ನವದೆಹಲಿ(ಸೆ.19): ‘ರಾಜ್ಯದಲ್ಲಿ ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಅವರು ಪರ್ಯಾಯ ಸಿಎಂ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆರೋಪವನ್ನು ಅಲ್ಲಗೆಳೆದಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಷಡ್ಯಂತ್ರ ನಡೆಯುತ್ತಿರುವುದಾಗಿ ತಿರುಗೇಟು ನೀಡಿದ್ದಾರೆ.

ನವದೆಹಲಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವ ವಿಜಯೇಂದ್ರ ಅವರು ರಾಜ್ಯದೆಲ್ಲೆಡೆ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದರು.

ಸಂಪುಟ ಸರ್ಕಸ್: ಸಿಎಂ ದೆಹಲಿ ಭೇಟಿ ಸೀಕ್ರೇಟ್ ಇದು.!

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ತಮ್ಮನ್ನು ಭೇಟಿ ಮಾಡಿದ ಬಗ್ಗೆ ಸ್ಪಷ್ಟನೆ ನೀಡಿದ ಅವರು, ವಿಪಕ್ಷ ನಾಯಕನಾಗಿ ನನ್ನನ್ನು ಭೇಟಿ ಮಾಡಿರುವ ಅವರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ಬಗ್ಗೆ ಹುಟ್ಟಿಕೊಂಡಿರುವ ಊಹಾಪೋಹದಲ್ಲಿ ಹುರುಳಿಲ್ಲ ಎಂದರು. ಇದೇವೇಳೆ ಶಿರಾ ಉಪಚುನಾವಣೆ ರಣತಂತ್ರದ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರ ಜೊತೆ ಮಾತುಕತೆ ನಡೆಸಿದ್ದು, ಈ ಬಾರಿ ಈ ಕ್ಷೇತ್ರವನ್ನು ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.