Karnataka Politics ಸರ್ವ ಪಕ್ಷಗಳ ಸಭೆ ಕರೆದ ಸಿಎಂ, ಕಾಂಗ್ರೆಸ್ ತಂತ್ರಕ್ಕೆ ಇದು ಪ್ರತಿತಂತ್ರನಾ?
* ಕಾಂಗ್ರೆಸ್-ಬಿಜೆಪಿ ನಡುವೆ ಮೇಕೆದಾಟು ಯೋಜನೆ ರಾಜಕೀಯ ಕಿತ್ತಾಟ
* ಸರ್ವ ಪಕ್ಷಗಳ ಸಭೆ ಕರೆದ ಸಿಎಂ
* ಕಾಂಗ್ರೆಸ್ ತಂತ್ರಕ್ಕೆ ಪ್ರತಿತಂತ್ರ ಹೆಣೆದ್ರಾ ಸಿಎಂ ಬಸವರಾಜ ಬೊಮ್ಮಾಯಿ?
ಬೆಂಗಳೂರು, (ಜ.22): ಕಾಂಗ್ರೆಸ್-ಬಿಜೆಪಿ ನಡುವೆ ಮೇಕೆದಾಟು ಯೋಜನೆ (Mekedatu Project) ಪಾದಯಾತ್ರೆ ಸಂಬಂಧಿಸಿದಂತೆ ರಾಜಕೀಯ ದಾಳ-ಪ್ರತಿದಾಳ ಮುಗಿಯುವ ಲಕ್ಷಣಗಳು ಕಾಣುಸುತ್ತಿಲ್ಲ. ಕೋವಿಡ್ ಮೂರನೇ ಅಲೆ ಮುಗಿದ ಬಳಿಕ ಕಾಂಗ್ರೆಸ್ ರಾಮನಗರದಿಂದಲೇ (Ramanagara) ಪಾದಯಾತ್ರೆ ಮುಂದುವರಿಸುವುದಾಗಿ ಹೇಳಿದೆ.
ಕಾಂಗ್ರೆಸ್ ಪಾದಯಾತ್ರೆಯನ್ನು (Congress Padayatre) ತಡೆಯಲು ವಿಫಲಗೊಂಡ ಕಾರಣ ಹೈಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಸರ್ಕಾರ ಮತ್ತೊಮ್ಮೆ ಅಂಥ ಸ್ಥಿತಿ ಎದುರಾಗುವುದು ಬೇಡ ಎಂಬ ದೃಷ್ಟಿಯಿಂದ ಒಂದು ಸರ್ವಪಕ್ಷ ಸಭೆ ನಡೆಸಲು ತೀರ್ಮಾನಿಸಿದೆ.
Mekedatu Politics: ಕಾರಜೋಳ ಸುಳ್ಳು ಮಾಹಿತಿ ತೋರಿಸಿ ದಾರಿ ತಪ್ಪಿಸುತ್ತಿದ್ದಾರೆ: ಎಂಬಿಪಾ
ಹೌದು... ಅಂತಾರಾಜ್ಯ ಜಲ ವಿವಾದಗಳಿಗೆ ಸಂಬಂಧಿಸಿದಂತೆ ಕರ್ನಾಟಕದ ಮುಂದಿನ ನಡೆ ಕುರಿತು ಚರ್ಚೆಸಲು ಸಿಎಂ ಬಸವರಾಜ ಬೊಮ್ಮಾಐಇಅ ವರು ಸರ್ವ ಪಕ್ಷಗಳ ಸಭೆ ಕರೆಯಲು ನಿರ್ಧರಿಸಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವರು, ಕಾನೂನು, ತಾಂತ್ರಿಕ ಪರಿಣತರು ಹಾಗೂ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕೃಷ್ಣಾ, ಕಾವೇರಿ, ಮಹದಾಯಿ ಜಲ ವಿವಾದಗಳು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣಾ ಹಂತದಲ್ಲಿವೆ. ಈ ಬಗ್ಗೆ ಚರ್ಚೆಸಲು ಫೆಬ್ರವರಿ ಮೊದಲ ವಾರ ಸರ್ವಪಕ್ಷಗಳ ಸಭೆ ಕರೆಯಲು ತೀರ್ಮಾನಿಸಿರುವೆ ಎಂದು ಸ್ಪಷ್ಟಪಡಿಸಿದರು.
ಮೇಕೆದಾಟು ವ್ಯಾಜ್ಯವು ಫೆ.14ಕ್ಕೆ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಗೆ ಬರಲಿದ್ದು, ಅಷ್ಟರೊಳಗೆ ಮತ್ತೊಂದು ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ರಾಜ್ಯದ ಹಿತದೃಷ್ಟಿಯಿಂದ ನಾವೆಲ್ಲಾ ಒಟ್ಟಾಗಿ ಹೋರಾಡಬೇಕು, ಹಿಂದೆ ನಾವು ವಿರೋಧ ಪಕ್ಷದಲ್ಲಿದ್ದಾಗ ನಾಡಿನ ಜಲ, ನೆಲ ಮತ್ತು ಇನ್ನುಳಿದ ಹೋರಾಟಗಳಲ್ಲಿ ಸರ್ಕಾರದ ಜೊತೆ ನಿಂತಿದ್ದೇವೆ. ಈಗ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರ ಸರದಿ. ನಾವು ಅವರ ಸಹಕಾರ ಕೋರುತ್ತೇವೆ. ಅಂತಾರಾಜ್ಯ ಜಲ ವಿವಾದಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಲು ಸರ್ವಪಕ್ಷಗಳ ಸಭೆ ಕರೆದಿದ್ದೇನೆ ಎಂದರು.
ನಾವು ಹೇಗೆ ಮುಂದುವರಿಯಬೇಕು, ನಮಗಿರುವ ತೊಡಕುಗಳನ್ನು ಹೇಗೆ ನಿವಾರಿಸಿಕೊಳ್ಳಬೇಕು ಅಂತ ವಿರೋಧ ಪಕ್ಷದ ಸಲಹೆ ಸೂಚನೆಗಳನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಫೆಬ್ರವರಿ ಮೊದಲ ವಾರದಲ್ಲಿ ಸರ್ವಪಕ್ಷ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಬೊಮ್ಮಾಯಿ ಹೇಳಿದರು.
ಅಂತಾರಾಜ್ಯ ಜಲವಿವಾದಗಳ ಬಗ್ಗೆ ಎಲ್ಲ ಹಿರಿಯ ನ್ಯಾಯವಾದಿಗಳು, ಸಚಿವರ ಜೊತೆ ಚರ್ಚೆ ನಡೆಸಿದ್ದೇನೆ. ಸಭೆಯಲ್ಲಿ ಕೃಷ್ಣಾ, ಮಹಾದಾಯಿ ಯೋಜನೆಗಳ ಬಗ್ಗೆ ಚರ್ಚೆಯಾಗಿದೆ. ನ್ಯಾಯವಾದಿಗಳು ಹಲವಾರು ಕೇಸ್ಗಳ ಬಗ್ಗೆ ತಿಳಿಸಿದ್ದಾರೆ. ಎಲ್ಲ ಜಲವಿವಾದಗಳಿಗೆ ಸಂಬಂಧಿಸಿದಂತೆ ಜನವರಿ ಕೊನೆವಾರದಲ್ಲಿ ಮತ್ತೊಂದು ಸಭೆ ನಡೆಸುತ್ತೇವೆ,’ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಸಭೆಯ ಬಳಿಕ ಜಲಸಂಪನ್ಮೂಲ ಸಚಿವ ಕಾರಜೋಳ ಮಾಧ್ಯಮದವರೊಂದಿಗೆ ಮಾತಾಡಿ ಸಭೆಯಲ್ಲಿ ಮುಖ್ಯಮಂತ್ರಿಗಳು ಕೆಲ ಸಲಹೆ ಸೂಚನೆಗಳನ್ನ ನೀಡಿದರು ಎಂದು ಹೇಳಿದರು. ಸುಪ್ರೀಂಕೋರ್ಟ್ನಲ್ಲಿ ರಾಜ್ಯಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಕೇಸ್ಗಳನ್ನು ಆದಷ್ಟು ಬೇಗ ಇತ್ಯರ್ಥ ಮಾಡಿಕೊಳ್ಳುವ ಬಗ್ಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದ ಗೋವಿಂದ ಕಾರಜೋಳ, ಸರ್ವೋಚ್ಛ ನ್ಯಾಯಾಲಯದಲ್ಲಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಕಾನೂನು ತಂಡದ ಜತೆ ಸಿಎಂ ಬಸವರಾಜ ಬೊಮ್ಮಾಯಿ ಚರ್ಚೆ ನಡೆಸಿದ್ದಾರೆ ಎಂದು ತಿಳಿಸಿದರು.
‘ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಎಲ್ಲ ವಿವರಗಳನ್ನು ಮುಖ್ಯಮಂತ್ರಿಗಳು ಪಡೆದಿದ್ದಾರೆ. ಫೆ.14ರಂದು ಮತ್ತೆ ಸುಪ್ರೀಂಕೋರ್ಟಿನಲ್ಲಿ ಪ್ರಕರಣದ ವಿಚಾರಣೆ ಇದ್ದು ಆದಕ್ಕೂ ಮುನ್ನ ಮುಖ್ಯಮಂತ್ರಿ ಬೊಮ್ಮಾಯಿ ಮತ್ತೊಮ್ಮೆ ಸಭೆ ನಡೆಸಲಿದ್ದಾರೆ ಎಂದು ಕಾರಜೋಳ ಹೇಳಿದರು. ಮಹದಾಯಿ ಯೋಜನೆ ಪ್ರಕರಣ ಸಹ ಇನ್ನೂ ಇತ್ಯರ್ಥಗೊಂಡಿಲ್ಲ ಅಂತಿಮ ವಿಚಾರಣೆ ಬಾಕಿ ಇದೆ,’ ಅಂತ ಸಚಿವ ಕಾರಜೋಳ ಹೇಳಿದರು.
ಏತನ್ಮಧ್ಯೆ, ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯಿಸಿ, ಪಾದಯಾತ್ರೆ ನಿಲ್ಲಿಸಲೆಂದೇ ಸರ್ಕಾರ ವಾರಾಂತ್ಯದ ಕರ್ಫ್ಯೂ ಘೋಷಿಸಿತ್ತು. ವೀಕೆಂಡ್ ಕರ್ಫ್ಯೂ ಜಾರಿಮಾಡಿದ್ದರ ಹಿಂದೆ ಪಾದಯಾತ್ರೆಯನ್ನು ತಡೆಯುವ ದುರುದ್ದೇಶ ಬಿಟ್ಟರೆ ಬೇರೇನೂ ಇರಲಿಲ್ಲ, ಮೇಕೆದಾಟು ಯೋಜನೆ ಆದಷ್ಟು ಬೇಗ ಜಾರಿಯಾಗಬೇಕು ಎಂದು ನಮ್ಮ ಪಕ್ಷ ಬಯಸುತ್ತದೆ ಎಂದರು.