ಸಾಮಾನ್ಯ ಜನರ ಸಾರಿಗೆ ಎಂದೇ ಕರೆಸಿಕೊಳ್ಳುವ ರೈಲ್ವೆ ಪ್ರಯಾಣ ದರ ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರ ದೇಶದ ಮಧ್ಯಮ ಮತ್ತು ಬಡ ವರ್ಗದ ಜನರ ಮೇಲೆ ಬರೆ ಎಳೆದಿದ್ದು, ಈ ಕೂಡಲೆ ಬೆಲೆ ಏರಿಕೆ ಹಿಂಪಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಬೆಂಗಳೂರು (ಜು.02): ಸಾಮಾನ್ಯ ಜನರ ಸಾರಿಗೆ ಎಂದೇ ಕರೆಸಿಕೊಳ್ಳುವ ರೈಲ್ವೆ ಪ್ರಯಾಣ ದರ ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರ ದೇಶದ ಮಧ್ಯಮ ಮತ್ತು ಬಡ ವರ್ಗದ ಜನರ ಮೇಲೆ ಬರೆ ಎಳೆದಿದ್ದು, ಈ ಕೂಡಲೆ ಬೆಲೆ ಏರಿಕೆ ಹಿಂಪಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ದರ ಹೆಚ್ಚಳದಿಂದಾಗಿ ಜನ ಈಗಾಗಲೇ ತತ್ತರಿಸಿದ್ದಾರೆ. ಹಾಲು, ಮೊಸರು ಸೇರಿ ಇನ್ನಿತರ ಆಹಾರ ಪದಾರ್ಥಗಳ ಮೇಲೂ ಜಿಎಸ್‌ಟಿ ವಿಧಿಸಿ ಪ್ರತಿ ಕುಟುಂಬ ಆರ್ಥಿಕ ಹೊರೆಗೆ ಸಿಲುವಂತೆ ಮಾಡಲಾಗಿದೆ. ಇದೀಗ ರೈಲ್ವೆ ಪ್ರಯಾಣ ದರ ಹೆಚ್ಚಿಸಿ ಜನರಿಗೆ ಮತ್ತಷ್ಟು ಹೊರೆ ಹಾಕಲಾಗಿದೆ. ಕೇಂದ್ರ ಸರ್ಕಾರ ರೈಲ್ವೆ ಟಿಕೆಟ್ ದರ ಹೆಚ್ಚಳದಿಂದ ಕೂಡಲೆ ಹಿಂದೆ ಸರಿಯಬೇಕು ಎಂದು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.
ಈ ಹಿಂದೆ ರಾಜ್ಯ ಸರ್ಕಾರ ರೈತರಿಗೆ ನೆರವಾಗಲು ಹಾಲಿನ ದರ ಹೆಚ್ಚಳ ಮಾಡಿದಾಗ ಜನವಿರೋಧಿ ಕ್ರಮ ಎಂದು ಬೊಬ್ಬಿಟ್ಟಿದ್ದ ಬಿಜೆಪಿ ನಾಯಕರು ರೈಲ್ವೆ ಪ್ರಯಾಣ ದರ ಹೆಚ್ಚಳದ ಬಗ್ಗೆ ಮಾತನಾಡದೆ ಬಿಲ ಸೇರಿಕೊಂಡಿದ್ದಾರೆ. ಅವರೆಲ್ಲರೂ ಜನರ ಪರವಾಗಿದ್ದರೆ ಕೇಂದ್ರದ ನಿರ್ಧಾರದ ವಿರುದ್ಧ ಮಾತನಾಡಲಿ ಎಂದಿದ್ದಾರೆ.
ರೈಲ್ವೆ ಇಲಾಖೆ ಲಾಭದಾಯಕವಾಗಿದೆ. ಆದರೆ, ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಇಲ್ಲದಂತಾಗಿದೆ. ಹೀಗಾಗಿ ರೈಲು ಪ್ರಯಾಣ ದರ ಹೆಚ್ಚಳ ಮಾಡುವುದಕ್ಕೂ ಮುನ್ನ ರೈಲ್ವೆ ಸಚಿವಾಲಯದ ಕಾರ್ಯನಿರ್ವಹಣೆ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.
