ಮೈಸೂರು ಜಿಲ್ಲೆ ಅಭಿವೃದ್ಧಿಯಾದಂತೆ ಬೀದರ್ ಜಿಲ್ಲೆಯನ್ನೂ ಅಭಿವೃದ್ಧಿಪಡಿಸುವ ಸಂಕಲ್ಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಂದಿದ್ದಾರೆ ಅದಕ್ಕಾಗಿ ಸಾವಿರಾರು ಕೋಟಿ ರು.ಗಳನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಬೀದರ್ ಜಿಲ್ಲೆಗೆ ನೀಡಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಬೀದರ್ (ಏ.18): ಮೈಸೂರು ಜಿಲ್ಲೆ ಅಭಿವೃದ್ಧಿಯಾದಂತೆ ಬೀದರ್ ಜಿಲ್ಲೆಯನ್ನೂ ಅಭಿವೃದ್ಧಿಪಡಿಸುವ ಸಂಕಲ್ಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಂದಿದ್ದಾರೆ ಅದಕ್ಕಾಗಿ ಸಾವಿರಾರು ಕೋಟಿ ರು.ಗಳನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಬೀದರ್ ಜಿಲ್ಲೆಗೆ ನೀಡಿದೆ ಎಂದು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ತಿಳಿಸಿದರು. ಅವರು ನಗರದ ನೆಹರು ಕ್ರೀಡಾಂಗಣದಲ್ಲಿ ಸಂಜೆ ಸರ್ಕಾರದಿಂದ 2025 ಕೋಟಿ ರು.ಗಳ ವಿವಿಧ ಯೋಜನೆಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಸರ್ವರನ್ನೂ ಸ್ವಾಗತಿಸಿ ಮಾತನಾಡಿ, ಬೀದರ್ ಜಿಲ್ಲೆಯ ಸರ್ವ ಧರ್ಮ ಸಮನ್ವಯ ನಾಡು. ಧಾರ್ಮಿಕವಾಗಿ ಅಧ್ಯಾತ್ಮಿಕವಾಗಿ ಹಿಂದುಳಿದ ಜಿಲ್ಲೆಯಲ್ಲ ಆದರೆ ಅನೇಕ ಕಾರಣಗಳಿಂದ ಅಭಿವೃದ್ಧಿಯಲ್ಲಿ ಹಿಂದುಳಿದಿರುವದು ಸತ್ಯವಿದೆ. ಜನರ ಜೀವನ ಮಟ್ಟ, ಆಲೋಚನೆ, ಸಂಪನ್ಮೂಲ ಕಲ್ಪಿಸಿ ಅವರ ವೃತ್ತಿ ಜೀವನಕ್ಕೆ ಸಹಾಯ ಮಾಡಬೇಕಿದೆ ಅದಕ್ಕೆ ನಮ್ಮ ಕಾಂಗ್ರೆಸ್ ಸರ್ಕಾರ ಕಟಿಬದ್ಧವಾಗಿದೆ ಎಂದರು.
7 ಕೋಟಿ ಮಹಿಳೆಯರು ಉಚಿತ ಬಸ್ ಪ್ರಯಾಣ: 5 ಗ್ಯಾರಂಟಿ ಯೋಜನೆಗಳಿಂದ ಜಿಲ್ಲೆಯ 13ಲಕ್ಷ ಫಲಾನುಭವಿಗಳಿಗೆ 2ಸಾವಿರ ಕೋಟಿ ರು.ಗಳನ್ನು ನೇರ ವರ್ಗಾವಣೆ ಮೂಲಕತಲುಪಿಸಿದರೆ 7 ಕೋಟಿ ಜನ ಮಹಿಳೆಯರು ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಒಟ್ಟಾರೆ ಇಂದಿನ ಯೋಜನೆಗಳು ಸೇರಿ 5ಸಾವಿರ ಕೋಟಿ ರು.ಗಳ ಅನುದಾನವನ್ನು ಬೀದರ್ ಜಿಲ್ಲೆಗೆ ತರಲಾಗಿದೆ ಎಂದು ತಿಳಿಸಿದರು. ಎಲ್ಲ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದಿದ್ದು ಸಿದ್ದರಾಮಯ್ಯ ಅವರ ಸರ್ಕಾರ, ಈ ಭಾಗದ ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಲು ಕಲಂ 371ಜೆ ಜಾರಿಗೆ ತರಲು ಬಿಜೆಪಿಯ ಎಲ್‌ಕೆ ಆಡ್ವಾಣಿ ಅವರು ತಿರಸ್ಕರಿಸಿದರೆ ಅದನ್ನು ಸೋನಿಯಾ ಗಾಂಧಿ ಅವರ ಕಾಳಜಿ ಅಂದಿನ ಪ್ರಧಾನಿ ಮನಮೋಹನ್‌ಸಿಂಗ್ ಅವರ ಶ್ರಮದಿಂದ ಜಾರಿಗೆ ಬಂತು. ಅದಕ್ಕಾಗಿ ಮಲ್ಲಿಕಾರ್ಜುನ್ ಖರ್ಗೆ ಅವರು, ಮಾಜಿ ಸಿಎಂ ಧರಂಸಿಂಗ್, ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಶ್ರಮವನ್ನು ಸ್ಮರಿಸದೇ ಇರಲಾಗದು.
ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರಾದರೂ ನನ್ನ ಬೆಂಬಲ: ಸಚಿವ ಈಶ್ವರ್ ಖಂಡ್ರೆ
ಉಡಾನ್ ಸಬ್ಸಿಡಿ ಕಸಿದುಕೊಂಡಿತ್ತು: ಈ ಹಿಂದಿನ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಡಬಲ್ ಧೋಕಾ ಸರ್ಕಾರ. ಬೀದರ್ ಬೆಂಗಳೂರು ಉಡಾನ್ ಯೋಜನೆಯಡಿ ಆರಂಭವಾಗಿ ಅವರದ್ದೇ ಸರ್ಕಾರದ ಕಾಲದಲ್ಲಿ ಸಬ್ಸಿಡಿ ಸ್ಥಗಿತಗೊಳಿಸಿದ್ದ ರಿಂದ ವಿಮಾನ ಯಾನ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಕೈಗಾರಿಕೋದ್ಯಮಿಗಳು, ಸಾಫ್ಟವೇರ್ ಎಂಜಿನಿಯರ್ಸ್, ಪ್ರವಾಸೋದ್ಯಮಿಗಳು ಬೀದರ್ ಬರಲು ಸಂಕಷ್ಟವಿತ್ತು ಇದೀಗ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಇತರ ಎಲ್ಲ ಸಚಿವರು ನನ್ನ ಮನವಿಗೆ ಮಾನ್ಯತೆ ಕೊಟ್ಟಿದ್ದರಿಂದ ಮತ್ತೇ ವಿಮಾನಯಾನ ಚಾಲನೆ ಸಿಕ್ಕಿತು ಇದು ನಮ್ಮ ಸರ್ಕಾರದ ಸಾಧನೆ ಎಂದು ಹೇಳಲು ಹೆಮ್ಮೆಯಾಗುತ್ತದೆ. ನಗರಾಭಿವೃದ್ಧಿ ಇಲಾಖೆಯಿಂದ 330ಕೋಟಿ ರು.ಗಳನ್ನು ಅಭಿವೃದ್ಧಿಗಾಗಿ ಅನುದಾನ, ಜಲಜೀವನ್ ಮಿಶನ್‌ಗೆ ರಾಜ್ಯದಿಂದ ಶೇ. 55ರಷ್ಟು ಅನುದಾನ ಕೊಡಲಾಗುತ್ತದೆ. ಅದನ್ನು ಜಾರಿಗೆ ತರಲಾಗುತ್ತಿದೆ. 220ಕೆವಿ ವಿದ್ಯುತ್ ಕೇಂದ್ರ ಉದ್ಘಾಟನೆಯನ್ನು ಸಿಎಂ ಸಿದ್ದರಾಮಯ್ಯ ಮಾಡಲಿದ್ದಾರೆ. ರಾಜ್ಯದಲ್ಲಿ ಹಸಿರು ಹೊದಿಕೆ ಹೆಚ್ಚಿಸಲು ರಾಜ್ಯದಲ್ಲಿ 8ಕೋಟಿ ಸಸಿಗಳನ್ನು ನೆಡಲಾಗಿದೆ ಬೀದರ್‌ನಲ್ಲಿ 30ಲಕ್ಷ ಸಸಿಗಳನ್ನು ನೆಡಲಾಗಿದೆ ಎಂದರು.
ಇದನ್ನು ಹೊರುತುಪಡಿಸಿ ರಸ್ತೆ, ಚರಂಡಿ, ನೀರು, ಶೈಕ್ಷಣಿಕ ಅಭಿವೃದ್ಧಿಗೆ ಶಾಲಾ ಕೊಠಡಿಗಳ ನಿರ್ಮಾಣ, ಶಿಕ್ಷಕರ ಗುತ್ತಿಗೆ ನೇಮಕಾತಿ ಮಾಡಿದ್ದೇವೆ. ನೂರಾರು ಅಂಗನವಾಡಿ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದೇವೆ. ಬೀದರ್ ಜಿಲ್ಲಾ ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಲಿಟಿ ಕ್ಯಾಥಲ್ಯಾಬ್ ನಿರ್ಮಾಣವಾಗಿದ್ದು, ಇದೀಗ ಉದ್ಘಾಟನೆಯನ್ನು ಸಿಎಂ ಸಿದ್ದರಾಮಯ್ಯ ಮಾಡಲಿದ್ದಾರೆ. ಹೃದಯ ಕಾಯಿಲೆಗೆ ಸೂಕ್ತ ಚಿಕಿತ್ಸೆಗೆ ಮಹಾನಗರಗಳಿಗೆ ಧಾವಿಸಬೇಕಿಲ್ಲ ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಸಿಗಲಿದೆ. ಭಾಲ್ಕಿಯಲ್ಲಿ 400 ಬಡವರಿಗೆ ತಲಾ 10ಲಕ್ಷ ರು. ವೆಚ್ಚದಲ್ಲಿ ಮನೆಗಳನ್ನು ನಿರ್ಮಾಣ ಮಾಡಿದ್ದು ಅವರುಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಾಗುತ್ತಿದೆ. ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಿಗೆ 75ಕೋಟಿ ರು.ಗಳನ್ನು ಮೀಸಲಿಟ್ಟು ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದರು. ಬಚಾವತ್ ಆಯೋಗದ ತೀರ್ಪಿನಂತೆ 23ಟಿಎಂಸಿ ನೀರು ಸದ್ಬಳಕೆ ಮಾಡಿಕೊಳ್ಳಲು ಆಗಿರಲಿಲ್ಲ. 12ರಿಂದ 15ಟಿಎಂಸಿ ನೀರು ಬಳಕೆ ಮಾಡಿಕೊಳ್ಳುತ್ತಿದ್ದೇವೆ ಇದೀಗ ಮತ್ತೇ 600ಕೋಟಿ ರು.ಗಳ ವೆಚ್ಚದಲ್ಲಿ ಮೆಹಕರ್ ಏತ ನೀರಾವರಿ ಯೋಜನೆಯಿಂದ 25ಸಾವಿರ ಎಕರೆ ರೈತರಿಗೆ ನೀರು, ಔರಾದ್ ಕೆರೆ ತುಂಬುವ ಕೆಲಸಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ಕೊಟ್ಟಿದ್ದಾರೆ ಆದಷ್ಟು ಶೀಘ್ರದಲ್ಲಿ ಪ್ರಾರಂಭ ಮಾಡಲಿದ್ದೇವೆ ಎಂದರು.
‘ಕಾರಂಜಾ’ಪ್ಯಾಕೇಜ್ ಘೋಷಿಸಿ: ಕಾರಂಜಾ ಸಂತ್ರಸ್ತರ ಬೇಡಿಕೆಯನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಸೇರಿ ಸಮಿತಿ ರಚಿಸಿದ್ದು, ಬರುವ ದಿನಗಳಲ್ಲಿ ಏಕ ತಿರುವಳಿಯಡಿ ಪ್ಯಾಕೇಜ್ ನೀಡುವದು ಹಾಗೂ ಜಿಲ್ಲೆಯಲ್ಲಿ ಶೇ. 10ರಷ್ಟು ಮಾತ್ರ ನೀರಾವರಿ ಇದ್ದು ಅದನ್ನು ಹೆಚ್ಚಿಸಬೇಕಿದೆ ಅದಕ್ಕಾಗಿ ಎತ್ತಿನಹೊಳಿಯ ಶೇ. 10ರಷ್ಟಾದರೂ ಅನುದಾನ ನೀಡಿದ್ದೆಯಾದಲ್ಲಿ ಅಂದರೆ ಕೇವಲ ಎರಡೂವರೆ ಸಾವಿರ ಕೋಟಿ ರು. ನೀಡಿದರೆ 23ಟಿಎಂಸಿ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಭರವಸೆ ನೀಡುತ್ತೇವೆ ಎಂದು ಮನವಿಸಿದರು.
ಕೆಪಿಸಿಸಿ ಅಧ್ಯಕ್ಷತೆಗೆ ಸತೀಶ್, ಖಂಡ್ರೆ ಹೆಸರು ಶಿಫಾರಸು ಮಾಡಿದ ಸಿಎಂ ಸಿದ್ದರಾಮಯ್ಯ?
ಬೀದರ್ ವಿವಿಗೆ ಅನುದಾನಕ್ಕೆ ಮನವಿ : ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಪುನಶ್ಟೇತನಕ್ಕೆ ಮುಖ್ಯಮಂತ್ರಿಗಳು ಸ್ಪಂದಿಸಬೇಕು. ಬಿಜೆಪಿ ಸರ್ಕಾರದ ಸಮಯದಲ್ಲಿ 2ಕೋಟಿ ರು. ನೀಡಿ ಬೀದರ್ ವಿವಿ ಆರಂಭಿಸುವದಾಗಿ ಹೇಳಿದ್ದು ತುಟಿಗೆ ತುಪ್ಪ ಹಚ್ಚುವ ಕೆಲಸ ಮಾಡಿದಂತಿದೆ ಅವರು ಒಂದು ರುಪಾಯಿಯನ್ನೂ ಆ ಸರ್ಕಾರ ಕೊಟ್ಟಿರಲಿಲ್ಲ. ಈಗ ನಮ್ಮ ಸರ್ಕಾರ ಅದರ ಹೊಣೆ ಹೊತ್ತಿದೆ. ಬೀದರ್ ವಿವಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಹಾಗೂ ಸರ್ಕಾರದಿಂದಲೂ ಅನುದಾನ ನೀಡುವಂತೆ ಮತ್ತು ಬಸವಕಲ್ಯಾಣದ ಅನುಭವ ಮಂಟಪಕ್ಕೆ ಅಗತ್ಯ ಅನುದಾನ ನೀಡಿ ಬರುವ ವರ್ಷದ ಏಪ್ರಿಲ್ ತಿಂಗಳಲ್ಲಿ ಉದ್ಘಾಟನೆಗೆ ಅನುವು ಮಾಡಿಕೊಡಲಿ ಎಂದು ಕೋರಿದರು.
