Bengaluru: ಜೆಪಿ ನಗರ ಡೆಲ್ಮಿಯಾ ಫ್ಲೈಓವರ್ ಬಚಾವ್: ಅದರ ಮೇಲೆಯೇ ಮೆಟ್ರೋ ಮಾರ್ಗ
ನಮ್ಮ ಮೆಟ್ರೋ 3ನೇ ಹಂತದ ಕಾಮಗಾರಿ ಕೈಗೊಳ್ಳುವ ವೇಳೆ ಜೆ.ಪಿ.ನಗರದ ಡೆಲ್ಮಿಯಾ ಸರ್ಕಲ್‌ನ ಫ್ಲೈ ಓವರನ್ನು ಉಳಿಸಿಕೊಂಡೇ ಅದರ ಮೇಲ್ಭಾಗದಲ್ಲಿ ಮೆಟ್ರೋ ಕಾರಿಡಾರ್ ನಿರ್ಮಿಸಲು ಬಿಎಂಆರ್‌ಸಿಎಲ್ ಯೋಜಿಸಿದೆ.
ಬೆಂಗಳೂರು (ಫೆ.22): ನಮ್ಮ ಮೆಟ್ರೋ 3ನೇ ಹಂತದ ಕಾಮಗಾರಿ ಕೈಗೊಳ್ಳುವ ವೇಳೆ ಜೆ.ಪಿ.ನಗರದ ಡೆಲ್ಮಿಯಾ ಸರ್ಕಲ್‌ನ ಫ್ಲೈ ಓವರನ್ನು ಉಳಿಸಿಕೊಂಡೇ ಅದರ ಮೇಲ್ಭಾಗದಲ್ಲಿ ಮೆಟ್ರೋ ಕಾರಿಡಾರ್ ನಿರ್ಮಿಸಲು ಬಿಎಂಆರ್‌ಸಿಎಲ್ ಯೋಜಿಸಿದೆ. ಈಗಾಗಲೇ ರಾಜ್ಯ ಸರ್ಕಾರ ಮೂರನೇ ಹಂತದ ಮೆಟ್ರೋ ಯೋಜನೆಯ ಎರಡು ಕಾರಿಡಾರ್‌ಗಳ ತಾತ್ವಿಕ ಒಪ್ಪಿಗೆಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಜೆ.ಪಿ.ನಗರದ 4ನೇ ಹಂತದಿಂದ ಕೆಂಪಾಪುರವರೆಗೆ 32.15 ಕಿ.ಮೀ. ಹಾಗೂ ಹೊಸಹಳ್ಳಿಯಿಂದ ಮಾಗಡಿ ಮಾರ್ಗವಾಗಿ ಕಡಬಗೆರೆ ನಡುವೆ 12.5 ಕಿ.ಮೀ. ಮೆಟ್ರೋ ಕಾರಿಡಾರ್ ಈ ಹಂತದಲ್ಲಿ ನಿರ್ಮಾಣವಾಗಲಿವೆ. 16,300 ಕೋಟಿ ಮೊತ್ತದ ಈ ಕಾಮಗಾರಿಗೆ ಕೇಂದ್ರ ಮಂಜೂರಾತಿ ನೀಡಿದ ಬಳಿಕ ಕಾಮಗಾರಿ ಆರಂಭವಾಗಲಿದೆ. ಈಗಾಗಲೇ ಯೋಜನೆ ಸಿವಿಲ್ ಕಾಮಗಾರಿಗಳ ಸಂಪೂರ್ಣ ರೂಪುರೇಷೆ ಸಿದ್ಧವಾಗಿದೆ. ಜೆ.ಪಿ.ನಗರ-ಕೆಂಪಾಪುರ ಮಾರ್ಗದಲ್ಲಿ ಜೆ.ಪಿ.ನಗರದ ಡೆಲ್ಮಿಯಾ ಸರ್ಕಲ್ ಫ್ಲೈಓವರ್ ಎದುರಾಗಿದೆ.
Namma Metro ಪಿಲ್ಲರ್ ದುರಂತ: ಮೆಟ್ರೋ ಎಂಡಿ ಅಜುಂ ಪರ್ವೇಜ್‌ಗೆ ಪೊಲೀಸರ ಗ್ರಿಲ್
ಆದರೆ, ಫ್ಲೈಓವರ್ ತೆರವು ಮಾಡದೆ ಇದರ ಮೇಲ್ಭಾಗದಲ್ಲೇ ಕಾರಿಡಾರ್ ನಿರ್ಮಿಸಿ ಮುಂದುವರಿಯಲು ಬಿಎಂಆರ್‌ಸಿಎಲ್ ಯೋಜನೆ ರೂಪಿಸಿದೆ. ಕೇವಲ ನಾಲ್ಕು ವರ್ಷಗಳ ಹಿಂದಷ್ಟೇ ಅಂದರೆ 2018ರಲ್ಲಿ ಬಿಬಿಎಂಪಿ .26 ಕೋಟಿ ವ್ಯಯಿಸಿ ಈ ಫ್ಲೈ ಓವರ್ ನಿರ್ಮಿಸಿದೆ. ಹಣದ ಪೋಲು ತಡೆಗಾಗಿ ಈ ಮೆಲ್ಸೇತುವೆ ಉಳಿಸಿಕೊಂಡೇ ಮೆಟ್ರೋ ಮಾರ್ಗ ನಿರ್ಮಿಸಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಯೋಜನೆ ಹೀಗಿದೆ: ಯೋಜನೆಯಾಗಿ ಬಿಎಂಆರ್‌ಸಿಎಲ್ ಮೇಲ್ಸೇತುವೆಯ ಇಕ್ಕೆಲದಲ್ಲಿ 767 ಚದರ ಮೀಟರ್ ಜಾಗವನ್ನು ಭೂಸ್ವಾಧೀನ ಮಾಡಿಕೊಳ್ಳಲಿದೆ. ಎರಡೂ ಬದಿ ಪಿಲ್ಲರ್ ನಿರ್ಮಿಸಿ 12 ಮೀಟರ್ ಎತ್ತರದಲ್ಲಿ ಮಾರ್ಗ ನಿರ್ಮಾಣವಾಗಲಿದೆ. ಪಿಲ್ಲರ್ ಮೇಲೆ ವೈಡಕ್ಟ್ ಅಳವಡಿಸಲಾಗುತ್ತದೆ. ಅದರ ಮೇಲ್ಭಾಗದಲ್ಲಿ ಮೆಟ್ರೋ ಹಳಿ ಬರಲಿದೆ. ಪಿಲ್ಲರನ್ನು ಸಿಮೆಂಟ್ ಅಥವಾ ಕಬ್ಬಿಣದಲ್ಲಿ ನಿರ್ಮಿಸಲಾಗುತ್ತದೆ. ಅದರ ಮೇಲೆ ಬಿಮ್ ಸಪೋರ್ಚ್‌ನಲ್ಲಿ ಕಾರಿಡಾರ್ ನಿರ್ಮಾಣ ಮಾಡಲಾಗುವುದು ಎಂದು ಬಿಎಂಆರ್‌ಸಿಎಲ್ ಮುಖ್ಯ ಎಂಜಿನಿಯರ್ ಯಶವಂತ್ ಚೌಹಾಣ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಬಿಎಂಆರ್‌ಸಿಎಲ್ ಈ ಹಿಂದೆ ಜಯದೇವ ಹಾಸ್ಪಿಟಲ್ ಬಳಿ ಮೆಟ್ರೋ ಕಾರಿಡಾರ್ ನಿರ್ಮಿಸುವಾಗ ಫ್ಲೈ ಓವರನ್ನು ತೆರವುಗೊಳಿಸಿತ್ತು. ಅಲ್ಲಿ ಮೆಟ್ರೋ ನಿಲ್ದಾಣ ನಿರ್ಮಾಣಕ್ಕಾಗಿ ಮೇಲ್ಸೇತುವೆ ತೆರವು ಅನಿವಾರ್ಯವಾಗಿತ್ತು. ಸಾಮಾನ್ಯವಾಗಿ ರಸ್ತೆ ಮಧ್ಯವೇ ಮೆಟ್ರೋ ಪಿಲ್ಲರ್ ನಿರ್ಮಿಸಿ ಕಾರಿಡಾರ್ ರೂಪಿಸಲಾಗುತ್ತಿದೆ. ಆದರೆ ಡೆಲ್ಮಿಯಾ ಸರ್ಕಲ್‌ನಲ್ಲಿ ಅಕ್ಕಪಕ್ಕ ಹೆಚ್ಚು ಭೂಸ್ವಾಧೀನ ಮಾಡಿಕೊಳ್ಳಲು ಅವಕಾಶವಿಲ್ಲ. ಹೀಗಾಗಿ ಹೊಸ ಸ್ವರೂಪದಲ್ಲಿ ಇಲ್ಲಿ ಮೆಟ್ರೋ ಮಾರ್ಗ ರೂಪಿಸಲು ತೀರ್ಮಾನಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಕೆಂಗೇರಿ-ಚಲ್ಲಘಟ್ಟ ಮೆಟ್ರೋ ಶೀಘ್ರ: ನೇರಳೆ ಮಾರ್ಗದ ಕೆಂಗೇರಿ-ಚಲ್ಲಘಟ್ಟನಡುವಿನ ಮೆಟ್ರೋ ಮಾರ್ಗ ಜೂನ್‌ನಲ್ಲಿ ಸಾರ್ವಜನಿಕರಿಗೆ ಮುಕ್ತವಾಗುವ ನಿರೀಕ್ಷೆಯಿದೆ. ಪ್ರಸ್ತುತ ಕೆಂಗೇರಿವರೆಗೆ ನಮ್ಮ ಮೆಟ್ರೋ ರೈಲ್ವೆ ಸೇವೆಯಿದ್ದು, ಚಲ್ಲಘಟ್ಟವರೆಗೆ 2 ಕಿ.ಮೀ. ವಿಸ್ತರಣೆ ಕಾಮಗಾರಿ ಬಹುತೇಕ ಅಂತಿಮ ಹಂತದಲ್ಲಿದೆ. ಇಲ್ಲಿ ಸಿಗ್ನಲ್, ವಿದ್ಯುದಿಕರಣ ಸೇರಿ ಇತರೆ ಕಾಮಗಾರಿ ಇನ್ನಷ್ಟೇ ಆಗಬೇಕಿದೆ. ಚಲ್ಲಘಟ್ಟದಲ್ಲಿ ಚಿಕ್ಕ ನಿಲ್ದಾಣ ನಿರ್ಮಾಣ ಹಂತದಲ್ಲಿದ್ದು, ನೆಲಮಹಡಿಯಲ್ಲಿ ಟಿಕೆಟ್ ಕೌಂಟರ್, ಮೊದಲ ಮಹಡಿಯಲ್ಲಿ ರೈಲ್ವೆ ಪ್ಲಾಟ್‌ಫಾರಂ ಇದೆ.
Namma Metro ಪಿಲ್ಲರ್ ದುರಂತಕ್ಕೆ ನಿರ್ಲಕ್ಷ್ಯ ಕಾರಣ?: ಐಐಎಸ್‌ಸಿಯಿಂದ ವರದಿ ಸಲ್ಲಿಕೆ ನಿರೀಕ್ಷೆ
ಕೋಟ್ಯಂತರ ರುಪಾಯಿ ವ್ಯಯಿಸಿದ ಡೆಲ್ಮಿಯಾ ಫ್ಲೈಓವರ್ ನಿರ್ಮಾಣವಾಗಿ ಐದು ವರ್ಷಗಳೂ ಆಗಿಲ್ಲ. ಹೀಗಾಗಿ ಅದನ್ನು ಉಳಿಸಿಕೊಂಡೇ ಮೆಟ್ರೋ ಕಾರಿಡಾರ್ ನಿರ್ಮಿಸಲು ಬಿಎಂಆರ್‌ಸಿಎಲ್‌ನಿಂದ ಯೋಜನೆ ರೂಪಿಸಿದ್ದೇವೆ.
-ಯಶವಂತ್ ಚೌಹಾಣ್, ಬಿಎಂಆರ್‌ಸಿಎಲ್ ಮುಖ್ಯ ಎಂಜಿನಿಯರ್