ಯಾರು ಬೇಕಾದರೂ ಕಂಬಳಿ ಹಾಕಿಕೊಂಡರೆ ಅದಕ್ಕೆ ಯೋಗ್ಯತೆ ಬರುವುದಿಲ್ಲ ಹಾಲು ಮತ ಸಮಾಜವನ್ನು ಸರಿಯಾದ ರೀತಿ ಅಭಿವೃದ್ಧಿ ಮಾಡಿದವರಿಗೆ ಮಾತ್ರ ಆ ಯೋಗ್ಯತೆ ಬರುತ್ತದೆ

 ವಿಜಯಪುರ (ಅ.25): ಯಾರು ಬೇಕಾದರೂ ಕಂಬಳಿ ಹಾಕಿಕೊಂಡರೆ ಅದಕ್ಕೆ ಯೋಗ್ಯತೆ ಬರುವುದಿಲ್ಲ. ಹಾಲು ಮತ ಸಮಾಜವನ್ನು ಸರಿಯಾದ ರೀತಿ ಅಭಿವೃದ್ಧಿ ಮಾಡಿದವರಿಗೆ ಮಾತ್ರ ಆ ಯೋಗ್ಯತೆ ಬರುತ್ತದೆ ಎಂದು ಹೇಳುವ ಮೂಲಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಟಾಂಗ್‌ ನೀಡಿದ್ದಾರೆ.

ಸಿಂದಗಿಯಲ್ಲಿ (Sindagi) ಭಾನುವಾರ ಹೆಗಲ ಮೇಲೆ ಕಂಬಳಿ ಹೊದ್ದುಕೊಂಡೇ ಪ್ರಚಾರ ನಡೆಸಿದ ಅವರು ಜನಮನ ಸೆಳೆಯುವ ಪ್ರಯತ್ನ ನಡೆಸಿದರು. ಉಣ್ಣೆಯಿಂದ ನೇಯ್ದ ಕಂಬಳಿ (Blanket) ತಯಾರಿಕೆಯಲ್ಲಿ ಹಾಲು ಮತದವರ ಗೌರವ ಮತ್ತು ಪರಿಶ್ರಮ ಎರಡೂ ಅಡಗಿದೆ. ಈ ಕಂಬಳಿ ಹೊದ್ದುಕೊಳ್ಳಲೂ ಒಂದು ಯೋಗ್ಯತೆ ಇರಬೇಕು. ಯಾರು ಹಾಲು ಮತ ಸಮಾಜದ ಅಭಿವೃದ್ಧಿ ಮಾಡುತ್ತಾರೋ ಅವರಿಗೆ ಆ ಯೋಗ್ಯತೆ ದೊರೆಯುತ್ತದೆ. ಯಾವುದೇ ಸಮಾಜದ ಮತ ಸೆಳೆಯಲು ನಾನು ಕಂಬಳಿ ಹೊದ್ದುಕೊಂಡಿಲ್ಲ. ತಂದೆ ಕಾಲದಿಂದಲೂ ನನಗೆ ಕಂಬಳಿ ಜೊತೆಗೆ ಭಾವನಾತ್ಮಕ ಸಂಬಂಧ ಇದೆ ಎಂದರು.

'ಬೈ' ಅಖಾಡಕ್ಕೆ ಬಿಎಸ್‌ವೈ, ಬದಲಾಯ್ತು ಲೆಕ್ಕಾಚಾರ, ಸಿದ್ದು ಸವಾಲ್‌ಗೆ ಸೈ ಎಂದ ಸಿಎಂ.!

ಇದೇ ವೇಳೆ, ಹಾಲುಮತ ಸಮಾಜದ ಸ್ಥಿತಿ ಹಿಂದೆ ಹೇಗಿತ್ತೋ ಇಂದಿಗೂ ಅದೇ ಸ್ಥಿತಿ ಇದೆ. ಸಣ್ಣ, ಸಣ್ಣ ಕಸುಬುಗಳನ್ನು ಮಾಡುವವರ ಬದುಕಿನಲ್ಲೂ ಯಾವುದೇ ಬದಲಾವಣೆ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ದಾಸಶ್ರೇಷ್ಠರಾದ ಕನಕದಾಸರ (Kanakadasa) ಜನ್ಮಸ್ಥಳ ಬಾಡ ಕುಗ್ರಾಮವಾಗಿತ್ತು. ನಾನು ಯೋಜನೆ ರೂಪಿಸಿ ಆ ಗ್ರಾಮವನ್ನು ಅಭಿವೃದ್ಧಿಪಡಿಸಿದ್ದೇನೆ. ಅದೇ ರೀತಿ ಕನಕದಾಸರ ಕರ್ಮಭೂಮಿ ಕಾಗಿನೆಲೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಪಡಿಸಿದ್ದು ಬಿಜೆಪಿ (BJP) ಕಾಲಾವಧಿಯಲ್ಲಿ ಎಂದು ತಿಳಿಸಿದರು.

ಶುದ್ಧ ಕುಡಿಯುವ ನೀರು (Drinking water), ಸೂರು ನೀಡುವ ವಿಚಾರದಲ್ಲಿ ಕಾಂಗ್ರೆಸ್‌ (Congress) ಅಧಿಕಾರದಲ್ಲಿದ್ದಾಗ ಏನೂ ಮಾಡಿಲ್ಲ. ಕಾಂಗ್ರೆಸ್ಸಿಗರು ಹತಾಶರಾಗಿದ್ದಾರೆ. ಮಾತನಾಡಲು ಏನೂ ಇಲ್ಲದೆ ಏನೂ ಇಲ್ಲದೆ ಆರೋಪ ಮಾಡುತ್ತಾರೆ ಎಂದರು.

ಸಿಎಂ ಟೆಂಪಲ್‌ ರನ್‌:

ಪ್ರಚಾರದ ನಡುವೆಯೂ ಮುಖ್ಯಮಂತ್ರಿ ಬೊಮ್ಮಾಯಿ ಅವರು ಟೆಂಪಲ್‌ ರನ್‌ ಮುಂದುವರಿಸಿದರು. ಕೋರವಾರ ಗ್ರಾಮದಲ್ಲಿ ಮಾರುತೇಶ್ವರ ದೇವಸ್ಥಾನ ಸೇರಿದಂತೆ ಹಲವು ದೇವರ ದರ್ಶನ ಪಡೆದರು.

ಛತ್ರಿ ನಿರಾಕರಿಸಿ ಬಿಸಿಲಲ್ಲೇ ಪ್ರಚಾರ

ಸಿಂದಗಿಯಲ್ಲಿ ಬಿರುಬಿಸಿಲನ್ನೂ ಲೆಕ್ಕಿಸದೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಪ್ರಚಾರ ನಡೆಸಿದ್ದು ವಿಶೇಷವಾಗಿತ್ತು. ಗಬ್ಬೇವಾಡ ಗ್ರಾಮದಲ್ಲಿ ಪ್ರಚಾರ ಭಾಷಣ ವೇಳೆ ಬಿಜೆಪಿ ಕಾರ್ಯಕರ್ತನೊಬ್ಬ ಸಿಎಂಗೆ ಛತ್ರಿ ತಂದರು. ಆಗ ಬೊಮ್ಮಾಯಿ ನೀವು ಎಲ್ಲರೂ ಬಿಸಿಲಲ್ಲಿ ನಿಂತಿದ್ದೀರಿ, ನಾನು ಛತ್ರಿಅಡಿ ನಿಲ್ಲಬೇಕಾ? ನನಗೆ ತಲೆಯಲ್ಲಿ ಕೂದಲು ಇಲ್ಲದಿದ್ದರೂ ಗಟ್ಟಿಯಾಗಿದ್ದೀನಿ, ಏನು ಆಗಲ್ಲ ಎಂದು ನಸುನಕ್ಕರು.