ಸಾಕ್ಷ್ಯಧಾರಗಳ ಕೊರತೆ ಹಿನ್ನೆಲೆಯಲ್ಲಿ ರಾಜ್ಯ ಸಹಕಾರ ಮಂತ್ರಿ ಕೆ.ಎನ್‌.ರಾಜಣ್ಣ ಅವರ ಮೇಲಿನ ಹನಿಟ್ರ್ಯಾಪ್‌ ಯತ್ನ ಆರೋಪ ಕುರಿತ ವಿಚಾರಣೆಯನ್ನು ಮುಕ್ತಾಯಗೊಳಿಸಿ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲು ಅಪರಾಧ ತನಿಖಾ ಇಲಾಖೆ (ಸಿಐಡಿ) ಸಿದ್ಧತೆ ನಡೆಸಿದೆ.

ಬೆಂಗಳೂರು (ಮೇ.30): ಸಾಕ್ಷ್ಯಧಾರಗಳ ಕೊರತೆ ಹಿನ್ನೆಲೆಯಲ್ಲಿ ರಾಜ್ಯ ಸಹಕಾರ ಮಂತ್ರಿ ಕೆ.ಎನ್‌.ರಾಜಣ್ಣ ಅವರ ಮೇಲಿನ ಹನಿಟ್ರ್ಯಾಪ್‌ ಯತ್ನ ಆರೋಪ ಕುರಿತ ವಿಚಾರಣೆಯನ್ನು ಮುಕ್ತಾಯಗೊಳಿಸಿ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲು ಅಪರಾಧ ತನಿಖಾ ಇಲಾಖೆ (ಸಿಐಡಿ) ಸಿದ್ಧತೆ ನಡೆಸಿದೆ. ಈ ಸಂಬಂಧ ಸಿಐಡಿ ಡಿಜಿಪಿ ಆಗಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಪ್ರಭಾರ) ಡಾ.ಎಂ.ಎ.ಸಲೀಂ ಅವರೊಂದಿಗೆ ವಿಚಾರಣಾ ತಂಡದ ಅಧಿಕಾರಿಗಳು ಸಮಾಲೋಚನೆ ನಡೆಸಿದ್ದಾರೆ.

ಈ ವಿಚಾರಣಾ ವರದಿ ಬಗ್ಗೆ ಸಲೀಂ ಅವರ ಪರಾಮರ್ಶೆ ಬಳಿ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ ಎಂದು ಮೂಲಗಳು ಹೇಳಿವೆ. ಸಹಕಾರ ಸಚಿವರಿಗೆ ಹನಿಟ್ರ್ಯಾಪ್ ಯತ್ನ ಆರೋಪ ಕುರಿತ ವಿಚಾರಣೆ ನಡೆದಿದ್ದು, ಇನ್ನು ಅಂತಿಮ ವರದಿ ಸಲ್ಲಿಕೆಯಾಗಿಲ್ಲ. ಈ ಬಗ್ಗೆ ಡಿಜಿ-ಐಜಿಪಿ ಅವರ ನಿರ್ದೇಶನ ಬಳಿಕ ಮುಂದುವರೆಯುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವಿಧಾನಸಭಾ ಅಧಿವೇಶನ ವೇಳೆ ತಮಗೆ ಹನಿಟ್ರ್ಯಾಪ್‌ ಯತ್ನ ನಡೆದಿತ್ತು ಎಂದು ಸಚಿವ ರಾಜಣ್ಣ ಸ್ಫೋಟಕ ಹೇಳಿಕೆ ಕೊಟ್ಟಿದ್ದರು.

ತರುವಾಯ ಈ ಬಗ್ಗೆ ವಿಚಾರಣೆ ನಡೆಸಿ ಕಾನೂನು ಕ್ರಮ ಜರುಗಿಸುವಂತೆ ಗೃಹ ಸಚಿವರಿಗೆ ಅವರು ಮನವಿ ಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಸಿಐಡಿಗೆ ಸರ್ಕಾರ ಸೂಚಿಸಿತ್ತು. ಆದರೆ ವಿಚಾರಣೆ ವೇಳೆ ಆರೋಪಕ್ಕೆ ಪೂರಕವಾದ ಪುರಾವೆಗಳು ಸಿಐಡಿಗೆ ಲಭ್ಯವಾಗದೆ ಪ್ರಕರಣ ಸವಾಲಾಗಿತ್ತು. ಅಲ್ಲದೆ, ತಮ್ಮ ಆರೋಪಕ್ಕೆ ಸಚಿವ ರಾಜಣ್ಣ ಕೂಡ ವಿಚಾರಣೆ ನಡೆಸಿದಾಗ ಸ್ಪಷ್ಟ ಮಾಹಿತಿ ನೀಡಲಿಲ್ಲ. ಹೀಗಾಗಿ ಸಾಕ್ಷ್ಯಾಧಾರ ಕೊರತೆ ಮುಂದಿಟ್ಟು ವಿಚಾರಣೆಗೆ ಶುಭಂ ಹೇಳಲು ಸಿಐಡಿ ಮುಂದಾಗಿದೆ ಎಂದು ತಿಳಿದು ಬಂದಿದೆ.

ರೈತರು ಕೃಷಿ ಪದ್ಧತಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳಿ: ರಾಜ್ಯದ ರೈತರಿಗೆ,ಕೃಷಿ ಕಾರ್ಮಿಕರಿಗೆ ಕಾಂಗ್ರೆಸ್‌ ಸರ್ಕಾರ ಕೃಷಿ ಪದ್ಧತಿಯಲ್ಲಿ ಹೊಸ ಹೊಸ ತಂತ್ರಜ್ಞಾನ ಪರಿಚಯಿಸುತ್ತಿದ್ದು, ರೈತರು ಈ ಕೃಷಿ ಪದ್ಧತಿ ಅಳವಡಿಸಿಕೊಂಡು ಜೀವನ ಮಟ್ಟ ಸುಧಾರಿಸಿಕೊಳ್ಳುವಂತೆ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಕರೆ ನೀಡಿದರು. ಪಟ್ಟಣದ ಎಪಿಎಂಸಿ ಆವರಣದಲ್ಲಿ ಕೃಷಿ ಇಲಾಖೆಯಿಂದ ಗುಣ ನಿಯಂತ್ರಣ ಮತ್ತು ಆತ್ಮ ಯೋಜನೆಯಡಿ 2025- 26ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರೈತರು ವ್ಯವಸಾಯದಲ್ಲಿ ಹೆಚ್ಚು ರಾಸಾಯನಿಕ ಗೊಬ್ಬರ ಬಳಸದೇ ಸಾಂಪ್ರದಾಯಿಕ ಗೊಬ್ಬರ ಬಳಸಿ ಹೆಚ್ಚು ಲಾಭದ ಬೆಳೆಗಳನ್ನು ಬೆಳೆಯಬೇಕು. ಭೂಮಿಯ ಫಲವತ್ತತೆ ಕಾಪಾಡಲು ಮಣ್ಣನ್ನು ಸಕಾಲಕ್ಕೆ ಪರೀಕ್ಷೆಗೆ ಒಳಪಡಿಸಬೇಕು. ಮಾಗಿ ಉಳುಮೆ ಹಾಗೂ ಗೋಡು ಒಡೆಯುವ ಪದ್ಧತಿ ಕಣ್ಮರೆಯಾಗಿದ್ದು, ಕೃಷಿಗೆ ಸಂಬಂಧಿಸಿದಂತೆ ಹಿರಿಯರ ಮಾರ್ಗದರ್ಶನ ಪಡೆದು ಹೆಚ್ಚು ಲಾಭದಾಯಕ ಕೃಷಿ ಬೆಳೆಗಳನ್ನು ಬೆಳೆಯಲು ರೈತರು ಮುಂದಾಗಬೇಕು ಎಂದರು.