ಬಿಜೆಪಿಯವರು ರಾಕ್ಷಸರು ಎಂಬ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ ಅವರು, 70 ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್‌ನ್ನು ಕಿತ್ತೊಗೆದು ಅಸುರರು ಯಾರೆಂದು ಜನರೇ ತೋರಿಸಿದ್ದಾರೆ ಎಂದರು.
ಹುಬ್ಬಳ್ಳಿ(ಫೆ.20): ಕಾಂಗ್ರೆಸ್‌ನಲ್ಲಿ ಅಸುರರ ದೊಡ್ಡ ಪಟ್ಟಿಯೇ ಇದೆ. ಜನರಿಗೆ ಯಾರು ಅಸುರರು, ಯಾರು ದೇವತೆಗಳು ಎಂಬುದು ಗೊತ್ತಿದೆ. 70 ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್‌ನ್ನು ಕಿತ್ತೊಗೆದು ಅಸುರರು ಯಾರೆಂದು ಜನರೇ ತೋರಿಸಿದ್ದಾರೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಬಿಜೆಪಿಯವರು ರಾಕ್ಷಸರು ಎಂಬ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಹೇಳಿಕೆಗೆ ತಿರುಗೇಟು ನೀಡಿದ ಅವರು, 70 ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್‌ನ್ನು ಕಿತ್ತೊಗೆದು ಅಸುರರು ಯಾರೆಂದು ಜನರೇ ತೋರಿಸಿದ್ದಾರೆ ಎಂದರು.
ಕಾಂಗ್ರೆಸ್ ನಾಯಕರನ್ನು ಕೊಲ್ಲುವುದಾದರೆ ಹೇಳಿದ ಜಾಗಕ್ಕೆ ಬರುತ್ತೇವೆ: ಸುರ್ಜೇವಾಲಾ
ಸುರ್ಜೇವಾಲಾಗೆ ಕರ್ನಾಟಕದ ಬಗ್ಗೆ ಏನು ಗೊತ್ತಿದೆ?. ಅವರು ಕಾಂಗ್ರೆಸ್‌ನ ಒಳಜಗಳವನ್ನು ಮೊದಲು ಸರಿಪಡಿಸಿಕೊಳ್ಳಲಿ. ಆಮೇಲೆ ಕರ್ನಾಟಕದ ಬಗ್ಗೆ ಮಾತನಾಡಲಿ ಎಂದರು. ಕಾಂಗ್ರೆಸ್ ಸೃಷ್ಟಿಸಿದ್ದ ನರಕದಿಂದಲೇ ಅವರನ್ನು ಜನ ಮನೆಗೆ ಕಳುಹಿಸಿದ್ದಾರೆ. ಅತ್ಯಂತ ಬೇಜವಾಬ್ದಾರಿ ವಿರೋಧ ಪಕ್ಷವಿದು. ಕಾಂಗ್ರೆಸ್‌ನವರು ಜನರಿಗೆ ತಮ್ಮ, ನಮ್ಮ ವೈಫಲ್ಯಗಳನ್ನು ತೋರಿಸಬೇಕು. ಇದರ ಬದಲು ಈ ರೀತಿಯ ಮಾತುಗಳು ಜನರ ಮೇಲೆ ಪ್ರಭಾವ ಬೀರುವುದಿಲ್ಲ ಎಂದರು.
ಸುರ್ಜೇವಾಲಾಗೆ ನೆನಪಿನ ಶಕ್ತಿ ಕಡಿಮೆ:
ನಕಲು ಮಾಡುವಾಗ ಬುದ್ಧಿ ಇರಬೇಕು. ನಮ್ಮದೇ ಯೋಜನೆಗಳನ್ನು ನಕಲು ಮಾಡಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಟೀಕೆಗೆ ಪ್ರತಿಕ್ರಿಯಿಸಿ, ಅವರಿಗೂ ನಮಗೂ ಬಹಳ ವ್ಯತ್ಯಾಸವಿದೆ. ಅವರು ಚುನಾವಣೆಗಾಗಿ ಆಕಾಶವನ್ನು ತೋರಿಸಿ ಜನರನ್ನು ಮರಳು ಮಾಡುವ ಪ್ರಯತ್ನ ಮಾಡಿದ್ದಾರೆ. ನಾವು ಯಾವುದಕ್ಕಾಗಿ, ಯಾರಿಗೆ, ಎಷ್ಟು ಹಣವಾಗುತ್ತದೆ ಎಂದು ವಿವರಿಸಿದ್ದೇವೆ. ಅವರು ನಮ್ಮನ್ನು ನಕಲು ಮಾಡಿದ್ದಾರೆ. ನಾವು ಗೃಹಿಣಿ ಶಕ್ತಿ ನೀಡಿದ ಮೇಲೆ ಗೃಹಲಕ್ಷ್ಮೀ ಯೋಜನೆ ಘೋಷಿಸಿದ್ದಾರೆ. ಆದ್ದರಿಂದ ಸುರ್ಜೇವಾಲಾ ಅವರಿಗೆ ನೆನಪಿನ ಶಕ್ತಿ ಕಡಿಮೆಯಾಗಿದೆ ಎಂದರು.
ಡಿಕೆಶಿ, ಸಿದ್ದುಗೆ ಚೆಂಡುಹೂವು ಚೆಂದ ಕಾಣುತ್ತದೆ: ಸಿ.ಟಿ.ರವಿ
ಕಾಂಗ್ರೆಸ್ ನಾಯಕರು ಕಿವಿ ಮೇಲೆ ಹೂವಿಟ್ಟುಕೊಳ್ಳುವ ಅಭಿಯಾನ ಆರಂಭಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ಇಷ್ಟುದಿನ ಜನರಿಗೆ ಅವರು ಕಿವಿ ಮೇಲೆ ಹೂವಿಟ್ಟಿದ್ದಾರೆ. ಹೀಗಾಗಿ, ಅವರ ಕಿವಿ ಮೇಲೆ ಕಳೆದ ಚುನಾವಣೆಯಲ್ಲಿ ಜನರು ಹೂವು ಇಟ್ಟಿದ್ದರು. ಇನ್ಮುಂದೆ ಕೂಡ ಜನರು ಕಿವಿ ಮೇಲೆ ಹೂವು ಇಡುತ್ತಾರೆ. ಈ ಬಗ್ಗೆ ವಿಧಾನಸಭೆಯಲ್ಲೇ ಉತ್ತರಿಸಿದ್ದೇನೆ. ಶಾಶ್ವತವಾಗಿ ಕಾಂಗ್ರೆಸಿಗರ ಕಿವಿಗಳ ಮೇಲೆ ಹೂವಿರಲಿದೆ ಎಂದರು.
ವಿರೋಧ ಪಕ್ಷದವರು ಒಗ್ಗೂಡಿದರೆ ಬಿಜೆಪಿಯನ್ನು ಸೋಲಿಸಬಹುದು ಎಂದಿರುವ ಬಿಹಾರ ಮುಖ್ಯಮಂತ್ರಿ ನಿತೇಶ್ ಕುಮಾರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ನಿತೇಶ್ ಕುಮಾರ್ ಅವರು ಎಷ್ಟುಬಾರಿ ಬಣ್ಣ ಬದಲಾಯಿಸಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಬಣ್ಣ ಬದಲಾಯಿಸುವ ವ್ಯಕ್ತಿಯ ಮಾತಿಗೆ ಏನು ಉತ್ತರ ನೀಡಲು ಸಾಧ್ಯ? ಎಂದರು.
