18000 ಕೋಟಿಗೆ ಮುಖ್ಯಮಂತ್ರಿ ಬೇಡಿಕೆ ಬರ ಪರಿಹಾರ ಕೊಡಿ: ಮೋದಿಗೆ ಸಿದ್ದು ಮೊರೆ
ರಾಜ್ಯದಲ್ಲಿ ಈ ಬಾರಿ ಬರದಿಂದಾಗಿ 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಷ್ಟವಾಗಿದ್ದು, ಈ ಸಂಬಂಧ 18,177.44 ಕೋಟಿ ರು. ಗಳ ಬರ ಪರಿಹಾರವನ್ನು ಬಿಡುಗಡೆ ಮಾಡಬೇಕು.
ನವದೆಹಲಿ (ಡಿ.21): ರಾಜ್ಯದಲ್ಲಿ ಈ ಬಾರಿ ಬರದಿಂದಾಗಿ 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಷ್ಟವಾಗಿದ್ದು, ಈ ಸಂಬಂಧ 18,177.44 ಕೋಟಿ ರು. ಗಳ ಬರ ಪರಿಹಾರವನ್ನು ಬಿಡುಗಡೆ ಮಾಡಬೇಕು. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಸಭೆಯನ್ನು ತುರ್ತಾಗಿ ಕರೆದು, ಬರ ಪರಿಹಾರ ಬಿಡುಗಡೆಗೊಳಿಸಲು ಸೂಚನೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
2ನೇ ಬಾರಿ ಮುಖ್ಯಮಂತ್ರಿಯಾದ ಬಳಿಕ ಎರಡನೇ ಬಾರಿಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿನ ಬರ ಪರಿಸ್ಥಿತಿಯ ಕುರಿತು ವಿವರಣೆ ನೀಡಿ, ಪರಿಹಾರ ಬಿಡುಗಡೆಗೆ ಮನವಿ ಮಾಡಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಜೊತೆ ನಾನು ಮೋದಿ ಅವರನ್ನು ಭೇಟಿ ಮಾಡಿ, ಶೀಘ್ರವೇ 18,177.44 ಕೋಟಿ ರು.ಗಳ ಬರ ಪರಿಹಾರ ಬಿಡುಗಡೆಗೆ ಮನವಿ ಮಾಡಿದ್ದೇನೆ. ಈ ಪೈಕಿ, ಎನ್‌ಡಿಆರ್‌ಎಫ್‌ನಿಂದ 4663.12 ಕೋಟಿ ರು., ಇನ್‌ಪುಟ್ ಸಬ್ಸಿಡಿ 12,757.86 ಕೋಟಿ ರು., ಕುಡಿಯುವ ನೀರಿಗಾಗಿ ತುರ್ತು ಪರಿಹಾರವಾಗಿ 566.78 ಕೋಟಿ ರು., ಜಾನುವಾರುಗಳ ರಕ್ಷಣೆಗಾಗಿ 363.68 ಕೋಟಿ ರು. ಒದಗಿಸುವಂತೆ ಮನವಿಯಲ್ಲಿ ಉಲ್ಲೇಖಿಸಲಾಗಿದೆ ಎಂದರು.
ಸಿಎಂ ಸಿದ್ದರಾಮಯ್ಯ ಮೋಸಗಾರ, ದಲಿತರ ಪರವಾಗಿಲ್ಲ: ಗೋವಿಂದ ಕಾರಜೋಳ ಆರೋಪ
ರಾಜ್ಯದ 236 ತಾಲೂಕುಗಳ ಪೈಕಿ 223 ಬರಪೀಡಿತವಾಗಿವೆ. ಅದರಲ್ಲಿ 196 ತಾಲೂಕುಗಳಲ್ಲಿ ಬರದ ತೀವ್ರತೆ ಹೆಚ್ಚಾಗಿದೆ. ಇದರಿಂದಾಗಿ 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಷ್ಟವಾಗಿದ್ದನ್ನು ಪ್ರಧಾನಿ ಗಮನಕ್ಕೆ ತಂದಿದ್ದೇನೆ. ಈವರೆಗೆ ನಾವು ಪರಿಹಾರ ಕೋರಿ 3 ಬಾರಿ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೇವೆ. ಆದರೆ, ಈ ಕುರಿತು ಪ್ರಾಥಮಿಕ ಸಭೆಯನ್ನೇ ನಡೆಸಿಲ್ಲ. ರಾಜ್ಯಕ್ಕೆ ಬರ ಪರಿಹಾರ ಸಿಗಬೇಕಾದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಸಭೆ ನಡೆಯಬೇಕು. ಈ ಸಭೆಯನ್ನು ತುರ್ತಾಗಿ ನಡೆಸಿ, ಶೀಘ್ರವೇ ಬರ ಪರಿಹಾರ ಬಿಡುಗಡೆಗೊಳಿಸಲು ಸೂಚಿಸಬೇಕು ಎಂದು ಪ್ರಧಾನಿಗೆ ಮನವಿ ಮಾಡಿದ್ದೇನೆ. ಮೋದಿ ಅವರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರ ಪರಿಹಾರವನ್ನು ಅವರಿಂದ ನಿರೀಕ್ಷಿಸಿದ್ದೇವೆ ಎಂದರು.
ನಿಗಮ-ಮಂಡಳಿ ಪಟ್ಟಿ ಫೈನಲ್‌ಗೆ ದಿಲ್ಲೀಲಿ ತಡರಾತ್ರಿವರೆಗೆ ಸರ್ಕಸ್: ಪಟ್ಟಿಯಲ್ಲಿ ಬದಲಾವಣೆ?
ಬರ ಪರಿಸ್ಥಿತಿಯಲ್ಲಿ ನರೇಗಾ ಕೆಲಸವನ್ನು 100 ರಿಂದ 150 ದಿನಗಳಿಗೆ ಕಡ್ಡಾಯವಾಗಿ ಹೆಚ್ಚಿಸಲು ಕಾನೂನಿನಲ್ಲಿ ಅವಕಾಶವಿದೆ. ಅದರಂತೆ ಹೆಚ್ಚಿಸಲು 3 ತಿಂಗಳ ಹಿಂದೆಯೇ ನಾವು ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಇನ್ನು, ಮಹದಾಯಿ ಯೋಜನೆ ಜಾರಿ ವಿಷಯದಲ್ಲಿ ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಯೋಜನೆಗೆ ಅನುಮತಿ ನೀಡುವುದು ಬಾಕಿ ಇದೆ. ಅನುಮತಿ ನೀಡಿದರೆ ನಮ್ಮ ಜನರಿಗೆ ಅನುಕೂಲ ಆಗಲಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಈಗಾಗಲೇ 5,300 ಕೋಟಿ ರು. ಅನುದಾನ ಘೋಷಿಸಿದೆ. ಆದರೆ, ಈ ತನಕ ಒಂದು ರು. ಕೂಡ ಬಂದಿಲ್ಲ. ಇನ್ನು, ಬೆಂಗಳೂರು, ರಾಮನಗರ ಜಿಲ್ಲೆಗಳ ವ್ಯಾಪ್ತಿಗೆ ಕುಡಿಯುವ ನೀರಿಗಾಗಿ ಮೇಕೆದಾಟು ಯೋಜನೆಯಿಂದ 66 ಟಿಎಂಸಿ ನೀರು ಸಂಗ್ರಹ ಮಾಡುವ ಉದ್ದೇಶವಿದೆ. ತಮಿಳುನಾಡು ರಾಜಕೀಯ ಕಾರಣಕ್ಕಾಗಿ ಈ ಯೋಜನೆಗೆ ವಿರೋಧ ಮಾಡುತ್ತಿದೆ. ಈ ಎಲ್ಲಾ ವಿಚಾರಗಳ ಕುರಿತು ಮೋದಿ ಜೊತೆ ಚರ್ಚೆ ನಡೆಸಿದ್ದೇನೆ. ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ ಎಂದರು.