ಬರ ಪರಿಹಾರ ಅನ್ಯಾಯ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಕೇಂದ್ರ ಸರ್ಕಾರವು ಬರ ಪರಿಹಾರದಲ್ಲಿ ರಾಜ್ಯಕ್ಕೆ ತೀವ್ರ ಅನ್ಯಾಯ ಮಾಡಿದ್ದು, ಎನ್‌ಡಿಆರ್‌ಎಫ್ ನಿಯಮಗಳ ಪ್ರಕಾರ 18,172 ಕೋಟಿ ರು.ಗಳಿಗೆ ಮನವಿ ಸಲ್ಲಿಸಿದ್ದರೆ ‘ಲಾಲಿಪಾಪ್’ ನೀಡಿದಂತೆ ಶೇ.19ರಷ್ಟು (3,498 ಕೋಟಿ ರು.) ಹಣ ಮಾತ್ರ ಬಿಡುಗಡೆ ಮಾಡಿದೆ.
ಬೆಂಗಳೂರು (ಏ.29): ‘ಕೇಂದ್ರ ಸರ್ಕಾರವು ಬರ ಪರಿಹಾರದಲ್ಲಿ ರಾಜ್ಯಕ್ಕೆ ತೀವ್ರ ಅನ್ಯಾಯ ಮಾಡಿದ್ದು, ಎನ್‌ಡಿಆರ್‌ಎಫ್ ನಿಯಮಗಳ ಪ್ರಕಾರ 18,172 ಕೋಟಿ ರು.ಗಳಿಗೆ ಮನವಿ ಸಲ್ಲಿಸಿದ್ದರೆ ‘ಲಾಲಿಪಾಪ್’ ನೀಡಿದಂತೆ ಶೇ.19ರಷ್ಟು (3,498 ಕೋಟಿ ರು.) ಹಣ ಮಾತ್ರ ಬಿಡುಗಡೆ ಮಾಡಿದೆ. ತನ್ಮೂಲಕ ರಾಜ್ಯದ ಜನತೆಗೆ ಕೇಂದ್ರ ಬಿಜೆಪಿ ಸರ್ಕಾರವು ಮತ್ತೊಮ್ಮೆ ಖಾಲಿ ಚೊಂಬು ನೀಡಿದೆ’ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು.
ಅಲ್ಲದೆ, ‘ಸೆಪ್ಟೆಂಬರ್‌ವರೆಗೆ ರಾಜ್ಯದಲ್ಲಿ 35,162 ಕೋಟಿ ರು. ಬರ ನಷ್ಟ ಉಂಟಾಗಿದ್ದು, ಈ ಪೈಕಿ ಎನ್‌ಡಿಆರ್‌ಎಫ್ ನಿಯಮಗಳ ಪ್ರಕಾರ 18,171 ಕೋಟಿ ರು.ಗಳ ಪರಿಹಾರಕ್ಕಾಗಿ ಸೆಪ್ಟೆಂಬರ್‌ನಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಪೈಕಿ ಕೇಂದ್ರದಿಂದ 14,674 ಕೋಟಿ ರು. ಹಣ ಬಿಡುಗಡೆ ಬಾಕಿಯಿದೆ. ಈ ನಡುವೆ ಸೆಪ್ಟೆಂಬರ್‌ನಿಂದ ಈವರೆಗೆ ಬರ ನಷ್ಟ 50 ಸಾವಿರ ಕೋಟಿ ರು.ವರೆಗೆ ತಲುಪಿದೆ. ಹೀಗಾಗಿ ಬಾಕಿ ಇರುವ ಪರಿಹಾರದ ಜತೆಗೆ ಹೆಚ್ಚುವರಿ ಪರಿಹಾರಕ್ಕಾಗಿಯೂ ಹೋರಾಟ ಮುಂದುವರೆಸುತ್ತೇವೆ’ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಬಿಜೆಪಿಯ ತೆಂಗಿನ ಚಿಪ್ಪು ಜಾಹೀರಾತಿಗೆ ಸಿಎಂ ಸಿದ್ದರಾಮಯ್ಯ ಗರಂ
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನೇತೃತ್ವದಲ್ಲಿ ವಿಧಾನಸೌಧದ ಮಹಾತ್ಮಗಾಂಧಿ ಪ್ರತಿಮೆ ಬಳಿ ಖಾಲಿ ಚೊಂಬು ಪ್ರದರ್ಶಿಸಿ ಧರಣಿ ನಡೆಸಿದ ಕಾಂಗ್ರೆಸ್ ನಾಯಕರು ಬಳಿಕ ದೇವರಾಜ ಅರಸು ಪ್ರತಿಮೆವರೆಗೆ ಸಾಂಕೇತಿಕ ಪಾದಯಾತ್ರೆ ನಡೆಸಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ‘ಸುಪ್ರೀಂ ಕೋರ್ಟ್‌ನಲ್ಲಿ ನಾವು ಕಾನೂನು ಹೋರಾಟ ಮಾಡಿದ ಬಳಿಕ ಕೇಂದ್ರ ಸರ್ಕಾರ ಅನಿವಾರ್ಯವಾಗಿ ಪರಿಹಾರ ನೀಡಿದ್ದು, 3498 ಕೋಟಿ ರು. ಮಾತ್ರ ನೀಡುವ ಮೂಲಕ ರಾಜ್ಯದ ಜನರಿಗೆ ಲಾಲಿಪಾಪ್ ನೀಡಿದೆ. ರಾಜ್ಯದ ಜನರ ಹಿತಕ್ಕೆ ಧಕ್ಕೆ ತಂದು ಮತ್ತೊಮ್ಮೆ ಖಾಲಿ ಚೊಂಬು ನೀಡಿದೆ’ ಎಂದು ಕಿಡಿ ಕಾರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಬರ ಪರಿಹಾರ ನೀಡುವಲ್ಲಿಯೂ ನರೇಂದ್ರ ಮೋದಿ ಸರ್ಕಾರ ಮಹಾ ಮೋಸ ಮಾಡಿದೆ. ರಾಜ್ಯದಲ್ಲಿ ಉಂಟಾಗಿರುವ ಬರ ನಷ್ಟ ಅಂದಾಜು ಮಾಡಿ ಸೆಪ್ಟೆಂಬರ್‌ನಲ್ಲೇ ಪರಿಹಾರಕ್ಕಾಗಿ ಮನವಿ ಮಾಡಿದ್ದೆವು. ಕಾನೂನು ಪ್ರಕಾರ ಮನವಿ ಪತ್ರ ನೀಡಿದ ಒಂದು ವಾರದಲ್ಲಿ ಕೇಂದ್ರದ ತಂಡ ಬಂದು ಅಧ್ಯಯನ ಮಾಡಿ ಒಂದು ತಿಂಗಳ ಒಳಗಾಗಿ ಪರಿಹಾರ ನೀಡಬೇಕಾಗಿತ್ತು. ಆದರೆ, ರಾಜ್ಯ ಸಚಿವರು ಹಾಗೂ ನಾನು ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದೆವು. ನಾನು ಖುದ್ದು ನರೇಂದ್ರ ಮೋದಿ ಅವರಿಗೆ ಎರಡು ಬಾರಿ ಮನವಿ ಸಲ್ಲಿಸಿದೆ. ಹೀಗಿದ್ದರೂ ಏಳು ತಿಂಗಳಾದರೂ ಅಮಿತ್ ಶಾ ಅವರು ಸಭೆ ನಡೆಸಿ ಬರ ಪರಿಹಾರ ನೀಡಲಿಲ್ಲ. ಈ ಬಗ್ಗೆ ಅನಿವಾರ್ಯವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬಳಿಕ ಕೋರ್ಟ್ ಚಾಟಿ ಬೀಸಿದ ಕಾರಣಕ್ಕೆ ಶೇ.19 ರಷ್ಟು ಹಣ ಬಿಡುಗಡೆ ಮಾಡಿದ್ದಾರೆ ಎಂದು ಕಿಡಿಕಾರಿದರು.
ಕೇಂದ್ರದ ಭಿಕ್ಷೆಯಲ್ಲ: ಕೇಂದ್ರ ಸರ್ಕಾರ ನಮಗೆ ಭಿಕ್ಷೆ ನೀಡುತ್ತಿಲ್ಲ. ಇದು ನಮ್ಮ ರಾಜ್ಯದ ಜನತೆಯ ಹಕ್ಕು. ನಾವು ರಾಜ್ಯದಿಂದ ಕೇಂದ್ರಕ್ಕೆ ಪ್ರತಿ ವರ್ಷ 4.30 ಲಕ್ಷ ಕೋಟಿ ರು. ತೆರಿಗೆ ಕಟ್ಟುತ್ತೇವೆ. ಇಂತಹ ಬರ ಪರಿಸ್ಥಿತಿಯಲ್ಲಿ ನಿಯಮಗಳ ಪ್ರಕಾರ ರಾಜ್ಯದ ನೆರವಿಗೆ ಬರಬೇಕಿರುವುದು ಅವರ ಕರ್ತವ್ಯ. ಈ ವಿಚಾರದಲ್ಲಿ ರಾಜ್ಯ ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ಸೇರಿಕೊಂಡು ರಾಜ್ಯದ ಬಡ ರೈತರಿಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ಕಿಡಿಕಾರಿದರು.
50 ಸಾವಿರ ಕೋಟಿ ರು.ವರೆಗೆ ತಲುಪಿದ ನಷ್ಟ: ಡಿ.ಕೆ. ಶಿವಕುಮಾರ್ ಮಾತನಾಡಿ, ನಾವು ಕೇಂದ್ರದಿಂದ ಭಿಕ್ಷೆ ಕೇಳುತ್ತಿಲ್ಲ ಅಥವಾ ಅವರ ಮನೆಯ ಹಣ ಕೇಳುತ್ತಿಲ್ಲ. ನಾವು ಬಡವರು, ಕೂಲಿ ಕಾರ್ಮಿಕರು ಹಾಗೂ ರೈತರ ಹಣವನ್ನು ಕೇಳುತ್ತಿದ್ದೇವೆ. ಅವರು ಸಮಯಕ್ಕೆ ಸರಿಯಾಗಿ ಹಣ ನೀಡದಿದ್ದರೂ ನಾವು 2 ಸಾವಿರ ರು. ಹಣ, ಮೇವು, ಕುಡಿಯುವ ನೀರು ಎಲ್ಲಾ ವ್ಯವಸ್ಥೆ ಮಾಡಿದ್ದೇವೆ. ಮಳೆ ಬರುತ್ತದೆ ಎನ್ನುವಾಗ ಅಲ್ಪ ಪರಿಹಾರ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇನ್ನು ಸೆಪ್ಟೆಂಬರ್‌ನಿಂದ ಈವರೆಗೆ ಸೇರಿ ಒಟ್ಟು ಬರದಿಂದ 50,000 ಕೋಟಿ ರು.ವರೆಗೆ ಹಾನಿಯಾಗಿದೆ.
ನಾವು ಕೇಳಿದ್ದರ ಕಾಲು ಭಾಗ ಬರ ಪರಿಹಾರವನ್ನೂ ಕೊಟ್ಟಿಲ್ಲ: ಸಿಎಂ ಸಿದ್ದರಾಮಯ್ಯ
ಸೆಪ್ಟೆಂಬರ್‌ನಿಂದ ಈವರೆಗೆ ಆಗಿರುವ ಹಾನಿಯನ್ನು ತುಂಬಿಕೊಡಬೇಕು. ಈ ಬಗ್ಗೆ ಹೋರಾಟ ಮುಂದುವರೆಸುತ್ತೇವೆ. ಜನದ್ರೋಹಿ ಜೆಡಿಎಸ್ ಹಾಗೂ ಬಿಜೆಪಿ ವಿರುದ್ಧ ಜನರ ಹಾಗೂ ನ್ಯಾಯಾಲಯದ ಮುಂದೆ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಹೇಳಿದರು. ರಣದೀಪ್ ಸಿಂಗ್ ಸುರ್ಜೆವಾಲಾ ಮಾತನಾಡಿದರು. ಸಚಿವರಾದ ಕೃಷ್ಣ ಬೈರೇಗೌಡ, ರಾಮಲಿಂಗಾರೆಡ್ಡಿ, ಚಲುವರಾಯಸ್ವಾಮಿ, ಕೆ.ಎಚ್. ಮುನಿಯಪ್ಪ, ಶಾಸಕರಾದ ರಿಜ್ವಾನ್ ಅರ್ಷದ್, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಪಿ. ನಂಜುಂಡಿ ಸೇರಿ ಹಲವರು ಭಾಗವಹಿಸಿದ್ದರು.