್ತಿರವಾಗಿದ್ದರಿಂದ ಮುಂದಿನ ವಿಚಾರಣೆವರೆಗೆ ಜಾರಿಗೊಳಿಸುವುದಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದ್ದನ್ನು ಸುಪ್ರೀಂ ಕೋರ್ಟ್ ಒಪ್ಪಿದೆಯೇ ಹೊರತು ತಡೆಯಾಜ್ಞೆ ನೀಡಿಲ್ಲ. ಎಸ್ ಸಿ, ಎಸ್ ಟಿ ಮೀಸಲು ಹೆಚ್ಚಳ, ಎಸ್ ಸಿ ಒಳಮೀಸಲು, ಪಂಚಮಸಾಲಿ ಸಮುದಾಯಕ್ಕೆ ಪ್ರತ್ಯೇಕ ಮೀಸಲು ಕೊಡುವ ಬಗ್ಗೆ ಕಾಂಗ್ರೆಸ್‌ ಸರ್ಕಾರಕ್ಕೆ ನೈಜ ಕಾಳಜಿಯಿದ್ದರೆ ಈ ನಿಟ್ಟಿನಲ್ಲಿ ಮುಂದುವರಿಯಬೇಕು. ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ ಎಂಬ ತಪ್ಪು ಮಾಹಿತಿ ನೀಡಿ ವಿವಿಧ ಸಮುದಾಯಗಳಿಗೆ ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದು ಸಂದ ಬೊಮ್ಮಾಯಿ ವಾಗ್ದಾಳಿ ಮಾಡಿದರು.

Latest Videos
Follow Us:
Download App:
  • android
  • ios