ಗಣೇಶನನ್ನು ಬಂಧಿಸಿದ್ದ ಸಿಎಂ ಸಿದ್ದರಾಮಯ್ಯಗೆ ಶಾಪ ತಟ್ಟಿದೆ: ಆರ್. ಅಶೋಕ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗಣೇಶನ ಶಾಪ ತಟ್ಟಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಹೈಕೋರ್ಟ್‌ನಲ್ಲಿ ಸಿಎಂ ಅವರಿಗೆ ಹಿನ್ನಡೆಯಾಗಿರುವುದು ಗಣೇಶನ ಶಾಪದ ಪರಿಣಾಮ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಿಎಂ ಸ್ಥಾನದಿಂದ ರಾಜೀನಾಮೆ ನೀಡುವಂತೆ ಅವರು ಆಗ್ರಹಿಸಿದ್ದಾರೆ.
ಬೆಂಗಳೂರು (ಸೆ.24): ರಾಜ್ಯದಲ್ಲಿ ಗಣೇಶ ಹಬ್ಬಕ್ಕೆ ನೂರೆಂಟು ತೊಂದರೆಗಳು ಬರುತ್ತಿದ್ದರೂ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತರುವಂತೆ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯನ್ನು ತಡೆದು, ಗಣೇಶನನ್ನು ಬಂಧಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗಣೇಶನ ಶಾಪ ತಟ್ಟಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅರ್ಜಿಯನ್ನು ವಜಾಗೊಳಿಸಿ ರಾಜ್ಯಪಾಲರು ನೀಡಿದ್ದ ಪ್ರಾಸಿಕ್ಯೂಷನ್ ಎದುರಿಸುವಂತೆ ಆದೇಶ ಬಂದ ಬೆನ್ನಲ್ಲಿಯೇ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಹೈಕೋರ್ಟ್ ನಲ್ಲಿ ಹಿನ್ನಡೆಯಾಗಿದೆ. ಸಿದ್ದರಾಮಯ್ಯಗೆ ಗಣೇಶನ ಶಾಪ ತಟ್ಟಿದೆ. ಗಣೇಶನ ಬಂಧನ ಮಾಡಿದ್ದೇ ಶಾಪ. ಈ ನಿರ್ಣಯ ಬಿಜೆಪಿಯ ಗೆಲುವು. ಬಿಜೆಪಿ ಈ ಹಗರಣದ ಕುರಿತು ಪಾದಾಯಾತ್ರೆ ಮಾಡಿತ್ತು. ವಿಧಾನಸಭೆಯ ಒಳಗೂ ಹೊರಗೂ ಪ್ರತಿಭಟನೆ ಮಾಡಿತ್ತು. ರಾಮಕೃಷ್ಣ ಹೆಗಡೆಯವರ ಶಿಷ್ಯ ಆಗಿದ್ದರೆ, ನೈತಿಕತೆ ಇದ್ದರೆ ರಾಜಿನಾಮೆ ಕೊಡಲಿ ಎಂದು ಆಗ್ರಹಿಸಿದರು.
Breaking: ಮುಡಾ ಕೇಸಲ್ಲಿ ಸಿಎಂ ಸಿದ್ದರಾಮಯ್ಯಗೆ ಶಾಕ್; ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್!
ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಅವರಿಗೆ ಕಳೆದ ನಾಲ್ಕೈದು ತಿಂಗಳಿಂದ ಸಿಎಂ ವಿರುದ್ಧದ ದಾಖಲೆಗಳನ್ನು ತೆಗೆಯಲಾಗುತ್ತಿದೆ. ಈ ಬಗ್ಗೆ ಸಿಎಂಗೆ ಗೊತ್ತೇ ಇಲ್ಲವಾ? ಇದರ ಬಗ್ಗೆ ಸಿಎಂ ಸಿದ್ದರಾಮಯ್ಯ ತಿಳಿದುಕೊಂಡು ಸಂಗೊಳ್ಳಿ ರಾಯಣ್ಣನ ತರಹವೇ ನನ್ನ ಬೆನ್ನಿಗೂ ಚೂರಿ ಹಾಕುತ್ತಿದ್ದಾರೆ. ಸಂಗೊಳ್ಳಿ ರಾಯಣ್ಣನಂತೆ ನನಗೂ ಹಿತ ಶತ್ರುಗಳ ಕಾಟವಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಸ್ವತಃ ಸಿದ್ದರಾಮಯ್ಯ ಅವರೇ ಹೇಳಿಕೊಂಡಿದ್ದು, ಎಚ್ಚೆತ್ತುಕೊಂಡು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ತಿಳಿಸಿದರು.
ದಸರಾಗೂ ಮೊದಲೇ ಕಾಂಗ್ರೆಸ್‌ನಲ್ಲಿ ಹೊಸ ಸಿಎಂ: ನಾವು ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವುದಿಲ್ಲ. ಸರ್ಕಾರವೇ ನೈತಿಕ ಅಧಃಪತನದಿಂದ ಬಿದ್ದು ಹೋಗಲಿದೆ. ಇನ್ನು ಕಾಂಗ್ರೆಸ್‌ನಲ್ಲಿ ಹಲವರು ಈಗಾಗಲೇ ಸಿಎಂ ಆಗುವುದಕ್ಕೆ ಟವೆಲ್ ಹಾಕಿದ್ದಾರೆ. ಹಲವರು ನಾನು ಸಿಎಂ ಆಗ್ತೇನೆ ಎಂದು ಒಕ್ಕಲಿಗರು, ಲಿಂಗಾಯತರು ಸೇರಿದಂತೆ ಸಮುದಾಯಕ್ಕೊಬ್ಬ ನಾಯಕರು ಹೇಳಿದ್ದಾರೆ. ಇನ್ನು ಕೆಲವರು ತಾನೇ ಸಿಎಂ ಆಗುತ್ತೇನೆಂದು ಸೂಟು, ಬೂಟು ಹೊಲಿಸಿಕೊಂಡು ಸಿದ್ಧವಾಗಿದ್ದಾರೆ. ದಸರಾಗೂ ಮುನ್ನವೇ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ನಿರೀಕ್ಷೆಯಲ್ಲಿದ್ದೇವೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
ಮುಡಾ ಹಗರಣದಲ್ಲಿ ಹೈಕೋರ್ಟ್ ತೀರ್ಪು ಗೌರವಿಸಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ: ವಿಜಯೇಂದ್ರ ಆಗ್ರಹ!
ಸಿದ್ದರಾಮಯ್ಯ ಅರ್ಜಿ ವಜಾಗೊಳಿಸಿದ್ದ ಹೈಕೋರ್ಟ್: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರ ಹೆಸರಿಗೆ ಅಕಗ್ರಮವಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 14 ನಿವೇಶನಗಳನ್ನು ಪಡೆಯಲಾಗಿದೆ ಎಂದು ಖಾಸಗಿ ವ್ಯಕ್ತಿಗಳು ರಾಜಪಾಲರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ತಮ್ಮ ವಿವೇಚನೆ ಬಳಸಿ ಸಿಎಂ ಸಿದ್ದರಾಮಯ್ಯಗೆ ಪ್ರಾಸಿಕ್ಯೂಷನ್ ಎದುರಿಸುವಂತೆ ನೋಟೀಸ್ ನೀಡಿದ್ದರು. ಆದರೆ, ಇದನ್ನು ವಿರೋಧಿಸಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್ ರಾಜ್ಯಪಾಲರು ನೀಡಿದ್ದ ಪ್ರಾಸಿಕ್ಯೂಷನ್ ನೊಟೀಸ್ ಅನ್ನು ಎತ್ತಿ ಹಿಡಿದಿದೆ. ಈ ಮೂಲಕ ಮುಡಾ ಹಗರಣದಲ್ಲಿ ತನಿಖೆ ಎದುರಿಸುವಂತೆ ಆದೇಶ ಹೊರಡಿಸಿದೆ.