Asianet Suvarna News Asianet Suvarna News

ಬೆಂಗ್ಳೂರು ಬಿಡು, ಕ್ಷೇತ್ರದಲ್ಲಿ ಸುತ್ತಾಡು: ಸಂಸದ ಕರಡಿ ಪುತ್ರ ಅಮರೇಶಗೆ ಸಿಎಂ ಬೊಮ್ಮಾಯಿ ಸೂಚನೆ

ನಿಮ್ಮಪ್ಪನಿಗೆ ವಯಸ್ಸಾಗಿದೆ, ಟಿಕೆಟ್‌ ಸಿಗಲ್ಲ, ನೀನೇ ಕೇಳು: ಸಿ.ಸಿ. ಪಾಟೀಲ್‌

CM Basavaraj Bommai Guidance to Koppal MP Sanganna Karadi's Son grg
Author
Bengaluru, First Published Aug 2, 2022, 9:23 PM IST

ಕೊಪ್ಪಳ(ಆ.02):  ಸಿಎಂ ಬಸವರಾಜ ಬೊಮ್ಮಾಯಿ ಅವರ ಆಗಮನದ ಹಿನ್ನೆಲೆ ನಾಯಕರು ಬಸಾಪುರ ಏರೋಡ್ರೋಮ್‌ನಲ್ಲಿ ಚರ್ಚೆ ಮಾಡುತ್ತಿರುವ ವೇಳೆಯಲ್ಲಿ ಸ್ವಾರಸ್ಯಕರ ಚರ್ಚೆ ನಡೆದಿರುವುದು ಈಗ ಬಿಸಿ ಬಿಸಿಯಾಗಿ ಚರ್ಚೆಯಾಗುತ್ತಿದೆ. ಅದರಲ್ಲೂ ಕೊಪ್ಪಳ ವಿಧಾನಸಭಾ ಕ್ಷೇತ್ರದ ಚುನಾವಣೆಯ ಬಿಜೆಪಿ ಟಿಕೆಟ್‌ ಕುರಿತು ಪರೋಕ್ಷವಾಗಿ ಸಚಿವ ಬಿ.ಸಿ. ಪಾಟೀಲ್‌ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಂಸದ ಸಂಗಣ್ಣ ಕರಡಿ ಅವರ ಪುತ್ರ ಅಮರೇಶ ಕರಡಿಗೆ ಮಾರ್ಗದರ್ಶನ ಮಾಡಿದ್ದಾರೆ. ನೀನೇ ಸ್ಪರ್ಧೆ ಮಾಡುವುದಕ್ಕೆ ಪ್ರಯತ್ನಿಸು ಎಂದು ಹೇಳಿರುವುದು ಬಿಜೆಪಿ ಪಾಳೆಯದಲ್ಲಿ ಭಾರಿ ಚರ್ಚೆಗೆ ಗ್ರಾಸ ಒದಗಿಸಿದೆ. ಇದೆಲ್ಲಕ್ಕೂ ಕಾಂಗ್ರೆಸ್‌ನ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಸಾಕ್ಷಿಯಾಗಿದ್ದಾರೆ ಎನ್ನುವುದು ಗಮನಾರ್ಹ ಸಂಗತಿ.

ಆಗಿದ್ದೇನು?:

ಏರೋಡ್ರೋಮ್‌ಗೆ ಸಿಎಂ ಆಗಮನಕ್ಕಾಗಿ ಕಾಯಲಾಗುತ್ತಿತ್ತು. ಸಚಿವ ಸಿ.ಸಿ. ಪಾಟೀಲ್‌, ಸಂಸದ ಸಂಗಣ್ಣ ಕರಡಿ ಅವರ ಪುತ್ರ ಅಮರೇಶ ಕರಡಿ ಅವರು ಇದ್ದರು. ಅಲ್ಲಿಯೇ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಸಹ ಇದ್ದರು.
ಆಗ ಸಚಿವ ಸಿ.ಸಿ. ಪಾಟೀಲ್‌ ಅವರು, ನಿಮ್ಮಪ್ಪನಿಗೆ ವಯಸ್ಸಾಗಿದೆ, ಟಿಕೆಟ್‌ ಸಿಗಲ್ಲ. ಮತ್ತೆ ನೀನೇ ಕೇಳೋ ಎಂದು ಅಮರೇಶ ಕರಡಿ ಅವರಿಗೆ ಹೇಳಿದರು. ಇದಕ್ಕೆ ಅಮರೇಶ ಕರಡಿ ಅವರು ಕೇವಲ ತಲೆಯಾಡಿಸಿದರು. ನೀನು ಬೆಂಗಳೂರು ಸುತ್ತಾಡುವುದು ಬಿಡು, ಕ್ಷೇತ್ರದಲ್ಲಿಯೇ ಸುತ್ತಾಡು ಎಂದು ಸಹ ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲ, ಈ ರಾಘವೇಂದ್ರ ಹಿಟ್ನಾಳ ಅವರ ಬಗ್ಗೆ ತಲೆಕೆಡಿಸಿಕೊಳ್ಳಬೇಡ. ಆಳು ದೊಡ್ಡದಿದ್ದರೂ ಎಲೆಕ್ಷನ್‌ನಲ್ಲಿ ಒಗೆಯಬಹುದು ಎಂದೂ ಸಹ ಅಂದರು. ಇದಕ್ಕೆ ರಾಘವೇಂದ್ರ ಹಿಟ್ನಾಳ ಅವರು ಮಧ್ಯೆ ಪ್ರವೇಶ ಮಾಡಿ, ನಮ್ಮದೇನು ಇಲ್ಲಾ ಸಾರ್‌, ಸ್ಪರ್ಧೆ ಮಾಡಲಿ ಎಂದಿದ್ದಾರೆ.

ಕೊಪ್ಪಳಕ್ಕೆ ಸಿಎಂ ಬಂಪರ್ ಕೊಡುಗೆ; ಶೀಘ್ರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆ

ಈ ವೇಳೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಆಗಮಿಸಿದ್ದಾರೆ. ಅಮರೇಶ ಕರಡಿಯನ್ನು ನೋಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಹ ನೀನೇ ಸ್ಪರ್ಧೆ ಮಾಡೋ, ಬೆಂಗಳೂರು ಅಡ್ಯಾಡುವುದನ್ನು ಬಿಡು, ಕ್ಷೇತ್ರದಲ್ಲಿ ಸುತ್ತಾಡು ಎಂದು ಸಲಹೆ ನೀಡಿದ್ದಾರೆ. ಇದ್ಯಾವುದಕ್ಕೂ ಪ್ರತಿಕ್ರಿಯೆ ನೀಡದ ಅಮರೇಶ ಕರಡಿ ಅವರು ನಗುತ್ತಲೇ ಎಲ್ಲವನ್ನು ಸ್ವೀಕಾರ ಮಾಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಕಾಲಿಗೆ ಬಿದ್ದು, ನಮಸ್ಕಾರ ಮಾಡಿದ್ದಾರೆ. ಮತ್ತೆನು ಮಾತನಾಡದೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಅವರ ಜತೆ ಅಮರೇಶ ಕರಡಿ ಅವರು ಇತರ ನಾಯಕರೊಂದಿಗೆ ಪಾಲ್ಗೊಂಡಿದ್ದರು.
 

Follow Us:
Download App:
  • android
  • ios