ಬಿಜೆಪಿ ವಲಯದಲ್ಲಿ ಈ ವಿಚಾರವೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಓರ್ವ ಬಿಜೆಪಿ ನಾಯಕನ ಸೋಲಿಗೆ ಇನ್ನೋರ್ವ ಬಿಜೆಪಿ ನಾಯಕ ಕಾರಣವಾಗಿದ್ದಾರೆ ಎನ್ನುವ ವಿಚಾರ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. 

ಹುಬ್ಬಳ್ಳಿ : ವಿಧಾನಸಭಾ ಚುನಾವಣೆಯಲ್ಲಿ ತಮ್ಮ ತಂದೆ ಸೋಲಿಗೆ ಸಂಸದ ಪ್ರಹ್ಲಾದ ಜೋಶಿ ಹಾಗೂ ಅವರ ಬೆಂಬಲಿಗರೇ ಕಾರಣ ಎಂದು ಮಾಜಿ ಶಾಸಕ ಎಸ್‌.ಐ. ಚಿಕ್ಕನಗೌಡರ ಪುತ್ರಿ ನಂದಾ ಫೇಸ್‌ಬುಕ್‌ನಲ್ಲಿ ಸಂದೇಶ ಬಿತ್ತರಿಸಿದ್ದು, ಬಿಜೆಪಿ ವಲಯದಲ್ಲಿ ಪರ- ವಿರೋಧ ಚರ್ಚೆಗೆ ಕಾರಣವಾಗಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕುಂದಗೋಳ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧೆಗೆ ಎಂ.ಆರ್‌.ಪಾಟೀಲ ಮತ್ತು ಎಸ್‌.ಐ.ಚಿಕ್ಕನಗೌಡರ ನಡುವೆ ಪೈಪೋಟಿ ಇತ್ತು. ಕೊನೆಗೆ ಚಿಕ್ಕನಗೌಡರ ಟಿಕೆಟ್‌ ಪಡೆದು ಸ್ಪರ್ಧಿಸಿದ್ದರು. ಇದನ್ನು ಸಹಿಸದ ಸಂಸದ ಜೋಶಿ ಮತ್ತು ಬೆಂಬಲಿಗರು ಬಹಿರಂಗವಾಗಿ ಕಾಂಗ್ರೆಸ್‌ ಅಭ್ಯರ್ಥಿ ಶಿವಳ್ಳಿಗೆ ಮತ ಹಾಕುವಂತೆ ಹೇಳುತ್ತಿದ್ದರು ಎಂದು ನಂದಾ ಆರೋಪಿಸಿದ್ದಾರೆ.

ಸಿ.ಎಸ್‌.ಶಿವಳ್ಳಿ ಅವರ ವಿಜಯೋತ್ಸವದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮಹೇಶಗೌಡ ಭಾಗಿಯಾಗಿದ್ದರು ಎನ್ನಲಾದ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿ, ‘ಮಾನ್ಯ ಸಂಸದರೇ ಏನಿದು’ ಎಂದು ನಂದಾ ಪ್ರಶ್ನಿಸಿದ್ದಾರೆ.

ಕೆಲವರು ನಂದಾ ಅವರನ್ನು ಫೇಸ್‌ಬುಕ್‌ ರಾಜಕಾರಣಿ ಎಂದು ಕಮೆಂಟ್‌ ಮಾಡಿದ್ದರೆ, ಕೆಲವರು ಈ ಸಲ ಸಂಸದ ಪ್ರಹ್ಲಾದ ಜೋಶಿ ಅವರಿಗೆ ಟಿಕೆಟ್‌ ನೀಡಬಾರದು. ಸಂಸದ ಹಠಾವೋ ಬಿಜೆಪಿ ಬಚಾವೋ ಎಂದು ಒತ್ತಾಯಿಸಿ ಕಮೆಂಟ್‌ ಮಾಡಿದ್ದಾರೆ.

ನಮ್ಮ ತಂದೆ ಸೋಲಿಗೆ ಪಕ್ಷದ ಜಿಲ್ಲಾ ಕಾರ‍್ಯಕಾರಿಣಿ ಸದಸ್ಯ ಮಹೇಶಗೌಡ ಸೇರಿದಂತೆ ಕೆಲ ಮುಖಂಡರೇ ಕಾರಣ. ಪಕ್ಷ ವಿರೋಧಿ ಚಟುವಟಿಕೆ ಮಾಡಿದರು. ಅವರು ಶಿವಳ್ಳಿ ಅವರಿಗೆ ಮತ ಹಾಕಿ ಎಂದು ಹೇಳಿರುವುದಕ್ಕೆ ನಮ್ಮಲ್ಲಿ ಆಡಿಯೋ, ವಿಡಿಯೋ ಇದೆ.

-ನಂದಾ, ಮಾಜಿ ಶಾಸಕ ಚಿಕ್ಕನಗೌಡರ ಪುತ್ರಿ.