Asianet Suvarna News Asianet Suvarna News

ಕಾಂಗ್ರೆಸ್‌ನಿಂದ ಬೆಂಗ್ಳೂರು ಹಾಳು: ಸಿಎಂ ಬೊಮ್ಮಾಯಿ

ಬೆಂಗಳೂರಿನಲ್ಲಿ ಒತ್ತುವರಿಯಾಗಲು, ರಾಜಕಾಲುವೆ ಮುಚ್ಚಲು, ಅದರ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯಲು ಕಾಂಗ್ರೆಸ್‌ ಕಾರಣ. ಹತ್ತು ಹಲವಾರು ಹಗರಣಗಳು ಅವರ ಕಾಲದಲ್ಲಿಯೇ ಆಗಿವೆ. ಅದನ್ನು ಮುಚ್ಚಿಹಾಕಲು ಈ ರೀತಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಸಿಎಂ ಬೊಮ್ಮಾಯಿ 

CM Basavaraj Bommai Slams Congress grg
Author
First Published Jan 24, 2023, 11:22 AM IST

ಬೆಳಗಾವಿ(ಜ.24):  ಪ್ರತಿಪಕ್ಷ ಕಾಂಗ್ರೆಸ್‌, ಸೋಮವಾರ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ‘ಭ್ರಷ್ಟಾಚಾರ ತೊಲಗಿಸಿ, ಬೆಂಗಳೂರು ಉಳಿಸಿ’ ಪ್ರತಿಭಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕರು, ಬೆಂಗಳೂರನ್ನು ಹಾಳು ಮಾಡಿದವರೇ ಕಾಂಗ್ರೆಸ್ಸಿಗರು ಎಂದು ತಿರುಗೇಟು ನೀಡಿದ್ದಾರೆ.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಬೆಂಗಳೂರನ್ನು ಹಾಳು ಮಾಡಿದವರೇ ಕಾಂಗ್ರೆಸ್ಸಿನವರು. ಹತ್ತು ಹದಿನೈದು ಜನ ಸೇರಿ 300 ಕಡೆ ಪ್ರತಿಭಟನೆ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಒತ್ತುವರಿಯಾಗಲು, ರಾಜಕಾಲುವೆ ಮುಚ್ಚಲು, ಅದರ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯಲು ಕಾಂಗ್ರೆಸ್‌ ಕಾರಣ. ಹತ್ತು ಹಲವಾರು ಹಗರಣಗಳು ಅವರ ಕಾಲದಲ್ಲಿಯೇ ಆಗಿವೆ. ಅದನ್ನು ಮುಚ್ಚಿಹಾಕಲು ಈ ರೀತಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನಾನು ಅಕ್ರಮ ಮಾಡಿದ್ದರೆ ತನಿಖೆ ಮಾಡಿ: ಸರ್ಕಾರಕ್ಕೆ ಸಿದ್ದರಾಮಯ್ಯ ಸವಾಲು!

ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ಬೆಂಗಳೂರಿನಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ ನಡೆಸುತ್ತಿದೆ. ಆದರೆ, ಅವರು ಮಾಡಿರುವ ಭ್ರಷ್ಟಾಚಾರದ ಬಗ್ಗೆ ರಾಜ್ಯದ ಉದ್ದಗಲಕ್ಕೆ ಹೇಳಿದರೂ ಸಾಲಲ್ಲ. ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್‌. ಅವರ ಅಧಿಕಾರದ ಅವಧಿಯಲ್ಲಿ ಬೆಂಗಳೂರಿನಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಲೂಟಿ ಮಾಡಿ, ಹಗಲು ದರೋಡೆ ನಡೆಸಿದ್ದಾರೆ. ಕಾಂಗ್ರೆಸ್‌ನವರಿಂದಲೇ ಬೆಂಗಳೂರು ಹಾಳಾಗಿದೆ. ಇದೆಲ್ಲವೂ ಜನರಿಗೆ ಗೊತ್ತಿದೆ. ಅದಕ್ಕಾಗಿಯೇ ಜನ ಅವರನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದರು.

ಕಂದಾಯ ಸಚಿವ ಆರ್‌. ಅಶೋಕ್‌ ಮಾತನಾಡಿ, ಬೆಂಗಳೂರಿನಲ್ಲಿ ಕಾಂಗ್ರೆಸ್‌ನವರು ಬಾಡಿಗೆ ಜನರನ್ನು ಕರೆದುಕೊಂಡು ಬಂದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರಿಗೆ ಪ್ರತಿಭಟನೆ ಮಾಡಲಿಕ್ಕೂ ಜನ ಸಿಗುತ್ತಿಲ್ಲ. ಇವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ ಎಂದು ವ್ಯಂಗ್ಯವಾಡಿದರು.

Follow Us:
Download App:
  • android
  • ios