* ಕರ್ನಾಟಕ ಸಚಿವ ಸಂಪುಟ ರಚನೆ ಸರ್ಕಸ್* ಜೆಪಿ ನಡ್ಡಾ- ಸಿಎಂ ಬಸವರಾಜ ಬೊಮ್ಮಾಯಿ ಮಾತುಕತೆ ಅಂತ್ಯ* ದೆಹಲಿ ನಡ್ಡಾ ನಿವಾಸದಲ್ಲಿ ನಡೆದಿದ್ದ ಸಂಪುಟ ರಚನೆ ಮಾತುಕತೆ

ನವದೆಹಲಿ, (ಅ.02): ಕರ್ನಾಟಕ ಸಚಿವ ಸಂಪುಟ ರಚನೆ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನಡುವಿನ ಮಾತುಕತೆ ಅಂತ್ಯವಾಗಿದೆ. 

ಸಂಪುಟ ರಚನೆ ಸಂಬಂಧ ಸಿಎಂ ಬೊಮ್ಮಾಯಿ ನವದೆಹಲಿಯಲ್ಲಿ ಇಂದು (ಸೋಮವಾರ) ರಾತ್ರಿ ನಡ್ಡಾ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದರು. ಆದ್ರೆ, ನೂತನ ಸಚಿವ ಪಟ್ಟಿ ಮಾತ್ರ ಫೈನಲ್ ಆಗಿಲ್ಲ. ಈ ಬಗ್ಗೆ ಸ್ವತಃ ಬೊಮ್ಮಾಯಿ ಅವರೇ ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದ್ದಾರೆ.

ಸಂಪುಟ ಸರ್ಕಸ್: ಕೊನೆಗೂ ನಡ್ಡಾ ಭೇಟಿಯಾದ ಸಿಎಂ, ಯಾರಿಗೆ ಮಂತ್ರಿ ಭಾಗ್ಯ?

ನಡ್ಡಾ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಜೆ.ಪಿ.ನಡ್ಡಾ ಜತೆ ಸಂಪೂರ್ಣವಾಗಿ ಚರ್ಚೆ ನಡೆಸಿದ್ದೇವೆ. ನೂತನ ಸಚಿವ ಪಟ್ಟಿ ಇನ್ನೂ ಫೈನಲ್ ಆಗಿಲ್ಲ. ಎರಡ್ಮೂರು ಪಟ್ಟಿ ಕೊಟ್ಟಿದ್ದೇನೆ. ನಾಳೆ (ಮಂಗಳವಾರ) ವರಿಷ್ಠರೇ ಅಂತಿಮ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

 ಡಿಸಿಎಂ, ಸಚಿವರ ಪಟ್ಟಿಯನ್ನು ಹೈಕಮಾಂಡ್ ಫೈನಲ್ ಮಾಡುತ್ತೆ. ನಾಳೆ(ಅ.03) ಸಂಜೆ ಸಚಿವರ ಲಿಸ್ಟ್ ಅಂತಿಮವಾಗಲಿದ್ದು,ಎಷ್ಟು ಜನ ಮಂತ್ರಿಯಾಗಲಿದ್ದಾರೆ ಎಂದು ಗೊತ್ತಾಗಲಿದೆ. ನೂತನ ಸಚಿವ ಪಟ್ಟಿಯನ್ನು ವರಿಷ್ಠರೇ ಪ್ರಕಟಿಸುತ್ತಾರೆ ಎಂದು ತಿಳಿಸಿದರು. 

ಮಂಗಳವಾರ ಸಂಸತ್ ಅಧಿವೇಶನ ಬಳಿಕ ವರಿಷ್ಠರು ಸಭೆ ಸೇರುತ್ತಾರೆ. ಸಭೆ ನಡೆಸಿ ವರಿಷ್ಠರು ಸಚಿವರ ಪಟ್ಟಿ ಫೈನಲ್ ಮಾಡಿ ಪ್ರಕಟಿಸುತ್ತಾರೆ. ನಂತರ ರಾಜ್ಯಾಧ್ಯಕ್ಷರ ಜತೆ ಚರ್ಚಿಸಿ ಪ್ರಮಾಣವಚನ ದಿನಾಂಕ, ಸಮಯ ಪ್ರಕಟಿಸುತ್ತೇವೆ. ಎಲ್ಲಾ ಪ್ರಶ್ನೆಗಳಿಗೂ ನಾಳೆ (ಮಂಗಳವಾರ) ಸಂಜೆ ಬಳಿಕ ಉತ್ತರ ಸಿಗುತ್ತೆ ಎಂದು ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.