‘ಕಾವೇರಿ’ಯಲ್ಲಿ ಸಿದ್ದು ಎಷ್ಟು ದಿನ ಬೇಕಾದ್ರೂ ಇದ್ದು ಹೋಗ್ಲಿ!
ಮುಖ್ಯಮಂತ್ರಿ ಆದವರಿಗೆ ಗೃಹ ಕಚೇರಿ ಪಕ್ಕದಲ್ಲಿರುವ ಸರ್ಕಾರಿ ನಿವಾಸ ಎಷ್ಟುಮುಖ್ಯ ಎಂಬುದು ತಿಳಿಯಬೇಕು ಎಂದು ಸಿಎಂ ಬಿಎಸ್ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಬೆಂಗಳೂರು [ಅ.22]: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರದ ‘ಕಾವೇರಿ’ ನಿವಾಸದಲ್ಲಿ ಇರುವಷ್ಟುದಿನ ಇದ್ದು ಖಾಲಿ ಮಾಡಲಿ. ನಂತರವೇ ನಾನು ಆ ಮನೆ ಪ್ರವೇಶ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಆದವರಿಗೆ ಗೃಹ ಕಚೇರಿ ಪಕ್ಕದಲ್ಲಿರುವ ಸರ್ಕಾರಿ ನಿವಾಸ ಎಷ್ಟುಮುಖ್ಯ ಎಂಬುದು ತಿಳಿಯಬೇಕು. ಗೃಹ ಕಚೇರಿಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕಾಗಿ ನಾನು ‘ಕಾವೇರಿ’ ಮನೆಯನ್ನು ಪಡೆದಿದ್ದೇನೆ ಎಂದು ತುಸು ಬೇಸರದಿಂದಲೇ ಹೇಳಿದರು.
ನಾನು ಸಿದ್ದರಾಮಯ್ಯ ಅವರಿಗೆ ಮನೆ ಖಾಲಿ ಮಾಡಿ ಎಂದು ಹೇಳಿಲ್ಲ. ಅವರು ಇರುವಷ್ಟುದಿನ ಕಾವೇರಿಯಲ್ಲಿ ಇದ್ದು ಹೋಗಲಿ. ಅವರನ್ನು ಬೇಗ ಮನೆ ಖಾಲಿ ಮಾಡಿ ಎಂಬುದಾಗಿ ನಾನು ಒತ್ತಾಯ ಮಾಡುವುದಿಲ್ಲ. ಈಗಾಗಲೇ ಮಾಜಿ ಸಚಿವ ಕೆ.ಜೆ.ಜಾರ್ಜ್ ಅವರು ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಕಾವೇರಿಯಲ್ಲಿ ಎಷ್ಟುದಿನ ಬೇಕಾದರೂ ಇದ್ದು ಹೋಗಲಿ. ನಂತರ ನಾನು ಆ ಮನೆ ಪ್ರವೇಶಕ್ಕೆ ಸಿದ್ಧನಿದ್ದೇನೆ ಎಂದರು.
ಅನರ್ಹ ಶಾಸಕರಲ್ಲಿ ಕೆಲವರು ಕಾಂಗ್ರೆಸ್‌ಗೆ ವಾಪಸ್?...
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು, ಗೃಹ ಕಚೇರಿಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕಾಗಿ ನಾನು ಕಾವೇರಿ ನಿವಾಸ ಪಡೆದಿದ್ದೇನೆ. ಆದರೆ, ಸಿದ್ದರಾಮಯ್ಯ ಅವರು ಈಗ ಅದೇ ಮನೆಯನ್ನು ತಮಗೆ ಹಂಚಿಕೆ ಮಾಡುವಂತೆ ಪತ್ರ ಬರೆದಿದ್ದಾರೆ. ವಿರೋಧ ಪಕ್ಷದ ನಾಯಕ ಆದವರಿಗೆ ನಾನು ಏನು ಗೌರವ ಕೊಡಬೇಕೋ ಅದನ್ನು ಕೊಡುತ್ತೇನೆ. ಆದರೆ ಅವರು ಈ ರೀತಿ ನಡೆದುಕೊಳ್ಳುತ್ತಿರುವುದು ಸರಿಯಲ್ಲ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.