Cabinet Expansion: ಹೈಕಮಾಂಡ್‌ನತ್ತ ಬೊಟ್ಟು ಮಾಡಿದ ಸಿಎಂ: ಸಚಿವಾಕಾಂಕ್ಷಿಗಳಲ್ಲಿ ಹೆಚ್ಚಿದ ಟೆನ್ಷನ್..!

*  ಬೆಳಗಾವಿ ಜಿಲ್ಲೆಗೆ ಸಚಿವ ಸ್ಥಾನ ನೀಡೋ ಬಗ್ಗೆ ಸಿಎಂ ಹೇಳಿದ್ದೇನು ಗೊತ್ತಾ?
*  ಜಗನ್ನಾಥರಾವ್ ಜೋಶಿ ಜನ್ಮಶತಾಬ್ದಿ ಸ್ಮಾರಕ ಭವನ ಭೂಮಿ ಪೂಜೆ
*  ಸಿಎಂ ಭೇಟಿಗೂ ಮುನ್ನ ಆರ್‌ಎಸ್ಎಸ್ ಕಚೇರಿಗೆ ಭೇಟಿ ನೀಡಿ ತೆರಳಿದ ಗೋಕಾಕ್ ಸಾಹುಕಾರ್
 

CM Basavaraj Bommai Talks Over Karnataka Cabinet Expansion grg

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ(ಏ.29):  ಕುಂದಾನಗರಿ ಬೆಳಗಾವಿಗೆ ನಿನ್ನೆ(ಗುರುವಾರ) ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಭೇಟಿ ನೀಡಿದ್ದರು. ಆರ್‌ಎಸ್ಎಸ್ ಕಚೇರಿಯಲ್ಲಿ ಆಯೋಜಿಸಿದ್ದ ಜಗನ್ನಾಥ ರಾವ್ ಜೋಶಿ ಜನ್ಮಶತಾಬ್ದಿ ಸ್ಮಾರಕ ಭವನ ನಿರ್ಮಾಣದ ಭೂಮಿ ಪೂಜೆ ನೇರವೇರಿಸಿದ್ರು. ಆದ್ರೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ತುಟಿಬಿಚ್ಚದ ಸಿಎಂ ಹೈಕಮಾಂಡ್‌ನತ್ತ ಬೊಟ್ಟು ಮಾಡಿ ಜಾರಿಕೊಂಡಿದ್ದಾರೆ. ಇಂದು(ಶುಕ್ರವಾರ) ರಾತ್ರಿ ಸಿಎಂ ದೆಹಲಿಗೆ ತೆರಳುತ್ತಿದ್ದು ಇತ್ತ ಸಚಿವಾಕಾಂಕ್ಷಿಗಳಿಗೆ ಢವಢವ ಶುರುವಾಗಿದೆ.

ಬೆಳಗಾವಿಯ(Belagavi) ಆರ್‌ಎಸ್ಎಸ್(RSS) ಕಚೇರಿ ಬಳಿ ಜನಕಲ್ಯಾಣ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಜಗನ್ನಾಥ ರಾವ್ ಜೋಶಿ ಜನ್ಮಶತಾಬ್ದಿ ಸ್ಮಾರಕ ಭವನ ನಿರ್ಮಾಣದ ಭೂಮಿ ಪೂಜೆ ನೇರವೇರಿಸಿದರು. ಇದಕ್ಕೂ ಮುನ್ನ ಬೆಳಗಾವಿಯ ನ್ಯೂ ಸರ್ಕ್ಯೂಟ್ ಹೌಸ್‌ನಲ್ಲಿ ವಿವಿಧ ಸಂಘ ಸಂಸ್ಥೆಗಳು, ರೈತ ಸಂಘಟನೆಗಳ ಮನವಿ ಸ್ವೀಕರಿಸಿದರು‌. ರಾಗಿ, ಜೋಳದ ಖರೀದಿ ಕೇಂದ್ರ ತೆರೆಯುವಂತೆ ರೈತ ಮುಖಂಡರು ಸಿಎಂ ಬಳಿ ಮನವಿ ಮಾಡಿದರು. ಮತ್ತೊಂದೆಡೆ ಹಲಗಾ-ಮಚ್ಚೆ ಬೈಪಾಸ್ ರಸ್ತೆ ಕಾಮಗಾರಿ ನಿಲ್ಲಿಸುವಂತೆ ಹಲಗಾ ಮಚ್ಛೆ ಭಾಗದ ರೈತರು ಮನವಿ ಮಾಡಿದರು. ಅಭಿವೃದ್ಧಿ ದೃಷ್ಟಿಯಿಂದ ಕಾಮಗಾರಿ ನಿಲ್ಲಿಸಲು ಆಗಲ್ಲಾ. ಅದಕ್ಕೆ ಬೇಕಾದ ಪರ್ಯಾಯ ವ್ಯವಸ್ಥೆ ಮಾಡೋಣ' ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು‌. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಬೆಳಗಾವಿಯ ಶಾಸಕರಿಗೆ ಸ್ಥಾನಮಾನ ವಿಚಾರವಾಗಿ ಪ್ರತಿಕ್ರಿಯಿಸಿ, 'ಬೆಳಗಾವಿ ವಿಸ್ತೃತ ಜಿಲ್ಲೆ, ದೊಡ್ಡ ಜಿಲ್ಲೆ, ಸಂಪುಟ ವಿಸ್ತರಣೆ(Cabinet Expansion) ಬಗ್ಗೆ ಇನ್ನೂ ಚರ್ಚೆ ಆಗಿಲ್ಲ. ದೆಹಲಿಗೆ ಹೋಗುತ್ತಿದ್ದೇನೆ. ಚೀಫ್ ಜಸ್ಟಿಸ್ ‌ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡು ಕೂಡಲೇ ವಾಪಸ್ ಬರ್ತಿನಿ ಯಾವತ್ತು ಹೈಕಮಾಂಡ್ ಚರ್ಚೆ ಮಾಡ್ತದೆ, ಏನ್ ಚರ್ಚೆ ಆಗುತ್ತೆ ನಿರ್ಣಯ ಆದ ತಕ್ಷಣ ತಮಗೆಲ್ಲ ಮಾಹಿತಿ ಒದಗಿಸುವೆ ಎಂದರು. 

ಸಚಿವ ಸಂಪುಟ ವಿಸ್ತರಣೆಗೆ ವರಿಷ್ಠರು ಇನ್ನೂ ಕರೆದಿಲ್ಲ: ಸಿಎಂ ಬೊಮ್ಮಾಯಿ

ಇನ್ನು 4 ವಾರದಲ್ಲಿ ಬೇಡಿಕೆ ಈಡೇರದಿದ್ರೆ ಮತ್ತೆ ಪ್ರತಿಭಟನೆ ಬಗ್ಗೆ ಸಾರಿಗೆ(NWKRTC) ನೌಕರರ ಎಚ್ಚರಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಇದನ್ನು ಸಾರಿಗೆ ಸಚಿವರು ನೋಡಿಕೊಳ್ಳುತ್ತಾರೆ ಎಂದರು. ಇನ್ನು ಬೆಳಗಾವಿ ‌ವಿಮಾನ ನಿಲ್ದಾಣಕ್ಕೆ ರಾಣಿ ಚನ್ನಮ್ಮ ಹೆಸರಿಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, 'ಇಲ್ಲಿಯ ಎಲ್ಲಾ ನಾಯಕರ ಜೊತೆಗೆ ಚರ್ಚೆ ಮಾಡಿ ತೀರ್ಮಾ‌ನ ಮಾಡೋದಾಗಿ ತಿಳಿಸಿದರು. 

ಬೆಳಗಾವಿ ಜಿಲ್ಲೆ ವಿಭಜನೆ ವಿಚಾರವಾಗಿ ಪ್ರತಿಕ್ರಿಯಿಸಿ, 'ಇನ್ನು ಯಾವುದೇ ನಿರ್ಣಯ ಮಾಡಿಲ್ಲ. ಬೆಳಗಾವಿ ವಿಭಜನೆ ಬಗ್ಗೆ ಅನೇಕ ವರ್ಷಗಳಿಂದ ಚರ್ಚೆ ನಡೀತಿದೆ. ಎರಡು, ಮೂರು ಜಿಲ್ಲೆಗಳ ಬಗ್ಗೆ ಪ್ರಸ್ತಾಪ ಇದೆ. ಗಡಿ ಭಾಗದ ಜಿಲ್ಲೆ ಇದ್ದು ಬೇಡ ಎಂದು ಜೆ.ಎಚ್.ಪಟೇಲ್ ಇದ್ದಾಗ ಹೇಳಿದ್ದರು. ಈಗ ಮತ್ತೆ ಜನರ ಒತ್ತಾಸೆಯನ್ನು ವ್ಯಕ್ತಪಡಿಸಿದ್ದಾರೆ. ಕರ್ನಾಟಕ, ಜಿಲ್ಲೆ ಹಿತದೃಷ್ಟಿಯಿಂದ ಈ ಬಗ್ಗೆ ‌ನಾವು ತೀರ್ಮಾನ ಮಾಡುತ್ತೇವೆ' ಎಂದರು.

ಜಗನ್ನಾಥರಾವ್ ಜೋಶಿ ಜೊತೆಗಿನ ಒಡನಾಟ ನೆನೆದ ಬೊ‌ಮ್ಮಾಯಿ

ಇನ್ನು ಬೆಳಗಾವಿಯ ಶಾಸ್ತ್ರೀ ನಗರದಲ್ಲಿರುವ ಆರ್‌ಎಸ್‌ಎಸ್ ಕಚೇರಿ ಸಂಘ ಸದನ ಬಳಿ ನಿರ್ಮಾಣವಾಗುತ್ತಿರುವ ಜಗನ್ನಾಥರಾವ್ ಜೋಶಿ ಜನ್ಮಶತಾಬ್ದಿ ಸ್ಮಾರಕ ಭವನದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ 'ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನನ್ನ ಪುಣ್ಯ. ಇಲ್ಲಿ ನಾನೊಬ್ಬ ಮುಖ್ಯಮಂತ್ರಿಯಾಗಿ ಬಂದಿಲ್ಲ. ಜಗನ್ನಾಥರಾವ್ ಜೋಶಿ ಅವರ ಅಪ್ಪಟ ಅಭಿಮಾನಿಯಾಗಿ ಬಂದಿದ್ದೇನೆ.‌ ದೇಶಭಕ್ತಿಯ ಗಟ್ಟಿತನ ಅವರಲ್ಲಿತ್ತು, ಸರ್ವರಿಗೂ ಪ್ರಿಯರಾಗಿದ್ದರು.‌ ಆರ್‌ಎಸ್ಎಸ್ ಪ್ರಚಾರಕರಾಗಿದ್ದರು, ಅವರಿಂದ ಬಹಳ ಜನ ಪ್ರೇರಣೆ ಪಡೆದಿದ್ದಾರೆ.ಧಾರವಾಡದಲ್ಲಿ ಚುನಾವಣೆ ನಡೆಯುವಾಗ ಅವರ ಜತೆಗೆ ಕೆಲಸ ಮಾಡಲು ಅವಕಾಶ ಸಿಕ್ಕಿತ್ತು. ಅಟಲ್ ಬಿಹಾರಿ ವಾಜಪೇಯಿ ಅವರ ವಾಗ್ಮಿಯ ಕಲೆ ಜಗನ್ನಾಥರಾವ್ ಅವರಲಿತ್ತು.‌ ಜಗನ್ನಾಥರಾವ್ ಅವರು ರಾಜಕಾರಣಿ ಆಗಿರಲಿಲ್ಲ ಹೋರಾಟಗಾರರಾಗಿದ್ರೂ. ಗೋವಾ ವಿಮೋಚನಾ ಚಳುವಳಿಯಲ್ಲಿ(Goa Liberation Movement) ಅವರ ಪಾತ್ರ ದೊಡ್ಡದಿದೆ ಎನ್ನುತ್ತಾ ಜಗನ್ನಾಥರಾವ್ ಅವರೊಂದಿಗಿನ‌ ಒಡನಾಟವನ್ನ ಮೆಲಕು ಹಾಕಿದರು‌‌. ದೇಶ ಭಕ್ತಿ, ಗಟ್ಟಿತನ ಜಗನ್ನಾಥ. ಸರ್ವರಿಗೂ ‌ಪ್ರಿಯರಾಗಿದ್ದರು. ಜಗನ್ನಾಥರಾವ್ ಜೋಶಿರವರ ವಿಚಾರಧಾರೆಗಳನ್ನು ನಾವೆಲ್ಲಾ ಅಳವಡಿಸಿಕೊಳ್ಳಬೇಕು. ಕರ್ನಾಟಕದಲ್ಲಿ ಜನಸಂಘ, ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಪಾತ್ರ ದೊಡ್ಡದಿದೆ. ಅವರೊಬ್ಬರು ಪ್ರೇರಣಾ ಶಕ್ತಿಯಾಗಿದ್ದರು. ಅವತ್ತು ಬದ್ರಬುನಾದಿ ಹಾಕಿದ್ದರಿಂದ ಬಿಜೆಪಿ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ಅವರ ವಿಚಾರಧಾರೆ ಗಳನ್ನು ಕಾರ್ಯರೂಪಕ್ಕೆ ತರಲು ಮತ್ತು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಸ್ಮಾರಕ ಭವನ ವೇದಿಕೆಯಾಗಲಿದೆ' ಎಂದು ತಿಳಿಸಿದರು.

'ಜಗನ್ನಾಥರಾವ್ ಜೋಶಿ ದುಡ್ಡು ಮಾಡಿರಲಿಲ್ಲ, ಜನರನ್ನು ಗಳಿಸಿದ್ದರು'

ಇನ್ನು ಆರ್‌ಎಸ್ಎಸ್‌ನ ಅಖಿಲ ಭಾರತ ವ್ಯವಸ್ಥಾ ಪ್ರಮುಖರಾದ ಮಂಗೇಶ್ ಭೇಂಡೆ ಮಾತನಾಡಿ, 'ಜಗನ್ನಾಥರಾವ್ ಅತ್ಯಂತ ವೈಶಿಷ್ಟ್ಯ ವ್ಯಕ್ತಿ. ವಿಚಾರಧಾರೆಗಾಗಿ ಜೀವನ ನಡೆಸಿದ ವ್ಯಕ್ತಿ. ಹೀಗಾಗಿ ಅವರ ಹೆಸರಿನಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಜಗನ್ನಾಥರಾವ್ ಜೋಶಿ ಆಧುನಿಕ ಋಷಿಮುನಿಗಳಾಗಿದ್ದರು. ಎಲ್ಲ ಕ್ಷೇತ್ರಗಳ ಬಗ್ಗೆ ಜ್ಞಾನ ಹೊಂದಿದ್ದರು. ಜಗನ್ನಾಥರಾವ್ ಅವರಂತೆ ಕಾರ್ಯಕರ್ತರನ್ನು ರೂಪಿಸಲು ಶಿಕ್ಷಣ ಕೇಂದ್ರ ಆರಂಭಿಸಲಾಗುವುದು. ಜಗನ್ನಾಥರಾವ್ ಜೋಶಿ ಲೋಕಸಭಾ ಸದಸ್ಯರಾಗಿದ್ದರೂ ಯಾವತ್ತು ಹೋಟೆಲ್, ಐಬಿಗಳಲ್ಲಿ ವಾಸ್ತವ್ಯ ಮಾಡುತ್ತಿರಲಿಲ್ಲ, ಕಾರ್ಯಕರ್ತರು ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು ಎಂದರು. ಒಮ್ಮೆ ರೇಲ್ವೆ ನಿಲ್ದಾಣಕ್ಕೆ ಅವರನ್ನು ಕರೆದುಕೊಂಡು ಬರಲು ಎರಡು ಕಾರು ತಗೆದುಕೊಂಡು ಹೋಗಿದ್ದಕ್ಕೆ ಕೋಪಗೊಂಡಿದ್ದರು‌. ಆದರೆ, ಇಂದಿನ ರಾಜಕಾರಣಿಗಳಿಗೆ ಹತ್ತು ಕಾರು ಬಾರದಿದ್ದರೆ ಕೋಪಗೊಳ್ಳುತ್ತಾರೆ. ಜಗನ್ನಾಥರಾವ್ ಜೋಶಿ ದುಡ್ಡು ಮಾಡಲಿಲ್ಲ ಆದ್ರೆ ಜನರನ್ನು ಗಳಿಸಿದ್ದರು' ಎಂದು ತಿಳಿಸಿದರು‌. ಸಚಿವರಾದ ಉಮೇಶ ಕತ್ತಿ, ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ, ಜನಕಲ್ಯಾಣ ಟ್ರಸ್ಟ್ ನಿರ್ವಾಹಕ ವಿಶ್ವಸ್ಥರಾದ ಅರವಿಂದರಾವ ದೇಶಪಾಂಡೆ,  ಲಕ್ಷ್ಮಣ ಸವದಿ ಸೇರಿ ಇತರರು ಉಪಸ್ಥಿತರಿದ್ದರು. ಇದೇ ವೇಳೆ ಜಗನ್ನಾಥರಾವ್ ಜೋಶಿ ಜನ್ಮಶತಾಬ್ದಿ ಸ್ಮಾರಕ ಭವನ ನಿರ್ಮಾಣವಾಗುತ್ತಿರುವ ಜಾಗದ ಎರಡು ಎಕರೆ ಜಮೀನನ್ನು ನೀಡಿದ ಕುಲಕರ್ಣಿ ಕುಟುಂಬದ ರೋಹಿಣಿ ಪ್ರಭಾಕರ ಕುಲಕರ್ಣಿ ಅವರಿಗೆ ಸನ್ಮಾನ ಮಾಡಲಾಯಿತು.

ಮುತ್ತಿಡಲು ಹೋದ ಸಿಎಂಗೆ ಹಾಯಲು ಬಂದ ಗೋವು: ಅಪಾಯದಿಂದ ಪಾರಾದ ಬೊಮ್ಮಾಯಿ..!

ಇನ್ನು ಸಿಎಂ ಬೆಳಗಾವಿಗೆ ಬಂದರೂ ಜಾರಕಿಹೊಳಿ ಸಹೋದರರು ಸಿಎಂ ಭೇಟಿಗೆ ಆಗಮಿಸಿರಲಿಲ್ಲ. ಸಿಎಂ ಆಗಮ‌ನಕ್ಕೂ ಮುನ್ನವೇ ಆರ್‌ಎಸ್ಎಸ್ ಕಚೇರಿಗೆ ರಮೇಶ್ ಜಾರಕಿಹೊಳಿ(Ramesh Jarkiholi) ಭೇಟಿ ನೀಡಿ ವಾಪಸ್ ಆಗಿದ್ರು‌. ಇನ್ನು ಪೂರ್ವನಿಯೋಜಿತ ಕಾರ್ಯಕ್ರಮ ಹಿನ್ನೆಲೆ ಬಾಲಚಂದ್ರ ಜಾರಕಿಹೊಳಿ ಸಿಎಂಗೆ ದೂರವಾಣಿ ಕರೆ ಮಾಡಿ ಕಾರ್ಯಕ್ರಮಕ್ಕೆ ಬಾರದಿರುವ ಬಗ್ಗೆ ತಿಳಿಸಿದ್ದರೆಂದು ಜಾರಕಿಹೊಳಿ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ. 

ಒಟ್ಟಿನಲ್ಲಿ ಸಿಎಂ ನಾಳೆ ದೆಹಲಿಗೆ ಹೋಗುತ್ತಿದ್ದು, ಸಿಎಂ ದೆಹಲಿ ಭೇಟಿ ಸಚಿವಾಕಾಂಕ್ಷಿಗಳಲ್ಲಿ ಬೆಟ್ಟದಷ್ಟು ನಿರೀಕ್ಷೆ ಮೂಡಿಸಿದ್ರೆ ಸಿಎಂ ಬಸವರಾಜ ಬೊಮ್ಮಾಯಿ ಮಾತ್ರ ಹೈಕಮಾಂಡ್‌ನತ್ತ(High Command) ಬೊಟ್ಟು ಮಾಡುತ್ತಿದ್ದು ಸಚಿವಾಕಾಂಕ್ಷಿಗಳ ಎದೆಯಲ್ಲಿ ಢವಢವ ಶುರುವಾಗಿದೆ.
 

Latest Videos
Follow Us:
Download App:
  • android
  • ios