Asianet Suvarna News Asianet Suvarna News

ದೊಡ್ಡಗೌಡರ ಕ್ಷಮೆ ಕೇಳದಿದ್ರೆ ಕಟೀಲ್ ವಿರುದ್ಧ ಕಪ್ಪು ಬಾವುಟ ಪ್ರದರ್ಶನ: ಸಿಎಂ ಇಬ್ರಾಹಿಂ

ಪಂಚರತ್ನ ಯೋಜನೆಗೆ ಜಾತಿ, ಧರ್ಮದ ಸೋಂಕಿಲ್ಲ, ಸರ್ವ ಜನತೆ ಹಿತವೇ ಈ ಯೋಜನೆ ಧ್ಯೇಯ. ಶಿಕ್ಷಣ, ಆರೋಗ್ಯ, ರೈತರಿಗೆ ಸಾಲದ ಹೊರೆ, ಯುವಕರ ಕೈಗೆ ದೊರಕದ ಉದ್ಯೋಗ ಹೀಗೆ ನಿತ್ಯ ನೂರಾರು ಸಮಸ್ಯೆಗಳ ಸರಮಾಲೆಯೇ ಇದೆ, ಈ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶಕ್ಕಾಗಿಯೇ ಈ ಪಂಚರತ್ನ ಯೋಜನೆ ಎಂದ ಕುಮಾರಸ್ವಾಮಿ

CM Ibrahim Slams BJP State President Nalin Kumar Kateel grg
Author
First Published Jan 20, 2023, 7:30 PM IST

ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ(ಜ.20): ಜೆಡಿಎಸ್ ಪಂಚರತ್ನ ಯಾತ್ರೆ ಹಿನ್ನೆಲೆಯಲ್ಲಿ ವಿಜಯಪುರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಜರುಗಿದ ಬೃಹತ್ ಸಮಾವೇಶಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಚಾಲನೆ ನೀಡಿದರು.
ಜನಸಾಮಾನ್ಯರ ಬವಣೆ ನಿವಾರಣೆಯೇ ಜೆಡಿಎಸ್ ಸಂಕಲ್ಪ..! ರೈತರ ಸಾಲ ಮನ್ನಾಕ್ಕೆ ಮೀಸಲಿದ್ದ ಸಾವಿರಾರು ಕೋಟಿ ರೂ. ಅನುದಾನವನ್ನು ಬೇರೆ ಉದ್ದೇಶಗಳಿಗೆ ಹಂಚಿಕೆ ಮಾಡುವ ಮೂಲಕ ಬಿಜೆಪಿ ರೈತರಿಗೆ ದ್ರೋಹ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.

ಜೆಡಿಎಸ್ ಪಂಚರತ್ನ ಯಾತ್ರೆ ಹಿನ್ನೆಲೆಯಲ್ಲಿ ವಿಜಯಪುರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಜರುಗಿದ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರ ಸಾಲಮನ್ನಾದ ಹಣವನ್ನು ಬಿಜೆಪಿ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ, ವಿಜಯಪುರ ಜಿಲ್ಲೆಯ ವಿಶೇಷಚೇತನ ರೈತರೊಬ್ಬರಿಗೆ ಸಾಲಮನ್ನಾ ಆಗಿದ್ದರೂ ಸಹ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ, ಈ ರೀತಿಯ ಹಲವಾರು ಪ್ರಕರಣಗಳಿವೆ ಎಂದರು. ಜನಸಾಮಾನ್ಯರು ನಿತ್ಯ ಎದುರಿಸುತ್ತಿರುವ ಬವಣೆಯನ್ನು ನಿವಾರಣೆ ಮಾಡಿ ನೆಮ್ಮದಿ ಜೀವನ ಸಾಗಿಸುವಂತೆ ಮಾಡುವುದು ಜೆಡಿಎಸ್ ದಿವ್ಯ ಸಂಕಲ್ಪ ಹಾಗೂ ಆಶಯವಾಗಿದೆ ಎಂದರು‌.

ಜೆ.ಪಿ.ನಡ್ಡಾ ವಿಜಯಪುರ ಜಿಲ್ಲಾ ಪ್ರವಾಸ, ರಾಜ್ಯವ್ಯಾಪಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ

ಪಂಚರತ್ನ ಯೋಜನೆಗೆ ಜಾತಿ, ಧರ್ಮದ ಸೋಂಕಿಲ್ಲ, ಸರ್ವ ಜನತೆ ಹಿತವೇ ಈ ಯೋಜನೆ ಧ್ಯೇಯ. ಶಿಕ್ಷಣ, ಆರೋಗ್ಯ, ರೈತರಿಗೆ ಸಾಲದ ಹೊರೆ, ಯುವಕರ ಕೈಗೆ ದೊರಕದ ಉದ್ಯೋಗ ಹೀಗೆ ನಿತ್ಯ ನೂರಾರು ಸಮಸ್ಯೆಗಳ ಸರಮಾಲೆಯೇ ಇದೆ, ಈ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶಕ್ಕಾಗಿಯೇ ಈ ಪಂಚರತ್ನ ಯೋಜನೆ ಎಂದರು.

ಖಾಸಗಿ ಶಾಲೆಗೆ ಪ್ರವೇಶ ದೊರಕಿಸಲು ಪಾಲಕರು ಸಾಲಗಾರರಾಗುವ, ಕಾಯಿಲೆಗಳು ಬಂದಾಗ ಚಿಕಿತ್ಸೆಗಾಗಿ ಸಾಲ ಹೀಗೆ ನಿತ್ಯದ ಬವಣೆ ನಿವಾರಣೆಗಾಗಿಯೇ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹೈಟೆಕ್ ಶಾಲೆ ಹಾಗೂ ಹೈಟೆಕ್ ಆಸ್ಪತ್ರೆ ನಿರ್ಮಿಸುವುದು ನನ್ನ ಸಂಕಲ್ಪ ಎಂದರು.

ಧರ್ಮದ ಹೆಸರಿನಲ್ಲಿ ಅಶಾಂತಿ, ಯುವಕರ ಮನಸ್ಸು ಕೆಡಿಸುವ ಕೆಲಸ ನಡೆಯುತ್ತಿರುವುದು ಖಂಡನಾರ್ಹ, ಅಂಗನವಾಡಿ ಕಾರ್ಯಕರ್ತರ ನೋವು ಆಲಿಸಬೇಕಾದ ಸರ್ಕಾರ ಅವರ ಹೋರಾಟವನ್ನು ಪೋಲೀಸ್ ಬಲ ಪ್ರಯೋಗಿಸಿ ದಬ್ಬಾಳಿಕೆ ನಡೆಸುತ್ತಿದೆ, ಸೌಜನ್ಯಕ್ಕೂ ಅಂಗನವಾಡಿ ನೌಕರರ ನೋವು ಆಲಿಸಲು ಒಬ್ಬ ಮಂತ್ರಿ ಸಹ ಅಲ್ಲಿ ಹೋಗಲಿಲ್ಲ, ಈಗ ಬಿಜೆಪಿಯ ಅಂತ್ಯಕಾಲ ಬಂದಿದೆ, ಪಾಪದ ಕೊಡ ತುಂಬಿದೆ, ಬಿಜೆಪಿ ಟೆಂಟ್ ಖಾಲಿ ಮಾಡಿಕೊಂಡು ವಾಪಾಸ್ಸಾಗುವ ದಿನ ಸನ್ನಿಹಿತವಾಗಿದೆ ಎಂದು ಟೀಕಾ ಪ್ರಹಾರ ನಡೆಸಿದರು.

ದೇವೆಗೌಡರ ಉಗುರಿಗೂ ಕಟೀಲ್ ಸಮಾನರಲ್ಲ..!

ನಮ್ಮ ಕುಟುಂಬದ ಬಗ್ಗೆ ನಾಲಿಗೆ ಹರಿಬಿಟ್ಟಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ದೇವೆಗೌಡರ ಉಗುರಿಗೂ ಸಮಾನರಲ್ಲ ಎಂದು ಕಟೀಲ್ ವಿರುದ್ಧ ಟೀಕಾಪ್ರಹಾರ ನಡೆಸಿದರು. ದೇವೆಗೌಡರ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ, ನಿಮಗೆ ಆ ಯೋಗ್ಯತೆ, ನೈತಿಕತೆ ಇಲ್ಲ, ನಿಮ್ಮ ಪಕ್ಷದಲ್ಲಿಯೇ ಶಾಸಕರು, ಸಚಿವರು ಅಸಂಬದ್ಧ ರೀತಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ ಅದನ್ನು ಮೊದಲು ನೋಡಿಕೊಳ್ಳಿ, ನಿಮ್ಮ ನಾಲಿಗೆ ಮೇಲೆ ಹಿಡಿತವಿರಿಸಿಕೊಳ್ಳಿ , ದೇವೆಗೌಡರ ಕೊಡುಗೆ ಏನು ಎಂಬುರು ಪ್ರಧಾನಿ ಮೋದಿ ಅವರಿಗೆ ಕೇಳಿ ಎಂದು ಕಟೀಲ್ ವಿರುದ್ಧ ಗುಡುಗಿದರು.

ಕಾರಜೋಳ ವಿರುದ್ಧ ಪರೋಕ್ಷ ವಾಗ್ದಾಳಿ..!

ರಾಜ್ಯದ ಜಲಸಂಪನ್ಮೂಲ ಸಚಿವರಾಗಿರುವ ನಾಯಕರ ಸುಪುತ್ರ ಡಾ.ದೇವಾನಂದ ಚವ್ಹಾಣ ವಿರುದ್ಧ ಸ್ಪರ್ಧೆ ಮಾಡಿದ್ದರು, ಜನತೆ ಅವರಿಗೆ ಸೋಲಿನ ರುಚಿ ತೋರಿಸಿದ್ದರು, ಆದರೆ ನಾನು ಈ ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಾಗಠಾಣ ಕ್ಷೇತ್ರಕ್ಕೆ ನೀಡಿದ ಅನುದಾನವನ್ನು ಜಲಸಂಪನ್ಮೂಲ ಸಚಿವರು ಸ್ಥಗಿತಗೊಳಿಸುವ ಮೂಲಕ ಸಣ್ಣತನ ತೋರಿದ್ದಾರೆ ಎಂದು ಸಚಿವ ಕಾರಜೋಳ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. 

ಕುಮಾರಣ್ಣ ಸಿಎಂ ಆಗದಿದ್ದರೆ ರಾಜಕೀಯ ನಿವೃತ್ತಿ..!

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.‌ ಇಬ್ರಾಹಿಂ ಮಾತನಾಡಿ, ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಎಂಬುದನ್ನು ಬರೆದಿಟ್ಟುಕೊಳ್ಳಿ, ಅವರು ಮುಖ್ಯಮಂತ್ರಿಯಾಗದೇ ಇದ್ದರೆ ನಾನು ರಾಜಕೀಯವಾಗಿ ನಿವೃತ್ತಿಯಾಗುವೆ ಎಂದು ಘೋಷಿಸಿದರು. ಮುಂದಿನ ಮುಖ್ಯಮಂತ್ರಿ ಯಾರು ಎಂದು ಹೇಳುವ ಶಕ್ತಿ ಕಾಂಗ್ರೆಸ್ ಬಳಿ ಇಲ್ಲ, ಆದರೂ ಜೋಡೋ ಯಾತ್ರೆ ಮಾಡುತ್ತಿದ್ದಾರೆ, ಅವರಲ್ಲಿಯೇ ಜೋಡೋ ಇಲ್ಲ ಎಂದು ವ್ಯಂಗ್ಯವಾಡಿದರು.  ಬಿಜೆಪಿ ಹೆಸರು ಹೇಳಲು ವಾಂತಿ  ಆಗುತ್ತಿದೆ, ಮೋದಿ ಬರುವ ಕಡೆ ಜನರನ್ನು ಕರೆದುಕೊಂಡು ಹೋಗಲಾಗುತ್ತಿದೆ, ಮೋದಿ ಅವರು ಬಿತ್ತಿಲ್ಲ, ಉಳುಮೆ ಮಾಡಿಲ್ಲ, ಅವರಿಗೆ ರೈತರ ನೋವಿನ ಬಗ್ಗೆ ಅರಿವಿಲ್ಲ ಎಂದರು. ಫೆಬ್ರವರಿ ಕಳೆಯಲಿ ಬಿಜೆಪಿ, ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುವವರ ದೊಡ್ಡ ಪಟ್ಟಿಯನ್ನೇ ಹೇಳುವೆ ಎಂದರು‌.

ಬಿಜೆಪಿಗರಿಗೆ ನಾಚಿಕೆಯಾಗಬೇಕು..!

ಪ್ರಾಸ್ತಾವಿಕವಾಗಿ ಮಾತನಾಡಿದ ನಾಗಠಾಣ ಶಾಸಕ ಡಾ.ದೇವಾನಂದ ಚವ್ಹಾಣ ಮಾತನಾಡಿ, ನಾಗಠಾಣ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಏಳು ವಾರ್ಡ್ ಗಳು ಬರುತ್ತಿದ್ದರೂ ಸಹ ಒಂದೇ ಒಂದು ನಯಾಪೈಸೆ ಅನುದಾನ ನೀಡದೇ ಬಿಜೆಪಿ ಮಲತಾಯಿ ಧೋರಣೆ ಅನುಸರಿಸುತ್ತಿದೆ, ಎಚ್.ಡಿ. ಕುಮಾರಸ್ವಾಮಿ ಅವರ ಅವಧಿಯಲ್ಲಿ ಮಂಜೂರಾದ ಹೊರ್ತಿ ರೇವಣಸಿದ್ದೇಶ್ವರ ಯೋಜನೆಯನ್ನು ಬಿಜೆಪಿ ತನ್ನ ಸಾಧನೆ, ತನ್ನ ಕೊಡುಗೆ ಎಂದು ಬಿಂಬಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದರು.

ಲಂಬಾಣಿ ಸಮುದಾಯಕ್ಕೆ ಹಕ್ಕು ಪತ್ರ ನೀಡುವ ಮೂಲಕ ಕಣ್ಣೆರೊಸುವ ತಂತ್ರ ಅನುಸರಿಸಲಾಗುತ್ತಿದೆ, ಇದು ಎಂದೋ ಆಗಿರುವ ಕೆಲಸ, ಈಗ ನಮಗೆ ಬೇಕಾಗಿರುವುದು, ಶಿಕ್ಷಣ, ಉದ್ಯೋಗದ ಮೂಲಕ ಗುಳೇ ಹೋಗುವುದು ತಪ್ಪಿಸಬೇಕಾಗಿದೆ, ಈ ಎಲ್ಲ ಕಾರ್ಯಗಳ ಜೊತೆಗೆ ವಿಕಾಸಕ್ಕಾಗಿ ಈ ರಾಜ್ಯಕ್ಕೆ ಕುಮಾರಸ್ವಾಮಿ ಅವರು ಅನಿವಾರ್ಯ ಎಂದರು. ರಾಜಕೀಯವಾಗಿ ಪ್ರಬುದ್ದವಾದ ನಾಯಕರಿದ್ದರೂ ಸಹ ಜಿಲ್ಲೆ ಒಂದು ರೀತಿ ಅನಾಥವಾಗಿದೆ, ಈ ಜಿಲ್ಲೆಯ ಹಾಗೂ ನಾಗಠಾಣ ಕ್ಷೇತ್ರದ ಜವಾಬ್ದಾರಿ ನಿಮ್ಮ ಹೆಗಲಿಗೆ ಇದೆ ಎಂದು ಡಾ.ದೇವಾನಂದ ಹೇಳಿದರು.

ರೈತರ ಹಣ ಲೂಟಿ ಮಾಡುತ್ತಿದೆ ಡಬಲ್‌ ಎಂಜಿನ್‌ ಸರ್ಕಾರ: ಎಚ್‌ಡಿಕೆ

ಮಾನ್ವಿ ಶಾಸಕ ವೆಂಕಟಪ್ಪ ನಾಯಕ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಎಸ್. ಪಾಟೀಲ ಮಾಡಗಿ, ಜೆಡಿಎಸ್ ಧುರೀಣರಾದ ಬಿ.ಡಿ. ಪಾಟೀಲ, ಶಿವಾನಂದ ಪಾಟೀಲ ಸೋಮಜ್ಯಾಳ, ವಿ.ಪ. ಮಾಜಿ ಸದಸ್ಯ ಬಿ.ಜಿ. ಪಾಟೀಲ ಹಲಸಂಗಿ, ಡಾ.ಸುನೀತಾ ಚವ್ಹಾಣ, ಬಸವರಾಜ ಹೊನವಾಡ, ಪಾಲಿಕೆ ಸದಸ್ಯ ರಾಜು ಚವ್ಹಾಣ, ಬಂದೇನವಾಜ ಮಹಾಬರಿ ಮೊದಲಾದವರು ಉಪಸ್ಥಿತರಿದ್ದರು.

ಕಟೀಲ್ ವಿರುದ್ಧ ಸಿಎಂ ಇಬ್ರಾಹಿಂ ಗರಂ..!

ದೇವೆಗೌಡರ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿದ ನಳೀನ್ ಕುಮಾರ್ ಕಟೀಲ್ ಬೇಷರತ್ ಕ್ಷಮೆಯಾಚಿಸಬೇಕು, ಇಲ್ಲವಾದಲ್ಲಿ ಅವರು ಕಾಲಿಡುವ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.‌ಇಬ್ರಾಹಿಂ ತಿಳಿಸಿದ್ದಾರೆ. 

Follow Us:
Download App:
  • android
  • ios