* ಜೆಡಿಎಸ್ ಸೇರುವ ಘೋಷಣೆ* ಕಾಂಗ್ರೆಸ್ ಬಿಟ್ಟು ಜೆಡಿಎಸ್‌ಗೆ ಇಬ್ರಾಹಿಂ ಜೈ* ಕಾಂಗ್ರೆಸ್‌ಗೆ ರಾಜೀನಾಮೆ, ಶೀಘ್ರ ಮೇಲ್ಮನೆಗೂ ವಿದಾಯ
ಬೆಂಗಳೂರು(ಮಾ.13): ಕಡೆಗೂ ಹಿರಿಯ ನಾಯಕ ಸಿ.ಎಂ. ಇಬ್ರಾಹಿಂ(CM Ibrahim) ಅವರು ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಹಾಗೂ ಜೆಡಿಎಸ್(JDS) ಸೇರುವ ಘೋಷಣೆ ಮಾಡಿದ್ದಾರೆ. ಶನಿವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿ ರಾಜೀನಾಮೆ ನಿರ್ಧಾರ ತಿಳಿಸಿದ ಅವರು, ‘ಇನ್ನು ಈಗ ನಾನು ಸ್ವತಂತ್ರ ಪಕ್ಷಿ (Free Bird). ಕಾಂಗ್ರೆಸ್‌ಗೆ(Congress) ರಾಜೀನಾಮೆ ನೀಡಿದ್ದೇನೆ. ಶೀಘ್ರ ಪರಿಷತ್(Vidhan Parishat) ಸದಸ್ಯತ್ವಕ್ಕೂ ರಾಜೀನಾಮೆ ನೀಡುವೆ’ ಎಂದರು. ಅದರ ಬೆನ್ನ ಹಿಂದೆಯೇ ಸಂಜೆ ದೇವೇಗೌಡರ ಜತೆ ಮಾತುಕತೆ ನಡೆಸಿದ ಅವರು ಶೀಘ್ರ ಜೆಡಿಎಸ್ ಸೇರುವುದಾಗಿ ಪ್ರಕಟಿಸಿದರು.
‘ನಾನು ಜೆಡಿಎಸ್‌ಗೆ ಹೋದರೆ ಆ ಪಕ್ಷ ಅಧಿಕಾರಕ್ಕೆ ಬರುತ್ತದೆ. ನನ್ನ ಜೊತೆ ಬರುವವರನ್ನು ನೋಡಿದರೆ ನಿಮಗೂ ಆಶ್ಚರ್ಯವಾಗುತ್ತದೆ. ಕಾಂಗ್ರೆಸ್‌ನ ಹಾಲಿ ಶಾಸಕರೇ ಬರುತ್ತಾರೆ. ಕಾಂಗ್ರೆಸ್‌ನಲ್ಲಿ ಸ್ವಾಭಿಮಾನಕ್ಕೆ ಬೆಲೆಯಿಲ್ಲ. ಸ್ವಾಭಿಮಾನಕ್ಕಾಗಿ ರಾಜೀನಾಮೆ ನೀಡುತ್ತಿದ್ದೇನೆ’ ಎಂದರು.
6 ಬಾರಿ ಗೆದ್ದವರನ್ನು ಅಧಿಕಾರದಿಂದ ಇಳಿಸಲು ಆಗುತ್ತಾ? ಹೀಗೆ ದೇವೇಗೌಡ್ರು ಹೇಳಿದ್ಯಾರಿಗೆ?
ಜೆಡಿಎಸ್‌ಗೆ ಅಧಿಕಾರ ಖಚಿತ:
‘ನಾನು ಸೇರ್ಪಡೆಯಾದರೆ ಜೆಡಿಎಸ್ ಅಧಿಕಾರಕ್ಕೆ ಬರುವುದು ಶೇ.100 ರಷ್ಟು ಖಚಿತ. ನಾನು ಕಾಲು ಇಟ್ಟಕಡೆ ಅಧಿಕಾರ ಬರುತ್ತದೆ. ರಾಜ್ಯದಲ್ಲಿ(Karnataka) ಬಿಜೆಪಿಗೆ ಪರಾರಯಯ ಜೆಡಿಎಸ್ ಮಾತ್ರ’ ಎಂದರು.
ಸಿದ್ದು ಮತ್ತೆ ಸಿಎಂ ಆಗಲ್ಲ:
‘ಇನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುವುದಿಲ್ಲ. ಸಿದ್ದರಾಮಯ್ಯ(Siddaramaiah) ಸ್ಥಿತಿ ನೋಡಿದರೆ ಅಯ್ಯೋ ಎನಿಸುತ್ತದೆ. ಅವರು ಕಾಂಗ್ರೆಸ್‌ನ ಎ.ಸಿ. ಮನೆಯಲ್ಲಿ ಇಲ್ಲ. 50 ಡಿಗ್ರಿ ತಾಪದ ಮನೆಯಲ್ಲಿದ್ದಾರೆ’ ಎಂದು ಇಬ್ರಾಹಿಂ ವ್ಯಂಗ್ಯವಾಡಿದರು.
ದೇವೇಗೌಡ ಜತೆ ಇಬ್ರಾಹಿಂ ಭೇಟಿ
ಬೆಂಗಳೂರು: ಸಿ.ಎಂ.ಇಬ್ರಾಹಿಂ ಅವರು ವರಿಷ್ಠ ಎಚ್.ಡಿ.ದೇವೇಗೌಡ(HD Devegowda) ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಒಂದು ಗಂಟೆಗೂ ಹೆಚ್ಚು ಕಾಲ ಸಮಾಲೋಚನೆ ನಡೆಸಿದರು.
‘ದೇವೇಗೌಡರು ಬಿಜೆಪಿ(BJP) ಜತೆ ಜೆಡಿಎಸ್ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಖುದ್ದು ನಾನೇ ಮಾತನಾಡಿದ್ದು, ಇದನ್ನು ಸ್ಪಷ್ಟಪಡಿಸಿಕೊಂಡು ಬಂದಿದ್ದೇನೆ. ನನಗೆ ಕಿಂಗ್ ಆಗುವ ಆಸೆ ಇದ್ದು, ಕಿಂಗ್ ಮೇಕರ್ ಆಗುವ ಆಸೆ ಇಲ್ಲ. ನನಗೆ ಯಾವುದೇ ಸ್ಥಾನಮಾನ ನೀಡಿದರೂ ಕೆಲಸ ಮಾಡುತ್ತೇನೆ’ ಎದು ಸ್ಪಷ್ಟಪಡಿಸಿದರು.
ಕಾಂಗ್ರೆಸ್‌ಗೇನೂ ನಷ್ಟವಿಲ್ಲ: ಸಿದ್ದು
ಕಲಬುರಗಿ: ಕಾಂಗ್ರೆಸ್ ಪಕ್ಷಕ್ಕೆ ಅನೇಕರು ಸೇರುತ್ತಾರೆ, ಅನೇಕರು ಪಕ್ಷ ಬಿಟ್ಟು ಹೋಗುತ್ತಾರೆ. ಇದರಿಂದ ಪಕ್ಷಕ್ಕೆ ಏನೂ ತೊಂದರೆ ಆಗಲ್ಲ. ಸಿ.ಎಂ.ಇಬ್ರಾಹಿಂ ಪಕ್ಷ ಬಿಟ್ಟು ಹೋದರೂ ಕೂಡ ಏನೂ ತೊಂದರೆ ಇಲ್ಲ ಎಂದು ವಿಧಾನಸಭಾ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ದಿಲ್ಲಿಯಿಂದ ಬಂತು ಆಹ್ವಾನ, ಮನಸ್ಸು ಬದಲಿಸಿ ಕಾಂಗ್ರೆಸ್‌ನಲ್ಲೇ ಉಳಿಯುತ್ತಾರಾ ಸಿಎಂ ಇಬ್ರಾಹಿಂ?
ಕಲಬುರಗಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಅನೇಕರು ಸೇರುತ್ತಾರೆ, ಅನೇಕರು ಪಕ್ಷ ಬಿಟ್ಟು ಹೋಗುತ್ತಾರೆ. ಇದರಿಂದ ಪಕ್ಷಕ್ಕೆ ಏನೂ ತೊಂದರೆ ಆಗಲ್ಲ. ಸಿ.ಎಂ.ಇಬ್ರಾಹಿಂ ಪಕ್ಷ ಬಿಟ್ಟು ಹೋದರೂ ಕೂಡ ಯಾವುದೇ ತೊಂದರೆ ಇಲ್ಲ, ಇಬ್ರಾಹಿಂ ನನಗೆ ಮೊದಲು ಸ್ನೇಹಿತ, ಮುಂದೆಯೂ ಸ್ನೇಹಿತನಾಗಿ ಇರುತ್ತಾರೆ. ಆದರೆ ಅವರ ರಾಜೀನಾಮೆಯಿಂದ ಪಕ್ಷಕ್ಕೆ ತೊಂದರೆ ಆಗಲ್ಲ. ಯಾರ ರಾಜೀನಾಮೆಯಿಂದಲೂ ಪಕ್ಷಕ್ಕೆ ಯಾವುದೇ ಪರಿಣಾಮ ಆಗಲ್ಲ. ನಾನು ಪಕ್ಷ ಬಿಟ್ಟರೂ ಪಕ್ಷಕ್ಕೆ ನಷ್ಟ ಆಗೋದಿಲ್ಲವೆಂದು ಹೇಳಿದರು.
ಇಬ್ರಾಹಿಂ ಸ್ವಾರ್ಥಿ: ಡಿಕೆಶಿ ವಾಗ್ದಾಳಿ
ಬೆಂಗಳೂರು: ‘ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವುದು ಅವರಿಷ್ಟ. ಪಕ್ಷವು ಸಿ.ಎಂ.ಇಬ್ರಾಹಿಂಗೆ ಸಾಕಷ್ಟುಸ್ಥಾನಮಾನ ನೀಡಿತ್ತು. ಅವರದ್ದು ಸ್ವಾರ್ಥ ಅಜೆಂಡಾ, ನಮ್ಮದು ಪಾರ್ಟಿ ಅಜೆಂಡಾ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಕುಟುಕಿದ್ದಾರೆ.
‘ರಾಜಕೀಯದಲ್ಲಿ ಯಾವುದೂ ಯಾವತ್ತೂ ಶಾಶ್ವತವಲ್ಲ. ಅನೇಕ ನಾಯಕರು ಪಕ್ಷ ಬಿಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಅವರಿಗೆ ಅಧಿಕಾರ ದಾಹ, ಅದಕ್ಕೆ ಪಕ್ಷ ಬಿಡುತ್ತಿದ್ದಾರೆ. ಅವರು ಈ ಮಟ್ಟಕ್ಕೆ ಬೆಳೆಯಲು ಕಾಂಗ್ರೆಸ್ ಪಕ್ಷ ಕಾರಣವೇ ಹೊರತು, ಕಾಂಗ್ರೆಸ್ ಹೊರತಾಗಿ ಅವರು ಬೆಳೆಯಲಿಲ್ಲ. ಈಗ ಪಕ್ಷ ತೊರೆದವರು (ಇಬ್ರಾಹಿಂ) ಕೂಡ ಕಾಂಗ್ರೆಸ್ ಪಕ್ಷದಲ್ಲಿ ಬೆಳೆದಿದ್ದಕ್ಕೆ ಆ ಮಟ್ಟಕ್ಕೆ ಹೋಗಿದ್ದಾರೆ. ಕಾಂಗ್ರೆಸ್ ಇಲ್ಲದಿದ್ದರೆ ಇವರನ್ನು ಯಾವ ನಾಯಿಯೂ ಮೂಸುತ್ತಿರಲಿಲ್ಲ’ ಎಂದರು.
