Asianet Suvarna News Asianet Suvarna News

ಸಿದ್ದರಾಮಯ್ಯ ಕಾಂಗ್ರೆಸ್‌ ಸರ್ಕಾರ ಎಂದಿಗೂ ಬಡವರ ಪರವಾಗಿರುವ ಪಕ್ಷ: ಸಚಿವ ಸಂತೋಷ್‌ ಲಾಡ್‌

ಕಾಂಗ್ರೆಸ್‌ ಸರ್ಕಾರ ಎಂದಿಗೂ ಬಡವರ ಪರವಾಗಿರುವ ಪಕ್ಷ. ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆ ಜಾರಿಗೆ ತರುವ ಮೂಲಕ ಬಡವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಹೇಳಿದರು. 

CM Siddaramaiah Congress Govt is a pro poor party Says Minister Santosh Lad gvd
Author
First Published Feb 6, 2024, 1:00 AM IST | Last Updated Feb 6, 2024, 1:00 AM IST

ಹುಬ್ಬಳ್ಳಿ (ಫೆ.06): ಕಾಂಗ್ರೆಸ್‌ ಸರ್ಕಾರ ಎಂದಿಗೂ ಬಡವರ ಪರವಾಗಿರುವ ಪಕ್ಷ. ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆ ಜಾರಿಗೆ ತರುವ ಮೂಲಕ ಬಡವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಹೇಳಿದರು. ಇಲ್ಲಿನ ರೈಲ್ವೆ ಮೈದಾನದಲ್ಲಿ ಜಿಲ್ಲಾಡಳಿತ, ಹು-ಧಾ ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ಪೂರ್ವ ಮತ್ತು ಕೇಂದ್ರ ಕ್ಷೇತ್ರಗಳ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಹಮ್ಮಿಕೊಳ್ಳಲಾಗಿದ್ದ "ಗ್ಯಾರಂಟಿ ಸಮಾವೇಶ" ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರ ಬಡವರ, ನಿರ್ಗತಿಕರ ಕಲ್ಯಾಣಕ್ಕಾಗಿ ಗ್ಯಾರಂಟಿ ಯೋಜನೆ ಜಾರಿಗೆ ತರುವ ಮೂಲಕ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆ ಈಡೇರಿಸಿದೆ. 

ಹಿಂದಿನ ಯುಪಿಎ ಸರ್ಕಾರ ಆಹಾರ ಭದ್ರತಾ ಕಾಯ್ದೆಯಡಿ ಬಡವರಿಗೆ ಅಕ್ಕಿ ವಿತರಿಸುವ ಯೋಜನೆ ತಂದಿದೆ. ಆದರೆ, ಬಿಜೆಪಿಯವರು ಇದನ್ನು ತಮ್ಮದು ಎನ್ನುತ್ತಿದ್ದಾರೆ ಎಂದು ಟೀಕಿಸಿದರು ಆರ್‌ಟಿಎ, ಆರ್‌ಟಿಇ, ನರೇಗಾದಂತಹ ಮಹತ್ವದ ಯೋಜನೆ ಕಾಂಗ್ರೆಸ್‌ ಸರ್ಕಾರ ಅನುಷ್ಠಾನಗೊಳಿಸಿದೆ. ಆದರೆ, ನರೇಗಾ ಯೋಜನೆಯನ್ನು ಮೊಟಕುಗೊಳಿಸಲು ಈಗಿನ ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಮಹಿಳಾ ಮೀಸಲಾತಿ, ಪೆಟ್ರೋಲ್ ದರ ಇಳಿಕೆಯಂತಹ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಅಂದಿನ ಯುಪಿಎ ಸರ್ಕಾರ ಎಂದರು.

ಪರಿಹಾರ ಬಿಡುಗಡೆ ವಿಳಂಬಕ್ಕೆ ಸಚಿವ ಈಶ್ವರ ಖಂಡ್ರೆ ನಿರ್ಲಕ್ಷವೇ ಕಾರಣ: ಭಗವಂತ ಖೂಬಾ

ಬಿಜೆಪಿಯವರು ಬಂದು ಮಾತನಾಡಲಿ: ಗುಜರಾತ್‌ನ ಮುನ್ರಾ ಪೋರ್ಟ್‌ನಲ್ಲಿ 30 ಸಾವಿರ ಕೋಟಿ ಮೌಲ್ಯದ ಡ್ರಗ್ಸ್‌ ಸಿಕ್ಕಿದೆ. 2019-20ನೇ ಸಾಲಿನಲ್ಲಿ ದೇಶದಲ್ಲಿ 13 ಲಕ್ಷ 47 ಸಾವಿರ ಮಹಿಳೆಯರು ನಾಪತ್ತೆಯಾಗಿರುವುದು ಎನ್‌ಸಿಆರ್‌ಬಿ ವರದಿಯಲ್ಲಿ ಉಲ್ಲೇಖವಾಗಿದೆ. ಸರ್ಕಾರಿ ಸ್ವಾಮ್ಯದ 33 ಕಂಪನಿಗಳು ಬಾಗಿಲು ಹಾಕಿವೆ. ಕೇಂದ್ರ ಸರ್ಕಾರ ಪ್ರಚಾರಕ್ಕಾಗಿ ₹6500 ಕೋಟಿ ಬಳಕೆ ಮಾಡಿದೆ. ಹೀಗೆ ಹತ್ತು ಹಲವು ಭ್ರಷ್ಟಾಚಾರಗಳಿವೆ. ಇದರ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡುವುದಿಲ್ಲ. ಇವುಗಳ ದಾಖಲೆ ಇಡುತ್ತೇವೆ. ಬಂದು ಮಾತನಾಡಿ ಎಂದು ಬಿಜೆಪಿಯವರಿಗೆ ಸವಾಲು ಹಾಕಿದರು.

ಮಾದರಿ ರಾಜ್ಯ ನಿರ್ಮಾಣ: ಗ್ಯಾರಂಟಿ ಯೋಜನೆ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತಿವೆ. ಪ್ರತಿಯೊಬ್ಬರ ಏಳಿಗೆಗೆ ಯೋಜನೆಗಳು ಸಹಕಾರಿಯಾಗಿವೆ. ಕೊಟ್ಟ ಮಾತಿನಂತೆ ಸರ್ಕಾರ ಜನರಿಗೆ ಗ್ಯಾರಂಟಿ ಯೋಜನೆ ನೀಡಿದೆ. ಮುಂದಿನ ದಿನಗಳಲ್ಲೂ ಮಾದರಿ ರಾಜ್ಯವಾಗಿಸುವ ನಿಟ್ಟಿನಲ್ಲಿ ಹಲವಾರು ಅಭಿವೃದ್ಧಿ ಪರ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಸರ್ಕಾರ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಗುರುತಿಸಿದೆ. ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನ ಕುರಿತು ಸಂವಿಧಾನ ಜಾಥಾ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದರು.

ಕೊಳಚೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಪ್ರಸಾದ ಅಬ್ಬಯ್ಯ, ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ಸುಕನ್ಯಾ ಸಮೃದ್ಧಿ, ಗೃಹ ಲಕ್ಷ್ಮೀ ಯೋಜನೆ ಫಲಾನುಭವಿಗಳು ಹಾಗೂ ಸಾಧಕರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಪಾಲಿಕೆ ಸದಸ್ಯ ಸಂಥಿಲಕುಮಾರ, ಕವಿತಾ ಕಬ್ಬೇರ, ದೊರಾಜ ಮನಿಕುಂಟ್ಲ, ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿಆರ್‌ಜೆ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ, ತಹಸೀಲ್ದಾರ್‌ ಕಲಗೌಡ ಪಾಟೀಲ, ಪ್ರಕಾಶ ನಾಶಿ ಸೇರಿದಂತೆ ಹಲವರಿದ್ದರು.

ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ರೂಪದಲ್ಲಿ ಹಣ ಪೋಲು: ಮುನಿರತ್ನ ಆರೋಪ

ಮಹಿಳೆಯರೇ ಸಾಕ್ಷಿ: ಸರ್ಕಾರದ ಗ್ಯಾರಂಟಿ ಯೋಜನೆ ಪ್ರತಿಮನೆಗೆ ತಲುಪುತ್ತಿರುವುದಕ್ಕೆ ಈ ಸಮಾವೇಶದಲ್ಲಿ ಪಾಲ್ಗೊಂಡಿರುವ ಮಹಿಳೆಯರೇ ಸಾಕ್ಷಿ. ಬಿಜೆಪಿ ಹೇಗಾದರೂ ಮಾಡಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬೀಳಿಸುವ ಯತ್ನದಲ್ಲಿದ್ದಾರೆ. ಇಂತಹ ಸುಳ್ಳು ಹೇಳಿಕೆಗಳಿಗೆ ರಾಜ್ಯದ ಜನತೆ ಕಿವಿಗೊಡಬೇಡಿ. ನಿಮಗೆಲ್ಲ ಸಿದ್ದರಾಮಯ್ಯರ ದುಡ್ಡು ಮುಟ್ಟುತ್ತಿದೆಯೇ?. ಯಾರಿಗೆಲ್ಲ ಸರ್ಕಾರದ ಯೋಜನೆಗಳು ತಲುಪಿವೆ ಕೈಎತ್ತಿ ಎಂದು ಸಚಿವ ಲಾಡ್‌ ಹೇಳುತ್ತಿದ್ದಂತೆ ಸಮಾವೇಶದಲ್ಲಿದ್ದ ಸಾವಿರಾರು ಜನರು ಕೈಎತ್ತುವ ಮೂಲಕ ಕಾಂಗ್ರೆಸ್‌ ಪರ ಘೋಷಣೆ ಕೂಗಿದರು.

Latest Videos
Follow Us:
Download App:
  • android
  • ios