ದೇವನಹಳ್ಳಿ ಹೈಟೆಕ್‌ ಡಿಫೆನ್ಸ್‌ ಏರೋಸ್ಪೇಸ್‌ ಪಾರ್ಕ್ಗೆಂದು ಬ್ರಿಗೇಡ್‌ ಗ್ರೂಪ್‌ಗೆ ಜಮೀನು ಮಂಜೂರು ವಿಚಾರ ಸದನದಲ್ಲಿ ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ಮತ್ತು ಬೃಹತ್‌ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಅವರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ವಿಧಾನ ಪರಿಷತ್ತು (ಫೆ.22): ದೇವನಹಳ್ಳಿ ಹೈಟೆಕ್‌ ಡಿಫೆನ್ಸ್‌ ಏರೋಸ್ಪೇಸ್‌ ಪಾರ್ಕ್ಗೆಂದು ಬ್ರಿಗೇಡ್‌ ಗ್ರೂಪ್‌ಗೆ ಜಮೀನು ಮಂಜೂರು ವಿಚಾರ ಸದನದಲ್ಲಿ ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ಮತ್ತು ಬೃಹತ್‌ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಅವರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಬ್ರಿಗೇಡ್‌ ಗ್ರೂಪ್‌ಗೆ ಜಮೀನು ಮಂಜೂರು ಬಗ್ಗೆ ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ, ಬ್ರಿಗೇಡ್‌ ಗ್ರೂಪ್‌ಗೆ ಮೊದಲು 25 ಎಕರೆ ಜಮೀನು ಕೊಡಲಾಗಿದೆ. 7 ವರ್ಷಗಳ ನಂತರ ಗುತ್ತಿಗೆ ಮತ್ತು ಮಾರಾಟ ಕರಾರು ಮಾಡಿದ್ದಾರೆ. ಆ ಮೂಲಕ ಕೆಐಎಡಿಬಿ ನಿಯಮ ಉಲ್ಲಂಘಿಸಿದ್ದಾರೆ. ಇದರಲ್ಲಿ ದೊಡ್ಡ ಅಕ್ರಮ ನಡೆದಿದೆ. 

ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತನಿಖೆ ಮಾಡುವಂತೆ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಕೈಗಾರಿಕಾ ಇಲಾಖೆ ಸಚಿವ ಮುರುಗೇಶ್‌ ನಿರಾಣಿ, ಈವರೆಗೆ 190ಕ್ಕೂ ಹೆಚ್ಚು ಕೆಐಎಡಿಬಿ ನಿವೇಶನ ಪ್ರಾರಂಭ ಮಾಡಿದ್ದೇವೆ. ಮೂಲಭೂತ ಸೌಕರ್ಯ ಕಲ್ಪಿಸುವ ಕೆಲಸ ಕೆಐಎಡಿಬಿ ಮಾಡಿದೆ. ಬ್ರಿಗೇಡ್‌ ಗ್ರೂಪ್‌ಗೆ ನೀಡಿರುವ ಜಮೀನಿನಲ್ಲಿ ಕಾನೂನು ಉಲ್ಲಂಘಿಸಿಲ್ಲ. 2012ರಲ್ಲಿ 50 ಎಕರೆಗೆ ಪೂರ್ತಿ ಹಣ ಅವರು ಕಟ್ಟಿದ್ದಾರೆ. ಈಗಾಗಲೇ ಉದ್ಯೋಗಿಗಳಿಗೆ ಮನೆ ನಿರ್ಮಾಣ ಕೆಲಸ ನಡೆಯುತ್ತಿದೆ. 

ಏ.1ರಿಂದ ಸ್ತ್ರೀ ನೌಕರರಿಗೆ ಉಚಿತ ಬಸ್‌ಪಾಸ್‌: ಸಿಎಂ ಬೊಮ್ಮಾಯಿ ಸೂಚನೆ

ಮಂಜೂರಾದ ಜಾಗದಲ್ಲಿ ಶೇ.15 ಮನೆ, ಶಾಲೆ, ಆಸ್ಪತ್ರೆ, ಉದ್ಯೋಗಿಗಳಿಗೆ ನಿರ್ಮಾಣ ಮಾಡಲು ಅವಕಾಶ ನಿಯಮದಲ್ಲಿ ಇದೆ. ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ ಎಂದರು. ಈ ವೇಳೆ ಬ್ರಿಗೇಡ್‌ ಗ್ರೂಪ್‌ಗೆ ಲಾಭ ಮಾಡಿಕೊಡಲು ಕೆಐಎಡಿಬಿ ನಿಯಮ ಉಲ್ಲಂಘನೆ ಆಗಿದೆ ತನಿಖೆ ಆಗಲೇಬೇಕು ಎಂದು ಮರಿತಿಬ್ಬೇಗೌಡ ಅವರು ಪಟ್ಟುಹಿಡಿದರು. ಹೀಗೆ ಮರಿತಿಬ್ಬೇಗೌಡ ಮತ್ತು ನಿರಾಣಿ ನಡುವೆ ಆರಂಭವಾದ ವಾಗ್ವಾದ ತೀವ್ರತೆ ಪಡೆದುಕೊಂಡಿತು. ಈ ಹಿನ್ನೆಲೆಯಲ್ಲಿ ಸಭಾಪತಿ ಬಸವರಾಜ ಹೊಟ್ಟಿಅವರು ವಿಧಾನಪರಿಷತ್‌ ಕಲಾಪ ಬುಧವಾರ ಬೆಳಗ್ಗೆ 10.30ಕ್ಕೆ ಮುಂದೂಡಿದರು.

ಏಕ ವಚನದಲ್ಲಿಯೇ ನಾಯಕರ ಕಿತ್ತಾಟ!: ಕಲಾಪ ಮುಂದೂಡಿಕೆ ಬಳಿಕವೂ ಈ ಇಬ್ಬರ ನಡುವೆ ಕಿತ್ತಾಟ ಮುಂದುವರೆಯಿತು. ಈ ವೇಳೆ ವಿವರಣೆ ನೀಡಲು ಹೋದ ಸಚಿ ನಿರಾಣಿಗೆ ಮರಿತಿಬ್ಬೇಗೌಡ ಅವರು, ‘ನೀ ಏನೂ ಮಾತನಾಡಬೇಡಪ್ಪ. ನನಗೆ ಎಲ್ಲವೂ ಗೊತ್ತಿದೆ. ಹೋಗು’ ಎಂದು ಕೈಮುಗಿದು ಹೊರಗೆ ಕೈ ತೋರಿಸಿದರು. ಇದರಿಂದ ಸಿಟ್ಟುಕೊಂಡ ಸಚಿವ ಮುರುಗೇಶ್‌ ನಿರಾಣಿ, ‘ನಿನ್ನ ಯೋಗ್ಯತೆ ನನಗೆ ಗೊತ್ತಿಲ್ವೆನಪ್ಪಾ’ ಎಂದು ಏಕವಚನದಲ್ಲೇ ಪ್ರಶ್ನಿಸಿದರು. ಈ ವೇಳೆ ಕೊಟ ಶ್ರೀನಿವಾಸ್‌ ಪೂಜಾರಿ ಅವರು ನಿರಾಣಿ ಅವರನ್ನು ಸಮಾಧಾನಪಡಿಸಲು ಮುಂದಾದರು. 

ಆದರೆ, ನಿರಾಣಿಗೆ ಕೆಲ ಬಿಜೆಪಿ ಸದಸ್ಯರು ಬೆಂಬಲಕ್ಕೆ ನಿಂತು, ಮರಿತಿಬ್ಬೇಗೌಡ ವಿರುದ್ಧ ಹರಿಹಾಯ್ದರು. ‘ನಿನಗಿಂತ ಹತ್ತು ಪಟ್ಟು ಮಾತಾಡಲು ನಮಗೂ ಬರುತ್ತೆ’ ಎಂದು ಮುರುಗೇಶ್‌ ನಿರಾಣಿ ಸಹೋದರ ಹನುಮಂತ ನಿರಾಣಿ ಅವರು ಆಕ್ರೋಶ ಹೊರಹಾಕಿದರು. ಗದ್ದಲ ಜೋರಾಗುತ್ತಿದ್ದಂತೆ ಮಾರ್ಷಲ್‌ಗಳು ಒಳ ಪ್ರವೇಶಿಸಿದರು. ಕಾಂಗ್ರೆಸ್‌ ಸದಸ್ಯರು ಜಗಳ ನೋಡುತ್ತಾ ಸುಮ್ಮನೆ ನಿಂತಿದ್ದರು.

ಪರಿಹಾರ ನೀಡುವಲ್ಲಿ ಬಿಡಿಎ ಅಕ್ರಮ, ತೀವ್ರ ವಾಗ್ವಾದ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನಪಡಿಸಿಕೊಂಡ ಭೂಮಿಗೆ ಖಾಸಗಿ ವ್ಯಕ್ತಿಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆಂಬ ಆರೋಪ ಸಂಬಂಧವೂ ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ಹಾಗೂ ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ ನಡುವೆ ತೀವ್ರ ಮಾತಿನ ಚಕಮಕಿ, ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ವಾಗ್ವಾದ, ಕೆಲ ಕಾಲ ಧರಣಿ ನಡೆಯಿತು. ಪರಿಹಾರವನ್ನು ಕಾನೂನು ಇಲಾಖೆಯ ಸಲಹೆ ಹಾಗೂ ಮುಖ್ಯಕಾರ್ಯದರ್ಶಿಗಳ ಜೊತೆ ಚರ್ಚಿಸಿದ ನಂತರವೇ ನೀಡಲಾಗಿದೆ. 

ಜೆಪಿ ನಗರ ಡೆಲ್ಮಿಯಾ ಫ್ಲೈಓವರ್‌ ಬಚಾವ್‌: ಅದರ ಮೇಲೆಯೇ ಮೆಟ್ರೋ ಮಾರ್ಗ

ಯಾವುದೇ ಅಕ್ರಮ ನಡೆದಿಲ್ಲ ಎಂದು ಸಚಿವರು ನೀಡಿದ ಉತ್ತರದಿಂದ ಸಮಾಧಾನಗೊಳ್ಳದ ಮರಿತಿಬ್ಬೆಗೌಡ ಅವರು, ಉತ್ತರ ಕೊಡುವ ಯೋಗ್ಯತೆ, ಕ್ರಮ ಕೈಗೊಳ್ಳುವ ಧೈರ್ಯ ನಿಮಗೆ ಇಲ್ಲ ಎಂದು ಹೇಳಿದ ಮಾತು ಕೆಲವು ಕಾಲ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಮರಿತಿಬ್ಬೇಗೌಡ ಅವರ ಮಾತಿಗೆ ಪ್ರತಿಯಾಗಿ ನಿರಾಣಿ ಸಹ ಸರಿಯಾಗಿ ಮಾತನಾಡುವ ಯೋಗ್ಯತೆ ನಿಮಗೆ ಇಲ್ಲ, ಬಾಯಿಗೆ ಬಂದ ಹಾಗೆ ಮಾತನಾಡಬೇಡಿ ಎಂದು ಸಿಟ್ಟಿನಿಂದ ಹೇಳಿದರು. ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಸಹ ಮರಿತಿಬ್ಬೇಗೌಡ ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು.

ಈ ಮಧ್ಯ ಮರಿತಿಬ್ಬೇಗೌಡ ಅವರು ಬಾವಿಗೆ ಬಂದು ಪ್ರಕರಣವನ್ನು ತನಿಖೆಗೆ ಒಪ್ಪಿಸಬೇಕೆಂದು ಪಟ್ಟು ಹಿಡಿದರು. ಆದರೆ ಇದಕ್ಕೆ ಮಣಿಯದ ಸಭಾಪತಿ ಬಸವರಾಜ ಹೊರಟ್ಟಿಅವರು, ಮುಂದಿನ ಪ್ರಶ್ನೆ ಕೈಗೆತ್ತಿಕೊಂಡಾಗ, ಮರಿತಿಬ್ಬೇಗೌಡ ಅವರಿಗೆ ಪುನಃ ಮಾತನಾಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಆದರೆ ಈಗಾಗಲೇ ತಾವು ಮುಂದಿನ ಪ್ರಶ್ನೆ ಕೈಗೆತ್ತಿಕೊಂಡಿದ್ದು, ಮಾತನಾಡಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಆಗ ಕಾಂಗ್ರೆಸ್‌ ಸದಸ್ಯರು ಸಭಾಪತಿಗಳ ಮುಂದೆ ಬಂದು ಧರಣಿ ಆರಂಭಿಸಿದರು. ಕೊನೆಗೆ ಮರಿತಿಬ್ಬೇಗೌಡ ಅವರು ಬೇರೆ ರೂಪದಲ್ಲಿ ವಿಷಯ ಪ್ರಸ್ತಾಪಿಸದರೆ ಅವಕಾಶ ನೀಡುವುದಾಗಿ ಹೇಳಿದ ನಂತರ ಧರಣಿ ಹಿಂಪಡೆಯಲಾಯಿತು.