ಕಾಂಗ್ರೆಸ್‌ಗೆ ಕೆಟ್ಟ ಕಾಲ ಬಂದಿದೆ: ಸಿಎಂ ಬೊಮ್ಮಾಯಿ
ಸನಾತನ ಧರ್ಮ, ಪುರಾತನ ಧರ್ಮ, ಮುಸ್ಲಿಂ, ಕ್ರಿಶ್ಚಿಯನ್‌ಗಿಂತ ಮೊದಲು ಹಿಂದು ಧರ್ಮ ಹುಟ್ಟಿದೆ ಎಂಬುದನ್ನು ಕಾಂಗ್ರೆಸಿಗರು ತಿಳಿದುಕೊಳ್ಳಬೇಕು: ಸಿಎಂ ಬೊಮ್ಮಾಯಿ
ಬೆಳಗಾವಿ(ನ.10): ಹಿಂದು ವಿಚಾರವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೀಡಿರುವ ತಮ್ಮ ಹೇಳಿಕೆ ಹಿಂಪಡೆಯಲ್ಲ ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸತೀಶ ಜಾರಕಿಹೊಳಿ ಹೇಳಿಕೆ ಒಪ್ಪುತ್ತಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟತೆ ಇದ್ದರೆ ಸತೀಶ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ರಾಯಬಾಗದಲ್ಲಿ ಬುಧವಾರ ಆಯೋಜಿಸಿದ್ದ ಬಿಜೆಪಿ ಜನಸಂಕಲ್ಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕಾಂಗ್ರೆಸ್‌ಗೆ ಕೆಟ್ಟ ಕಾಲ ಬಂದಾಗಿದೆ. ಒಳ್ಳೆಯ ಕಾಲ ಬಂದಿಲ್ಲ. ಡಿ.ಕೆ. ಶಿವಕುಮಾರ ಮತ್ತು ಸಿದ್ರಾಮಣ್ಣನ ಜಗಳ ನಿಂತಿಲ್ಲ. ಈ ನಡುವೆ ಮಲ್ಲಿಕಾರ್ಜುನ ಖರ್ಗೆ ಮುಳುಗು ಡೋಣಿ ಅಧ್ಯಕ್ಷರಾದ ತಕ್ಷಣವೇ ಕಾಂಗ್ರೆಸ್ ನಾಯಕ ಸತೀಶ ಜಾರಕಿಹೊಳಿ ಅವರು ಹಿಂದು ಎಂಬುವುದು ಕೆಟ್ಟ ಶಬ್ದ ಎಂದಿದ್ದಾರೆ. ಯಾವ ಧರ್ಮದಿಂದ ಸಂಸ್ಕಾರ ಪಡೆದಿದ್ದೇವೋ? ಪರಂಪರೆಯಿಂದ ಇದ್ದೇವೋ? ಭವಿಷ್ಯ ಕಟ್ಟುವ ಧರ್ಮದ ವಿರುದ್ಧವೇ ಮಾತನಾಡುವುದು ಸರಿಯಲ್ಲ. ನೀವು ಯಾವ ಆಧಾರದ ಮೇಲೆ ಹೇಳಿಕೆ ನೀಡಿದ್ದೀರಿ? ವಿಕೃತ ಮನಸಿನಿಂದ ಇಂತಹ ಹೇಳಿಕೆ ಕೊಟ್ಟಿದ್ದಾರೆ. ಸನಾತನ ಧರ್ಮ, ಪುರಾತನ ಧರ್ಮ, ಮುಸ್ಲಿಂ, ಕ್ರಿಶ್ಚಿಯನ್‌ಗಿಂತ ಮೊದಲು ಹಿಂದು ಧರ್ಮ ಹುಟ್ಟಿದೆ ಎಂಬುದನ್ನು ಕಾಂಗ್ರೆಸಿಗರು ತಿಳಿದುಕೊಳ್ಳಬೇಕು. ಇಡೀ ಜಗತ್ತಿಗೆ ಬೆಳಕು ಕೊಡುವಂತಹ ಹಿಂದು ಧರ್ಮದ ಬಗ್ಗೆ ಕ್ಷುಲ್ಲಕವಾಗಿ ಮಾತನಾಡುತ್ತಾರೆ ಎಂದರೆ ಕಾಂಗ್ರೆಸ್‌ಗೆ ಕೆಟ್ಟು ಕಾಲ ಬಂದಿದೆ ಎಂದರ್ಥ ಎಂದರು.
ನೋವಾಗಿದ್ದರೆ ವಿಷಾದ, ಹೇಳಿಕೆ ವಾಪಸ್ ಪಡೆದು ತನಿಖೆಗೆ ಆಗ್ರಹಿಸಿ ಸತೀಶ್ ಜಾರಕಿಹೊಳಿ!
ದ್ವಂದ್ವ ನೀತಿ ಸರಿಯಲ್ಲ:
ಒಂದು ನೂರು ವರ್ಷದ ಹಳೇ ಪಕ್ಷ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ಬರುವ ಹಾಗೆ ಇವರು ನಡೆದುಕೊಳ್ಳುತ್ತಾರೆ. ಭಾರತವನ್ನು ಗೊಂದಲದಲ್ಲಿಟ್ಟು ಆಳಬೇಕು ಎನ್ನುವುದು ಮೂಲ ಸಿದ್ಧಾಂತ ಮತ್ತೊಮ್ಮೆ ಪ್ರಕಟವಾಗಿದೆ. ರಾಹುಲ್ ದೇವಸ್ಥಾನಕ್ಕೆ ಹೋಗುತ್ತಾರೆ. ಇನ್ನೊಂದು ಕಡೆ ಈ ರೀತಿಯ ಹೇಳಿಕೆಗಳು ಬಂದಾಗ ಸುಮ್ಮನಿರುತ್ತಾರೆ. ಅವುಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಾರೆ. ಈ ರೀತಿಯ ದ್ವಂದ್ವ ನೀತಿ ದೇಶಕ್ಕೆ ಹಾಗೂ ಕಾಂಗ್ರೆಸ್‌ಗೆ ಸರಿಯಲ್ಲ ಎಂದರು.
ಇನ್ನು ನನ್ನ ಹೇಳಿಕೆ ತಪ್ಪು ಎಂದು ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸತೀಶ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಯಾವ ಪುರಾವೆಯ ಆಧಾರದ ಮೇಲೆ ಹೇಳಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ. ಅವೇ ಪುರಾವೆಗಳೇ ಸಾಕ್ಷಿಗಳಾಗುತ್ತವೆ. ಯಾವುದಾದರೂ ಒಂದು ಗಟ್ಟಿಪುರಾವೇ ಬೇಕಲ್ವಾ. ಇಂಟರ್ನೆಟ್‌ನಲ್ಲಿ ಹತ್ತು ಹಲವಾರು ವಿಚಾರ ಲೇಖನ ಇರುತ್ತವೆ. ಸಾರ್ವಜನಿಕ ಜೀವನದಲ್ಲಿ ನಾವು ಅರಿವಿನಿಂದ ನಡೆಯಬೇಕು. ಸತೀಶ ಜಾರಕಿಹೊಳಿ ಹಿಂದು ಪದದ ಕುರಿತು ಚರ್ಚೆಗೆ ಆಹ್ವಾನ ವಿಚಾರ, ಅವರ ಆಧಾರಗಳೇ ಅತ್ಯಂತ ಅಸಂಗತ್ಯವಾದದಂತ ಆಧಾರ. ಹೇಗೆ ಅದು ತಪ್ಪು ಎನ್ನುವುದು ಟಿವಿ ಮಾಧ್ಯಮಗಳಲ್ಲಿ ವಿಷಯ ಪರಿಣಿತರು ಹೇಳುತ್ತಿದ್ದಾರೆ. ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲದಿದ್ದರೆ ಮುಂದೆ ಅನುಭವಿಸುತ್ತಾರೆ ಎಂದು ಅವರು ಹೇಳಿದರು.
ಇನ್ನು ಜನಸಂಕಲ್ಪ ಯಾತ್ರೆ ಕಾರ್ಯಕ್ರಮಕ್ಕೆ ಸಾಗರೋಪಾದಿಯಲ್ಲಿ ಜನ ಹರಿದು ಬಂದಿದ್ದು, ಸಿದ್ದರಾಮಯ್ಯಗೆ ಇಲ್ಲಿ ಸೇರಿರುವ ಜನಸಾಗರವನ್ನು ತೋರಿಸಿ. ಜನಸಂಕಲ್ಪ ಸಮಾವೇಶದಲ್ಲಿನ ಜನಸಾಗರದ ಬಗ್ಗೆ ತಿಳಿದುಕೊಳ್ಳಲಿ. ಜನ ಸೇರಲ್ಲ ಎಂದಿದ್ದ ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ಟಾಂಗ್ ನೀಡಿದರು.
Hindu Word War: ವಿವಾದಿತ ಹೇಳಿಕೆಗೆ ಸತೀಶ್ ಜಾರಕಿಹೊಳಿ ಸ್ಪಷ್ಟೀಕರಣ: ಕ್ಷಮೆಯಾಚನೆಗೆ ಬಿಜೆಪಿ ಆಗ್ರಹ
ನಿಮ್ಮ ಜೊತೆ ಇತುತ್ತೇವೆ:
ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ದುರ್ಯೋಧನ ಐಹೊಳೆಯನ್ನು ಮತ್ತೊಮ್ಮೆ ವಿಧಾನಸಭೆಗೆ ಕಳುಹಿಸುತ್ತೇವೆ ಎಂದು ಸಂಕಲ್ಪ ಮಾಡಬೇಕು. ಮುಖ್ಯಮಂತ್ರಿಗಳು ಸಂಕಲ್ಪ ಮಾಡಲು ಇಲ್ಲಿಗೆ ಬಂದಿದ್ದಾರೆ. 2023ಕ್ಕೆ ದುರ್ಯೋಧನ ಐಹೊಳೆಯನ್ನು ನಾಲ್ಕನೇ ಬಾರಿಗೆ ಆಯ್ಕೆ ಮಾಡಬೇಕು. ಐದು ಹೊಳೆ ನೀರು ಕೂಡಿಸಿದಷ್ಟು ಜನ ಇಲ್ಲಿ ಸೇರಿದ್ದಾರೆ. ಶಾಸಕ ಐಹೊಳೆಯನ್ನು ಮಳ್ಳ ಎಂದು ತಿಳಿದುಕೊಂಡಿದ್ದೆ. ಆದರೆ ಕೆಲಸ ಮಾಡಿಸುವುದರಲ್ಲೇ ಆತ ಎಲ್ಲರ ಮೇಲೆ ಕೈ ಆಡಿಸುವಂತೆ ಇದ್ದಾನೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಬಹಳ ದಿನಗಳ ನಂತರ ಉತ್ತರ ಕರ್ನಾಟಕಕ್ಕೆ ಒಬ್ಬ ಸಮರ್ಥ ನಾಯಕ ಸಿಕ್ಕಿದ್ದೀರಿ. ಗಾಳಿ ಬಿಟ್ಟಾಗ ತೂರಿಕೆ ಅಂದಂತೆ ನೀವು ಕೆಲಸ ಮಾಡಿ. 2023ಕ್ಕೆ ನೀವು ಮುಂದಾಗಿ ನಿಮ್ಮ ಜತೆಗೆ ನಾವೆಲ್ಲ ಇರುತ್ತೇವೆ ಎಂದು ಸವದಿ ಹೇಳಿದರು.
ಶಾಸಕ ದುರ್ಯೋಧನ ಐಹೊಳೆ ಮಾತನಾಡಿ, ಏತ ನೀರಾವರಿ ಯೋಜನೆ ಮಾಡಿಕೊಡುವಂತೆ ಮನವಿ ಮಾಡಿದರು. ಬಂಡಿವಾಡ ಏತ ನೀರಾವರಿ, ಹನುಮಾನ ಏತ ನೀರಾವರಿ, ಕರಗಾಂವ ಏತ ನೀರಾವರಿ ಮಾಡಿಕೊಡಿ ನಿಮ್ಮ ಪಾದಕ್ಕೆ ಹಣೆ ಹಚ್ಚಿ ನಮಸ್ಕಾರ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಭೈರತಿ ಬಸವರಾಜ, ಶಶಿಕಲಾ ಜೊಲ್ಲೆ, ಸಂಸದ ಅಣ್ಣಾದಾಹೇಬ ಜೊಲ್ಲೆ, ಶಾಸಕರಾದ ಪಿ.ರಾಜೀವ, ಶ್ರೀಮಂತ ಪಾಟೀಲ, ಡಾ.ಪ್ರಭಾಕರ ಕೋರೆ, ಮಹಾಂತೇಶ ಕವಟಗಿಮಠ, ರಮೇಶ ಕತ್ತಿ ಮೊದಲಾದವರು ಉಪಸ್ಥಿತರಿದ್ದರು.