ಮುಂಬರುವ ವಿಧಾನಸಭಾ ಚುನಾವಣೆಗೆ ಭರದ ಸಿದ್ಧತೆ ಆರಂಭಿಸಿರುವ ಆಡಳಿತಾರೂಢ ಬಿಜೆಪಿಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಚುನಾವಣಾ ಪ್ರಚಾರ ಸಮಿತಿ ಮತ್ತು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಚುನಾವಣಾ ನಿರ್ವಹಣಾ ಸಮಿತಿ ರಚಿಸಿದೆ.

ಬೆಂಗಳೂರು (ಮಾ.11): ಮುಂಬರುವ ವಿಧಾನಸಭಾ ಚುನಾವಣೆಗೆ ಭರದ ಸಿದ್ಧತೆ ಆರಂಭಿಸಿರುವ ಆಡಳಿತಾರೂಢ ಬಿಜೆಪಿಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಚುನಾವಣಾ ಪ್ರಚಾರ ಸಮಿತಿ ಮತ್ತು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಚುನಾವಣಾ ನಿರ್ವಹಣಾ ಸಮಿತಿ ರಚಿಸಿದೆ. ಈ ಸಂಬಂಧ ಶುಕ್ರವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ನಿರ್ದೇಶನದ ಮೇರೆಗೆ ಪಕ್ಷದ ಕೇಂದ್ರ ಕಚೇರಿ ಉಸ್ತುವಾರಿ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ಪ್ರಕಟಣೆ ಹೊರಡಿಸಿದ್ದಾರೆ.

ಚುನಾವಣಾ ಪ್ರಚಾರ ಸಮಿತಿಯಲ್ಲಿ ಬೊಮ್ಮಾಯಿ ಸೇರಿದಂತೆ 26 ಮಂದಿ ನಾಯಕರು ಹಾಗೂ ಚುನಾವಣಾ ನಿರ್ವಹಣಾ ಸಮಿತಿಯಲ್ಲಿ ಶೋಭಾ ಕರಂದ್ಲಾಜೆ ಸೇರಿದಂತೆ 14 ಮಂದಿ ಮುಖಂಡರು ಇದ್ದಾರೆ. ಕೆಲವು ತಿಂಗಳುಗಳಿಂದ ಶೋಭಾ ಕರಂದ್ಲಾಜೆ ರಾಜ್ಯ ರಾಜಕಾರಣಕ್ಕೆ ಮರಳಬಹುದು ಎಂಬ ವದಂತಿ ಹಬ್ಬಿತ್ತು. ಇದೀಗ ಅವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿರುವುದು ಸ್ಪಷ್ಟವಾಗಿದೆ. ಕರಂದ್ಲಾಜೆ ಅವರ ನೇತೃತ್ವದಲ್ಲೇ ಚುನಾವಣಾ ನಿರ್ವಹಣಾ ಸಮಿತಿ ರಚಿಸಿದ್ದರೂ ಅವರಿಗೆ ಚುನಾವಣಾ ಪ್ರಚಾರ ಸಮಿತಿಯಲ್ಲೂ ಜವಾಬ್ದಾರಿ ನೀಡಲಾಗಿದೆ. ಸಾಮಾನ್ಯವಾಗಿ ಮುಖ್ಯಮಂತ್ರಿಗಳನ್ನು ಪ್ರಚಾರ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡುವುದು ಅಪರೂಪ. 

ಮಹೇಶ್‌ ಕುಮಟಳ್ಳಿಗೆ ಟಿಕೆಟ್‌ ಸಿಗದಿದ್ದರೆ ನಾನು ಚುನಾವಣೆಗೆ ಸ್ಪರ್ಧಿಸಲ್ಲ: ರಮೇಶ್‌ ಜಾರಕಿಹೊಳಿ

ಹೀಗಾಗಿಯೇ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಥವಾ ಬೇರೆ ಯಾರನ್ನಾದರೂ ಅಧ್ಯಕ್ಷರನ್ನಾಗಿ ಮಾಡಬಹುದು ಎಂಬ ಮಾತು ಕೇಳಿಬಂದಿತ್ತು. ಅದೀಗ ಹುಸಿಯಾಗಿದೆ. ಪ್ರಚಾರ ಸಮಿತಿಯಲ್ಲಿ ಹಲವು ಸಚಿವರು, ಶಾಸಕರು, ಸಂಸದರು ಇದ್ದಾರೆ. ಯಡಿಯೂರಪ್ಪ ಅವರೊಂದಿಗೆ ಪಕ್ಷದ ಉಪಾಧ್ಯಕ್ಷರೂ ಆಗಿರುವ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೂ ಸ್ಥಾನ ಕಲ್ಪಿಸಿರುವುದು ವಿಶೇಷ. ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರನ್ನೂ ಒಳಗೊಳ್ಳಲಾಗಿದೆ. ಇದೇ ವೇಳೆ ನಿರ್ವಹಣಾ ಸಮಿತಿಯಲ್ಲಿ ಪಕ್ಷದ ಪದಾಧಿಕಾರಿಗಳಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಇತ್ತೀಚೆಗೆ ಪಕ್ಷದಿಂದ ಮುನಿಸಿಕೊಂಡಿರುವ ಪ್ರಭಾವಿ ನಾಯಕರೂ ಆಗಿರುವ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಅವರನ್ನು ಎರಡೂ ಸಮಿತಿಗಳಿಂದ ಹೊರಗಿಟ್ಟಿರುವುದು ಅಚ್ಚರಿ ಮೂಡಿಸಿದೆ.

ಚುನಾವಣಾ ಪ್ರಚಾರ ಸಮಿತಿ: ಅಧ್ಯಕ್ಷತೆ- ಬಸವರಾಜ ಬೊಮ್ಮಾಯಿ. ಸದಸ್ಯರು- ಬಿ.ಎಸ್‌.ಯಡಿಯೂರಪ್ಪ, ನಳಿನ್‌ಕುಮಾರ್‌ ಕಟೀಲ್‌, ಡಿ.ವಿ.ಸದಾನಂದಗೌಡ, ಜಗದೀಶ್‌ ಶೆಟ್ಟರ್‌, ಪ್ರಹ್ಲಾದ್‌ ಜೋಶಿ, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಕೆ.ಎಸ್‌.ಈಶ್ವರಪ್ಪ, ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಆರ್‌.ಅಶೋಕ್‌, ಶಶಿಕಲಾ ಜೊಲ್ಲೆ, ಸಿ.ಸಿ.ಪಾಟೀಲ್‌, ಎಸ್‌.ಟಿ.ಸೋಮಶೇಖರ್‌, ಡಾ.ಕೆ.ಸುಧಾಕರ್‌, ಪ್ರಭು ಚವ್ಹಾಣ್‌, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಸಿ.ಟಿ.ರವಿ, ವಿ.ಶ್ರೀನಿವಾಸ್‌ ಪ್ರಸಾದ್‌, ಪಿ.ಸಿ.ಮೋಹನ್‌, ಅರವಿಂದ್‌ ಲಿಂಬಾವಳಿ, ಲಕ್ಷ್ಮಣ ಸವದಿ, ರಮೇಶ್‌ ಜಾರಕಿಹೊಳಿ, ಬಿ.ವೈ.ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ.

5, 8ನೇ ತರಗತಿಗಳಿಗೆ ಬೋರ್ಡ್‌ ಪರೀಕ್ಷೆ ರದ್ದು: ಹೈಕೋರ್ಟ್‌

ಚುನಾವಣಾ ನಿರ್ವಹಣೆ ಸಮಿತಿ: ಸಂಚಾಲಕರು- ಶೋಭಾ ಕರಂದ್ಲಾಜೆ. ಸದಸ್ಯರು- ಭಗವಂತ ಖೂಬಾ, ಕೋಟ ಶ್ರೀನಿವಾಸ ಪೂಜಾರಿ, ಅರವಿಂದ್‌ ಲಿಂಬಾವಳಿ, ರಘುನಾಥ್‌ ಮಲ್ಕಾಪುರೆ, ನಿರ್ಮಲ್‌ಕುಮಾರ್‌ ಸುರಾನ, ತೇಜಸ್ವಿನಿ ಅನಂತಕುಮಾರ್‌, ಎನ್‌.ರವಿಕುಮಾರ್‌, ಸಿದ್ದರಾಜು, ಅಶ್ವತ್ಥನಾರಾಯಣ, ಮಹೇಶ್‌ ಟೆಂಗಿನಕಾಯಿ, ಎಸ್‌.ಕೇಶವ್‌ ಪ್ರಸಾದ್‌, ಛಲವಾದಿ ನಾರಾಯಣಸ್ವಾಮಿ, ಗೀತಾ ವಿವೇಕಾನಂದ.