Asianet Suvarna News Asianet Suvarna News

ಯಾದಗಿರಿ: ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಗಲಾಟೆ, ಕಲ್ಲು ತೂರಾಟ, ಉದ್ವಿಗ್ನ ವಾತಾವರಣ

ಸುರಪುರದ ಹಾಲಿ ಶಾಸಕ ರಾಜೂಗೌಡ ಹಾಗೂ ಮಾಜಿ ಶಾಸಕ, ಕಾಂಗ್ರೆಸ್‌ನ ರಾಜಾ ವೆಂಕಟಪ್ಪ ನಾಯಕರ ನಡುವಿನ ಬಣಗಳ ಜಂಗೀಕುಸ್ತಿಗೆ ಇದು ಸಾಕ್ಷಿಯಾದಂತಾಗಿದೆ. ಕಲ್ಲು ತೂರಾಟದಲ್ಲಿ ಹದಿನೈದಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ. 

Clash Between BJP Congress Workers in Yadgir grg
Author
First Published Apr 6, 2023, 8:45 PM IST

ಯಾದಗಿರಿ(ಏ.06):  ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಜಿಲ್ಲೆಯ ಸುರಪುರದಲ್ಲಿ ನಾಯಕರ ನಡುವಿನ ರಾಜಕೀಯ ಕಲಹ ಮತ್ತಷ್ಟು ಕಾವೇರುತ್ತಿರುತ್ತಿದೆ. ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದಲ್ಲಿ ಇಂದು(ಗುರುವಾರ) ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವಿನ ವಾಗ್ವಾದ ಕಲ್ಲು ತೂರಾಟದ ಘಟನೆಗೆ ಸಾಕ್ಷಿಯಾಗಿದೆ. ಇದು ಕಾಲಜ್ಞಾನಿ ಬಸವಣ್ಣನ ನಾಡು ಕೊಡೇಕಲ್ ಗ್ರಾಮದಲ್ಲಿ ಉದ್ವಿಗ್ನಕ್ಕೆ ಕಾರಣವಾಗಿದೆ. 

ಸುರಪುರದ ಹಾಲಿ ಶಾಸಕ ರಾಜೂಗೌಡ ಹಾಗೂ ಮಾಜಿ ಶಾಸಕ, ಕಾಂಗ್ರೆಸ್‌ನ ರಾಜಾ ವೆಂಕಟಪ್ಪ ನಾಯಕರ ನಡುವಿನ ಬಣಗಳ ಜಂಗೀಕುಸ್ತಿಗೆ ಇದು ಸಾಕ್ಷಿಯಾದಂತಾಗಿದೆ. ಕಲ್ಲು ತೂರಾಟದಲ್ಲಿ ಹದಿನೈದಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ. ಚುನಾವಣಾ ಪ್ರಚಾರಕ್ಕೆಂದು  ನಾರಾಯಣಪುರಕ್ಕೆ ಹೊರಟಿದ್ದ ವೇಳೆ, ಕೊಡೇಕಲ್ ಪಟ್ಟಣದಲ್ಲಿ ಇಂತಹ ಘಟನೆ ನಡೆದಿದೆ. ಕಾಲಜ್ಞಾನಿ ಜಾತ್ರೆಯ ವೇಳೆ ಜನಸಂದಣಿ ಇತ್ತು. ಈ ವೇಳೆ ವಾಹನಗಳ ಹಾರ್ನ್ ಹಾಕಿದ್ದು ಘರ್ಷಣೆಗೆ ಕಾರಣ ಎನ್ನಲಾಗುತ್ತಿದೆ. 

ಗುರುಮಠಕಲ್‌: ಕಾಂಗ್ರೆಸ್‌, ಜೆಡಿಎಸ್‌ ಕಾರ್ಯಕರ್ತರ ಮಧ್ಯೆ ಘರ್ಷಣೆ, ಚಿಂಚನಸೂರು ಮೇಲೆ ಹಲ್ಲೆ ಯತ್ನ

ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ್, ಸುರಪುರದ ಸಂಸ್ಥಾನದ ರಾಜಾ ಕೃಷ್ಣಪ್ಪ ನಾಯಕ್ ಹಾಗೂ ಶಾಂತಗೌಡ ಚೆನ್ನಪಟ್ಟಣ ಮುಂತಾದವರು ಉಪಸ್ಥಿತರಿದ್ದರು. ಸಿನಿಮೀಯ ರೀತಿ ನಡೆದ ಕಲ್ಲು ತೂರಾಟದಲ್ಲಿ ಜನ ಎಲ್ಲೆಂದರಲ್ಲಿ ಸುರಕ್ಷಿತ ತಾಣಗಳಲ್ಲಿ ದೌಡಾಯಿಸಿದರೆ, ಇದನ್ನು ನಿಯಂತ್ರಿಸಬೇಕಿದ್ದ ಪೊಲೀಸರೇ ಕ್ಷಣಕಾಲ ಗೊಂದಲಕ್ಕೀಡಾಗಿ, ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಕಲ್ಲುಗಳ ತೂರಾಟ ಜಾಸ್ತಿಯಾಗಿದೆ. ೨೦ಕ್ಕೂ ಹೆಚ್ಚು ವಾಹನಗಳು ಈ ಗಲಾಟೆಯಲ್ಲಿ ಜಖಂಗೊಂಡಿವೆ. 

ಕೊಡೇಕಲ್ ಗ್ರಾಮದಲ್ಲಿ ಕಾಲಜ್ಞಾನಿ ಬಸವಣ್ಣ ಪಲ್ಲಕ್ಕಿ ಉತ್ಸವ ನಡೆದಿತ್ತು. ಇದರಿಂದ ಭಾರೀ ಪ್ರಮಾಣದಲ್ಲಿ ಭಕ್ತರು ಸೇರಿದ್ದರು. ಇದರಿಂದ ವಾಹನಗಳು ಹೋಗಲು ದಾರಿಗಾಗಿ ಹಾರ್ನ್ ಹೊಡೆದಿದ್ದಾರೆ. ಇದೇ ಗಲಾಟೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಇದೇ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಕಾರಿಗೆ ಅಡ್ಡವಾಗಿ ಕಾರೊಂದನ್ನು ನಿಲ್ಲಿಸಿದ್ದಾರೆ. ಇಲ್ಲಿ ವಾಗ್ವಾದ ನಡೆದಿದೆ. ನೋಡ ನೋಡುತ್ತಿದ್ದಂತೆಯೇ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಕಲ್ಲು ತೂರಾಟ ನಡೆದಿದೆ.

ಗಲಾಟೆಯ ಚಿತ್ರೀಕರಣವನ್ನು ಮಾಡುತ್ತಿದ್ದ ಸಾರ್ವಜನಿಕರ ಕೆಲವು ಮೊಬೈಲ್‌ಗಳನ್ನು ಕಸಿದ ಕೆಲವರು, ಆ ಮೊಬೈಲ್‌ಗಳನ್ನು ಕಲ್ಲಿನಿಂದ ಜಜ್ಜಿ ಹಾಕಿದ್ದಾರೆಂಬ ಮಾತುಗಳಿವೆ. ಹೀಗಾಗಿ, ಪೊಲೀಸರೂ ಸಹ ಘಟನೆಯ ಚಿತ್ರೀಕರಣವನ್ನು ಮಾಡದಂತೆ ಸೂಚಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಸದ್ಯ, ಕೊಡೇಕಲ್ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 

Follow Us:
Download App:
  • android
  • ios