Asianet Suvarna News Asianet Suvarna News

ನಾಳೆ ಕರ್ನಾಟಕಕ್ಕೆ ಅಮಿತ್‌ ಶಾ: ಸಂಪುಟದ ಕುರಿತು ಸ್ಪಷ್ಟ ಚಿತ್ರಣ

ಸೋಮವಾರ ಸಂಜೆ ದೆಹಲಿಗೆ ತೆರಳಿ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿವಿಧ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸುವ ವಿಷಯದ ಜತೆಗೆ ಸಂಪುಟ ವಿಸ್ತರಣೆ ಬಗ್ಗೆಯೂ ಸಮಾಲೋಚನೆ ನಡೆಸಿದ್ದರು. 

Clear Picture of the Cabinet Expansion after Amit Shah Visit Karnataka grg
Author
First Published Dec 28, 2022, 6:17 AM IST

ಸುವಣಸೌಧ(ಡಿ.28):  ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಅಮಿತ್‌ ಶಾ ರಾಜ್ಯ ಭೇಟಿ ಬಳಿಕವೇ ಬಹು ನಿರೀಕ್ಷಿತ ಸಂಪುಟ ವಿಸ್ತರಣೆ ಬಗ್ಗೆ ಸ್ಪಷ್ಟ ಚಿತ್ರಣ ಹೊರ ಬೀಳುವ ಸಾಧ್ಯತೆಯಿದೆ. ಗುರುವಾರ ಅಮಿತ್‌ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಮೂರು ದಿನ ರಾಜ್ಯದಲ್ಲಿರುವ ಅವರ ಅಧಿಕೃತ ಕಾರ‍್ಯಕ್ರಮಗಳ ಜತೆಗೆ ಪಕ್ಷದ ಸಭೆಗಳನ್ನೂ ಆಯೋಜಿಸಲಾಗಿದೆ. ಪಕ್ಷದ ರಾಜ್ಯ ಮುಖಂಡರೊಂದಿಗೆ ಪ್ರತ್ಯೇಕ ಸಭೆಯನ್ನೂ ನಡೆಸಲಿದ್ದಾರೆ. ಈ ಸಭೆಯ ನಂತರ ಸಂಪುಟ ವಿಸ್ತರಣೆ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಿದ ಬಳಿಕ ಸ್ಪಷ್ಟನಿಲುವು ಕೈಗೊಳ್ಳುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

ಸೋಮವಾರ ಸಂಜೆ ದೆಹಲಿಗೆ ತೆರಳಿ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿವಿಧ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸುವ ವಿಷಯದ ಜತೆಗೆ ಸಂಪುಟ ವಿಸ್ತರಣೆ ಬಗ್ಗೆಯೂ ಸಮಾಲೋಚನೆ ನಡೆಸಿದ್ದರು. ಈ ವೇಳೆ ಅಮಿತ್‌ ಶಾ ಅವರು ತಾವು ರಾಜ್ಯಕ್ಕೆ ಭೇಟಿ ನೀಡಿದ ವೇಳೆ ಈ ಬಗ್ಗೆ ಇತರ ಮುಖಂಡರೊಂದಿಗೆ ಚರ್ಚಿಸಿ ತೀರ್ಮಾನಿಸುವುದಾಗಿ ಹೇಳಿದ್ದರು. ಮಂಗಳವಾರ ಬೆಳಗಾವಿಗೆ ವಾಪಸಾದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಗಳಾದ ಕೆ.ಎಸ್‌.ಈಶ್ವರಪ್ಪ ಅವರೊಂದಿಗೆ ಮಾತನಾಡಿ, ‘4 ದಿನ ಕಾಯಿರಿ’ ಎಂಬ ಮಾತನ್ನು ಹೇಳಿದರು ಎನ್ನಲಾಗಿದೆ.

ಮೀಸಲಾತಿ ವಿಚಾರದಲ್ಲಿ ತಪ್ಪು ತೀರ್ಮಾನ ಮಾಡಬೇಡಿ: ಸಿಎಂ ಬೊಮ್ಮಾಯಿಗೆ ಹೈಕಮಾಂಡ್‌ ಕಿವಿಮಾತು

6 ಸ್ಥಾನ ಖಾಲಿ:

ಸಂಪುಟದಲ್ಲಿ ಒಟ್ಟು 6 ಸ್ಥಾನಗಳು ಖಾಲಿ ಉಳಿದಿವೆ. ಮಾಜಿ ಸಚಿವರಾದ ಈಶ್ವರಪ್ಪ ಮತ್ತು ರಮೇಶ್‌ ಜಾರಕಿಹೊಳಿ ಅವರು ಬೆಳಗಾವಿಯ ಅಧಿವೇಶನಕ್ಕೆ ಆರಂಭದಲ್ಲಿ ಗೈರು ಹಾಜರಾಗಿದ್ದರು. ತಮಗೆ ಮತ್ತೆ ಸಚಿವ ಸ್ಥಾನ ನೀಡದೆ ಇರುವುದು ಬೇಸರ ಉಂಟು ಮಾಡಿರುವುದರಿಂದ ಅಧಿವೇಶನಕ್ಕೆ ಹೋಗುತ್ತಿಲ್ಲ ಎಂದು ಈಶ್ವರಪ್ಪ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಬೊಮ್ಮಾಯಿ ಅವರು ಈಶ್ವರಪ್ಪ ಹಾಗೂ ಜಾರಕಿಹೊಳಿ ಅವರಿಬ್ಬರನ್ನೂ ಕರೆಸಿಕೊಂಡು ಖುದ್ದಾಗಿ ಮಾತುಕತೆ ನಡೆಸಿ ವರಿಷ್ಠರಿಗೆ ಪರಿಸ್ಥಿತಿ ವಿವರಿಸಿದ್ದರು. ಆಗ ವರಿಷ್ಠರು ಸೋಮವಾರ ದೆಹಲಿಗೆ ಬರುವಂತೆ ಸೂಚಿಸಿದ್ದರು. ಇದಾದ ಬಳಿಕವೇ ಈಶ್ವರಪ್ಪ ಮತ್ತು ಜಾರಕಿಹೊಳಿ ಅವರು ಅಧಿವೇಶನದ ಕಲಾಪಕ್ಕೆ ಹಾಜರಾದರು.

ಜನವರಿ 2ರಿಂದ 50 ಲಕ್ಷ ಮನೆಗಳಲ್ಲಿ ಬಿಜೆಪಿ ಧ್ವಜ

ಸುವರ್ಣ ವಿಧಾನಸೌಧ: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜ.2ರಿಂದ 10 ದಿನಗಳ ಕಾಲ ಬಿಜೆಪಿಯು ‘ಬೂತ್‌ ವಿಜಯ ಅಭಿಯಾನ’ ಹಮ್ಮಿಕೊಂಡಿದೆ. ಇದರ ಭಾಗವಾಗಿ ರಾಜ್ಯದಲ್ಲಿರುವ ಪಕ್ಷದ ಕಾರ್ಯಕರ್ತರು, ಮತದಾರರ 50 ಲಕ್ಷ ಮನೆಗಳಲ್ಲಿ ಬಿಜೆಪಿ ಧ್ವಜ ಹಾರಿಸಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

Follow Us:
Download App:
  • android
  • ios