Asianet Suvarna News Asianet Suvarna News

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರವಿಲ್ಲ: ಸಚಿವ ಚಲುವರಾಯಸ್ವಾಮಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ಕಾನೂನು ಬದ್ಧವಾಗಿಯೇ ನಿವೇಶನಗಳನ್ನು ಪಡೆದಿದ್ದಾರೆ. ಸಿಎಂ ಅವರ ಯಾವುದೇ ಪಾತ್ರವಿಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು. 

CM Siddaramaiah has no role in Muda scam Says Minister N Chaluvarayaswamy gvd
Author
First Published Aug 3, 2024, 4:26 PM IST | Last Updated Aug 5, 2024, 2:09 PM IST

ನಾಗಮಂಗಲ (ಆ.03): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ಕಾನೂನು ಬದ್ಧವಾಗಿಯೇ ನಿವೇಶನಗಳನ್ನು ಪಡೆದಿದ್ದಾರೆ. ಸಿಎಂ ಅವರ ಯಾವುದೇ ಪಾತ್ರವಿಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನ ಮುಡಾದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪತ್ನಿಯ ಹೆಸರಿನಲ್ಲಿ ಅಕ್ರಮ ನಿವೇಶನ ಪಡೆದಿದ್ದಾರೆ ಎಂದು ಆರೋಪಿಸುತ್ತಿರುವ ವಿಪಕ್ಷದವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದರು.

ಸಿಎಂ ಸಿದ್ದರಾಮಯ್ಯನವರ ಕುಟುಂಬದವರು ನಿವೇಶನ ಪಡೆದುಕೊಂಡಿದ್ದರೆ ಅದು ನಿಯಮ ಬದ್ಧ ಮತ್ತು ಕಾನೂನಿನ ಚೌಕಟ್ಟಿನಲ್ಲಿಯೇ ಪಡೆದುಕೊಂಡಿದ್ದಾರೆ. ಪಾರ್ವತಮ್ಮ ಅವರಿಗೆ ಅಣ್ಣನವರಿಂದ ದಾನವಾಗಿ ಬಂದಿದ್ದ 3.16 ಎಕರೆ ಜಮೀನನ್ನು ಮುಡಾದವರು ಒತ್ತುವರಿ ಮಾಡಿಕೊಂಡಿರುವುದರಿಂದ ಬದಲಿ ನಿವೇಶನವನ್ನು ಕೊಟ್ಟಿದ್ದಾರೆಯೇ ಹೊರತು ಅಕ್ರಮವಾಗಿ ಪಡೆದುಕೊಂಡಿದ್ದಲ್ಲ. ಅದೂ ಕೂಡ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಮಂಜೂರಾಗಿದೆ ಎಂದು ವಿವರಿಸಿದರು.

ಶಿವಮೊಗ್ಗ, ವಿಜಯಪುರದಲ್ಲಿ ಹೊಸದಾಗಿ ಆಹಾರ ಪಾರ್ಕ್‌: ಸಚಿವ ಚಲುವರಾಯಸ್ವಾಮಿ

ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡುವ ವಿಚಾರ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರವೇ ಇಲ್ಲ ಎಂದ ಮೇಲೆ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಹೇಗೆ ನೀಡಲು ಸಾಧ್ಯ. ರಾಜ್ಯಪಾಲರು ನೀಡಿರುವ ನೋಟಿಸ್ ಸರಿಯಿಲ್ಲ. ರಾಜ್ಯಪಾಲರು ನೀಡಿರುವ ಶೋಕಾಸ್ ನೋಟಿಸ್ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಅವರ ನಡುವಳಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿ ನೋಟಿಸ್ ಹಿಂಪಡೆಯುವಂತೆ ಪತ್ರ ಬರೆಯಲಾಗಿದೆ ಎಂದರು.
ರಾಜ್ಯಪಾಲರು ತಮ್ಮ ನೋಟಿಸ್‌ನ್ನು ವಾಪಸ್ ಪಡೆಯುವರೆಂಬ ವಿಶ್ವಾಸವಿದೆ. ಹಾಗೊಂದು ವೇಳೆ ಪ್ರಾಸಿಕ್ಯೂಷನ್‌ಗೆ ಅದೇಶ ನೀಡಿದರೆ ಕಾನೂನು ಹೋರಾಟ ನಡೆಸಲಾಗುವುದು. 

ಇದೆಲ್ಲಾ ನಡೆದಿರುವುದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ, ಹಾಗಾಗಿ ಅವರ ಮೇಲೆಯೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಸರ್ಕಾರದ ಕಾಲದಲ್ಲೇ ಹತ್ತಾರು ಹಗರಣಗಳು ನಡೆದಿವೆ. ಈ ಹಿಂದೆ ನಿರಾಣಿ, ಶಶಿಕಲಾ ಜೊಲ್ಲೆ ಮತ್ತು ಜನಾರ್ಧನರೆಡ್ಡಿಯವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಲಾಗಿದೆ. ಅವುಗಳಿಗೆ ಇನ್ನು ಅನುಮತಿ ನೀಡಿಲ್ಲ. ಆದರೆ, ಸಿಎಂ ಸಿದ್ದರಾಮಯ್ಯನವರಿಗೆ ಒಂದೇ ದಿನದಲ್ಲಿ ನೋಟಿಸ್ ಕೊಟ್ಟಿದ್ದಾರೆ ಎಂದರೆ ಇದು ರಾಜಕೀಯ ಪ್ರೇರಿತ. ಇದು 136 ಶಾಸಕರನ್ನು ಹೊಂದಿರುವ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ನಡೆಸಿರುವ ಷಡ್ಯಂತ್ರ ಎಂದು ದೂರಿದರು.

ಸಿಎಂ ಬದಲಾವಣೆಯೂ ಇಲ್ಲ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಖ್ಯಂತ್ರಿಯಾಗಿರುವ ಸಿದ್ಧರಾಮಯ್ಯ ಅವರನ್ನು ಬದಲಾಯಿಸಲು ಸಾಧ್ಯವಿಲ್ಲ. 136 ಶಾಸಕರ ಬೆಂಬಲ ಹೊಂದಿರುವ ಅವರ ಸ್ಥಾನಕ್ಕೆ ಯಾವ ಕುತ್ತೂ ಇಲ್ಲ. ಬಹುಮತ ಹೊಂದಿರುವ ಅವರನ್ನು ಕೆಳಗಿಳಿಸಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂದರು. ಈ ರಾಜ್ಯ ಕಂಡ ಅತ್ಯಂತ ಪ್ರಾಮಾಣಿಕ ಮತ್ತು ಯಶಸ್ವಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಈ ಹಿಂದೆ ಸರ್ಕಾರ ನಡೆಸಿ ಒಂದೇ ಒಂದು ಭ್ರಷ್ಟಾಚಾರದ ಆರೋಪವಿಲ್ಲದೆ ಶುದ್ಧ ಆಡಳಿತ ನಡೆಸಿದವರು ಎಂದು ತಮ್ಮ ನಾಯಕನನ್ನು ಬಣ್ಣಿಸಿದರು.

ಪಾದಯಾತ್ರೆಗೆ ಪ್ರತಿಯಾಗಿ ಸಭೆ: ಬಿಜೆಪಿಯದ್ದು ರಾಜಕೀಯ ಪ್ರೇರಿತವಾಗಿರುವ ಪಾದಯಾತ್ರೆ ನಡೆಯಲಿ ಬಿಡಿ. ಅವರ ಅವಧಿಯಲ್ಲಿನ ಹಗರಣಗಳ ಬಗ್ಗೆ ನಾವೂ ಕೂಡ ಪ್ರಶ್ನೆ ಮಾಡ್ತೀವಿ. ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಸೇರಿ ಐದಾರು ಕಡೆ ಸಭೆ ನಡೆಸುತ್ತೇವೆ. ಕೊನೆಯದಾಗಿ ಮೈಸೂರಿನಲ್ಲಿ ಬೃಹತ್ ಸಭೆ ನಡೆಸಿ ಬಿಜೆಪಿ ಕಾಲದ ಹಗರಣಗಳನ್ನು ಬಿಚ್ಚಿಡುತ್ತೇವೆ ಎಂದರು. ಮುಡಾ ಹಗರಣದಲ್ಲಿ ಯಾವುದೇ ಬಲವಾದ ಸಾಕ್ಷಿಯಿಲ್ಲ. ಇದ್ದರೂ ಅದನ್ನು ನ್ಯಾಯಾಂಗದಲ್ಲಿ ಪ್ರಶ್ನಿಸಬಹುದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರೇ ಹೇಳಿದ್ದರು. ಆದರೆ, ಈಗ ಬೆಂಬಲ ಕೊಡುವುದಾಗಿ ಹೇಳಿದ್ದಾರೆ. ಮೈತ್ರಿ ಪಕ್ಷದಲ್ಲಿ ಏನೇನು ಒಳ ಒಪ್ಪಂದವಾಗಿದೆಯೋ ಗೊತ್ತಿಲ್ಲ ಎಂದರು.

ಎಚ್‌ಡಿಕೆ ಕಾವೇರಿ ಸಮಸ್ಯೆ ಪರಿಹರಿಸಿದರೆ ನಾನು ಮುಂದಿನ ಚುನಾವಣೆಗೇ ನಿಲ್ಲಲ್ಲ: ಸಚಿವ ಚಲುವರಾಯಸ್ವಾಮಿ

ಮೈತ್ರಿ ಮಂತ್ರಿಯಾಗಿ ಅವರ ಜೊತೆಗಿರುವ ಕುಮಾರಸ್ವಾಮಿ ಬೆಂಬಲ ಕೊಡಬೇಕಲ್ಲವೇ. ಬಿಜೆಪಿ ಮುಖಂಡರ ರಾಜೀಯಿಂದ ಒಪ್ಪಿಕೊಂಡಿದ್ದಾರೋ ಅಥವಾ ಮಂತ್ರಿಗಿರಿ ಹೋಗುತ್ತೆ ಅಂತ ಬೆಂಬಲಕೊಟ್ಟಿದ್ದಾರೋ ಗೊತ್ತಿಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು. ರಾಜ್ಯದಲ್ಲಿ ರಾಜಕೀಯ ಬೆಳವಣಿಗೆ ನಡೆಯುತ್ತಿದ್ದರೂ ರೈತರ ಕಾರ್ಯಕ್ರಮಗಳಲ್ಲಿ ಅರಾಮವಾಗಿ ಭಾಗವಹಿಸಿದ್ದೀರಿ ಎಂಬ ಪ್ರಶ್ನೆಗೆ, ರಾಜ್ಯದಲ್ಲಿ ಯಾವ ರಾಜಕೀಯ ಬೆಳವಣಿಗೆಗಳೂ ನಡೆಯುತ್ತಿಲ್ಲ. ರಾಜ್ಯ ಸರ್ಕಾರ ಸುಭದ್ರವಾಗಿದೆ. ಕರ್ತವ್ಯ ಮರೆಯಕ್ಕಾಗೊಲ್ಲ, ಯಾವುದೇ ಸಮಸ್ಯೆ ಬಂದರೂ ಎದುರಿಸುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಇದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಉದ್ಯಮಿ ಸ್ಟಾರ್‌ ಚಂದ್ರು, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ಮುಖಂಡರಾದ ಸಂಪತ್‌ಕುಮಾರ್ ಸೇರಿದಂತೆ ಹಲವರಿದ್ದರು.

Latest Videos
Follow Us:
Download App:
  • android
  • ios