ಗುರುಮಠಕಲ್: ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ಮಧ್ಯೆ ಘರ್ಷಣೆ, ಚಿಂಚನಸೂರು ಮೇಲೆ ಹಲ್ಲೆ ಯತ್ನ
ಅಭಿವೃದ್ಧಿ ಕಾರ್ಯ ಮಾಡಿಲ್ಲ. ಈಗ ಯಾಕೆ ಬಂದಿರಿ, ದರ್ಗಾದಲ್ಲಿ ನೀರಿನ ವ್ಯವಸ್ಥೆ ಮಾಡಿಲ್ಲ ಎಂದು ಪ್ರಶ್ನಿಸಿದ ಜೆಡಿಎಸ್ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಾಬುರಾವ ಚಿಂಚನಸೂರ ಮೇಲೆ ಮೇಕೆ ಚರ್ಮ ಹಾಗೂ ನೀರಿನ ಬಾಟಲ್ ಎಸೆದು ಅವಮಾನ ಮಾಡಿದ್ದಾರೆನ್ನಲಾಗಿದೆ.
ಗುರುಮಠಕಲ್(ಏ.05): ತಾಲೂಕಿನ ಯದ್ಲಾಪೂರ ಗ್ರಾಮದ ಹೊರವಲಯದ ಮೌಲಾಲಿ ಬೆಟ್ಟದ ಆವರಣದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಮಧ್ಯೆ ಗಲಾಟೆ ನಡೆದಿದೆ. ಬೆಟ್ಟದ ಮೇಲಿನ ಮೌಲಾಲಿ ದರ್ಗಾದಲ್ಲಿ ನಡೆದ ಯದ್ಲಾಪುರ ಗ್ರಾಮಸ್ಥರೊಬ್ಬರೊಬ್ಬರ ಹರಕೆ ತೀರಿಸುವ ಕಾರ್ಯಕ್ರಮಕ್ಕೆ ಮಾಜಿ ಎಂಎಲ್ಸಿ ಬಾಬುರಾವ ಚಿಂಚನಸೂರ ಆಗಮಿಸಿ ಹಿಂದಿರುಗಿದ್ದರು. ಚಿಂಚನಸೂರ ಅವರು ಬಂದಾಗ ಕೆಲವರು ತಮ್ಮ ಸಮಸ್ಯೆಗಳ ಕುರಿತು ಬೇಸರ ವ್ಯಕ್ತಪಡಿಸಿ, ತರಾಟೆಗೆ ತೆಗೆದುಕೊಂಡಿದ್ದರು. ಚಿಂಚನಸೂರ ಹಿಂದಿರುಗಿದ ಮೇಲೆ ಸ್ಥಳೀಯ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಮಾತಿಗೆ ಮಾತು ಬೆಳೆದು ಕೈಮಿಲಾಯಿಸಿದ್ದಾರೆ. ನಂತರ ಸ್ಥಳೀಯರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸ್ಥಳಕ್ಕೆ ಇನ್ಸ್‌ಪೆಕ್ಟರ್ ಅಂಬಾರಾಯ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆಯ ಕುರಿತು ಸದ್ಯ ವಾಟ್ಸಾಪ್‌ನಲ್ಲಿ ವಿಡಿಯೋ ತುಣಕು ಹರಿದಾಡುತ್ತಿದೆ.
ಸಿದ್ದರಾಮಯ್ಯ ಸಿಎಂ ಆಗಲೆಂದು ಶಬರಿಮಲೆಗೆ ಕಾಲ್ನಡಿಗೆ ಹೊರಟ ಅಭಿಮಾನಿಗಳು..!
ಅಭಿವೃದ್ಧಿ ಕಾರ್ಯ ಮಾಡಿಲ್ಲ. ಈಗ ಯಾಕೆ ಬಂದಿರಿ, ದರ್ಗಾದಲ್ಲಿ ನೀರಿನ ವ್ಯವಸ್ಥೆ ಮಾಡಿಲ್ಲ ಎಂದು ಪ್ರಶ್ನಿಸಿದ ಜೆಡಿಎಸ್ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಾಬುರಾವ ಚಿಂಚನಸೂರ ಮೇಲೆ ಮೇಕೆ ಚರ್ಮ ಹಾಗೂ ನೀರಿನ ಬಾಟಲ್ ಎಸೆದು ಅವಮಾನ ಮಾಡಿದ್ದಾರೆನ್ನಲಾಗಿದೆ. ಊರಿಗೆ ಬಂದಾಗ ನೀರಿನ ಸಮಸ್ಯೆ ನಿವಾರಿಸುತ್ತೇನೆ, ಈಗ ದೇವರ ದರ್ಶನ ಮಾಡಿಕೊಳ್ಳಲು ಬಂದಿದ್ದೇನೆ ಎಂದು ಸಮಜಾಯಿಸಿ ಬಾಬುರಾವ್ ಅಲ್ಲಿಂದ ತೆರಳಿದರು.
ನಂತರ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಲ್ಲಿಗೆ ದೇವರ ದರ್ಶನ ಪಡೆಯಲು ಬಂದಿದ್ದ ಇನ್ನೂ ಕೆಲವು ಯುವಕರು ನಮ್ಮ ನಾಯಕನಿಗೆ ಅವಮಾನ ಮಾಡಿರುವುದು ಸಹಿಸುವುದಿಲ್ಲ ಎಂದು ಜೆಡಿಎಸ್ ಕಾರ್ಯಕರ್ತರ ಜತೆಗೆ ವಾಗ್ವಾದಕ್ಕೆ ಇಳಿದು ಅದು ಹೊಡಿ-ಬಡಿಯುವ ಹಂತಕ್ಕೆ ತಲುಪಿತು. ಅದರಲ್ಲಿ ಕಾಂಗ್ರೆಸ್‌ನ 5 ಜನರಿಗೆ ತಲೆಗೆ ಗಾಯಗಳಾಗಿದ್ದು, ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೆಡಿಎಸ್ನ ಒಬ್ಬರಿಗೆ ಮಾತ್ರ ತಲೆಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರಿಗೆ ಚಿಕ್ಕ ಪುಟ್ಟಗಾಯಗಳಾಗಿದ್ದು, ಚಿಕಿತ್ಸೆ ನಂತರ ಮನೆಗೆ ತೆರಳಿದರು. ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಮಾತುಕತೆ ಮೂಲಕ ಸಂಧಾನದ ಕಸರತ್ತು ನಡೆಸುತ್ತಿದ್ದಾರೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.