ಮೈಕ್ರೋ ಫೈನಾನ್ಸ್ ಹಾವಳಿ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮೈಕ್ರೋ ಫೈನಾನ್ಸ್ ಹಾವಳಿ ತಡೆಗೆ ಬಲಿಷ್ಠ ಕಾನೂನು ತರುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಭೀರ ಚಿಂತನೆ ನಡೆಸಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ವಿಜಯಪುರ (ಜ.26): ಮೈಕ್ರೋ ಫೈನಾನ್ಸ್ ಹಾವಳಿ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮೈಕ್ರೋ ಫೈನಾನ್ಸ್ ಹಾವಳಿ ತಡೆಗೆ ಬಲಿಷ್ಠ ಕಾನೂನು ತರುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಭೀರ ಚಿಂತನೆ ನಡೆಸಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು. ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ವಿಚಾರವಾಗಿ ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಕ್ಯಾಬಿನೆಟ್‌ನಲ್ಲಿ ಸ್ಪಷ್ಟ ಸೂಚನೆಯನ್ನು ಕೊಟ್ಟಿದ್ದಾರೆ. ಕಾನೂನು ಸಚಿವ ಎಚ್.ಕೆ.ಪಾಟೀಲ್, ಗೃಹ ಸಚಿವ ಜಿ.ಪರಮೇಶ್ವರ್, ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಸೂಚನೆ ಕೊಟ್ಟಿದ್ದಾರೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.
ಎಚ್‌ಡಿಕೆ ಬಿಲ್ ಕೆಲಸ ಮಾಡುತ್ತಿಲ್ಲ: ನಾನು ಮುಖ್ಯಮಂತ್ರಿ ಆಗಿದ್ದಾಗ ಮೈಕ್ರೋ ಫೈನಾನ್ಸ್ ಬಗ್ಗೆ ಬಿಲ್ ತಂದಿದ್ದೆ. ಅದು ಏನಾಯ್ತು ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಬಿಲ್ ತಂದಿದ್ದರೆ ಅದರ ಪರಿಣಾಮ ಏನಾಯ್ತು? ಕುಮಾರಸ್ವಾಮಿ ತಂದಿದ್ದ ಬಿಲ್ ವರ್ಕ್ ಆಗ್ತಿಲ್ಲ. ನಾವು ಕಠಿಣ ಕಾನೂನು ತರುತ್ತೇವೆ. ಈ ಬಗ್ಗೆ ನಾನು ಗಂಭೀರವಾಗಿ ಹೇಳುತ್ತಿದ್ದೇನೆ, ಮೈಕ್ರೋ ಫೈನಾನ್ಸ್ ವಿಚಾರವಾಗಿ ನಾನು ಲಘುವಾಗಿ ಮಾತನಾಡಲ್ಲ. ರಾಜ್ಯ ಸರ್ಕಾರ ಕಠಿಣ ಕಾನೂನು ತರುತ್ತದೆ ಎಂದು ತಿಳಿಸಿದರು.
ಯತ್ನಾಳ ಹೇಳಿಕೆ ಬಾಲಿಶ: ಕಾಂಗ್ರೆಸ್‌ನ 60 ಶಾಸಕರು ಬಿಜೆಪಿ ಸೇರಲಿದ್ದಾರೆ ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಬಾಲಿಶ. 60 ಮಂದಿಯಲ್ಲ ಆರು ಮಂದಿ ಕೂಡ ಸೇರುವುದಿಲ್ಲ. ಬಿಜೆಪಿ, ಜೆಡಿಎಸ್ ಶಾಸಕರೇ 25 ಮಂದಿ ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ಹೆಚ್ಚಾಗಿದೆ. ವಿಜಯೇಂದ್ರ, ಯತ್ನಾಳ್, ರಮೇಶ್ ಜಾರಕಿಹೊಳಿ ಒಬ್ಬರಿಗೊಬ್ಬರು ಏಕವಚನದಲ್ಲಿ ಮಾತನಾಡುತ್ತಿದ್ದಾರೆ. ಮೊದಲು ಅವರು ತಮ್ಮ ಪಕ್ಷವನ್ನು ಸರಿಪಡಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಗಿಗಾ ಫ್ಯಾಕ್ಟರಿ ಘಟಕದಲ್ಲಿ ಸ್ಥಳೀಯರಿಗೆ ಉದ್ಯೋಗವಕಾಶ: ಸಚಿವ ಎಂ.ಬಿ.ಪಾಟೀಲ್
ಇದೇ ವೇಳೆ ಬಿಜೆಪಿ ಹಾಗೂ ಜೆಡಿಎಸ್‌ನಿಂದ ಬರಲು 25 ಮಂದಿ ಶಾಸಕರು ಸಿದ್ಧರಿದ್ದಾರೆ ಎಂಬ ಹೇಳಿಕೆಗೆ ಈಗಲೂ ಬದ್ಧ ಎಂದು ಪುನರುಚ್ಚರಿಸಿದ ಅವರು, ಕೆಲವು ಕಡೆ ನಮ್ಮ ಪಕ್ಷದ ಅಭ್ಯರ್ಥಿಗಳು ದುರ್ಬಲರಾಗಿದ್ದು, ಅಂಥ ಕ್ಷೇತ್ರಗಳಿಗೆ ಸೂಕ್ತ ಸಂದರ್ಭದಲ್ಲಿ ಬಿಜೆಪಿ, ಜೆಡಿಎಸ್ ಶಾಸಕರನ್ನು ಕರೆದುಕೊಳ್ಳುತ್ತೇವೆ ಎಂದು ಹೇಳಿದರು. ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟದಿಂದ ಅಲ್ಲಿನ ಶಾಸಕರು ಬೇಸತ್ತಿದ್ದಾರೆ. ಹೀಗಾಗಿ ಮುಹೂರ್ತ ಕೂಡಿ ಬಂದಾಗ ಸೂಕ್ತ ಸಮಯದಲ್ಲಿ ಬಿಜೆಪಿ, ಜೆಡಿಎಸ್ ಶಾಸಕರು ಕಾಂಗ್ರೆಸ್‌ಗೆ ಬರಲಿದ್ದಾರೆ. ನಾವೇನು ಆಪರೇಷನ್ ಹಸ್ತಕ್ಕೆ ಪ್ರಯತ್ನ ಮಾಡುವುದಿಲ್ಲ. ಯಾವ್ಯಾವ ಶಾಸಕರು ನಮ್ಮೊಂದಿಗೆ ಇದ್ದಾರೆ ಎಂಬುದು ಸಹ ಅವರಿಗೆ ಗೊತ್ತಿದೆ. ಅವರೆಲ್ಲ ಯಾವುದೇ ಬೇಡಿಕೆ ಇಲ್ಲದೆ ಪಕ್ಷಕ್ಕೆ ಬರಲು ಸಿದ್ಧರಿದ್ದು, ಪರಿಶೀಲನೆ ಮಾಡಿ ಅವರನ್ನು ಕರೆಸಿಕೊಳ್ಳುತ್ತೇವೆ ಎಂದು ಹೇಳಿದರು.
