ಬೊಮ್ಮಾಯಿ ಶ್ರೀರಾಮ, ಕಲಿಯುಗದ ಬಸವಣ್ಣ! ರಾಮುಲು ಹೊಗಳಿಕೆ ಗುಲಾಮನಾಗಿರ್ತೀನಿ ಎಂದು ರಾಜುಗೌಡ ಸಾಷ್ಟಾಂಗ ನಮಸ್ಕಾರ

ಬೆಂಗಳೂರು (ಅ.10) : ಪರಿಶಿಷ್ಟಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ಹೆಚ್ಚಳ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೊಗಳಿಕೆಯ ಮಹಾಪೂರವೇ ಹರಿದುಬಂದಿದೆ. ಭಾನುವಾರ ವಿಧಾನಸೌಧದ ಮುಂಭಾಗ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ವೇದಿಕೆ ಇದಕ್ಕೆ ಸಾಕ್ಷಿಯಾಯಿತು. ಆದರೆ ಹೊಗಳಿಕೆಯನ್ನು ಸ್ವೀಕರಿಸದ ಬಸವರಾಜ ಬೊಮ್ಮಾಯಿಯವರು ಮೀಸಲಾತಿ ವಿಚಾರದಲ್ಲಿ ವಾಲ್ಮೀಕಿ ಸಮುದಾಯವನ್ನು ದಾರಿತಪ್ಪಿಸುವ ಕೆಲಸವಾಗುತ್ತಿದ್ದು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.

SC ST ಮೀಸಲಾತಿ ಹೆಚ್ಚಳ: ಬಿಜೆಪಿಗೆ ಸಿಗುತ್ತಾ ಒಂದೂವರೆ ಕೋಟಿಯ ಜಾಕ್‌ಪಾಟ್?

ಮೊದಲು ಮಾತನಾಡಿದ ಸಾರಿಗೆ ಸಚಿವ ಬಿ.ಶ್ರೀರಾಮುಲು, ದ್ವಾಪರಯುಗದಲ್ಲಿ ಶ್ರೀರಾಮಚಂದ್ರ ಸತ್ಯ, ನಿಷ್ಠೆಗೆ ಹೆಸರಾಗಿದ್ದರು. ನಮ್ಮ ಬಸವರಾಜ ಬೊಮ್ಮಾಯಿ ಅವರು ಕಲಿಯುಗದ ಶ್ರೀರಾಮಚಂದ್ರನಂತೆ ಸತ್ಯವಂತರು. ಮೀಸಲಾತಿ ನೀಡುವ ಮೂಲಕ ದಲಿತ ಸಮುದಾಯಕ್ಕೆ ನ್ಯಾಯ ನೀಡಿದ್ದಾರೆ. ಮುಖ್ಯಮಂತ್ರಿಗಳು ನೀತಿ, ಧರ್ಮ ಪಾಲಿಸುತ್ತಾರೆ. ಕಾಯಕವೇ ಕೈಲಾಸ ಎಂಬಂತೆ ಬಸವಣ್ಣನ ತತ್ವವನ್ನು ಅನುಸರಿಸುತ್ತಾರೆ. ಬೊಮ್ಮಾಯಿ ಕಲಿಯುಗದ ಬಸವಣ್ಣ ಎಂದು ಪ್ರಶಂಸಿಸಿದರು.

ನಾವು ಎಷ್ಟುದಿನ ಬದುಕಿರುತ್ತೇವೆಯೋ ಅಷ್ಟುದಿನ ಮೀಸಲಾತಿ ನೀಡಿದ್ದನ್ನು ಮರೆಯುವುದಿಲ್ಲ. ಅನೇಕ ಜಯಂತ್ಯುತ್ಸವಗಳನ್ನು ನೋಡಿದ್ದೇವೆ. ಆದರೆ ಇದು ಸುವರ್ಣ ಅಕ್ಷರಗಳಲ್ಲಿ ಬರೆದಿಡುವ ದಿನವಾಗಿದೆ. ಮೀಸಲಾತಿ ನೀಡುವುದಾಗಿ ಹೇಳಿದ್ದ ಬೊಮ್ಮಾಯಿಯವರು ನುಡಿದಂತೆ ನಡೆದಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ವಾಲ್ಮೀಕಿ ಜಯಂತಿ ಘೋಷಣೆ ಮಾಡಿದರು. ಇದೀಗ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ಹೆಚ್ಚಳ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಷ್ಟಾಂಗ ನಮಸ್ಕಾರ:

ಶಾಸಕ ರಾಜುಗೌಡ ಅವರು ಮೀಸಲಾತಿ ಹೆಚ್ಚಳ ಮಾಡಿದ್ದಕ್ಕಾಗಿ ವೇದಿಕೆಯಲ್ಲೇ ಸಾಷ್ಟಾಂಗ ನಮಸ್ಕಾರ ಮಾಡಿ ಕೈಮುಗಿದು ಕೃತಜ್ಞತೆ ಸಲ್ಲಿಸಿ ಮಾತನಾಡಿ, ಬಸವರಾಜ ಬೊಮ್ಮಾಯಿ ಅವರು ಶ್ರೀರಾಮನ ಅವತಾರವಾಗಿದ್ದಾರೆ. ಜಾತಿ ಜೇನುಗೂಡಿಗೆ ಕೈಹಾಕಿ ನಮಗೆ ಜೇನು ನೀಡಿ ಅವರು ಜೇನುನೊಣಗಳಿಂದ ಕಚ್ಚಿಸಿಕೊಳ್ಳುತ್ತಿದ್ದಾರೆ. ಹೊಸ ಇತಿಹಾಸ ನಿರ್ಮಿಸಿ ಗಂಡುಗಲಿಯಾಗಿದ್ದಾರೆ. ನಾವು ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡೋಣ. ಅವರ ಗುಲಾಮರಾಗಿ ಇರೋಣ ಎಂದು ಕರೆ ನೀಡಿದರು.

ರಾಮನ ಧೂಳಿಗೂ ನಾನು ಸಮನಲ್ಲ: ಬೊಮ್ಮಾಯಿ

ಸಚಿವ ಶ್ರೀರಾಮುಲು ಮತ್ತು ಶಾಸಕ ರಾಜುಗೌಡ ಅವರು ತಮ್ಮನ್ನು ಹೊಗಳಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಶ್ರೀರಾಮುಲು ನನ್ನನ್ನು ರಾಮನಿಗೆ ಹೋಲಿಸಿದ್ದಾರೆ. ಆದರೆ ರಾಮನ ಧೂಳಿಗೂ ನಾನು ಸಮನಲ್ಲ. ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವುದೇ ರಾಮರಾಜ್ಯ. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಸ್ಪಷ್ಟಪಡಿಸಿದರು.

ರಾಜುಗೌಡ ಅವರು ನನಗೆ ಮತ್ತು ಬಿಜೆಪಿಗೆ ಗುಲಾಮರಾಗಿರೋಣ ಎಂದು ಹೇಳಿದ್ದಾರೆ. ವಾಲ್ಮೀಕಿ ಸಮುದಾಯದವರು ಶೂರರು, ಸಾಹಸಕ್ಕೆ ಹೆಸರಾದವರು. ನೀವು ಯಾರಿಗೂ ಗುಲಾಮರಾಗಿ ಇರುವುದು ಬೇಡ. ಮೀಸಲಾತಿ ವಿಚಾರದಲ್ಲಿ ಸಮುದಾಯವನ್ನು ದಾರಿತಪ್ಪಿಸುವ ಕೆಲಸ ಆಗುತ್ತಿದ್ದು ವಾಸ್ತವ ಅರಿಯಿರಿ. ಮುಂದಿನ ದಿನಗಳಲ್ಲಿ ಸರ್ಕಾರದ ನಿರ್ಧಾರಗಳಿಗೆ ಬೆಂಬಲ ನೀಡಿ ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರವಿದ್ದಾಗ ಮೀಸಲಾತಿ ಹೆಚ್ಚಳ ಮಾಡಬಹುದಿತ್ತು. ಆದರೆ ಮಾಡಲಿಲ್ಲ. ಅಹಿಂದ ನಾಯಕ ಎಂದು ಹೇಳಿಕೊಂಡವರು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿಲ್ಲ. ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳ ಮಾಡುತ್ತದೆ ಎಂದು ನಾನು ಹೇಳಿಕೆ ನೀಡಿದಾಗ ಸಾಮಾಜಿಕ ಜಾಲತಾಣಗಳಲ್ಲಿ ನನ್ನನ್ನು ಗೇಲಿ ಮಾಡಿದರು ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸಿದರು.

ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿಯವರ ಶಾಂತಿಯುತ ಧರಣಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಇಚ್ಛಾಶಕ್ತಿಯಿಂದಾಗಿ ಮೀಸಲಾತಿ ದೊರೆತಿದೆ. ಇದನ್ನು ನಾವು ಯಾವತ್ತೂ ಮರೆಯುವುದಿಲ್ಲ ಎಂದು ಭರವಸೆ ನೀಡಿದರು.

ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ಐತಿಹಾಸಿಕ ನಿರ್ಧಾರ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಸ್ವಾಮೀಜಿಗಳು 242 ದಿವಸ ಶಾಂತಿಯುತ ಧರಣಿ ನಡೆಸಿದರು. ಸ್ವಾಮೀಜಿಗಳು ಧರಣಿಗೆ ಕೂತಿದ್ದರಿಂದ ನಾವು ವಿಧಾನಸೌಧದಲ್ಲಿ ಹುಚ್ಚುಹುಚ್ಚಾಗಿ ಮಾತನಾಡಿದೆವು. ಆದರೆ ‘ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ನೀಡುತ್ತಾರೆ. ಭಯ ಬೇಡ’ ಎಂದು ಸ್ವಾಮೀಜಿಗಳು ಹೇಳಿದ್ದರು. ಅದು ನಿಜವಾಗಿದೆ. ಕೆಲವರು ಜಾತಿಗಳನ್ನು ಹೆಚ್ಚಳ ಮಾಡಿದರೆ ವಿನಃ ಮೀಸಲಾತಿ ನೀಡಲಿಲ್ಲ. 77 ವರ್ಷದ ಇತಿಹಾಸದಲ್ಲೇ ಮೀಸಲಾತಿ ಹೆಚ್ಚಿಸಿದ ಕೀರ್ತಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.