ಆದಿ ಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿಯವರ ಫೋನ್ ಟ್ಯಾಪಿಂಗ್ ಮಾಡಿಸಿದ್ದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಸರ್ಕಾರ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. 

ಬೆಂಗಳೂರು(ಏ.12): 2019ರಲ್ಲಿ ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡಿದ್ದ ಆದಿಚುಂಚನಗಿರಿ ಶ್ರೀಗಳ ಟೆಲಿಫೋನ್‌ ಕದ್ದಾಲಿಕೆ ಗದ್ದಲ ಮತ್ತೆ ಮುನ್ನೆಲೆಗೆ ಬಂದಿದೆ. ಫೋನ್‌ ಟ್ಯಾಪಿಂಗ್ ಮಾಡಿಸಿದ್ದೇ ಕುಮಾರಸ್ವಾಮಿ ಎಂದು ಕಾಂಗ್ರೆಸ್ಸಿಗರು ದೂರಿದ್ದಾರೆ. ಇದನ್ನು ಕುಮಾರಸ್ವಾಮಿ ನಿರಾಕರಿಸಿದ್ದಾರೆ.

ಚುಂಚಶ್ರೀಗಳ ಫೋನ್‌ ಕದ್ದಾಲಿಕೆ ಮಾಡಿಸಿದ್ದು ಎಚ್‌ಡಿಕೆ: ಚಲುವ

ಮಂಡ್ಯ: ಆದಿ ಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿಯವರ ಫೋನ್ ಟ್ಯಾಪಿಂಗ್ ಮಾಡಿಸಿದ್ದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಸರ್ಕಾರ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು ಫೋನ್‌ ಟ್ಯಾಪಿಂಗ್‌ ವಿಚಾರ ಪ್ರಸ್ತಾಪಿಸಿ, ಧರ್ಮ ಪೀಠವೊಂದಕ್ಕೆ ಅಗೌರವ ಇದಕ್ಕಿಂತ ಬೇಕಾ? ಎಂದು ಪ್ರಶ್ನಿಸಿದರು.

ತೆಲಂಗಾಣ ಐಬಿ ಮುಖ್ಯಸ್ಥರೇ ಫೋನ್ ಕದ್ದಾಲಿಕೆ ಕಿಂಗ್‌ಪಿನ್

ಇದೇ ವೇಳೆ ಆದಿಚುಂಚನಗಿರಿ ಮಠ, ಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ಪರ್ಯಾಯವಾಗಿ ಎರಡನೇ ಮಠ ಮತ್ತು ಎರಡನೇ ಸ್ವಾಮೀಜಿ ಹುಟ್ಟುಹಾಕಿದ್ದು ಯಾರು ಎಂದು ಪ್ರಶ್ನಿಸುವ ಮೂಲಕ ಗೌಡರ ಕುಟುಂಬ ಹೆಸರೆತ್ತದೆ ಅಸಮಾಧಾನ ಹೊರಹಾಕಿದರು. ಎಸ್ಸೆಂ ಕೃಷ್ಣಗೆ ಅವಕಾಶ ತಪ್ಪಿಸಿದ್ರು: ಒಕ್ಕಲಿಗ ನಾಯಕ ಎಸ್.ಎಂ.ಕೃಷ್ಣ ಅವರಿಗೆ 2ನೇ ಬಾರಿ ಮುಖ್ಯಮಂತ್ರಿ ಆಗುವ ಅವಕಾಶ ತಪ್ಪಿಸಿದ್ದೇ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಎಂದು ಇದೇ ವೇಳೆ ಚಲುವರಾಯಸ್ವಾಮಿ ಆರೋಪಿಸಿದರು.

ಚ್.ಡಿ.ಕುಮಾರಸ್ವಾಮಿ ಅವರು ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿದ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 2004ರಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿರಲಿಲ್ಲ. ಆ ಸಂದರ್ಭದಲ್ಲಿ ಎಸ್.ಎಂ.ಕೃಷ್ಣ ತಮಗೆ ಮತ್ತೊಂದು ಅವಕಾಶಕೊಡಿ ಎಂದು ಜೆಡಿಎಸ್‌ಗೆ ಕೇಳಿದ್ದರು. ಆಗ ನಾನು ಜೆಡಿಎಸ್‌ನಲ್ಲೇ ಇದ್ದೆ. ಅಂದು ಮಂಡ್ಯ ಜಿಲ್ಲೆಯ ಒಕ್ಕಲಿಗ ನಾಯಕ ಎಸ್.ಎಂ.ಕೃಷ್ಣರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಗದ್ದುಗೆಯಲ್ಲಿ ಕೂರಿಸುವ ಅವಕಾಶ ದೇವೇಗೌಡರು ಮತ್ತು ಜೆಡಿಎಸ್‌ ಕೈಯಲ್ಲಿತ್ತು. ಆದರೆ ಅವರು ಅದಕ್ಕೆ ಅವಕಾಶ ನೀಡಲಿಲ್ಲ ಎಂದರು.

ಅಂದು ಮಲ್ಲಿಕಾರ್ಜುನ ಖರ್ಗೆಯವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸುವ 2ನೇ ಆಯ್ಕೆಯೂ ಜೆಡಿಎಸ್‌ ಮುಂದಿತ್ತು. ಆದರೆ, ಅದನ್ನೂ ನಿರಾಕರಿಸಲಾಯಿತು. ಅದರ ಬದಲು ತಾವು ಹೇಳಿದಂತೆ ಕೇಳಬೇಕೆಂಬ ಕಾರಣಕ್ಕೆ ಧರ್ಮಸಿಂಗ್ ಅವರನ್ನು ಕರೆತಂದು ಮುಖ್ಯಮಂತ್ರಿ ಮಾಡಿದರು. ಆದರೆ ಈಗ ಚುನಾವಣೆ ಬಂತು ಎಂದು ಎಲ್ಲರ ಮನೆಗೆ ಹೋಗುತ್ತಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ಚಲುವರಾಯಸ್ವಾಮಿ ಗುಡುಗಿದರು.

ಕದ್ದಾಲಿಕೆ ಮಾಡಿದ್ದಕ್ಕೆ ಸೂಕ್ತ ದಾಖಲೆಗಳು ಇವೆ: ಡಿಸಿಎಂ ಡಿಕೆಶಿ

ಬೆಂಗಳೂರು: ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರ ಫೋನ್‌ ಟ್ಯಾಪಿಂಗ್‌ ಕುರಿತು ದಾಖಲೆಗಳಿವೆ. ಸೂಕ್ತ ಸಮಯದಲ್ಲಿ ದಾಖಲೆ ಸಮೇತ ಮಾತನಾಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಫೋನ್‌ ಕದ್ದಾಲಿಕೆ ಕುರಿತು ಸಚಿವ ಚಲುವರಾಯಸ್ವಾಮಿ ಅವರ ಆರೋಪ ಹಾಗೂ ಅದಕ್ಕೆ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರ ಪ್ರತಿಕ್ರಿಯೆಗೆ ತಿರುಗೇಟು ನೀಡಿದ ಅವರು, ಸ್ವಾಮೀಜಿಯವರ ಫೋನ್‌ ಟ್ಯಾಪಿಂಗ್‌ ಎಲ್ಲರಿಗೂ ಗೊತ್ತಿರುವ ವಿಚಾರ. ಈ ಬಗ್ಗೆ ಮಾತನಾಡಲು ತುಂಬಾ ನೋವಾಗುತ್ತದೆ. ಫೋನ್‌ ಕದ್ದಾಲಿಕೆ ಬಗ್ಗೆ ಎಲ್ಲಾ ದಾಖಲೆಗಳು ಇವೆ. ಆದರೂ ಈ ವಿಚಾರವನ್ನು ಈಗ ಮಾತನಾಡುವುದು ಸೂಕ್ತವಲ್ಲ, ಸಮಯ ಬಂದಾಗ ಮಾತನಾಡುತ್ತೇನೆ ಎಂದರು.

ಕುಮಾರಸ್ವಾಮಿ ಅವರು ಆದಿಚುಂಚನಗಿರಿ ಸ್ವಾಮೀಜಿ ಅವರನ್ನು ಭೇಟಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್‌ ಅವರು, ಕುಮಾರಸ್ವಾಮಿ, ಮಂಜುನಾಥ್ ಅವರು ಸ್ವಾಮೀಜಿಗಳ ಆಶೀರ್ವಾದ ಕೇಳಿದ್ದರಲ್ಲಿ ತಪ್ಪೇನಿಲ್ಲ. ಆದರೆ ಒಕ್ಕಲಿಗ ವ್ಯಕ್ತಿ ಮುಖ್ಯಮಂತ್ರಿಯಾಗಿದ್ದಾಗ ಸಮ್ಮಿಶ್ರ ಸರ್ಕಾರವನ್ನೇ ಕೆಡವಿದವರನ್ನು ಜತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ. ಇದರಿಂದ ಸಮಾಜಕ್ಕೆ ಅವರೇನು ಉತ್ತರ ಕೊಡುತ್ತಾರೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಜೆಡಿಎಸ್‌ ಎಲ್ಲಿದೆ? ಜೆಡಿಎಸ್‌ಗೆ ಅವರೇ ಮುಕ್ತಿ ಕೊಟ್ಟಿದ್ದಾರೆ. ಜೆಡಿಎಸ್ ಇರಬೇಕು ಎಂಬ ಆಸೆ ನನಗಿದೆ. ಆದರೆ ಅಳಿಯನನ್ನೇ ಬಿಜೆಪಿಗೆ ಕಳುಹಿಸಿ ಜೆಡಿಎಸ್ ವಿಸರ್ಜನೆ ಮಾಡುವ ಸ್ಥಿತಿಗೆ ಹೋಗಿದ್ದಾರೆ. ನಾವು ಹಿಂದೆ ಒಂದು ತಪ್ಪು ಮಾಡಿದ್ದೆವು. ಆದರೆ ಈಗ ಅದಕ್ಕಿಂತ ದೊಡ್ಡ ತಪ್ಪು ಜೆಡಿಎಸ್‌ನವರು ಮಾಡಿದ್ದಾರೆ ಎಂದು ಲೇವಡಿ ಮಾಡಿದರು.

ಎಸ್‌ಟಿಎಸ್‌, ಹೆಬ್ಬಾರ್‌ ಅವರನ್ನೇ ಕೇಳಿ!

ಎಸ್‌ಟಿಎಸ್‌ ಮತ್ತು ಹೆಬ್ಬಾರ್‌ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್‌, ಅವರಿಬ್ಬರು ಬಿಜೆಪಿಯ ಅಧಿಕೃತ ಶಾಸಕರು. ಅವರು ತಮ್ಮ ಕ್ಷೇತ್ರದ ವಿಚಾರವಾಗಿ ನಮ್ಮ ಜತೆ ಚರ್ಚೆ ಮಾಡಿದ್ದಾರೆ. ಅವರು ತಮ್ಮದೇ ಆದ ಲೆಕ್ಕಾಚಾರ, ನಂಬಿಕೆ ಮೇಲೆ ಯಾವ ಪಕ್ಷಕ್ಕೆ ಸಹಾಯ ಮಾಡುತ್ತಿದ್ದಾರೋ ನನಗೆ ಗೊತ್ತಿಲ್ಲ. ಈ ಬಗ್ಗೆ ಅವರನ್ನೇ ಕೇಳಿ ಎಂದು ಹೇಳಿದರು.

ದಿಂಗಾಲೇಶ್ವರ ಶ್ರೀಗೆ ಕಾಂಗ್ರೆಸ್‌ ಬೆಂಬಲವಿಲ್ಲ

ಧಾರವಾಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ದಿಂಗಾಲೇಶ್ವರ ಸ್ವಾಮೀಜಿ ಅವರನ್ನು ಬೆಂಬಲಿಸುವುದಾದರೆ, ನೇರವಾಗಿಯೇ ಬೆಂಬಲಿಸುತ್ತೇವೆ. ಗೌಪ್ಯವಾಗಿ ಏಕೆ ಬೆಂಬಲ ನೀಡಬೇಕು? ಸ್ವಾಮೀಜಿ ಅವರಿಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ಧಾರವಾಡ ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್‌ ಅಭ್ಯರ್ಥಿ ಘೋಷಿಸಿ ಬಿ-ಫಾರಂ ಸಹ ನೀಡಲಾಗಿದೆ. ಸ್ವಾಮೀಜಿ ಮೊದಲೇ ಈ ತೀರ್ಮಾನ ಕೈಗೊಂಡಿದ್ದರೆ, ಪರಿಸ್ಥಿತಿಯೇ ಭಿನ್ನವಾಗಿರುತ್ತಿತ್ತು. ಕಾಂಗ್ರೆಸ್‌ ಅಭ್ಯರ್ಥಿ ಈಗಾಗಲೇ ಕೆಲಸ ಮಾಡುತ್ತಿದ್ದಾರೆ. ಜಾತ್ಯತೀತ ತತ್ವಗಳ ಉಳಿವಿಗಾಗಿ ಶ್ರಮಿಸುತ್ತಿರುವ ಸ್ವಾಮೀಜಿಯ ಬಗ್ಗೆ ನಮಗೆ ಅಪಾರವಾದ ಗೌರವವಿದೆ ಎಂದು ಡಿ.ಕೆ.ಶಿವಕುಮಾರ್‌ ಸ್ಪಷ್ಪಪಡಿಸಿದರು.

ಕದ್ದಾಲಿಸಿದ್ದೇ ಆಗಿದ್ರೆ ನನ್ನ ಸರ್ಕಾರವೇಕೆ ಬೀಳ್ತಿತ್ತು?: ಎಚ್‌ಡಿಕೆ

ಅರಕಲಗೂಡು: ತಮ್ಮ ವಿರುದ್ಧ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಮಾಡಿರುವ ಆದಿಚುಂಚನಗಿರಿ ಶ್ರೀಗಳ ಫೋನ್‌ ಟ್ಯಾಪಿಂಗ್‌ ಆರೋಪಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಪೋನ್ ಟ್ಯಾಪಿಂಗ್ ಮಾಡಿದ್ದೇ ಆಗಿದ್ದರೆ ಅಂದು ನನ್ನ ಸರ್ಕಾರ ಯಾಕೆ ಬೀಳಲು ಬಿಡುತ್ತಿದ್ದೆ ಎಂದು ಕಿಡಿಕಾರಿರುವ ಅವರು, ಈ ಸಂಬಂಧ ತನಿಖೆ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.

ನಿರ್ಮಲಾನಂದ ಶ್ರೀಗಳ ಫೋನ್‌ ಕದ್ದಾಲಿಕೆಗೆ ಸಂಬಂಧಿಸಿ ಚಲುವರಾಯಸ್ವಾಮಿ ಮಾಡಿರುವ ಆರೋಪಕ್ಕೆಗುರುವಾರ ರಾಮನಾಥಪುರದಲ್ಲಿ ಪ್ರತಿಕ್ರಿಯಿಸಿದ ಅವರು, ‘ಬೇಕಿದ್ದರೆ ಫೋನ್‌ ಟ್ಯಾಪಿಂಗ್‌ಗೆ ಸಂಬಂಧಿಸಿ ತನಿಖೆ ಮಾಡಿಕೊಳ್ಳಲಿ. ಈವರೆಗೆ ತನಿಖೆ ಮಾಡಿದ್ರಲ್ವಾ, ಅದು ಏನಾಯ್ತು?’ ಎಂದರು. ಜತೆಗೆ, ಕೆಲವರು ಅಪಪ್ರಚಾರದ ಮೂಲಕ ಪ್ರಚಾರ ಗಿಟ್ಟಿಸುವ ಭ್ರಮೆಯಲ್ಲಿರುತ್ತಾರೆ ಎಂದು ಕಿಡಿಕಾರಿದರು.

ಆದಿ ಚುಂಚನಗಿರಿಗೆ ಪರ್ಯಾಯವಾಗಿ ಮತ್ತೊಂದು ಮಠ ಮಾಡಿದರು ಎಂಬ ಆರೋಪಕ್ಕೂ ಪ್ರತಿಕ್ರಿಯಿಸಿದ ಅವರು, ‘ಬೇರೆ ಸಮುದಾಯದಲ್ಲೂ ಅನೇಕ ಮಠಗಳಿವೆ, ನಮ್ಮ ಸಮುದಾಯದಲ್ಲೂ ಆ ರೀತಿಯ ಬೆಳವಣಿಗೆ ಆಗಲಿ ಎಂದು ಇನ್ನೊಬ್ಬರಿಗೂ ಸಹಾಯ ಮಾಡಿದ್ದೇವೆ’ ಎಂದರು.

ವರ್ಷದಲ್ಲಿ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗಲಿದೆ ಎಂಬ ಕುರಿತು ಪ್ರತಿಕ್ರಿಯಿಸಿ, ‘ಕಾದು ನೋಡಿ, ರಾಜಕೀಯ ಅಂದ ಮೇಲೆ ಹರಿಯೋ ನೀರಿದ್ದಂತೆ. ಯಾವಾಗ ಏನೇನಾಗುತ್ತೆ ಎಂಬುದು ನಮಗೂ ಗೊತ್ತಿಲ್ಲ, ಅವರಿಗೂ ಗೊತ್ತಿಲ್ಲ. ಅವರು ಸಚಿವರು, ನಾಯಕರು. ಹಾಗಾಗಿ ಹೇಳುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ಅವರನ್ನೇ ಕೇಳಿ’ ಎಂದು ಚಲುವರಾಯಸ್ವಾಮಿ ವಿರುದ್ಧ ವ್ಯಂಗ್ಯವಾಡಿದರು.

300 ಮೀ. ದೂರದಿಂದಲೇ ರೇವಂತ್ ಕರೆ ಆಲಿಸಲು ಇಸ್ರೇಲಿ ಉಪಕರಣ: ಫೋನ್‌ ಕದ್ದಾಲಿಕೆಯ ರಹಸ್ಯ ತಂತ್ರ ಬಯಲು

ಜೆಡಿಎಸ್ ಒಂದೂ ಸ್ಥಾನ ಗೆಲ್ಲಲ್ಲ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆಗೂ ತಿರುಗೇಟು ನೀಡಿದ ಅವರು, ‘ಅವರು ಭವಿಷ್ಯ ಹೇಳುವುದರಲ್ಲಿ ಎಕ್ಸ್‌ಪರ್ಟ್, ಅವರು ಜ್ಯೋತಿಷಿ ಅಲ್ವಾ? ಅವರ‌ ಬ್ಯಾಗ್ ತೆಗೆದರೆ ಜ್ಯೋತಿಷ್ಯದ ಸಾಕಷ್ಟು ಪುಸ್ತಕಗಳು ಸಿಗುತ್ತವೆ. ಅವರು ಸಂಶೋಧನೆ ಮಾಡಿರಬಹುದು. ಅದನ್ನೇ ಈಗ ಹೇಳಿದ್ದಾರೆ. ನಾವೂ ರಿಸರ್ಚ್ ಮಾಡಿದ್ದೇವೆ, ಈ ರಾಜ್ಯದಲ್ಲಿ ಕಾಂಗ್ರೆಸ್ ತೆಗೆಯಲು ಏನು ಮಾಡಬೇಕೋ ಜನ ಅದನ್ನು ಮಾಡುತ್ತಾರೆ. ಹಿಂದೆ ಹೋದ ಕಡೆ ಜನ ಕುಮಾರಸ್ವಾಮಿ ಮುಖ್ಯಮಂತ್ರಿ ಅಂತ ಕೂಗೋರು. ಈಗ ಕೇಂದ್ರದ ಮಂತ್ರಿ ಆಗ್ತಾರೆ ಅಂತ ಕೂಗು ಹಾಕುತ್ತಿದ್ದಾರೆ ಎಂದರು ಕುಮಾರಸ್ವಾಮಿ.

ಕಾಂಗ್ರೆಸ್ಸಿಗರು ಜೆಡಿಎಸ್ ಎಲ್ಲಿದೆ ಅನ್ನೋ ದುರಹಂಕಾರ ಮಾತನ್ನು ಆಡುತ್ತಿದ್ದಾರೆ. ಅವರ ಸಹವಾಸ ಮಾಡಿದ್ದಕ್ಕೇ ಜೆಡಿಎಸ್ ಈ ಹಂತಕ್ಕೆ ಬಂದಿದೆ. ಐದು ವರ್ಷ ಅಧಿಕಾರ ಮಾಡಿ ಅಂತ ಕೊಟ್ಟು ಬುಡ ಸಮೇತ ತೆಗೆಯೋಕೆ ಹೊರಟ್ರಲ್ಲ. ಅದಕ್ಕೆ‌ ಮರು ಜೀವ ಕೊಡಲು ನಾನೀಗ ಪ್ರಯತ್ನ ಮಾಡ್ತಾ ಇದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.