ಎಐಸಿಸಿ ಹಿಂದುಳಿದ ವರ್ಗಗಳ ಘಟಕದ ರಾಷ್ಟ್ರೀಯ ಸಲಹಾ ಮಂಡಳಿ ಮೊದಲ ಸಭೆ ಮಂಗಳವಾರ ಕೆಪಿಸಿಸಿಯ ಇಂದಿರಾ ಭವನ ಹಾಗೂ ಬುಧವಾರ ಶಾಂಘ್ರಿಲಾ ಹೋಟೆಲ್‌ನಲ್ಲಿ ನಡೆಯಲಿದೆ.

ಬೆಂಗಳೂರು (ಜು.15): ಎಐಸಿಸಿ ಹಿಂದುಳಿದ ವರ್ಗಗಳ ಘಟಕದ ರಾಷ್ಟ್ರೀಯ ಸಲಹಾ ಮಂಡಳಿ ಮೊದಲ ಸಭೆ ಮಂಗಳವಾರ ಕೆಪಿಸಿಸಿಯ ಇಂದಿರಾ ಭವನ ಹಾಗೂ ಬುಧವಾರ ಶಾಂಘ್ರಿಲಾ ಹೋಟೆಲ್‌ನಲ್ಲಿ ನಡೆಯಲಿದ್ದು, ಒಬಿಸಿ ಘಟಕದ ರಾಷ್ಟ್ರೀಯ ಅಧ್ಯಕ್ಷ ಅನಿಲ್‌ ಜೈಹಿಂದ್ ನೇತೃತ್ವದಲ್ಲಿ ನಡೆಯಲಿರುವ ಈ ಸಭೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆತಿಥ್ಯ ವಹಿಸಲಿದ್ದಾರೆ. ದೇಶಾದ್ಯಂತ ಹಿಂದುಳಿದ ವರ್ಗಗಳನ್ನು ಒಟ್ಟುಗೂಡಿಸಲು ಹಾಗೂ ಹಿಂದುಳಿದ ವರ್ಗಗಳ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೋರಾಟ ರೂಪಿಸುವ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸಂಜೆ 5 ಗಂಟೆಗೆ ಸಲಹಾ ಮಂಡಳಿಯ ಮೊದಲ ಸಭೆ ನಡೆಯಲಿದೆ. ಬಳಿಕ ಬುಧವಾರ ಬೆಳಗ್ಗೆ 10 ಗಂಟೆಗೆ ಶಾಂಘ್ರೀಲಾ ಹೋಟೆಲ್‌ನಲ್ಲಿ ಪರಿಶೀಲನಾ ಸಭೆ ನಡೆಯಲಿದೆ. ಈ ವೇಳೆ ಸಂವಿಧಾನದ 164(1) ಆರ್ಟಿಕಲ್‌ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಎಂ.ವೀರಪ್ಪ ಮೊಯ್ಲಿ, ಬಿ.ಕೆ.ಹರಿಪ್ರಸಾದ್, ಅನಿಲ್‌ ಜೈಹಿಂದ್‌ ಸೇರಿ 24 ಮಂದಿ ಸದಸ್ಯರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳು, ಕೇಂದ್ರದ ಮಾಜಿ ಸಚಿವರು, ವಿವಿಧ ರಾಜ್ಯಗಳ ಸಂಸದರು ಸೇರಿ 31 ಮಂದಿ ವಿಶೇಷ ಆಹ್ವಾನಿತರು ಸೇರಿ ಒಟ್ಟು 90 ಮಂದಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ದೇಶದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಸಮುದಾಯಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಕೂಲಂಕುಷವಾಗಿ ಅರಿತು ಅವುಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುವ ಹೊಣೆಯನ್ನು ಮಂಡಳಿಗೆ ನೀಡಲಾಗಿದೆ. ಈ ಮಂಡಳಿಯಲ್ಲಿ ಸಿದ್ದರಾಮಯ್ಯ ಅವರು ಒಬ್ಬರೇ ಮುಖ್ಯಮಂತ್ರಿಯಾಗಿರುವುದು ಹಾಗೂ ಒಬಿಸಿ ಘಟಕದ ರಾಷ್ಟ್ರೀಯ ಅಧ್ಯಕ್ಷ ಅನಿಲ್‌ ಜೈಹಿಂದ್‌ ಅವರನ್ನು ಸಂಚಾಲಕರನ್ನಾಗಿ ನೇಮಿಸಿದ್ದರಿಂದ ಮಂಡಳಿಗೆ ಸಿದ್ದರಾಮಯ್ಯ ಅವರದ್ದೇ ನೇತೃತ್ವ ಎನ್ನಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಸಿದ್ದರಾಮಯ್ಯ ಅವರು ನನ್ನದು ಆತಿಥ್ಯ ಮಾತ್ರ. ಅನಿಲ್‌ ಜೈಹಿಂದ್‌ ಅಧ್ಯಕ್ಷತೆಯಲ್ಲೇ ಸಭೆ ನಡೆಯಲಿದೆ ಎಂದು ಹೇಳಿದ್ದರು. ಈ ಎಲ್ಲಾ ಕಾರಣಗಳಿಂದ ಕುತೂಹಲ ಮೂಡಿಸಿದ್ದ ಸಭೆಯು ಜು.15 ರಂದು ನಡೆಯಲಿದೆ.