ಜಾತಿ ಆಧಾರದಲ್ಲಿ ಸಿಎಂ ಮಾಡಲಾಗದು: ಸಚಿವ ಸತೀಶ ಜಾರಕಿಹೊಳಿ
ಜಾತಿ ಆಧಾರದಲ್ಲಿ ಮುಖ್ಯಮಂತ್ರಿ ಮಾಡಲು ಆಗಲ್ಲ. ಅವಕಾಶ ಬಂದಾಗ ಲಿಂಗಾಯತರೂ ಮುಖ್ಯಮಂತ್ರಿಯಾಗಬಹುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಕಾಂಗ್ರೆಸ್ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
ದಾವಣಗೆರೆ (ಅ.02): ಜಾತಿ ಆಧಾರದಲ್ಲಿ ಮುಖ್ಯಮಂತ್ರಿ ಮಾಡಲು ಆಗಲ್ಲ. ಅವಕಾಶ ಬಂದಾಗ ಲಿಂಗಾಯತರೂ ಮುಖ್ಯಮಂತ್ರಿಯಾಗಬಹುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಕಾಂಗ್ರೆಸ್ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಹರಿಹರ ತಾ. ರಾಜನಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದೆ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದಾಗ ಜಾತಿಯ ವಿಚಾರವೇ ಬರಲಿಲ್ಲ ಎಂದರು. ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ನಂತರ ರಾಜ್ಯದಲ್ಲಿ ಜಾತಿಯ ವಿಚಾರ ಬಂದಿದೆ. ಪರಿಶಿಷ್ಟ ಪಂಗಡದವರ ಉಪ ಮುಖ್ಯಮಂತ್ರಿ ಮಾಡುವ ವಿಚಾರ ಕಾಂಗ್ರೆಸ್ ಹೈಕಮಾಂಡ್‌ಗೆ ಬಿಟ್ಟದ್ದು ಎಂದು ತಿಳಿಸಿದರು.
ವೀರಶೈವ ಲಿಂಗಾಯತ ಅಧಿಕಾರಿಗಳ ಮೂಲೆಗುಂಪು ಮಾಡಲಾಗಿದೆಯೆಂಬುದಾಗಿ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ಹಿರಿಯರಾದ ಶಾಮನೂರು ಸರ್ಕಾರದಲ್ಲಿ ಬಂದು, ರಕ್ಷಣೆ ಮಾಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೆ ಚರ್ಚಿಸಿ, ಸಮಸ್ಯೆಗಳ ಪರಿಹರಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಬೆದರಿಕೆ ಪತ್ರಗಳು ಬರುತ್ತಿರುತ್ತವೆ. ಅಂತಹದ್ದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವಂತಿಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಎಡ ಪಂಥೀಯ ಸಾಹಿತಿಗಳಿಗೆ ದಾವಣಗೆರೆ ನಗರ ಮೂಲಕ ಯುವಕ ಬೆದರಿಕೆ ಪತ್ರ ಬರೆದ ಆರೋಪದಡಿ ಸಿಸಿಬಿ ಪೊಲೀಸರು ಬಂಧಿಸಿರುವ ಕುರಿತ ಪ್ರಶ್ನೆಗೆ ಹೀಗೆ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಸೋಲಿಸಲು ಬಿಜೆಪಿ-ಜೆಡಿಎಸ್ ಒಂದಾಗಿದೆ: ನಿಖಿಲ್ ಕುಮಾರಸ್ವಾಮಿ
ಲೋಕೋಪಯೋಗಿಯಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ: ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಇದೀಗ ಹೊಸ ಗಾಳಿ ಬೀಸತೊಡಗಿದ್ದು ಇಲಾಖೆಯಲ್ಲಿನ ಕೆಲ ಹಳೆಯ ಪದ್ಧತಿಗಳಿಗೆ ವಿದಾಯ ಹೇಳಿ ಆಧುನಿಕ ಸ್ಪರ್ಶ ನೀಡುವ ಮೊದಲ ಯತ್ನದಲ್ಲೇ ಯಶಸ್ಸು ಲಭಿಸಿದೆ. ಲೋಕೋಪಯೋಗಿ ಇಲಾಖೆಯ ಇತಿಹಾಸದಲ್ಲೇ ಇದೇ ಮೊಟ್ಟ ಮೊದಲ ಬಾರಿಗೆ ಸಹಾಯಕ ಎಂಜನಿಯರ್ ಮತ್ತು ಕಿರಿಯ ಎಂಜನಿಯರ್ ಹುದ್ದೆಗಳ ಸ್ಥಳ ನಿಯುಕ್ತಿಯನ್ನು ಸಮಾಲೋಚನೆ (ಕೌನ್ಸೆಲಿಂಗ್) ಮೂಲಕ ನಡೆಸಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ.
ಅಲ್ಲದೇ ಇತರೆ ಇಲಾಖೆಗಳಿಗೆ ಮಾದರಿ ಎನಿಸುವಂಥ ನಿರ್ಧಾರ ಕೈಗೊಂಡಿದೆ. ಈ ವಿನೂತನ ಪ್ರಯೋಗ ಇಲಾಖೆಯ ಇಮೇಜ್‌ನ್ನು ಮತ್ತಷ್ಟು ಹೆಚ್ಚಿಸಿದ್ದು ಸಾಮಾಜಿಕ ನ್ಯಾಯ, ಪ್ರಾದೇಶಿಕ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂಬ ಕೊರಗು ನಿವಾರಣೆಯಾದಂತಾಗಿದೆ. ಜತೆಗೆ ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಬಹುತೇಕ ಎಂಜನಿಯರ್‌ಗಳ ಕೊರತೆ ನೀಗಿದಂತಾಗದೆ.
ಸದಾ ಒಂದಿಲ್ಲೊಂದು ವಿಭಿನ್ನ ಮತ್ತು ವಿಶಿಷ್ಟ ಆಲೋಚನೆಗಳ ಮೂಲಕ ಗಮನ ಸೆಳೆಯುವ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರು ಈ ಹೊಸ ಆಲೋಚನೆಯ ಹಿಂದಿರುವ ಶಕ್ತಿ ಮತ್ತು ರೂವಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಸ್ಥಳ ನಿಯುಕ್ತಿಯಲ್ಲಿ ಜನಪ್ರತಿನಿಧಿಗಳ ಶಿಫಾರಸು, ಮಧ್ಯವರ್ತಿಗಳ ಮತ್ತು ಲಂಚದ ಹಾವಳಿ ತಡೆದು ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಸಚಿವ ಸತೀಶ ಜಾರಕಿಹೊಳಿ ಮಹತ್ತರ ಕೆಲಸಕ್ಕೆ ಕೈ ಹಾಕಿ ಯಶಸ್ಸು ಸಾಧಿಸಿದ್ದು ಇದರ ಸಂಪೂರ್ಣ ಶ್ರೇಯಸ್ಸು ಜಾರಕಿಹೊಳಿ ಅವರಿಗೆ ಲಭಿಸಬೇಕು.
ನೌಕರಿಯ ಸ್ಥಳ ನಿಯುಕ್ತಿ ವೇಳೆ ನಡೆಯುತ್ತಿದೆ ಎನ್ನಲಾದ ಹಣದ ವ್ಯವಹಾರಕ್ಕೆ ಬ್ರೇಕ್ ಹಾಕಲು ಈ ರೀತಿಯ ವಿಶಿಷ್ಟ ಕಾರ್ಯಕ್ಕೆ ಲೋಕೋಪಯೋಗಿ ಇಲಾಖೆ ಮುಂದಾಗಿದೆ. ಇದರಿಂದ ರ್‍ಯಾಂಕ್ ಅನುಗುಣವಾಗಿ ಅಭ್ಯರ್ಥಿಗಳು ಬಯಸಿದ ಸ್ಥಳ ಆಯ್ಕೆ ಮಾಡಿಕೊಳ್ಳುವ ಸದಾವಕಾಶ ಲಭಿಸಿದ್ದು, ಈ ಮೂಲಕ ವೃತ್ತಿ ಜೀವನದ ಶುಭಾರಂಭ ಆದಂತಾಗಿದೆ.
ಲಿಂಗಾಯತ ಡಿಸಿಎಂ ಯಾರಿಗೆ ಬೇಕು, ಮಾಡೋದಿದ್ರೆ ಸಿಎಂ ಮಾಡಿ: ಶಾಮನೂರು ಶಿವಶಂಕರಪ್ಪ ಸ್ಪೋಟಕ ಹೇಳಿಕೆ
ಜಾತಿ ಆಧಾರದ ಮೇಲೆ ಅಧಿಕಾರಿಗಳ ನೇಮಕ ಆಗುವುದಿಲ್ಲ. ಅಧಿಕಾರಿಗಳ ಕಾರ್ಯಕ್ಷಮತೆ ನೋಡಿ, ಆಯ್ಕೆ ಮಾಡಲಾಗಿದೆ. ಅಧಿಕಾರಿಗಳಿಗೆ ಏನೇ ಅನ್ಯಾಯವಾಗಿದ್ದರೆ, ಮುಖ್ಯಮಂತ್ರಿ ಬಳಿ ಹೇಳಲಿ. ಅವರ ಸಮಾಜದವರಿಗೆ ಅನ್ಯಾಯವಾಗಿದ್ದಕ್ಕೆ ಅಸಮಾಧಾನವಾದ್ದರಿಂದ ಶಾಮನೂರು ಶಿವಶಂಕರಪ್ಪ ಹಾಗೇ ಹೇಳಿದ್ದಾರೆ.
-ಸತೀಶ ಜಾರಕಿಹೊಳಿ ಲೋಕೋಪಯೋಗಿ ಸಚಿವ