ಕಾಂಗ್ರೆಸ್ ವೋಟ್ ಬ್ಯಾಂಕ್ ಡ್ಯಾಂ ಛಿದ್ರ: ಸಿಎಂ ಬೊಮ್ಮಾಯಿ
ಸ್ವಕ್ಷೇತ್ರ ಶಿಗ್ಗಾಂವಿಯಲ್ಲಿ ದಿನವಿಡೀ ಪ್ರಚಾರ ನಡೆಸಿದ ಬೊಮ್ಮಾಯಿ, ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬರುವ ವಿಶ್ವಾಸ.
ಹಾವೇರಿ(ಏ.28): ನಾವು ಮೀಸಲಾತಿ ಹೆಚ್ಚಿಸಿ ಹೊರಡಿಸಿರುವ ಆದೇಶದಿಂದಾಗಿ ಕಾಂಗ್ರೆಸ್ಸಿನ ವೋಟ್ ಬ್ಯಾಂಕ್ ಡ್ಯಾಂ ಛಿದ್ರವಾಗಿದೆ. ನಮ್ಮ ಆದೇಶದಿಂದ ಜನತೆ ಜಾಗೃತರಾಗಿದ್ದು ಕಾಂಗ್ರೆಸ್ಸಿನಿಂದ ದೂರ ಸರಿದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶಿಗ್ಗಾಂವಿ ತಾಲೂಕಿನ ಅಂದಲಗಿ ಗ್ರಾಮದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರ ವೋಟ್ ಬ್ಯಾಂಕ್ ಡ್ಯಾಂ ಒಡೆದಿರುವುದರಿಂದ ವಿಷಯಾಂತರ ಮಾಡಲು ಲಿಂಗಾಯತ ಅಸ್ತ್ರ ಉಪಯೋಗಿಸುತ್ತಿದ್ದಾರೆ. ಈಗ ಹತಾಶರಾಗಿ ಕಾರ್ಯರೂಪಗೊಳಿಸಲು ಅಸಾಧ್ಯವಾದ ಹೇಳಿಕೆ ನೀಡುತ್ತಿದ್ದಾರೆ. ಅವರ ವೋಟ್ ಬ್ಯಾಂಕ್ ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಕೊಟ್ಟಮಾತಿನಂತೆ ನಡೆದುಕೊಂಡಿರುವುದು ಬಿಜೆಪಿ ಹಾಗೂ ಬಸವರಾಜ ಬೊಮ್ಮಾಯಿ. ವಿಶೇಷವಾಗಿ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ, ಲಿಂಗಾಯತ, ಒಕ್ಕಲಿಗ ಸಮುದಾಯದ ವಿಶ್ವಾಸ ನಮ್ಮ ಮೇಲಿದೆ ಎಂದರು.
2ನೇ ದಿನವೂ ಉತ್ತರ ಕರ್ನಾಟಕದಲ್ಲಿ ಸುದೀಪ್ ಪ್ರಚಾರ ಅಬ್ಬರ: ಕಿಚ್ಚನ ನೋಡಲು ಮುಗಿಬಿದ್ದ ಜನ
ಮೀಸಲಾತಿ ಹೆಚ್ಚಳ ಕಾಂಗ್ರೆಸ್ಸಿಗರ ಸ್ಟಂಟ್:
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ಪ್ರಮಾಣವನ್ನು ಶೇ. 75ಕ್ಕೆ ಹೆಚ್ಚಿಸುತ್ತೇವೆ ಎಂಬ ಭರವಸೆ ದೊಡ್ಡ ಹಾಸ್ಯಾಸ್ಪದವಾಗಿದೆ. ಅವರು ಅಧಿಕಾರದಲ್ಲಿದ್ದಾಗ ಎಸ್ಸಿಗೆ ಶೇ. 2ರಷ್ಟು, ಎಸ್ಟಿಗೆ ಶೇ. 4ರಷ್ಟುಮೀಸಲಾತಿ ಹೆಚ್ಚಿಸಲು ಅವರಿಂದ ಸಾಧ್ಯವಾಗಲಿಲ್ಲ. ಇದೊಂದು ಅಪ್ಪಟ ಸುಳ್ಳು. ಚುನಾವಣೆಯಲ್ಲಿ ಗೆಲುವು ಸಾಧಿಸಲು ಸುಳ್ಳು ಹೇಳುತ್ತಿದ್ದಾರೆ. ಇದು ಚುನಾವಣೆಯ ಸ್ಟಂಟ್. ಅವರಿಗೆ ಬದ್ಧತೆ ಇಲ್ಲ, ನೈತಿಕತೆಯೂ ಇಲ್ಲ ಎಂದು ತಿರುಗೇಟು ನೀಡಿದರು.
ಒಮ್ಮೆಯೂ ಗೆಲ್ಲದ ಕಡೆಯೂ ಈ ಸಲ ಜಯ:
ಬೆಂಗಳೂರಿನಿಂದ ಆರಂಭಿಸಿರುವ ಜಯವಾಹಿನಿ ಯಾತ್ರೆ ಮೂಲಕ ಸುಮಾರು 25 ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದೇನೆ. ಎಲ್ಲಾ ಕಡೆಗಳಲ್ಲೂ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಈ ವರೆಗೂ ಒಮ್ಮೆಯೂ ಗೆಲ್ಲದಿರುವ ಕ್ಷೇತ್ರಗಳಲ್ಲಿನ ಜನ ಬೆಂಬಲ ನೋಡಿದರೆ ಅನೇಕ ಕ್ಷೇತ್ರಗಳಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಿ ನಾವು ಹೊಸ ದಾಖಲೆ ಸೃಷ್ಟಿಸುತ್ತೇವೆ ಎಂದರು.
ರಾಜ್ಯದಲ್ಲಿ ಒಂದು ರೀತಿ ಬಿಜೆಪಿ ಸುನಾಮಿ ಎದ್ದಿದೆ. ದಕ್ಷಿಣ ಹಾಗೂ ಉತ್ತರದ ಜಿಲ್ಲೆಗಳಲ್ಲಿ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದೆ. ಜನತೆ ಹೊಸತನ ಬಯಸುತ್ತಾರೆ. ಹೀಗಾಗಿ ನಾವು ಈ ಸಾರಿ ದೊಡ್ಡ ಸಂಖ್ಯೆಯಲ್ಲಿ ಹೊಸಬರಿಗೆ ಅವಕಾಶ ಕೊಟ್ಟಿದ್ದೇವೆ. ಇದು ನಮಗೆ ಫಲ ಕೊಡುತ್ತೆ. ಫಲಿತಾಂಶದಲ್ಲಿ ಸಹಕಾರಿ ಆಗಲಿದ್ದು, ಸಂಪೂರ್ಣ ಬಹುಮತ ಪಡೆದು ಮತ್ತೊಮ್ಮೆ ಸರ್ಕಾರ ರಚಿಸುತ್ತೇವೆ ಎಂದರು.
ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆ
ನನ್ನ ಕ್ಷೇತ್ರದಲ್ಲಿ ಜನ ಬೆಂಬಲ ಅಭೂತಪೂರ್ವವಾಗಿದೆ. ನಾನು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳೇ ನನಗೆ ಶ್ರೀರಕ್ಷೆ. ನಾನು ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಮಾಡಿರುವ ಕೆಲಸದ ಬಗ್ಗೆಯೂ ಕ್ಷೇತ್ರದ ಜನರಿಗೆ ಅಭಿಮಾನ ಇದೆ. ಹೀಗಾಗಿ ಈ ಬಾರಿ ಅತಿ ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ರಾಜ್ಯದಲ್ಲಿ ಮತ್ತು ದೇಶದಲ್ಲಿ ನೆಲೆ ಕಳೆದುಕೊಂಡ ಕಾಂಗ್ರೆಸ್: ಸಚಿವ ಬಿ.ಸಿ.ಪಾಟೀಲ್
ನನ್ನ ಎದುರಾಳಿ ಯಾರೇ ಆದರೂ ಚುನಾವಣೆ ಎದುರಿಸಬೇಕು. ನನ್ನ ಕ್ಷೇತ್ರದ ಜನತೆಯೇ ನನ್ನ ಶಕ್ತಿ. ಜನರ ಬೆಂಬಲದಿಂದಲೇ ಗೆಲ್ಲುತ್ತೇನೆ. ರಾಹುಲ್‌ಗಾಂಧಿ ಎಲ್ಲಿ ಬರುತ್ತಾರೋ ಅಲ್ಲಿ ಕಾಂಗ್ರೆಸ್ಸಿಗೆ ಸೋಲು ಗ್ಯಾರಂಟಿ. ಕಳೆದ ಸಾರಿ ನನ್ನ ಕ್ಷೇತ್ರಕ್ಕೂ ಬಂದಿದ್ದರು. ಅವರು ಎಲ್ಲಿಗೇ ಬಂದರೂ ಸ್ವಾಗತಿಸುತ್ತೇನೆ. ಈ ಬಾರಿ ಜಿಲ್ಲೆಯ 6 ಕ್ಷೇತ್ರಗಳಲ್ಲೂ ನಾವು ಗೆಲುವು ಸಾಧಿಸುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸದರು.
ಸ್ವಕ್ಷೇತ್ರದಲ್ಲಿ ಸಿಎಂ ಚುರುಕಿನ ಪ್ರಚಾರ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ದಿನವಿಡಿ ತವರು ಕ್ಷೇತ್ರದ ಪ್ರಚಾರಕ್ಕೆ ಮೀಸಲಿಟ್ಟಿದ್ದರು. ಬೆಳಗ್ಗೆಯಿಂದ ರಾತ್ರಿವರೆಗೂ ವಿವಿಧ ಗ್ರಾಮಗಳಿಗೆ ತೆರಳಿ, ಮುಖಂಡರು ಮತ್ತು ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡುತ್ತ ಪ್ರಚಾರ ನಡೆಸಿದರು. ಹುಬ್ಬಳ್ಳಿಯಿಂದ ಹೊರಟು ಬೆಳಗ್ಗೆ 10.30ಕ್ಕೆ ತಡಸಕ್ಕೆ ಆಗಮಿಸಿ ಪ್ರಚಾರ ನಡೆಸಿದರು. ಅಲ್ಲಿಂದ ಕುನ್ನೂರ, ದುಂಡಶಿ, ಹೊಸೂರು, ಕೋಣನಕೇರಿ, ಅಂದಲಗಿವರೆಗೂ ಭರ್ಜರಿ ಪ್ರಚಾರ ಕೈಗೊಂಡರು. ಅಲ್ಲಿ ಭೋಜನ ಪೂರೈಸಿ ಹಾನಗಲ್ಲ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಪ್ರಚಾರ ನಡೆಸಿ ಸಂಜೆ 7 ಗಂಟೆಗೆ ಮಹೋಟನಹಳ್ಳಿ, ಗುಡ್ಡದ ಚಿನ್ನಾಪುರ, ಕುಂದೂರು ಗ್ರಾಮದಲ್ಲಿ ಮತಯಾಚಿಸಿದರು. ಅಲ್ಲೆಡೆ ಭರ್ಜರಿ ಸ್ವಾಗತ ದೊರೆಯಿತು.