ಸುಧಾಕರ್‌ 1 ಸವಾಲಿಗೆ ನಲುಗಿದ ಕಾಂಗ್ರೆಸ್‌: ಸಿಎಂ ಬೊಮ್ಮಾಯಿ

ಸುಧಾಕರ್‌ ಅವರು ಕಾಂಗ್ರೆಸ್‌ನಲ್ಲಿ ಶಾಸಕರಾಗಿದ್ದರೇ ಹೊರತು ಸಚಿವರಾಗಿರಲಿಲ್ಲ. ಕಾಂಗ್ರೆಸ್ಸಿಗರು ಮಾಡಿರುವ ಹಗರಣ ಆಗೇನೂ ಅವರಿಗೆ ಗೊತ್ತಿರಲಿಲ್ಲ. ಈಗ ಗೊತ್ತಾಗಿದ್ದರಿಂದ ಹೇಳಿದ್ದಾರೆ. ಸಿಎಜಿ ಸ್ಥಾಪಿತ ಸಂಸ್ಥೆಯಾಗಿದ್ದು, ಅಲ್ಲಿ ಏನು ಹೇಳಿದ್ದಾರೋ ಅದನ್ನೇ ಸುಧಾಕರ್‌ ಹೇಳಿದ್ದಾರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

CM Basavaraj Bommai Slams Congress grg

ಹಾವೇರಿ(ಜ.26):  ಸಿಎಜಿ ನೀಡಿದ ವರದಿ ಏನಿದೆಯೋ ಅದನ್ನೇ ಆರೋಗ್ಯ ಸಚಿವ ಡಾ.ಸುಧಾಕರ್‌ ಹೇಳಿದ್ದಾರೆ. ಒಬ್ಬ ಸುಧಾಕರ್‌ ಅವರನ್ನು ಅರಗಿಸಿಕೊಳ್ಳಲು ಕಾಂಗ್ರೆಸ್ಸಿನವರಿಂದ ಆಗುತ್ತಿಲ್ಲ. ಸುಧಾಕರ್‌ ಸವಾಲಿಗೆ ಕಾಂಗ್ರೆಸ್‌ ನಾಯಕರು ನಲುಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.

ಹಿರೇಕೆರೂರಿನಲ್ಲಿ ಬುಧವಾರ ಸುದ್ದಿಗಾರರು ಹಾಗೂ ಕಾರ್ಯಕ್ರಮದಲ್ಲಿ ಮಾತನಾಡಿ, ಸುಧಾಕರ್‌ ಅವರು ಕಾಂಗ್ರೆಸ್‌ನಲ್ಲಿ ಶಾಸಕರಾಗಿದ್ದರೇ ಹೊರತು ಸಚಿವರಾಗಿರಲಿಲ್ಲ. ಕಾಂಗ್ರೆಸ್ಸಿಗರು ಮಾಡಿರುವ ಹಗರಣ ಆಗೇನೂ ಅವರಿಗೆ ಗೊತ್ತಿರಲಿಲ್ಲ. ಈಗ ಗೊತ್ತಾಗಿದ್ದರಿಂದ ಹೇಳಿದ್ದಾರೆ. ಸಿಎಜಿ ಸ್ಥಾಪಿತ ಸಂಸ್ಥೆಯಾಗಿದ್ದು, ಅಲ್ಲಿ ಏನು ಹೇಳಿದ್ದಾರೋ ಅದನ್ನೇ ಸುಧಾಕರ್‌ ಹೇಳಿದ್ದಾರೆ ಎಂದರು.

ಸಿದ್ದು ಆಡಳಿತದ 59 ಪ್ರಕರಣ ಲೋಕಾಯುಕ್ತ ತನಿಖೆಗೆ: ಸಿಎಂ ಬೊಮ್ಮಾಯಿ

ಹಿಂದೆ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಿದ್ದಾಗ ಬಿಜೆಪಿ ವಿರುದ್ಧ ಇದೇ ರೀತಿ ವಿಶ್ಲೇಷಣೆ ಮಾಡಿದ್ದರು. ಈಗ ಇವರ ಕಡೆ ಆರೋಪ ತಿರುಗಿದ್ದರಿಂದ ಕಷ್ಟವಾಗುತ್ತಿದೆ. ಈಗ ಡಾ.ಸುಧಾಕರ್‌ ಕೂಡ ಅದೇ ರೀತಿ ಸಿದ್ದರಾಮಯ್ಯ ಸರ್ಕಾರದ ಹಗರಣಗಳ ವಿಶ್ಲೇಷಣೆ ಮಾಡಿದ್ದಾರೆ. ಅದನ್ನು ಜೀರ್ಣಿಸಿಕೊಳ್ಳಲು ಅವರಿಂದ ಸಾಧ್ಯವಾಗುತ್ತಿಲ್ಲ. ಅಲಿಬಾಬಾ ಚಾಲಿಸ್‌ ಚೋರರು ಎಂದು ಸುಧಾಕರ್‌ ವಿರುದ್ಧ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಜನರಿಗೆ ಯಾರು ಕಳ್ಳರೆಂದು ಅರ್ಥವಾಗಿದ್ದರಿಂದಲೇ 2018ರಲ್ಲಿ ಇವರನ್ನು ಮನೆಗೆ ಕಳುಹಿಸಿದ್ದಾರೆ ಎಂದು ತಿರುಗೇಟು ನೀಡಿದರು.

ನಮ್ಮ ಅವಧಿಯಲ್ಲಿ ನಡೆದ ವೆಂಟಿಲೇಟರ್‌ ಖರೀದಿ ಕುರಿತು ಈಗಾಗಲೇ ಅಧಿವೇಶನದಲ್ಲಿ ಚರ್ಚೆಯಾಗಿದೆ. ದಾಖಲೆ ಇದ್ದರೆ ಕೊಡಿ ಎಂದು ಕೇಳಿದ್ದೇವೆ. ತನಿಖೆ ಮಾಡಿಸುತ್ತೇವೆ. ಕಾಂಗ್ರೆಸ್‌ ಅವಧಿಯಲ್ಲಿ ಎಷ್ಟುಹಣಕ್ಕೆ ವೆಂಟಿಲೇಟರ್‌ ಖರೀದಿಯಾಗಿದೆ ಎಂಬುದನ್ನೂ ತನಿಖೆ ಮಾಡಿಸುತ್ತೇವೆ ಎಂದು ಹೇಳಿದರು.

ಫೆ.10ರೊಳಗೆ ಕಾಂಗ್ರೆಸ್‌ ಮೊದಲ ಪಟ್ಟಿ ಪ್ರಕಟ?

ಈಗ ಸುಧಾಕರ್‌ ವಿರುದ್ಧ ಸುದ್ದಿಗೋಷ್ಠಿ ಮಾಡುವ ಸ್ಥಿತಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಬಂದಿದೆ. ನಮ್ಮ ಪಕ್ಷದಲ್ಲಿದ್ದವರು ಬಿಜೆಪಿಗೆ ಹೋಗಿ ಮಾತನಾಡುತ್ತಿದ್ದಾರೆ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಮೊದಲಿಂದಲೂ ಕಾಂಗ್ರೆಸ್ಸಿನಲ್ಲೇ ಇದ್ದರಾ? ರಾಜೀವ್‌ ಗಾಂಧಿ, ಸೋನಿಯಾ ಗಾಂಧಿ ವಿರುದ್ಧ 30 ವರ್ಷ ಬಾಯಿಗೆ ಬಂದಂತೆ ಮಾತನಾಡಿ, ನಂತರ ಆ ಪಕ್ಷಕ್ಕೆ ಹೋಗಿ ಮುಖ್ಯಮಂತ್ರಿ ಆಗಿ, ವಿರೋಧ ಪಕ್ಷದ ನಾಯರಾಗಿದ್ದಾರೆ. ತನಿಖೆ ಎದುರಿಸುವುದನ್ನು ಬಿಟ್ಟು ಸಚಿವ ಸುಧಾಕರ್‌ ಮೇಲೆ ಆರೋಪ ಮಾಡುತ್ತ, ವೈಯಕ್ತಿಕ ಟೀಕೆಗೆ ಇಳಿದಿದ್ದಾರೆ ಎಂದು ಬೊಮ್ಮಾಯಿ ತರಾಟೆಗೆ ತೆಗೆದುಕೊಂಡರು.

ಸಿಎಜಿ ವರದಿಯಲ್ಲಿ ಹೇಳಿದಂತೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ .35 ಸಾವಿರ ಕೋಟಿ ಭ್ರಷ್ಟಾಚಾರದ ಬಗ್ಗೆ ಸುಧಾಕರ ಹೇಳಿದ್ದಾರೆ. ತನಿಖೆಯಿಂದ ನಿಮ್ಮ ಮುಖವಾಡ ಕಳಚಲಿದೆ. ಜನ ನಿಮ್ಮ ದುರಾಡಳಿತಕ್ಕೆ ಬೇಸತ್ತು ಮನೆಗೆ ಕಳುಹಿಸಿದ್ದಾರೆ. ಇನ್ನು ಮುಂದೆ ನಿಮ್ಮ ಕಾಯಂ ಜಾಗ ಮನೆಯೇ ಆಗಿರುತ್ತದೆ ಎಂದು ಕಾಂಗ್ರೆಸ್‌ ನಾಯಕರಿಗೆ ಇದೇ ವೇಳೆ ಸಿಎಂ ತಿರುಗೇಟು ನೀಡಿದರು.

Latest Videos
Follow Us:
Download App:
  • android
  • ios