ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ ಹಾಲಿ MLC, ಜೆಡಿಎಸ್ ಸೇರ್ಪಡೆಯಾಗುವುದಾಗಿ ಘೋಷಣೆ
* ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ ಹಾಲಿ ವಿಧಾನಪರಿಷತ್ ಸದಸ್ಯ
* ಜೆಡಿಎಸ್ ಸೇರ್ಪಡೆಯಾಗುವುದಾಗಿ ಘೋಷಣೆ
* ಮೇಲ್ಮನೆ ಪ್ರತಿಪಕ್ಷ ನಾಯಕ ಸ್ಥಾನ ಸಿಗದೆ ಅಸಮಾಧಾನಗೊಂಡಿದ್ದ ನಾಯಕ
ಬೆಂಗಳೂರು, (ಮಾ.12): ವಿಧಾನಪರಿಷತ್ ಪ್ರತಿಪಕ್ಷ ನಾಯಕ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ನಿರೀಕ್ಷೆಯಂತೆ ಇಂದು(ಶನಿವಾರ) ಅಧಿಕೃತವಾಗಿ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದ್ದಾರೆ.
ರಾಜೀನಾಮೆ ನಿಡುವ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ಆಪ್ತ ಇಬ್ರಾಹಿಂ, ಇಂದೇ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಮತ್ತು ಎಂಎಲ್ಸಿ ಸ್ಥಾನಕ್ಕೂ ರಾಜೀನಾಮೆ ಕೊಡುವೆ ಎಂದು ಹೇಳಿದರು.
ಇಬ್ರಾಹಿಂ ನಿವಾಸಕ್ಕೆ ಸಿದ್ದು ಹೋಗ್ಲಿಲ್ಲ, ಬಿರಿಯಾನಿ ತಿನ್ಲಿಲ್ಲ, ರಾಜೀನಾಮೆಗೆ ಮುಹೂರ್ತ ಫಿಕ್ಸ್
ನನ್ನ ರಾಜೀನಾಮೆ ಪತ್ರವನ್ನು ಸಿದ್ದರಾಮಯ್ಯಗೆ ಕೊಡುತ್ತಿರುವೆ. ಅಂಗೀಕಾರ ಮಾಡುವುದು, ಬಿಡುವುದು ಅವರಿಷ್ಟ. ರಾಜೀನಾಮೆ ಪತ್ರವನ್ನು ಸೋನಿಯಾ ಗಾಂಧಿ ಅವರಿಗೂ ತಲುಪಿಸುತ್ತಿದ್ದೇನೆ. ಅನೇಕರು ರಾಜೀನಾಮೆ ನೀಡಿ ನನ್ನ ಜತೆ ಬರ್ತಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿಕೆಶಿ, ಸಿದ್ದರಾಮಯ್ಯ ಹಾಗೂ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದಗಳು ಎನ್ನುತ್ತಲೇ ಜೆಡಿಎಸ್ ಪಕ್ಷಕ್ಕೆ ಸೇರುವುದಾಗಿ ಘೋಷಿಸಿದರು.
ಕಾಂಗ್ರೆಸ್ ಪಕ್ಷವು ಮುಸ್ಲಿಮರನ್ನು ಗೌರವದಿಂದ ನಡೆಸಿಕೊಳ್ಳುತ್ತಿಲ್ಲ. ನಮ್ಮನ್ನು ಬಳಸಿಕೊಳ್ಳುತ್ತಿದೆ, ಆದರೆ ಅಧಿಕಾರ ಕೊಡುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ತೊರೆಯಲು, ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಕೊಡಲು ನಿರ್ಧರಿಸಿದ್ದೇನೆ ಎಂದು ಬೆಂಗಳೂರಿನಲ್ಲಿ ಸಿ.ಎಂ.ಇಬ್ರಾಹಿಂ ಹೇಳಿದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 1995ನೇ ಇಸವಿಯಲ್ಲಿ ಆಗಿದ್ದ ಬೆಳವಣಿಗೆಯೇ ಈಗಲೂ ಕಂಡುಬರುತ್ತಿದೆ. ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ನೆಲೆ ಕಳೆದುಕೊಳ್ಳುತ್ತಿದೆ ಎನ್ನುವುದನ್ನು ನಾನು ಹಲವು ದಿನಗಳಿಂದ ಹೇಳುತ್ತಲೇ ಇದ್ದೇನೆ ಎಂದು ಹೇಳಿದರು.
ಜನರ ಜೊತೆ ಸಂಪರ್ಕ ಇಲ್ಲದಿರುವವರನ್ನೇ ನಾಯಕರನ್ನಾಗಿ ಬೆಳೆಸುತ್ತಿದೆ. ಅದರ ಪರಿಣಾಮ ಏನು ಎಂಬುದು ಪಂಚರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ತಿಳಿಯುತ್ತದೆ. ಆದರೆ ಕರ್ನಾಟಕವನ್ನ ಉತ್ತರ ಪ್ರದೇಶ ಆಗಲು ನಾವು ಬಿಡುವುದಿಲ್ಲ. ಇದು ಬಸವಣ್ಣ, ಸರ್ವಜ್ಞ, ಕನಕದಾಸ, ಪುರಂದರದಾಸ, ರಾಘವೇಂದ್ರ ಸ್ವಾಮಿಗಳ ಪುಣ್ಯಸ್ಥಳ. ಹೀಗಾಗಿ ನಾನಿವತ್ತು ಕಾಂಗ್ರೆಸ್ ಪಕ್ಷ ತೊರೆದು ನನ್ನ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದರು.
ಕೆಲವರನ್ನ ಪಕ್ಷದಿಂದ ಅವರೇ ತಳ್ಳುತ್ತಿದ್ದಾರೆ. ನನ್ನನ್ನು ತಳ್ಳುವ ಮೊದಲೇ ಕಾಂಗ್ರೆಸ್ ಪಕ್ಷ ತೊರೆಯುತ್ತಿದ್ದೇನೆ. ನನ್ನ ಜೊತೆ ಅನೇಕರು ಬರುತ್ತಾರೆ. ಮುಂದೆ ದೇವೇಗೌಡ, ಕುಮಾರಣ್ಣ, ರೇವಣ್ಣರ ಜೊತೆ ಚರ್ಚೆ ಮಾಡಿ ನಿರ್ಣಯ ಪ್ರಕಟ ಮಾಡುತ್ತೇನೆ ಎಂದರು.
ಇಬ್ರಾಹಿಂ ಅವರನ್ನ ಕಾಂಗ್ರೆಸ್‌ನಲ್ಲೇ ಉಳಿಸಿಕೊಳ್ಳಲು ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಸ್ ಮಾಡಿದ್ರು. ತಮ್ಮ ಆಪ್ತ ಎಚ್‌ಸಿ ಮಹಾದೇವಪ್ಪ ಅವರನ್ನ ಸಿಎಂ ಇಬ್ರಾಹಿಂ ನಿವಾಸಕ್ಕೆ ಕಳುಹಿಸಿ ಸಂಧಾನಕ್ಕೆ ಮುಂದಾಗಿದ್ದರು. ಸಿ.ಎಂ.ಇಬ್ರಾಹಿಂ ನನ್ನ ಸ್ನೇಹಿತ. ಅವನು ಪಕ್ಷ ಬಿಡುವುದಿಲ್ಲ ಎಂಬ ವಿಶ್ವಾಸ ನನಗಿದೆ. ಅವನ ಸಿಟ್ಟು ಕಡಿಮೆಯಾದ ತಕ್ಷಣ ಅವನ ಮನೆಗೆ ಬಿರಿಯಾನಿ ತಿನ್ನಲು ಹೋಗುತ್ತೇನೆ ಎಂದು ಸ್ವತಃ ಸಿದ್ದರಾಮಯ್ಯ ಅವರೇ ಹೇಳಿದ್ದರು.
ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದ ಇಬ್ರಾಹಿಂ
ಹೌದು...ಕಾಂಗ್ರೆಸ್ ತೊರೆಯುವುದಾಗಿ ಘೋಷಣೆ ಮಾಡಿದ್ದ ಸಿಎಂ ಇಬ್ರಾಹಿಂ, ಅಧಿಕೃತವಾಗಿ ಪಕ್ಷಕ್ಕೆ ರಾಜೀನಾಮೆ ನೀಡಲು ಕಾದುನೋಡುವ ತಂತ್ರಕ್ಕೆ ಶರಣಾಗಿದ್ದರು.
ವಿಧಾನಪರಿಷತ್ ವಿರೋಧ ಪಕ್ಷ ನಾಯಕ ಹುದ್ದೆ ಬಿಕೆ ಹರಿಪ್ರಸಾದ್ ಅವರಿಗೆ ನೀಡಿದ್ದೆ ತಡ ಇಬ್ರಾಹಿಂ ಅವರು ದಿಢೀರ್ ಸುದ್ದಿಗೋಷ್ಠಿ ಕರೆದು ಕಾಂಗ್ರೆಸ್ ತೊರೆಯುವುದಾಗಿ ಘೋಷಣೆ ಮಾಡಿದ್ದರು.
Karnataka Congress ಫೆ.14ರಂದು ಲವರ್ಸ್ ಡೇ, ಅಂದೇ ರಾಜೀನಾಮೆ ನೀಡ್ತೇನೆ, ಇಬ್ರಾಹಿಂ ಘೋಷಣೆ
ಘೋಷಣೆ ಮಾಡಿದ ಒಂದೆರೆಡು ದಿನದ ಬಳಿಕ ಫೆ.14ರ ಲವರ್ಸ್ ದಿನದಿಂದ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಅದಾದ ಒಂದು ದಿನದಲ್ಲೇ ಸಿಎಂ ಇಬ್ರಾಹಿಂ ಅವರು ರಾಜೀನಾಮೆ ನೀಡುವ ವಿಚಾರದಲ್ಲಿ ದಿಢೀರ್ ಉಲ್ಟಾ ಹೊಡೆದಿದ್ದರು. ಹೈಕಮಾಂಡ್ ಕರೆ ಮಾಡಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ ಹಿನ್ನೆಲೆಯಲ್ಲಿ ಇಬ್ರಾಹಿಂ ಅವರು ರಾಜೀನಾಮೆ ನೀಡುವ ದಿನಗಳನ್ನ ಮುಂದೂಡಿದ್ದರು.
ಪಕ್ಷದಲ್ಲಿ ಉಳಿಸಿಕೊಳ್ಳೋಕೆ ಮನಸ್ಸಿದೆಯೋ ಇಲ್ವೋ ಎಂದು ಕಾಂಗ್ರೆಸ್ ಹೈಕಮಾಂಡ್ ಗೆ ಕೇಳುತ್ತೇನೆ. ಹೈಕಮಾಂಡ್ ಏನು ಹೇಳುತ್ತೋ ನೋಡೋಣ. ಆ ಮೇಲೆ ನಾನು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಇಬ್ರಾಹಿಂ ಹೇಳಿದ್ದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಇಬ್ರಾಹಿಂ
ಹೌದು...ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಹುದ್ದೆ ಕೈತಪ್ಪಿರುವುದರಿಂದ ಅಸಮಾಧಾನಗೊಂಡಿರುವ ಸಿಎಂ ಇಬ್ರಾಹಿಂ, ಜೆಡಿಎಸ್‌ನತ್ತ ಮುಖ ಮಾಡಿದ್ದಾರೆ. ಈಗಾಗಲೇ ಕುಮಾರಸ್ವಾಮಿ ಅವರು ಹಲವು ಬಾರಿ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ.
ಆದ್ರೆ, ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ದೇವೇಗೌಡ ಅವರು ಸದ್ಯಕ್ಕೆ ಅಸಾಧ್ಯ. ಮುಂದೆ ನೋಡೋಣ ಎನ್ನುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.