'ಜನರಿಂದ ತಿರಸ್ಕರಿಸಲ್ಪಟ್ಟ ಸಿ.ಪಿ.ಯೋಗೇಶ್ವರ್ ಸತ್ತ ಕುದುರೆ'
ಎಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್ ನಿವೃತ್ತ ಕುದುರೆಗಳು ಎಂದಿದ್ದ ನೂತನ ವಿಧಾನಪರಿಷತ್ ಸದಸ್ಯ ವಿರುದ್ಧ ಜೆಡಿಎಸ್ ಮುಖಂಡರು ವಾಗ್ದಾಳಿ ನಡೆಸಿದ್ದಾರೆ.
ರಾಮನಗರ, (ಜುಲೈ.25): ಎಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್ ನಿವೃತ್ತ ಕುದುರೆಗಳು ಎಂದಾದರೆ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಸತ್ತ ಕುದುರೆ ಇದ್ದಂತೆ ಎಂದು ಚನ್ನಪಟ್ಟಣ ಜೆಡಿಎಸ್ ಮುಖಂಡರು ಲೇವಡಿ ಮಾಡಿದ್ದಾರೆ.
ವಿಧಾನ ಪರಿಷತ್ ಸದಸ್ಯರಾಗಿ ನಾಮನಿರ್ದೇಶನಗೊಂಡ ಬಳಿಕ ನಿನ್ನೆ(ಶುಕ್ರವಾರ) ಸುದ್ದಿಗೋಷ್ಠಿ ನಡೆಸಿದ್ದ ಸಿ.ಪಿ. ಯೋಗೇಶ್ವರ್, ತನ್ನ ರಾಜಕೀಯ ಎದುರಾಳಿಗಳಾದ 'ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ನಿವೃತ್ತ (ರಿಡೈರ್ಡ್) ಕುದುರೆಗಳು' ಎಂದು ಲೇವಡಿ ಮಾಡಿದ್ದರು.
'ಹೆಚ್‌ಡಿಕೆ, ಡಿಕೆಶಿ ಆಂತರಿಕವಾಗಿ ಬಿಜೆಪಿ ಸರ್ಕಾರದ ಜೊತೆಗಿದ್ದಾರೆ'
ಈ ಮಾತಿಗೆ ಗರಂ ಆದ ಚನ್ನಪಟ್ಟಣ ಜೆಡಿಎಸ್ ಮುಖಂಡರು, ತಮ್ಮ ಶಾಸಕರ ಕಚೇರಿಯಲ್ಲಿ ಇಂದು (ಶನಿವಾರ) ಸುದ್ದಿಗೋಷ್ಠಿ ನಡೆಸಿ ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.
ವಿಧಾನ ಪರಿಷತ್ ಸ್ಥಾನವನ್ನು ಕಾಡಿಬೇಡಿ ಪಡೆದಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ಗೆ ನಮ್ಮ ನಾಯಕರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಜನರಿಂದ ಆಯ್ಕೆ ಆಗಿರುವ ನಮ್ಮ ಶಾಸಕರನ್ನು ನಿವೃತ್ತಿ ಕುದುರೆ ಎನ್ನುವ ನೀವು, ಜನರಿಂದ ತಿರಸ್ಕರಿಸಲ್ಪಟ್ಟ ಸತ್ತ ಕುದುರೆ ಎಂದು ತಿರುಗೇಟು ನೀಡಿದರು.
ಕಳೆದ ಚುನಾವಣೆಯಲ್ಲಿ ಸೋತ ನೀವು ಇಷ್ಟು ಎಲ್ಲಿದ್ರಿ? ನೀವೇ ಹೇಳಿರುವಂತೆ ಯಾವ ಅಜ್ಞಾತ ವಾಸದಲ್ಲಿದ್ರೀ? ಎಂಬುದನ್ನು ತಿಳಿಸಿ. ಅಧಿಕಾರ ಇದ್ದರಷ್ಟೆ ನೀವು ಜನಸೇವೆ ಮಾಡೋದಾ? ಎಂದು ಪ್ರಶ್ನಿಸಿದರು.
ನಿಮ್ಮ ಅಹಂ ಹಾಗೂ ಗರ್ವವನ್ನು ಜನಸೇವೆ ಮಾಡುವ ಮೂಲಕ ತೋರಿಸಿ. ನಮ್ಮ ನಾಯಕರ ಬಗ್ಗೆ ಲಘುವಾಗಿ ಮಾತನಾಡಿದರೆ ನಾವು ಸುಮ್ಮನೆ ಇರೋದಿಲ್ಲ ಎಂದು ಯೋಗೇಶ್ವರ್ಗೆ ಎಚ್ಚರಿಕೆ ನೀಡಿದರು.