ಉಸ್ತುವಾರಿ ಬದಲಾವಣೆ ವಿಷಯವೇ ಇಲ್ಲ, ಎಲ್ಲರೂ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದ್ದಾರೆ| ಉಪಚುನಾವಣೆಗೆ ಅಭ್ಯರ್ಥಿಗಳು ಯಾರೆಂದು ಇಂದು ಗೊತ್ತಾಗಲಿದೆ, ಬೈಎಲೆಕ್ಷನ್‌ನಲ್ಲಿ ಬಿಜೆಪಿ ಎಲ್ಲ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ: ಸಿಎಂ ಬಿಎಸ್‌ವೈ| 

ಬಳ್ಳಾರಿ(ಮಾ.21): ಬೆಳಗಾವಿ ಲೋಕಸಭೆಗೆ ನಡೆಯಲಿರುವ ಉಪ ಚುನಾವಣೆಯ ಉಸ್ತುವಾರಿಯನ್ನು ಯಾವುದೇ ಕಾರಣಕ್ಕೂ ಬದಲು ಮಾಡುವುದಿಲ್ಲ. ಈ ಹಿಂದೆ ಯಾರಾರ‍ಯರಿಗೆ ಯಾವ್ಯಾವ ಕ್ಷೇತ್ರದ ಜವಾಬ್ದಾರಿ ನೀಡಿದ್ದೆವೋ ಅವರೆಲ್ಲ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರೂ ಮುಂದುವರಿಯಲಿದ್ದಾರೆ. ರಮೇಶ್‌ ಜಾರಕಿಹೊಳಿ ಸಹ ಇರುತ್ತಾರೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ. 

ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್‌ ಜಿಂದಾಲ್‌ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ಬೆಳಗಾವಿ ಉಸ್ತುವಾರಿ ಬದಲಾವಣೆ ಕುರಿತು ನಡೆಯುತ್ತಿರುವ ಚರ್ಚೆಯ ಬಗ್ಗೆ ಕೇಳಿದಾಗ ಉಸ್ತುವಾರಿ ಬದಲಾವಣೆ ವಿಷಯವೇ ಇಲ್ಲ. ಎಲ್ಲರೂ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಬೆಳಗಾವಿ ಲೋಕಸಭಾ ಬೈ ಎಲೆಕ್ಷನ್: ಕಾಂಗ್ರೆಸ್ ಅಭ್ಯರ್ಥಿ ಫೈನಲ್!

ಇಂದು ಅಭ್ಯರ್ಥಿಗಳು ಅಂತಿಮ:

ಮಸ್ಕಿ, ಬಸವಕಲ್ಯಾಣ ಹಾಗೂ ಬೆಳಗಾವಿ ಉಪ ಚುನಾವಣೆಗೆ ಸಂಬಂಧಿಸಿದಂತೆ ಆಕಾಂಕ್ಷಿಗಳ ಪಟ್ಟಿದೊಡ್ಡದಿದೆ. ಎಲ್ಲ ಆಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್‌ಗೆ ಕಳಿಸಿಕೊಡಲಾಗಿದೆ. ಭಾನುವಾರ ಅಭ್ಯರ್ಥಿಗಳು ಯಾರೆಂದು ಗೊತ್ತಾಗಲಿದೆ ಎಂದರಲ್ಲದೆ, ಉಪ ಚುನಾವಣೆಯಲ್ಲಿ ಬಿಜೆಪಿ ಎಲ್ಲ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದ್ದಾರೆ.