Asianet Suvarna News Asianet Suvarna News

ಮೋದಿ ಕಾರ್ಯಕ್ರಮದಲ್ಲಿ ಹೈಡ್ರಾಮ, ಜೈಶ್ರೀರಾಮ್ ಘೋಷಣೆಯಿಂದ ವೇದಿಕೆಗೆ ಹತ್ತದೆ ದೀದಿ ಗರಂ!

ಪ್ರಧಾನಿ ಮೋದಿ ತಾಯಿ ನಮಗೂ ತಾಯಿ ಎಂಬ ಮಮತಾ ಬ್ಯಾನರ್ಜಿ ಹೇಳಿಕೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಕ್ಯಾಮರ ಮುಂದೆ ಈ ಹೇಳಿಕೆ ನೀಡುವ ಮೊದಲು ಮಮತಾ ಬ್ಯಾನರ್ಜಿ ಹೈಡ್ರಾಮಾ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಕೇಂದ್ರ ಸಚಿವರಿದ್ದ ವೇದಿಕೆಗೆ ತೆರಳದೇ ಮಮತಾ ಬ್ಯಾನರ್ಜಿ ಗರಂ ಆಗಿದ್ದರು.

CM Mamata banerjee refuse to go on stage due to Jai sri ram slogan by crowd in PM Modi west bengal event ckm
Author
First Published Dec 30, 2022, 9:23 PM IST

ಕೋಲ್ಕತಾ(ಡಿ.30): ಪಶ್ಚಿಮ ಬಂಗಾಳದ ಹೌರಾ ರೈಲು ನಿಲ್ದಾಣದಲ್ಲಿ ಹೈಡ್ರಾಮವೇ ನಡೆದು ಹೋಗಿದೆ. ಪ್ರಧಾನಿ ನರೇಂದ್ರ ಮೋದಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲು ಇನ್ನೇನು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಬೇಕಿತ್ತು. ಇತ್ತ ಹೌರಾ ನಿಲ್ದಾಣದಲ್ಲಿ ವೇದಿಕೆ ರೆಡಿಯಾಗಿತ್ತು. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಸೇರಿದಂತೆ ಹಲವು ಗಣ್ಯರು ವೇದಿಕೆ ಮೇಲಿದ್ದರು. ಆದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತ್ರ ವೇದಿಕೆ ಕೆಳಗೆ ಗರಂ ಆಗಿ ಕುಳಿತಿದ್ದರು. ಕಾರ್ಯಕ್ರಮ ಆರಂಭಗೊಂಡಿತು. ಸ್ವಾಗತ ಭಾಷಣ, ಮುಗಿಯಿತು. ಪ್ರಾರ್ಥನೆಯೂ ಮುಗಿದಿತ್ತು. ಆದರೆ ಮಮತಾ ಬ್ಯಾನರ್ಜಿ ಮಾತ್ರ ವೇದಿಕೆ ಹತ್ತಲೇ ಇಲ್ಲ. ಕಾದು ಕಾದು ಸುತ್ತಾದ ಅಶ್ವಿನಿ ವೈಷ್ಣವ್ ಮಮತಾ ಬ್ಯಾನರ್ಜಿಗೆ ಬುಲಾವ್ ನೀಡಿದರು. ವೇದಿಕೆಗೆ ಆಗಮಿಸುವಂತೆ ಮನವಿ ಮಾಡಿದರು. ಆದರೂ ದೀದಿ ವೇದಿಕೆ ಹತ್ತಲೇ ಇಲ್ಲ. ಇದಕ್ಕೆ ಮುಖ್ಯ ಕಾರಣ ಜನರ ಜೈ ಶ್ರೀರಾಮ್ ಘೋಷಣೆ.

ಜೈ ಶ್ರೀರಾಮ್ ಘೋಷಣೆ ಕೇಳಿದರೂ ಮಮತಾ ಬ್ಯಾನರ್ಜಿ ಉರಿದು ಬೀಳುತ್ತಾರೆ. ಈಗಾಗಲೇ ಹಲವು ಬಾರಿ ಸಾಬೀತಾಗಿದೆ. ಈ ಹಿಂದೆ ಪ್ರಧಾನಿ ಮೋದಿ ಆಗಮಿಸಿದ್ದ ಕಾರ್ಯಕ್ರಮವೊಂದರಲ್ಲೂ ಇದೇ ರೀತಿ ಜೈ ಶ್ರೀರಾಮ್ ಘೋಷಣೆ ಕೂಗಲಾಗಿತ್ತು. ಇದರಿಂದ ಉರಿದು ಬಿದ್ದ ಮಮತಾ ಬ್ಯಾನರ್ಜಿ ವೇದಿಕೆಯಿಂದಲೇ ಹೊರನಡೆದಿದ್ದರು. ಈಗಲೂ ಅದೇ ರೀತಿ ಮಮತಾ ನಡೆದುಕೊಂಡಿದ್ದಾರೆ.

ಪಶ್ಚಿಮ ಬಂಗಾಳ ಜನತೆಯಲ್ಲಿ ಕ್ಷಮೆ ಯಾಚಿಸಿದ ಪ್ರಧಾನಿ ಮೋದಿ, ಭಾವುಕರಾದ ಜನ!

ಮಮತಾ ಬ್ಯಾನರ್ಜಿ ವೇದಿಕೆ ಪಕ್ಕದಲ್ಲಿ ಕುಳಿತಿದ್ದರು. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ನೆರೆದಿದ್ದ ಜನರತ್ತೆ ಕೈಬೀಸಿ ಶಾಂತವಾಗಿರುವಂತೆ ಮನವಿ ಮಾಡಿ ಮಮತಾ ಬ್ಯಾನರ್ಜಿಯನ್ನು ಕರೆದಿದ್ದಾರೆ. ಆದರೆ ದೀದಿ ಮಾತ್ರ ಮನಸ್ಸು ಮಾಡಲೇ ಇಲ್ಲ. ಜನರು ಶಾಂತಗೊಂಡರೂ ಮಮತಾ ಬ್ಯಾನರ್ಜಿ ವೇದಿಕೆ ಹತ್ತಲಿಲ್ಲ. ಇತ್ತ ತಮ್ಮ ಭಾಷಣದ ಲೈವ್ ವಿಡಿಯೋ ಪ್ರಸಾರವಾಗುತ್ತಿದ್ದಂತೆ, ಪ್ರಧಾನಿ ಮೋದಿಗೆ ಸಂತಾಪ ಸೂಚಿಸಿದರು. ಪಶ್ಚಿಮ ಬಂಗಾಳದ ಜನತೆ ಪರವಾಗಿ ಮೋದಿಗೆ ಧನ್ಯವಾದ ಹೇಳಿದರು. ಇದೇ ವೇಳೆ ನಿಮ್ಮ ತಾಯಿ ನಮಗೂ ತಾಯಿ. ಈ ದುಃಖದ ದಿನದಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದೀರೆ. ಕೆಲ ಹೊತ್ತು ವಿಶ್ರಾಂತಿ ಪಡೆದುಕೊಳ್ಳಿ ಎಂದು ಮಮತಾ ಬ್ಯಾನರ್ಜಿ ಹೇಳಿದರು. 

ಜನ ಸಮೂಹ ನಿರಂತರವಾಗಿ ಘೋಷಣೆ ಕೂಗುತ್ತಿದ್ದರಿಂದ ಮಮತಾ ವೇದಿಕೆ ಕೆಳಗೆ ಆಹ್ವಾನಿತರ ಜಾಗದಲ್ಲಿ ಕುಳಿತುಕೊಂಡು ಬೇಸರ ವ್ಯಕ್ತಪಡಿಸಿದರು. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌, ರಾಜ್ಯಪಾಲ ಸಿ.ವಿ.ಆನಂದ ಬೋಸ್‌ ಮಮತಾರನ್ನು ವೇದಿಕೆಗೆ ಆಹ್ವಾನಿಸಿದರೂ ಅವರು ಒಪ್ಪಲಿಲ್ಲ.

Heeraben Modi :ಪಂಚಭೂತಗಳಲ್ಲಿ ಹೀರಾಬೆನ್ ಲೀನ: ದುಃಖದ ನಡುವೆ ಕರ್ತವ್ಯಕ್ಕೆ ಹಾಜರಾದ ಮೋದಿ

21 ನೇ ಶತಮಾನದಲ್ಲಿ ಭಾರತದ ಕ್ಷಿಪ್ರ ಅಭಿವೃದ್ಧಿಗೆ, ಭಾರತೀಯ ರೈಲ್ವೇಯ ತ್ವರಿತ ಅಭಿವೃದ್ಧಿ, ಭಾರತೀಯ ರೈಲ್ವೇಯಲ್ಲಿ ತ್ವರಿತ ಸುಧಾರಣೆ, ಇವೆಲ್ಲವೂ ಬಹಳ ಮುಖ್ಯವಾಗಿದೆ.  ಅದಕ್ಕಾಗಿಯೇ ಇಂದು ಕೇಂದ್ರ ಸರ್ಕಾರವು ಭಾರತೀಯ ರೈಲ್ವೆಯನ್ನು ಆಧುನೀಕರಿಸಲು, ರೈಲ್ವೆ ಮೂಲಸೌಕರ್ಯಗಳನ್ನು ಆಧುನೀಕರಿಸಲು ದಾಖಲೆಯ ಹೂಡಿಕೆಗಳನ್ನು ಮಾಡುತ್ತಿದೆ.  ಇಂದು, ಭಾರತೀಯ ರೈಲ್ವೆಯ ಪುನಶ್ಚೇತನಕ್ಕಾಗಿ ರಾಷ್ಟ್ರವ್ಯಾಪಿ ಅಭಿಯಾನವು ಭಾರತದಲ್ಲಿ ನಡೆಯುತ್ತಿದೆ ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದರು.

ಇಂದು ದೇಶದಲ್ಲಿ ವಂದೇ ಭಾರತ್, ತೇಜಸ್, ಹಮ್ಸಫರ್ ನಂತಹ ಆಧುನಿಕ ರೈಲುಗಳು ನಿರ್ಮಾಣವಾಗುತ್ತಿವೆ.  ಇಂದು ವಿಸ್ಟಾ-ಡೋಮ್ ಕೋಚ್‌ಗಳು ರೈಲು ಪ್ರಯಾಣಿಕರಿಗೆ ಹೊಸ ಅನುಭವವನ್ನು ನೀಡುತ್ತಿವೆ.  ಇಂದು ಸುರಕ್ಷಿತ, ಆಧುನಿಕ ಕೋಚ್‌ಗಳ ಸಂಖ್ಯೆಯಲ್ಲಿ ದಾಖಲೆಯ ಹೆಚ್ಚಳವಾಗಿದೆ.  ಇಂದು ರೈಲು ನಿಲ್ದಾಣವೂ ವಿಮಾನ ನಿಲ್ದಾಣದಂತೆ ಅಭಿವೃದ್ಧಿಯಾಗುತ್ತಿದೆ.  ಈ ಪಟ್ಟಿಯಲ್ಲಿ ಹೊಸ ಜಲ್ಪೈಗುರಿ ನಿಲ್ದಾಣವೂ ಸೇರಿದೆ ಎಂದು ಮೋದಿ ಹೇಳಿದ್ದಾರೆ. 

Follow Us:
Download App:
  • android
  • ios