ದಿಲ್ಲಿ ಸಭೆ ಬಳಿಕ ಸಂಪುಟ ಕಸರತ್ತು, ವಿಸ್ತರಣೆಯೋ? ಪುನಾರಚನೆಯೋ?: ಬೊಮ್ಮಾಯಿ ಹೇಳಿದ್ದಿಷ್ಟು

*  ದೆಹಲಿಗೆ ಬರಲು ನಡ್ಡಾ ನನ್ನ ಕರೆದಿದ್ದಾರೆ
*  ಸಭೆಯ ಬಳಿಕ ಮಾಹಿತಿ ನೀಡುತ್ತೇನೆ ಎಂದ ಬೊಮ್ಮಾಯಿ
*  ರಾಜ್ಯ ಸಚಿವ ಸಂಪುಟ ಕಸರತ್ತು ಬಿರುಸಾಗಿರುವ ಕುರಿತು ‘ಕನ್ನಡಪ್ರಭ’ ಮೊದಲೇ ವರದಿ ಪ್ರಕಟಿಸಿತ್ತು 

CM Basavaraj Bommai React on Cabinet Expansion grg

ಬೆಂಗಳೂರು(ಏ.19):  ಸಂಪುಟ ಕಸರತ್ತಿಗೆ(Cabinet Expansion) ಸಂಬಂಧಿಸಿದಂತೆ ವರಿಷ್ಠರೊಂದಿಗೆ ಚರ್ಚೆ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಮತ್ತೊಮ್ಮೆ ದೆಹಲಿಗೆ ತೆರಳಲಿದ್ದಾರೆ. ಸಂಪುಟ ವಿಸ್ತರಣೆ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ(JP Nadda) ಅವರು ದೆಹಲಿಯಲ್ಲಿ ಕರ್ನಾಟಕದ(Karnataka) ಬಗ್ಗೆ ವಿಶೇಷ ಸಭೆ ಕರೆಯುವುದಾಗಿ ಹೇಳಿದ್ದಾರೆ. ಆಗ ದೆಹಲಿಗೆ ಬರುವಂತೆಯೂ ಅವರು ಹೇಳಿದ್ದಾರೆ. ಆ ಸಭೆಯ ಬಳಿಕ ಮಾಹಿತಿ ನೀಡುತ್ತೇನೆ ಎಂದು ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಅಥವಾ ಪುನರಾಚನೆ ಎನ್ನುವುದರ ಬಗ್ಗೆ ಅಲ್ಲಿಯೇ ತೀರ್ಮಾನವಾಗಲಿದೆ ಎಂದು ಸ್ಪಷ್ಟಪಡಿಸಿದರು. ಭಾನುವಾರ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ನಡ್ಡಾ ಅವರು ಮುಖ್ಯಮಂತ್ರಿ ಬೊಮ್ಮಾಯಿ ಅವರೊಂದಿಗೆ ಪ್ರತ್ಯೇಕವಾಗಿ ಸುಮಾರು ಅರ್ಧ ಗಂಟೆ ಕಾಲ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದರು. ಈ ವೇಳೆ ಸಂಪುಟ ಕಸರತ್ತಿನ ಬಗ್ಗೆಯೂ ಪ್ರಮುಖವಾಗಿ ಪ್ರಸ್ತಾಪವಾಗಿತ್ತು. ಈ ಬಗ್ಗೆ ತಾವು ದೆಹಲಿಗೆ ವಾಪಸಾದ ಬಳಿಕ ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ಮಾತುಕತೆ ನಡೆಸಿ ತಿಳಿಸುತ್ತೇನೆ. ನಂತರ ನೀವು ಬನ್ನಿ ಎಂಬ ಮಾತನ್ನು ನಡ್ಡಾ ಹೇಳಿದ್ದರು ಎನ್ನಲಾಗಿದೆ.

ಸಂಪುಟ ವಿಸ್ತರಣೆ: ವಿಜಯೇಂದ್ರಗೆ ಸ್ಥಾನ ಸಿಗುತ್ತಾ.? ರೇಸ್‌ನಲ್ಲಿರುವವರ ಪಟ್ಟಿ ಇಲ್ಲಿದೆ

ರಮೇಶ್ ಜಾರಕಿಹೊಳಿ, ಸಿಪಿ ಯೋಗೇಶ್ವರ್ ಮತ್ತೆ ಸಂಪುಟ ಸೇರ್ಪಡೆ?

ಅತ್ಯಾಚಾರ ಆರೋಪದಿಂದ ಖುಲಾಸೆಯಾಗಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಮತ್ತೆ ಸಚಿವ ಸಂಪುಟ ಸೇರುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೆ, ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯ ಸಂಘಟನೆ ಬಲಪಡಿಸುವ ಉದ್ದೇಶದಿಂದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಅವರಿಗೂ ಸಂಪುಟದಲ್ಲಿ ಅವಕಾಶ ಸಿಗುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಆಡಳಿತಾರೂಢ ಬಿಜೆಪಿಯಲ್ಲಿ ಸಂಪುಟ ಕಸರತ್ತಿನ ಬಗ್ಗೆ ತೆರೆಮರೆಯಲ್ಲಿ ಬಿರುಸಿನ ಚಟುವಟಿಕೆ ನಡೆದಿದ್ದು, ಈ ತಿಂಗಳಾಂತ್ಯದಲ್ಲಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ನಡೆಯುವ ನಿರೀಕ್ಷೆಯಿದೆ. ಈಗ ಹೇಗಿದ್ದರೂ ಸಂಪುಟದಲ್ಲಿ ಐದು ಸ್ಥಾನಗಳು ಖಾಲಿ ಇವೆ. ಹೀಗಾಗಿ, ಸಂಪುಟ ವಿಸ್ತರಣೆಯಾಗಲಿ ಅಥವಾ ಪುನಾರಚನೆಯಾಗಲಿ ರಾಜಕೀಯವಾಗಿ ಪ್ರಮುಖವಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ರಮೇಶ್‌ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ತನ್ನ ಪ್ರಾಬಲ್ಯ ಉಳಿಸಿಕೊಳ್ಳಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
 

Latest Videos
Follow Us:
Download App:
  • android
  • ios