ಚೆಕ್ ಬೌನ್ಸ್ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣವೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ರಾಜೀನಾಮೆ ಪಡೆಯಬೇಕು ಎಂದು ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಆಗ್ರಹಿಸಿದ್ದಾರೆ.
ಬೆಂಗಳೂರು (ಡಿ.31): ಚೆಕ್ ಬೌನ್ಸ್ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣವೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ರಾಜೀನಾಮೆ ಪಡೆಯಬೇಕು ಎಂದು ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಆಗ್ರಹಿಸಿದ್ದಾರೆ. ನ್ಯಾಯಾಲಯವು ₹6.96 ಕೋಟಿ ದಂಡ ವಿಧಿಸಿದೆ. ಇಂತಹ ಹಿನ್ನೆಲೆಯಿರುವ ಸಚಿವರು ಶಿಕ್ಷಣ ಇಲಾಖೆಗೆ ಕಪ್ಪುಚುಕ್ಕಿ. ಅವರು ಈ ಇಲಾಖೆಯನ್ನು ನಿಭಾಯಿಸಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ಏನಿದು ಪ್ರಕರಣ: 2011ರಲ್ಲಿ ದಾಖಲಾಗಿದ್ದ ಪ್ರಕರಣ ಇದಾಗಿದೆ. ಮಧು ಬಂಗಾರಪ್ಪರವರು ತಮ್ಮ ಆಕಾಶ್ ಆಡಿಯೋ ಸಂಸ್ಥೆಯಿಂದ ರಾಜೇಶ್ ಎಕ್ಸ್‌ಪೋರ್ಟ್ ಸಂಸ್ಥೆಗೆ 6.96 ಕೋಟಿ ರು. ಸಂದಾಯ ಮಾಡಬೇಕಿತ್ತು. ಹಲವಾರು ದಿನಗಳಿಂದ ಬಾಕಿ ಉಳಿಸಿಕೊಂಡಿದ್ದ ಹಣವನ್ನು ಪಾವತಿಸಲು ಚೆಕ್ ನೀಡಿದ್ದು, ಅದು ಬೌನ್ಸ್ ಆಗಿತ್ತು. ಈಗ ನ್ಯಾಯಾಲಯವು ದಂಡ ಪಾವತಿಸುವಂತೆ ಸೂಚಿಸಿದೆ ಎಂದರು.
ವಿಜ್ಞಾನ, ತಂತ್ರಜ್ಞಾನದ ಬೆಳವಣಿಗೆಗೆ ನಿರಂತರ ಶ್ರಮ: ಸಚಿವ ಬೋಸರಾಜು
ಸದ್ಯಕ್ಕೆ 50 ಲಕ್ಷ ರು. ಪಾವತಿಸಿ ಉಳಿದ ಮೊತ್ತವನ್ನು ಜನವರಿ ಅಂತ್ಯದ ವೇಳೆಗೆ ಕೊಡುವುದಾಗಿ ಮಧು ಬಂಗಾರಪ್ಪ ಅವರು ಮುಚ್ಚಳಿಕೆ ಸಲ್ಲಿಸಿದ್ದರು. ಆದರೆ, ಹಿಂದಿನ ಮುಚ್ಚಳಿಕೆಯನ್ನು ಪಾಲಿಸದ ಕಾರಣ ಅವರ ಕೋರಿಕೆಯನ್ನು ನ್ಯಾಯಾಲಯ ಮನ್ನಿಸಿಲ್ಲ. ಚೆಕ್ ಬೌನ್ಸ್ ಮತ್ತು ಮುಚ್ಚಳಿಕೆ ಬರೆದುಕೊಟ್ಟರೂ ಅದನ್ನು ಪಾಲಿಸದ ಹಿನ್ನೆಲೆ ಇರುವ ಮಧು ಬಂಗಾರಪ್ಪ ಅವರ ರಾಜೀನಾಮೆ ಪಡೆಯಬೇಕು. ಶಿಕ್ಷಣ ಕ್ಷೇತ್ರಕ್ಕೆ ಕಳಂಕವಾಗುವಂತೆ ವರ್ತಿಸಿದ ಮಧು ಬಂಗಾರಪ್ಪ ಅವರು ಆ ಹುದ್ದೆಯಲ್ಲಿ ಮುಂದುವರೆಯುವುದು ಸೂಕ್ತವಲ್ಲ ಎಂದು ಹೇಳಿದರು.
ಸಚಿವ ಮಧು ಬಂಗಾರಪ್ಪ ಕಾರು ಅಪಘಾತ: ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆ ರಾಷ್ಟ್ರೀಯ ಹೆದ್ದಾರಿಯ ನೆಲಮಂಗಲ ತಾಲೂಕಿನ ದೇವರಹೊಸಹಳ್ಳಿ ಬಳಿ ಬುಧವಾರ ರಾತ್ರಿ ಸುಮಾರು 12 ಗಂಟೆ ಸಮಯದಲ್ಲಿ ನಡೆದಿದೆ. ಸಚಿವ ಮಧು ಬಂಗಾರಪ್ಪ ಅವರಿದ್ದ ಕಾರು ಶಿವಮೊಗ್ಗದಿಂದ ಬೆಂಗಳೂರು ಕಡೆಗೆ ಹೋಗುತ್ತಿತ್ತು. ದೇವರಹೊಸಹಳ್ಳಿ ಬಳಿ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದಿದ್ದು, ಲಾರಿ ಚಾಲಕ ಕಾರನ್ನು ಉಜ್ಜಿಕೊಂಡು ಹೋಗಿದ್ದಾನೆ.
ಸ್ವಲ್ಪದರಲ್ಲಿ ಭಾರೀ ಅನಾಹುತವೊಂದು ತಪ್ಪಿದೆ. ಅಪಘಾತದಲ್ಲಿ ಕಾರಿನ ಮುಂಭಾಗ ಜಖಂಗೊಂಡಿದೆ. ಕಾರಿನಲ್ಲಿ ಸಚಿವರು ಸೇರಿದಂತೆ ಮೂರ್ನಾಲ್ಕು ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಅಪಘಾತದ ಬಳಿಕ ಸಚಿವ ಮಧು ಬಂಗಾರಪ್ಪ ಬೇರೆ ಕಾರಿನಲ್ಲಿ ಬೆಂಗಳೂರಿಗೆ ತೆರಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
